KGF 2: ದೇಶದಲ್ಲಿಯೇ ಮೊದಲ ಪ್ರಯತ್ನ: 'ಕೆಜಿಎಫ್ 2'ಗೆ ಬೇಕಿದೆ ಅಭಿಮಾನಿಗಳ ನೆರವು
'ಕೆಜಿಎಫ್ 2' ಸಿನಿಮಾದ ಬಿಡುಗಡೆಗೆ ಕೆಲವು ದಿನಗಳಷ್ಟೆ ಉಳಿದಿದೆ. ನಿನ್ನೆಯಷ್ಟೆ ಹಾಡೊಂದನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ಪ್ರಚಾರ ಕಾರ್ಯವನ್ನು ಆರಂಭಿಸಿದೆ.
'ಕೆಜಿಎಫ್ 2' ಸಿನಿಮಾದ ಪ್ರಚಾರವನ್ನು ಅದ್ಧೂರಿಯಾಗಿ ಮಾಡಲಿರುವ ಚಿತ್ರತಂಡ, ಪ್ರಚಾರದ ಈ ಪಯಣದಲ್ಲಿ ಅಭಿಮಾನಿಗಳ ನೆರವು ಕೋರಿದೆ. ಸಿನಿಮಾದ ಪ್ರಚಾರದಲ್ಲಿ ಅಭಿಮಾನಿಗಳ ಅಭಿಮಾನವನ್ನು ಸಂಪನ್ಮೂಲವಾಗಿ ಚಿತ್ರತಂಡ ಬಳಸಿಕೊಳ್ಳಲಿದೆ.
ಈ ಬಗ್ಗೆ ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಅಭಿಮಾನಿಗಳಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದು, ಸಿನಿಮಾದ ಪ್ರಚಾರಕ್ಕೆ ಅಭಿಮಾನಿಗಳ ಪ್ರಚಾರ ಕೋರಿದ್ದಾರೆ. ಅಲ್ಲದೆ ದೇಶದಲ್ಲೇ ಮೊದಲ ಬಾರಿಗೆ ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿರುವುದಾಗಿಯೂ ಅವರು ಹೇಳಿದ್ದಾರೆ.
Recommended Video

''ಕೆಜಿಎಫ್: ಚಾಪ್ಟರ್ 1' ಸಿನಿಮಾ ಬಿಡುಗಡೆ ಆಗಿ ಮೂರು ವರ್ಷಗಳಾಗಿವೆ. ನಾವು ಈ ಬಗ್ಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ. ಸಿನಿಮಾಕ್ಕೆ ನೀವು ನೀಡಿದ ಪ್ರೀತಿ, 'ಕೆಜಿಎಫ್ 2' ಸಿನಿಮಾದ ಪಯಣವನ್ನು ಇನ್ನಷ್ಟು ವಿಶೇಷಗೊಳಿಸಿದೆ'' ಎಂದು ಪತ್ರ ಆರಂಭಿಸಿದ್ದಾರೆ ವಿಜಯ್ ಕಿರಗಂದೂರು.
''ಕೆಜಿಎಫ್ 2' ಸಿನಿಮಾ ಸಂಪೂರ್ಣವಾಗಿ ನಿಮಗೆ ಸೇರಿದ್ದು, ಹಾಗಾಗಿ ನಮ್ಮ ಸಿನಿಮಾ ಪ್ರಚಾರ ಪಯಣದಲ್ಲಿ ನೀವು ನಮ್ಮನ್ನು ಸೇರಿಕೊಳ್ಳಿ. ಭಾರತೀಯ ಸಿನಿಮಾ ಚರಿತ್ರೆಯಲ್ಲಿ ಮೊದಲ ಬಾರಿಗೆ ನಾವು ನಮ್ಮ ಸಿನಿಮಾದ ಪ್ರಚಾರವನ್ನು ನಿಮ್ಮದೇ ಕಲಾಕೃತಿಗಳ ಮೂಲಕ ಮಾಡಲಿದ್ದೇವೆ. ಸಿನಿಮಾದ ಬಗ್ಗೆ ನೀವು ಕಳಿಸುವ ಚಿತ್ರಗಳನ್ನೇ ನಾವು ದೊಡ್ಡ ಹೋರ್ಡಿಂಗ್‌ಗಳಾಗಿ ದೇಶದೆಲ್ಲೆಡೆ ಹಾಕಲಿದ್ದೇವೆ'' ಎಂದಿದ್ದಾರೆ ವಿಜಯ್ ಕಿರಗಂದೂರು.
''ಯಾವುದೇ ಸಿನಿಮಾ ಆಗಲಿ ಅಭಿಮಾನಿಗಳ ಹೊರತಾಗಿ ಅದು ಏನೂ ಅಲ್ಲ. ಹಾಗಾಗಿ ಈ ಪಯಣದಲ್ಲಿ ನೀವು ನಮ್ಮ ಜೊತೆಗೂಡಿ ರಾಕಿಭಾಯ್‌ಗೆ ವಿಶ್ವಮಟ್ಟದಲ್ಲಿ ಗುರುತು ತಂದುಕೊಡುವ ಪ್ರಯತ್ನಕ್ಕೆ ಕೈ ಜೋಡಿಸಿ. ಏಕೆಂದರೆ ರಾಕಿಭಾಯ್‌ಗೆ ಬೇಕಿರುವುದು 'ದುನಿಯಾ'' ಎಂದಿದ್ದಾರೆ ವಿಜಯ್.
ಅಭಿಮಾನಿಗಳು ಬರೆದು ಕಳಿಸುವ 'ಕೆಜಿಎಫ್ 2' ಸಿನಿಮಾದ ವಿವಿಧ ಬಗೆಯ ಚಿತ್ರಗಳನ್ನೇ ದೊಡ್ಡ ದೊಡ್ಡ ಹೋಲ್ಡಿಂಗ್‌ಗಳಾಗಿ ಚಿತ್ರತಂಡ ಬಳಸಿಕೊಳ್ಳಲಿದೆ. ಕೆಲವು ದಿನಗಳ ಹಿಂದಷ್ಟೆ ಮುಂಬೈನ ದೊಡ್ಡ ಬಹುಮಹಡಿ ಕಟ್ಟಡದ ಮೇಲೆ 'ಕೆಜಿಎಫ್ 2' ಸಿನಿಮಾದ ಪೋಸ್ಟರ್ ಅನ್ನು ಹಾಕಲಾಗಿತ್ತು. ದೇಶದೆಲ್ಲೆಡೆ ಹೀಗೆ ಬೃಹತ್ ಪೋಸ್ಟರ್, ಹೋಲ್ಡಿಂಗ್‌ಗಳನ್ನು ಚಿತ್ರತಂಡ ಹಾಕಲಿದೆ. ಅಭಿಮಾನಿಗಳು ಬರೆದ ಚಿತ್ರಗಳೇ ಆ ಹೋಲ್ಡಿಂಗ್‌ಗಳಲ್ಲಿ ಇರಲಿವೆ.
'ಕೆಜಿಎಫ್ 2' ಸಿನಿಮಾವು ಏಪ್ರಿಲ್ 14 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಸಂಜಯ್ ದತ್ ವಿಲನ್ ಆಗಿ ನಟಿಸಿದ್ದಾರೆ. ರವೀನಾ ಟಂಡನ್, ಪ್ರಕಾಶ್ ರೈ, ರಾವ್ ರಮೇಶ್ ಇನ್ನೂ ಹಲವರು 'ಕೆಜಿಎಫ್ 2' ಸಿನಿಮಾದಲ್ಲಿ ನಟಿಸಿದ್ದಾರೆ. ನಿನ್ನೆಯಷ್ಟೆ ಸಿನಿಮಾದ 'ತೂಫಾನ್' ಹಾಡು ಬಿಡುಗಡೆ ಆಗಿದ್ದು, ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಅತಿ ಹೆಚ್ಚು ನೋಡಲ್ಪಟ್ಟ ಹಾಡೆಂಬ ದಾಖಲೆಯನ್ನು ಬರೆದಿದೆ.


Click it and Unblock the Notifications











