ಮತ್ತೆ ಬಿಡುಗಡೆ ಆಗ್ತಿದೆ 'ಕೆಜಿಎಫ್; ಚಾಪ್ಟರ್ 1': ಎಂದು? ಎಲ್ಲೆಲ್ಲಿ ?
2018 ರಲ್ಲಿ ಬಿಡುಗಡೆ ಆಗಿದ್ದ ಕನ್ನಡ ಚಿತ್ರರಂಗದ ಅದ್ಧೂರಿ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 1' ಸಿನಿಮಾ ಮತ್ತೆ ಬಿಡುಗಡೆ ಆಗುತ್ತಿದೆ.
ಏಪ್ರಿಲ್ 14 ರಂದು 'ಕೆಜಿಎಫ್ 2' ಸಿನಿಮಾ ಬಿಡುಗಡೆ ಆಗುತ್ತಿದ್ದು, ಅದಕ್ಕೆ ಮುನ್ನಾ ಅಂದರೆ ಏಪ್ರಿಲ್ 08 ರಿಂದ ಏಪ್ರಿಲ್ 13 ರವರೆಗೆ 'ಕೆಜಿಎಫ್ 2' ಸಿನಿಮಾ ಮತ್ತೆ ದೇಶದಾದ್ಯಂತ ಬಿಡುಗಡೆ ಆಗುತ್ತಿದೆ.
'ಕೆಜಿಎಫ್' ಸಿನಿಮಾ ಪ್ರೇಕ್ಷಕರು ಆಯ್ದ ಕೆಲವು ಚಿತ್ರಮಂದಿರಗಳಲ್ಲಿ 'ಕೆಜಿಎಫ್; ಚಾಪ್ಟರ್ 1' ಸಿನಿಮಾವನ್ನು ಕಡಿಮೆ ದರದಲ್ಲಿ ವೀಕ್ಷಿಸಬಹುದಾಗಿದೆ. ಈ ಮಾಹಿತಿಯನ್ನು ಹೊಂಬಾಳೆ ಫಿಲಮ್ಸ್ ನಿರ್ಮಾಣ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
'ಕೆಜಿಎಫ್; ಚಾಪ್ಟರ್ 1' ಸಿನಿಮಾ 2018 ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಇದೀಗ ಅದೇ ಸಿನಿಮಾದ ಮುಂದುವರೆದ ಭಾಗ 'ಕೆಜಿಎಫ್ 2' ಇದೇ ಏಪ್ರಿಲ್ 14 ರಂದು ಬಿಡುಗಡೆ ಆಗುತ್ತಿದೆ. ಮೊದಲ ಸಿನಿಮಾ ಬಿಡುಗಡೆ ಆಗಿ ಬಹು ಸಮಯವಾಗಿದೆಯಾದ್ದರಿಂದ, ಮೊದಲ ಸಿನಿಮಾದಲ್ಲಿ ಏನು ನಡೆದಿತ್ತೆಂಬುದು ಹಲವು ಪ್ರೇಕ್ಷಕರಿಗೆ ನೆನಪುಳಿಯದೇ ಹೋಗಿರಬಹುದು. ಹಾಗಾಗಿ 'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ಮುನ್ನಾ 'ಕೆಜಿಎಫ್ 1' ಬಿಡುಗಡೆ ಮಾಡಿ, ಮೊದಲ ಭಾಗದಲ್ಲಿ ಏನಾಗಿತ್ತು ಎಂಬುದನ್ನು ಪ್ರೇಕ್ಷಕರು ನೆನಪಿಟ್ಟುಕೊಂಡು ಸಿನಿಮಾದ ಎರಡನೇ ಭಾಗ ನೋಡಲು ಬರಲಿ ಎಂಬುದು ಚಿತ್ರತಂಡದ ಯೋಜನೆ. ಹಾಗಾಗಿಯೇ ದೇಶದಾದ್ಯಂತ 'ಕೆಜಿಎಫ್ 1' ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ.

ಟಿವಿ, ಒಟಿಟಿಗಳಲ್ಲಿಯೂ ಮರುಪ್ರಸಾರ
ಚಿತ್ರಮಂದಿರಗಳಲ್ಲಿ ಮಾತ್ರವಲ್ಲ, 'ಕೆಜಿಎಫ್; ಚಾಪ್ಟರ್ 1' ಸಿನಿಮಾ ಟಿವಿಯಲ್ಲಿಯೂ ಪ್ರದರ್ಶನವಾಗಲಿದೆ. ಆದರೆ ಸಮಯ ಪ್ರಕಟಿಸಲಾಗಿಲ್ಲ. ಒಟಿಟಿಗಳಲ್ಲಿಯೂ 'ಕೆಜಿಎಫ್ 1' ಸಿನಿಮಾವನ್ನು ಮತ್ತೆ ಪ್ರಚಾರ ಮಾಡಲಾಗುತ್ತದೆ.

ಪಾತ್ರಗಳನ್ನು ಮರೆತಿರುವ ಸಾಧ್ಯತೆ ಇದೆ
'ಕೆಜಿಎಫ್ ಚಾಪ್ಟರ್ 1' ನ ಕತೆ ಬಹುತೇಕರಿಗೆ ಗೊತ್ತೆ ಇದೆ ಆದರೆ ಆ ಸಿನಿಮಾದಲ್ಲಿ ಹಲವು ಪಾತ್ರಗಳಿದ್ದವು, ಆ ಪಾತ್ರಗಳ ನಡುವಿನ ಸಂಬಂಧ, ಇತಿಹಾಸ ಇತರೆ ವಿಷಯಗಳು ಮರೆತು ಹೋಗಿರಲಿಕ್ಕೂ ಸಾಕು. ಹಾಗಾಗಿ ಈಗ 'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ಮುನ್ನ ಮೊದಲ ಭಾಗವನ್ನೊಮ್ಮೆ ನೋಡಿಕೊಂಡು ಬಿಟ್ಟರೆ, 'ಕೆಜಿಎಫ್ 2' ಸಿನಿಮಾವನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು ಹಾಗೂ ಆ ಮೂಲಕ ಆಸ್ವಾದಿಸಲು ಪ್ರೇಕ್ಷಕರಿಗೆ ಅನುಕೂಲಕರವಾಗಲಿದೆ.

ಕಡಿಮೆ ಟಿಕೆಟ್ ದರದಲ್ಲಿ ವೀಕ್ಷಿಸಬಹುದು
'ಕೆಜಿಎಫ್; ಚಾಪ್ಟರ್ 1' ಸಿನಿಮಾ ಹೊಸ ಸಿನಿಮಾಗಳಂತೆ ಹಲವು ಚಿತ್ರಮಂದಿರಗಳಲ್ಲಿ ಒಂದೇ ಬಾರಿಗೆ ಬಿಡುಗಡೆ ಆಗುತ್ತಿಲ್ಲ. ಬದಲಿಗೆ ಸೀಮಿತ ಚಿತ್ರಗಳಲ್ಲಿ ಅಷ್ಟೆ ಬಿಡುಗಡೆ ಆಗುತ್ತಿದೆ. ಆದರೆ ಕಡಿಮೆ ಟಿಕೆಟ್ ದರದಲ್ಲಿ ಪ್ರೇಕ್ಷಕರು ಈ ಸಿನಿಮಾವನ್ನು ನೋಡಬಹುದಾಗಿದೆ.

ಏಪ್ರಿಲ್ 14 ರಂದು ಬಿಡುಗಡೆ
ಇನ್ನು 'ಕೆಜಿಎಫ್ 2' ಸಿನಿಮಾದ ವಿಷಯಕ್ಕೆ ಮರಳುವುದಾದರೆ, ಸಿನಿಮಾವು ಬಹು ಅದ್ಧೂರಿಯಾಗಿ ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾವು ಸೆನ್ಸಾರ್ ಆಗಿದ್ದು, ಯು/ಎ ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ. ಏಪ್ರಿಲ್ 14 ರಂದು ಏಕಕಾಲಕ್ಕೆ 6000 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. 'ಕೆಜಿಎಫ್ 2' ಸಿನಿಮಾ ಭಾರತದ ಅತಿ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದ್ದು, ಯಶ್ ಜೊತೆಗೆ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಅಚ್ಯುತ್ ಕುಮಾರ್, ರಮೇಶ್ ರಾವ್ ಸೇರಿದಂತೆ ಹಲವು ದೊಡ್ಡ ಸ್ಟಾರ್ ನಟರ ದಂಡೇ ಸಿನಿಮಾದಲ್ಲಿದೆ. 'ಕೆಜಿಎಫ್ 1' ಗಿಂತಲೂ ಹೆಚ್ಚು ಅದ್ಧೂರಿಯಾಗಿಯೂ, ಮಾಸ್ ಎಲಿಮೆಂಟ್‌ಗಳಿಂದಲೂ ಈ ಸಿನಿಮಾ ತುಂಬಿರಲಿದೆ ಎನ್ನಲಾಗುತ್ತಿದೆ.


Click it and Unblock the Notifications











