ಕೆಜಿಎಫ್ 2 ಎಫೆಕ್ಟ್ : ಬಾಲಿವುಡ್ ಬಿಗ್ ಚಿತ್ರಗಳಿಗೆ ಸೋಲು!
'ಕೆಜಿಎಫ್ 2' ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡದ ಈ ಪ್ಯಾನ್ ಇಂಡಿಯಾ ಚಿತ್ರ ರಿಲೀಸ್ ಆಗಿ ಹಲವು ಅಡ್ಡ ಗೋಡೆಗಳನ್ನು ಹೊಡೆದು ಹಾಕಿ ದಾಖಲೆಯ ಕೋಟೆಯನ್ನು ನಿರ್ಮಾಣ ಮಾಡುತ್ತಿದೆ. ಚಿತ್ರ ರಿಲೀಸ್ ಆಗಿ ತಿಂಗಳು ಕಳೆಯುತ್ತಾ ಬಂದರೂ ಚಿತ್ರದ ಪ್ರಭಾವ ಮಾತ್ರ ಕಡಿಮೆ ಆಗಲ್ಲ. ಇನ್ನು ಕೂಡ ಕೆಜಿಎಫ್ 2 ಚಿತ್ರದ ಹವಾ ಜೋರಾಗಿ ಇದೆ.
ಇನ್ನು 'ಕೆಜಿಎಫ್ 2' ಚಿತ್ರದಿಂದ ಬಾಲಿವುಡ್ ಮೇಲೆ ಆದ ಪರಿಣಾಮಗಳ ಬಗ್ಗೆ ಮತ್ತೆ ಹೊಸದಾಗಿ ಹೇಳಬೇಕಾಗಿಲ್ಲ. 'ಕೆಜಿಎಫ್' ತುಫಾನ್ ಕಂಡು ಅದಾಗಲೆ ಮಂಕು ಬಡಿದಂತೆ ಆಗಿ ಬಿಟ್ಟಿದೆ. ಇದೇ ವಾಸ್ತವ. ಇದಕ್ಕೆ ತಾಜ ಉದಾಹರಣೆ ಆಗಿ ಬಿಟ್ಟಿವೆ ಬಾಲಿವುಡ್‌ನ ಮತ್ತೆರಡು ಚಿತ್ರಗಳು. ನಿರೀಕ್ಷೆಯೊಂದಿಗೆ ಚಿತ್ರಮಂದಿರಕ್ಕೆ ಬಂದ ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಚಿತ್ರಗಳು 'ಕೆಜಿಎಫ್' ಕ್ರೇಜ್ ಮುಂದೆ ಮಂಕಾಗಿವೆ.
ಬಾಲಿವುಡ್‌ನ ಬಿಗ್ ಸ್ಟಾರ್ ಚಿತ್ರಗಳಾದ 'ರನ್ ವೇ 34', 'ಹೀರೋಪಂತಿ 2' ಚಿತ್ರಗಳು ಈದ್ ಹಬ್ಬದ ಪ್ರಯುಕ್ತ ತೆರೆಕಂಡಿವೆ. ಈದ್ ಹಬ್ಬದ ಪ್ರಯುಕ್ರ ತೆರೆಕಾಣುವ ಬಾಲಿವುಡ್ ಚಿತ್ರಗಳು ಬಾಕ್ಸಾಫಿಸ್‌ನಲ್ಲಿ ಸೋತ ಉದಾಹರಣೆಗಳು ಕಡಿಮೆ. ಆದರೆ ಈ ಚಿತ್ರಗಳಿಗೆ ಈದ್ ವರವಾಗಿಲ್ಲ. ಕೆಜಿಎಫ್ ಎಫೆಕ್ಟ್‌ನಿಂದಾಗಿ ಈ ಚಿತ್ರಗಳು ಮಕಾಡೆ ಮಲಗಿವೆ. ಹಾಗಿದ್ದರೆ ಈ ಚಿತ್ರಗಳ ಕಲೆಕ್ಷನ್ ಏನು ಎನ್ನುವುದನ್ನು ಮುಂದೆ ಓದಿ...

'ಕೆಜಿಎಫ್ 2' ಬೇಟೆ, ಹಿಂದಿ ಫಿಲ್ಮ್ ಉಡೀಸ್!
ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ಸಿನಿಮಾವನ್ನು ಹಿಂದಿಕ್ಕಲು ಬಾಲಿವುಡ್ ನಟರೇ ಹರಸಾಹಸ ಪಡುತ್ತಿದ್ದಾರೆ. ರಿಲೀಸ್ ಆಗುತ್ತಿರುವ ಹಿಂದಿ ಚಿತ್ರಗಳ ದಿನದ ಗಳಿಕೆಯ ಮೇಲೆ 'ಕೆಜಿಎಫ್' ಚಿತ್ರದ ಪರಿಣಾಮ ಹೆಚ್ಚಾಗಿದೆ. ಏಪ್ರಿಲ್ 14ರಂದು ತೆರೆಕಂಡ 'ಕೆಜಿಎಫ್ 2' ಚಿತ್ರದ ಬಾಕ್ಸಾಫೀಸ್ ಬೇಟೆ ಮುಂದುವರೆದಿದೆ. ಮೇ 2 ದಂದು 'ಕೆಜಿಎಫ್ 2' ಸಿನಿಮಾ ಮೂರು ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಈ ಮೂಲಕ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಈ 20 ದಿನಗಳಲ್ಲಿ 'ಕೆಜಿಎಫ್ 2' ಸಿನಿಮಾ 382 ಕೋಟಿ ಲೂಟಿ ಮಾಡಿದೆ ಎಂದು ತರನ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

ಅಜಯ್ ದೇವಗನ್ 'ರನ್‌ವೇ 34' ಗಳಿಸಿದ್ದು ಎಷ್ಟು?
ಈದ್ ಹಬ್ಬದ ಪ್ರಯುಕ್ತ ಬಿಡುಗಡೆಯಾದ ಅಜಯ್ ದೇವಗನ್ ಅಭಿನಯದ 'ರನ್‌ವೇ 34' ಹಬ್ಬದ ದಿನದಂದು ಕಲೆಕ್ಷನ್ ಮಾಡುವ ಭರವಸೆಯನ್ನು ಮೂಡಿಸಿತ್ತು. ಆದರೆ ರಿಲೀಸ್ ದಿನ ಬಿಟ್ಟರೆ ವೀಕೆಂಡ್‌ನಲ್ಲಿ ಅಂತಹ ಸದ್ದು ಮಾಡಲಿಲ್ಲ. 'ರನ್‌ವೇ 34' ಏಪ್ರಿಲ್ 30 ಶನಿವಾರದ ಒಟ್ಟು ಗಳಿಕೆ ರೂ. 4.75 ಕೋಟಿ. ಮೇ 1 ಭಾನುವಾರ ರೂ. 7.50 ಕೋಟಿ ಒಟ್ಟು ಮೊತ್ತ ಗಳಿಸಿದೆ. 4ನೇ ದಿನ ಕಲೆಕ್ಷನ್ ಸಂಪೂರ್ಣ ಕುಸಿದಿದ್ದು, ರೂ. 3 ಕೋಟಿ ಕಲೆಹಾಕಿದೆ. ಇನ್ನು ಚಿತ್ರದ ನಾಲ್ಕು ದಿನದ ಒಟ್ಟು ಮೊತ್ತ 18.50 ಕೋಟಿ ರೂ. ಆಗಿದ್ದಾಗಿ ವರದಿ ಆಗಿದೆ. ಈ ಮೊತ್ತ 5ನೇ ದಿನಕ್ಕೆ 22 ಕೋಟಿ ರೂ ಆಗಿದೆ.

20 ಕೋಟಿ ಕಲೆಹಾಕಿದ ಹೀರೋಪಂತಿ 2!
ಏಪ್ರಿಲ್ 29 ರಂದು ಬಿಡುಗಡೆಯಾದ 'ಹೀರೋಪಂತಿ 2' ಚಿತ್ರ ಕಲೆಕ್ಷನ್ ಇಳಿಮುಖವಾಗಿ ಸಾಗುತ್ತಿದೆ. ಈದ್ ಹಬ್ಬ ಇದ್ದರೂ ಚಿತ್ರದ ಗಳಿಕೆಯಲ್ಲಿ ಚೇತರಿಕೆ ಕಂಡು ಬಂದಿಲ್ಲ. ಚಿತ್ರ ರಿಲೀಸ್ ಆದ ಎರಡನೇ ದಿನಕ್ಕೆ ಭಾರಿ ಕುಸಿತ ಕಂಡಿದೆ. ವೀಕೆಂಡ್ ಇದ್ದರೂ, 3ನೇ ದಿನವಾದ ಭಾನುವಾರ 20%ನಷ್ಟು ಕುಸಿತ ಕಂಡಿದೆ. 'ಹೀರೋಪಂತಿ 2' 5 ದಿನದ ಗಳಿಕೆ ಲೆಕ್ಕಾಚಾರ ಹೀಗಿದೆ.
ದಿನ 1 (ಶುಕ್ರವಾರ): 7 ಕೋಟಿ ರೂ.
ದಿನ 2 (ಶನಿವಾರ): 4.50 ಕೋಟಿ ರೂ.
ದಿನ 3 (ಭಾನುವಾರ): 4.20 ಕೋಟಿ ರೂ.
ದಿನ 4 (ಸೋಮವಾರ): 1.70 ಕೋಟಿ ರೂ.
ದಿನ 5 (ಮಂಗಳವಾರ): 2.60 ಕೋಟಿ ರೂ.
ಒಟ್ಟು (5 ದಿನಗಳು): 20 ಕೋಟಿ ರೂ.

'ಆಚಾರ್ಯ'ನಿಗೂ ಈದ್ ವರ ಕೊಡಲಿಲ್ಲ!
ಇನ್ನು ಈ ಎರಡು ಹಿಂದಿ ಚಿತ್ರಗಳಿಗೆ ಹೋಲಿಸಿದರೆ 'ಆಚಾರ್ಯ' ಚಿತ್ರದ ಗಳಿಕೆ ಕೊಂಚ ಉತ್ತಮವಾಗಿದೆ ಎನ್ನಬಹುದು. ಆದರೆ ಈದ್ ಹಬ್ಬ ಮತ್ತು ವಾರಾಂತ್ಯದಲ್ಲೂ ಚಿತ್ರ ಅಂತಹ ಗಳಿಕೆ ಮಾಡಿಲ್ಲ. ಸದ್ಯ 'ಆಚಾರ್ಯ' ಚಿತ್ರದ ಒಟ್ಟಾರೆ ಗಳಿಕೆ 81 ಕೋಟಿ ರೂ. ಆಗಿದೆ ಎಂದು ವರದಿ ಆಗಿದೆ. ಈ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗುತ್ತಿದ್ದು, ಅಲ್ಲಾದರೂ ದಾಖಲೆ ಮಾಡಲಿ ಎಂದು ಚಿರು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.


Click it and Unblock the Notifications











