ಮಲೇಷಿಯಾದಲ್ಲಿ ರಾಕಿಂಗ್ ಸ್ಟಾರ್ ಹಂಗಾಮ: ಚಿನ್ನದಂಗಡಿ ಹುಡುಕಿ ಹೋದ ರಾಕಿಭಾಯ್!
ರಾಕಿಂಗ್ ಸ್ಟಾರ್ ಯಶ್ ದಿಢೀರನೇ ಪ್ರೈವೇಟ್ ಜೆಟ್ ಏರಿ ಆಪ್ತ ಬಳಗದ ಜೊತೆ ಮಲೇಷಿಯಾಗೆ ಹೋಗಿದ್ದಾರೆ. ಬಿಳಿ ಬಣ್ಣದ ಟೀಶರ್ಟ್ ಹಾಗೂ ಶಾರ್ಟ್ಸ್‌ನಲ್ಲೇ ಯಶ್ ಅಲ್ಲಿ ಲ್ಯಾಂಡ್ ಆಗಿದ್ದರು. ಮಲೇಷಿಯಾ ಅಭಿಮಾನಿಗಳಿಂದ ಯಶ್‌ಗೆ ಭವ್ಯ ಸ್ವಾಗತವೇ ಸಿಕ್ಕಿದೆ. ಇಂದು(ಜುಲೈ 8) ನೀಲಿ ಬಣ್ಣದ ಸೂಟ್ ಧರಿಸಿ ಸಖತ್ ಸ್ಟೈಲಿಶ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ.
'KGF' ಸರಣಿ ಸಿನಿಮಾಗಳಿಂದ ನಟ ಯಶ್‌ಗೆ ಹೊರ ರಾಜ್ಯಗಳಲ್ಲಿ ಮಾತ್ರವಲ್ಲ, ಹೊರ ದೇಶಗಳಲ್ಲೂ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಮಲೇಷಿಯಾ, ಸಿಂಗಾಪುರದಲ್ಲಿ ಅಭಿಮಾನಿಗಳ ಸಂಖ್ಯೆ ಕೊಂಚ ಹೆಚ್ಚೇ ಇದೆ. ಮಲೇಷಿಯಾದಲ್ಲಿ ತಮಿಳು ಸಿನಿಮಾಗಳು ಹೆಚ್ಚು ಸದ್ದು ಮಾಡುತ್ತವೆ. 'KGF'2 ಭಾಗಗಳು ತಮಿಳಿಗೆ ಡಬ್ ಆಗಿ ಅಲ್ಲಿ ರಿಲೀಸ್ ಆಗಿತ್ತು. ಚಾಪ್ಟರ್-2ಗೆ ಭಾರೀ ರೆಸ್ಪಾನ್ಸ್ ಸಿಕ್ಕಿತ್ತು. ಅದೇ ಕಾರಣಕ್ಕೆ ಅಲ್ಲಿನ ಯಶ್‌ಗೆ ಹವಾ ಜೋರಾಗಿದೆ. ಎಂಎಸ್ ಗೋಲ್ಡ್ ಚಿನ್ನ ವಜ್ರಾಭರಣ ಮಳಿಗೆಯ ಹೊಸ ಶಾಖೆಯ ಉದ್ಘಾಟನೆಗಾಗಿ ಯಶ್‌ನ ಆಹ್ವಾನಿಸಲಾಗಿತ್ತು.

ಸೂಪರ್ ಹಿಟ್ 'KGF' ಚಾಪ್ಟರ್-2 ರಿಲೀಸ್ ಆಗಿ ವರ್ಷ ಕಳೆದರೂ ಯಶ್ ಹೊಸ ಸಿನಿಮಾ ಘೋಷಿಸಿಲ್ಲ. ಯಶ್19 ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುವುದಾಗಿ ಹೇಳುತ್ತಾ ಬರ್ತಿದ್ದಾರೆ. ಈ ನಡುವೆ ಸಾಕಷ್ಟು ಜಾಹೀರಾತುಗಳಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಪೆಪ್ಸಿ, ರಾಮ್‌ರಾಜ್ ಸೇರಿದಂತೆ ವಿವಿಧ ಉತ್ಪನ್ನಗಳ ರಾಯಭಾರಿಯಾಗಿ ಕೋಟಿ ಕೋಟಿ ಎಣಿಸುತ್ತಿದ್ದಾರೆ. ಇದೀಗ ಮಲೇಷಿಯಾದಲ್ಲಿ ಎಂಎಸ್ ಗೋಲ್ಡ್ ಮಳಿಹೆ ಉದ್ಘಾಟಿಸಿದ್ದಾರೆ.
ಮೊದಲೇ ಹೇಳಿದಂತೆ ರಾಕಿಂಗ್ ಸ್ಟಾರ್‌ಗೆ ಮಲೇಷಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಖಾಸಗಿ ಕಾರ್ಯಕ್ರಮ ನಿಮಿತ್ತ ಹೋಗಿದ್ದ ರಾಕಿಭಾಯ್‌ನ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಮಳಿಗೆಯ ಆವರಣದಲ್ಲಿ ವೇದಿಕೆ ನಿರ್ಮಾಣವಾಗಿದೆ. ವೇದಿಕೆ ಏರಿ ಕುಳಿತ ಯಶ್ ಮಲಯಾ ಭಾಷೆಯಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಕೆಲ ಮಾತುಗಳನ್ನಾಡಿದರು. ನಂತರ ಕನ್ನಡ ಹಾಗೂ ತಮಿಳಿನಲ್ಲಿ 'KGF' ಸರಣಿ ಸಿನಿಮಾಗಳ ಡೈಲಾಗ್‌ಗಳನ್ನು ಹೇಳಿ ರಂಜಿಸಿದ್ದಾರೆ. ಇನ್ನು ನಿರೂಪಕಿ ಕನ್ನಡದಲ್ಲೇ ಯಶ್‌ಗೆ ಧನ್ಯವಾದ ತಿಳಿಸಿದ್ದು ವಿಶೇಷ.
ಮಲೇಷಿಯಾ ಅಭಿಮಾನಿಗಳಂತೂ ಯಶ್‌ನ ನೋಡಿ ಕುಣಿದು ಕುಪ್ಪಳಿಸಿದ್ದಾರೆ. ಜೈಕಾರ ಹಾಕಿ ಸಂಭ್ರಮಿಸಿದ್ದಾರೆ. ಅಭಿಮಾನಿಯೊಬ್ಬರು ರಾಕಿಂಗ್ ಫ್ಯಾಮಿಲಿ ಸದಸ್ಯರ ಸ್ಪೆಷಲ್ ಪೇಂಟಿಂಗ್ ಮಾಡಿ ಸರ್‌ಪ್ರೈಸ್ ನೀಡಿದ್ದಾರೆ. ಅದನ್ನು ನೋಡಿ ಯಶ್ ಧನ್ಯವಾದ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಇನ್ನು ಅಭಿಮಾನಿಗಳು ಯಶ್ ಜೊತೆ ಫೋಟೊಗಾಗಿ ಮುಗಿಬಿದ್ದಿದ್ದಾರೆ. ಅಭಿಮಾನಿಗಳನ್ನು ನೋಡಿ ಯಶ್ ಕೂಡ ಖುಷಿಯಾಗಿದ್ದಾರೆ. ಎಂಎಸ್ ಗೋಲ್ಡ್ ಮಳಿಗೆ ಮೇಲೆ ಯಶ್ ಅವರ ದೊಡ್ಡ ಹೋಲ್ಡಿಂಗ್ ಹಾಕಲಾಗಿತ್ತು.

ಇನ್ನು ಯಶ್ ನಟನೆಯ ಸೂಪರ್ ಹಿಟ್ 'KGF' ಸರಣಿ ಸಿನಿಮಾಗಳು ಜಪಾನೀಸ್ ಭಾಷೆಗೆ ಡಬ್ ಆಗಿ ಮುಂದಿನ ವಾರ ರಿಲೀಸ್ ಆಗುತ್ತಿದೆ. ಇತ್ತೀಚೆಗೆ ರಾಜಮೌಳಿ ನಿರ್ದೇಶನದ 'RRR' ಸಿನಿಮಾ ರಿಲೀಶ್ ಆಗಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಶತದಿನೋತ್ಸವ ಆಚರಿಸಿ ಕೋಟಿ ಕೋಟಿ ಕೊಳ್ಳೆ ಹೊಡೀತು. ನಟ ಯಶ್ ಕೂಡ ಸ್ಪೆಷಲ್ ವಿಡಿಯೋ ಮೂಲಕ ಸಿನಿಮಾ ನೋಡುವಂತೆ ಜಪಾನ್ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ.
ಯಶ್19 ಅಪ್‌ಡೇಟ್‌ಗಾಗಿ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತದೆ ಎನ್ನಲಾಗ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುವ ಸಾಧ್ಯತೆಯಿದೆ. ಈ ಬಾರಿ ರಾಕಿಂಗ್ ಸ್ಟಾರ್ ಹಾಲಿವುಡ್ ರೇಂಜ್ ಸಿನಿಮಾ ಮಾಡ್ತಾರೆ ಎನ್ನಲಾಗ್ತಿದೆ.


Click it and Unblock the Notifications











