KGF Chapter 2: ಕೆಜಿಎಫ್‌ನಲ್ಲೇ ರಿಲೀಸ್ ಆಗಿಲ್ಲ 'ಕೆಜಿಎಫ್ 2': ಕಾರಣವೇನು?
'ಕೆಜಿಎಫ್' ಸಿನಿಮಾ ಸರಣಿ ವಿಶ್ವದಾದ್ಯಂತ ಸಿನಿಮಾ ಅಭಿಮಾನಿಗಳನ್ನು ಸೆಳೆದಿದೆ. ಈ ಸಿನಿಮಾದ ಕತೆ ನಡೆಯುವುದು ಕರ್ನಾಟಕದ ಕೆಜಿಎಫ್‌ನಲ್ಲಿ ಅಂದರೆ ಕೋಲಾರ್ ಗೋಲ್ಡ್ ಫೀಲ್ಡ್‌ನಲ್ಲಿ.
Recommended Video

ಕೋಲಾರ ತಾಲ್ಲೂಕಿನ ಕೆಜಿಎಫ್ ತಾಲ್ಲೂಕು ಕೇಂದ್ರವಾಗಿದ್ದು ಚಿನ್ನದ ಗಣಿ ಇದ್ದಿದ್ದು ಇಲ್ಲಿಯೇ. 'ಕೆಜಿಎಫ್' ಸಿನಿಮಾದಲ್ಲಿ ತೋರಿಸಿರುವುದು ಕಲ್ಪಿತ ಕತೆಯಾದರೂ, ಹಲವು ಸಿನಿಮಾಗಳಿಗೆ ಸರಕಾಗುವಷ್ಟು ಕತೆಗಳು ಕೆಜಿಎಫ್‌ನ ಗಲ್ಲಿಗಳಲ್ಲಿವೆ.
ಆದರೆ ಇಷ್ಟು ದಿನ ಕೆಜಿಎಫ್ ತಾಲ್ಲೂಕು ಅಷ್ಟಾಗಿ ಸುದ್ದಿಯಾಗಲಿ, ಸದ್ದಾಗಲಿ ಆಗಿರಲಿಲ್ಲ. 'ಕೆಜಿಎಫ್' ಸಿನಿಮಾ ಬಿಡುಗಡೆ ಆದ ಬಳಿಕ ಈ ಸ್ಥಳ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿತು. 'ಕೆಜಿಎಫ್' ಸಿನಿಮಾದ ಚಿತ್ರೀಕರಣ ನಡೆದಿರುವ ಸೈನೈಡ್ ಗುಡ್ಡ ಇರುವುದು ಸಹ ಕೆಜಿಎಫ್‌ನಲ್ಲಿಯೇ.

ವೈಚಿತ್ರ್ಯವೆಂದರೆ ಅದೇ ಊರಿನ ಹೆಸರಿಟ್ಟುಕೊಂಡು, ಅದೇ ಊರಿನ ಕತೆಯಿಂದ ಸ್ಪೂರ್ತಿ ಪಡೆದು ನಿರ್ಮಿಸಲಾದ ಸಿನಿಮಾ ಕೆಜಿಎಫ್‌ನಲ್ಲಿಯೇ ಬಿಡುಗಡೆ ಆಗಿಲ್ಲ. ವಿಚಿತ್ರವಾದರೂ ಇದು ಸತ್ಯ.
'ಕೆಜಿಎಫ್ 2' ಸಿನಿಮಾ ಕೆಜಿಎಫ್‌ನಲ್ಲಿಯೇ ಬಿಡುಗಡೆ ಆಗಿಲ್ಲ. ಇದಕ್ಕೆ ಕಾರಣ ವಿತರಕ ಹಾಗೂ ಸಿನಿಮಾ ನಿರ್ಮಾಪಕರ ನಡುವಿನ ಭಿನ್ನಾಭಿಪ್ರಾಯ.
ನಿರ್ಮಾಪಕರು ಸಿನಿಮಾ ನೀಡಲು ದೊಡ್ಡ ಮೊತ್ತವನ್ನು ವಿತರಕರ ಬಳಿ ಬೇಡಿಕೆ ಇಟ್ಟಿದ್ದರು. ಆದರೆ ದೊಡ್ಡ ಮೊತ್ತದ ಹಣ ನೀಡಲು ನಿರಾಕರಿಸಿದ ವಿತರಕರು, ಈ ಭಾಗದಲ್ಲಿ ಟಿಕೆಟ್ ದರ ಹೆಚ್ಚಿದ್ದರು ಸಿನಿಮಾ ನೋಡುವುದಿಲ್ಲವೆಂದು ಕಾರಣ ನೀಡಿದ್ದಾರೆ. ಆದರೆ ನಿರ್ಮಾಪಕರು ಹೆಚ್ಚು ಮೊತ್ತಕ್ಕೆ ಬೇಡಿಕೆ ಮುಂದುವರೆಸಿದ ಕಾರಣ ವಿತರಕರು ಸಿನಿಮಾ ಖರೀದಿಸಿಲ್ಲ. ಹಾಗಾಗಿ ಕೆಜಿಎಫ್ ತಾಲ್ಲೂಕಿನಾದ್ಯಂತ ಸಿನಿಮಾ ಬಿಡುಗಡೆ ಆಗಿಲ್ಲ.
ಆದರೆ ಕೆಜಿಎಫ್ ತಾಲ್ಲೂಕಿನಲ್ಲಿ ಸಿನಿಮಾದ ಅಭಿಮಾನಿಗಳು ಹೆಚ್ಚು ಸಂಖ್ಯೆಯಲ್ಲಿದ್ದು, ನೆರೆಯ ಬಂಗಾರಪೇಟೆಗೆ ಹೋಗಿ ಸಿನಿಮಾ ವೀಕ್ಷಿಸಿ ಬರುತ್ತಿದ್ದಾರೆ.
'ಕೆಜಿಎಫ್' ಸಿನಿಮಾವು ಕೆಜಿಎಫ್‌ನ ಚಿನ್ನದ ಗಣಿಯ ಕತೆಗಳಿಂದ ಸ್ಪೂರ್ತಿ ಪಡೆದು ಮಾಡಿದ ಸಿನಿಮಾ ಆಗಿದೆ. 'ಕೆಜಿಎಫ್ 1' ಬಿಡುಗಡೆ ಆಗುವ ಸಮಯದಲ್ಲಿ ಈ ಸಿನಿಮಾದ ನಾಯಕ ರಾಕಿಭಾಯ್ ಪಾತ್ರವು ಆ ಭಾಗದ ರೌಡಿ ತಂಗಂ ಕುರಿತಾದ ಕತೆ ಎನ್ನಲಾಗಿತ್ತು. ತಂಗಂ ಕುಟುಂಬಸ್ಥರು ಸಿನಿಮಾದ ವಿರುದ್ಧ ಮೊಕ್ಕದ್ದಮೆ ಸಹ ಹೂಡಿದ್ದರು. ಆದರೆ ಸಿನಿಮಾ ಬಿಡುಗಡೆಯನ್ನು ತಡೆಯಲಾಗಿರಲಿಲ್ಲ. ಅಲ್ಲದೆ, ಸಿನಿಮಾ ಸಹ ತಂಗಂ ಜೀವನ ಆಧರಿಸಿದ ಕತೆಯಾಗಿರಲಿಲ್ಲ.
ಇನ್ನು ಕೆಜಿಎಫ್ 2 ಸಿನಿಮಾವು ಕರ್ನಾಟಕದಲ್ಲಿ ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಧ್ಯರಾತ್ರಿಯಿಂದಲೇ ಶೋಗಳು ಪ್ರದರ್ಶಿತಗೊಳ್ಳುತ್ತಿವೆ. ಸಿನಿಮಾವು ಉತ್ತಮ ಓಪನಿಂಗ್ ಪಡೆದುಕೊಂಡಿದ್ದು ದೊಡ್ಡ ಮೊತ್ತ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.


Click it and Unblock the Notifications











