ಬಿಗ್ ಬಾಸ್ ಸ್ಪರ್ಧಿ ಜೊತೆ ಎರಡನೇ ವಿವಾಹವಾದ ಕೆಜಿಎಫ್ ವಿಲನ್
Recommended Video
ರಾಕಿಂಗ್ ಸ್ಟಾರ್ ಅಭಿನಯದ 'ಕೆಜಿಎಫ್' ಚಿತ್ರದಲ್ಲಿ ಖಳ ನಟನಾಗಿ ಘರ್ಜಿಸಿದ್ದ ನಟ ಜಾನ್ ಕೊಕೇನ್ ವಿವಾಹವಾಗಿದ್ದಾರೆ. ಮಲಯಾಳಿ ನಟಿ ಪೂಜಾ ರಾಮಚಂದ್ರನ್ ಅವರ ಜೊತೆ ಜಾನ್ ಹಸೆಮಣೆ ಏರಿದ್ದಾರೆ. ಸೈಲೆಂಟ್ ಆಗಿ ಮದುವೆಯಾದ ಕೊಕೇನ್ ವಿವಾಹ ನಂತರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಮದುವೆಯಾದ ವಿಚಾರವನ್ನು ಬಹಿರಂಗ ಪಡೆಸಿದ್ದಾರೆ.
ಅಂದ್ಹಾಗೆ ಜಾನ್ ಕೊಕೇನ್ ಇತ್ತೀಚಿಗಷ್ಟೆ ರಿಲೀಸ್ ಆದ ಕನ್ನಡದ 'ಕೆಜಿಎಫ್' ಚಿತ್ರದಲ್ಲಿ ಜಾನ್ ಅನ್ನೊ ವಿಲನ್ ಪಾತ್ರದಲ್ಲಿ ಅಬ್ಬರಿಸಿದ್ದರು. ಕನ್ನಡದಲ್ಲಿ ಜಾನ್ 'ಕೆಜಿಎಫ್' ಚಿತ್ರ ಮಾತ್ರವಲ್ಲದೆ ದರ್ಶನ್ ಅಭಿನಯದ 'ಶೌರ್ಯ', ಪವರ್ ಸ್ಟಾರ್ ಅಭಿನಯದ 'ಪೃಥ್ವಿ', 'ಅಣ್ಣಬಾಂಡ್' ಸೇರಿದಂತೆ ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸದ್ಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ . ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದ ಬಹು ಬೇಡಿಕೆಯ ನಟನಾಗಿರುವ ಜಾನ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಜಾನ್ ಕೊಕೇನ್ ಸೈಲೆಂಟ್ ಆಗಿ ಸರಳ ವಿವಾಹವಾಗಿದ್ದು ಯಾಕೆ? ಯಾರು ಈ ಪೂಜಾ ರಾಮಚಂದ್ರನ್? ಮುಂದೆ ಓದಿ..

ಕೇರಳ ಶೈಲಿಯಲ್ಲಿ ಜಾನ್ ವಿವಾಹ
ನಟ ಜಾನ್ ಕೊಕೇನ್ ಮತ್ತು ಪೂಜಾ ರಾಮಚಂದ್ರನ್ ವಿವಾಹ ಕೇರಳ ಸಂಪ್ರದಯದಂತೆ ನೆರವೇರಿದೆ. ಸರಳವಾಗಿ ಮದುವೆಯಾದ ಈ ಜೋಡಿಯ ಕಾಸ್ಟ್ಯೂಮ್ ಕೂಡ ತೀರಾ ಸರಳವಾಗಿದ್ದು ಕಾಟನ್ ಡ್ರೆಸ್ ನಲ್ಲೆ ಮಿಂಚಿದ್ದಾರೆ. ಏಪ್ರಿಲ್ 15 ಕೇರಳದ ವಿಶು ಹಬ್ಬದ ದಿನದಂತೆ ಹಸೆಮಣೆ ಏರಿದ ಜಾನ್ ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 2 ವರ್ಷದ ಇವರ ಪ್ರೀತಿಗೆ ಈಗ ಮದುವೆ ಎಂಬ ಅಧಿಕೃತ ಮುದ್ರೆ ಬಿದ್ದಿದೆ.

ಇಬ್ಬರಿಗೂ ಇದು ಎರಡನೇ ವಿವಾಹ
ಜಾನ್ ಮತ್ತು ಪೂಜಾ ಇಬ್ಬರಿಗೂ ಇದು ಎರಡನೇ ವಿವಾಹ. ಜಾನ್ ಕೊಕೇನ್ ಈ ಮೊದಲು ನಟಿ ಮೀರಾ ವಸುದೇವನ್ ಜೊತೆ ಮದುವೆಯಾಗಿದ್ದರು. ಆದ್ರೆ ಇಬ್ಬರ ದಾಂಪತ್ಯ ಜೀವನ 2016 ರಲ್ಲಿ ಅಂತ್ಯಗೊಂಡಿತ್ತು. ಮೀರಾಗೆ ವಿಚ್ಛೇಧನ ನೀಡುವ ಮೂಲಕ ವಿವಾಹ ಜೀವನದಿಂದ ಹೊರ ಬಂದಿದ್ದರು. ಇತ್ತ ಪೂಜಾ ಕೂಡ 2017 ರಲ್ಲಿ ಮಾಜಿ ಪತಿಗೆ ವಿಚ್ಛೇಧನ ನೀಡಿ ದಾಂಪತ್ಯ ಜೀವನಕ್ಕೆ ಎಳ್ಳು-ನೀರು ಬಿಟ್ಟಿದ್ದರು. ಆ ನಂತರ ಜಾನ್ ಮತ್ತು ಪೂಜಾ ನಡುವೆ ಗೆಳೆತನವಾಗಿ ಇದು ಪ್ರೀತಿಗೆ ತಿರುಗಿ ಈಗ ಪತಿ-ಪತ್ನಿಯರಾಗಿದ್ದಾರೆ.

ಯಾರು ಈ ಪೂಜಾ?
ಪೂಜಾ ರಾಮಚಂದ್ರನ್ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಮಾಡೆಲಿಂಗ್ ಕ್ಷೇತ್ರದಲ್ಲಿ ಖ್ಯಾತಿಗಳಿಸಿದ್ದ ಪೂಜಾ ನಂತರ ಮಲಯಾಳಿ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. ಆ ನಂತರ ಮಲ್ಲು ಕುಟ್ಟಿ ಅಂತಾನೆ ಖ್ಯಾತಿ ಗಳಿಸಿರುವ ಪೂಜಾ ಕೇವಲ ಮಲಯಾಳಿ ಚಿತ್ರರಂಗದಲ್ಲಿ ಮಾತ್ರವಲ್ಲದೇ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಮಿಂಚಿದ್ದಾರೆ.

ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದ ಪೂಜಾ
ಪೂಜಾಗೆ ಮತ್ತಷ್ಟು ಖ್ಯಾತಿ ತಂದು ಕೊಟ್ಟಿದ್ದು ತೆಲುಗು ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 2. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ತೆಲುಗು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ಪೂಜಾ ತೆಲುಗು ಮಂದಿಗೆ ಮನ್ನಷ್ಟು ಹತ್ತಿರವಾಗಿದ್ದರು.


Click it and Unblock the Notifications











