ಭಾರತದಲ್ಲಿಯೇ ಅತಿ ಹೆಚ್ಚು ಜನ ನೋಡಲು ಕಾಯುತ್ತಿರುವ ಸಿನಿಮಾ ಕೆಜಿಎಫ್ 2!
ಕೆಜಿಎಫ್ 2 ಸಿನಿಮಾ ಕರ್ನಾಟಕದಲ್ಲಿ ಮಾತ್ರವಲ್ಲ ಭಾರತದಲ್ಲಿಯೇ ನಿರೀಕ್ಷೆ ಹೆಚ್ಚಿಸಿರುವ, ಸಿನಿ ಪ್ರೇಮಿಗಳು ಕಾತರರಾಗಿ ಕಾಯುತ್ತಿರುವ ಸಿನಿಮಾ.
ಕೆಜಿಎಫ್ 2 ಸಿನಿಮಾದ ಬಿಡುಗಡೆ ದಿನಾಂಕ ಸನಿಹವಾಗುತ್ತಿದ್ದಂತೆ ಸಿನಿ ಪ್ರೇಮಿಗಳ ಕಾತರವೂ ಹೆಚ್ಚಾಗುತ್ತಲೇ ಹೋಗುತ್ತಿದೆ. ಇದೀಗ 'ಕೆಜಿಎಫ್ 2' ಸಿನಿಮಾದ ಹೆಸರಿಗೆ ಹೊಸದೊಂದು ದಾಖಲೆ ಸೇರ್ಪಡೆಗೊಂಡಿದೆ.
ಭಾರತದಲ್ಲಿಯೇ ಅತಿ ಹೆಚ್ಚು ಜನ ನೋಡಲು ಕಾತರರಾಗಿ ಕಾಯುತ್ತಿರುವ ಸಿನಿಮಾ 'ಕೆಜಿಎಫ್ 2' ಆಗಿದೆ. ಬುಕ್ ಮೈ ಶೋನ ವೆಬ್‌ಸೈಟ್‌ನಲ್ಲಿ ಸಿನಿಮಾದ ಬಿಡುಗಡೆಗೆ ಹಲವು ದಿನಗಳ ಮುಂಚೆಯೇ 'ಈ ಸಿನಿಮಾ ನೋಡಲು ಕಾಯುತ್ತಿದ್ದೀರಾ?' ಎಂಬ ಆಯ್ಕೆಯೊಂದು ಸಿನಿಮಾದ ಪೋಸ್ಟರ್ ಜೊತೆಗೆ ಬರುತ್ತದೆ. 'ಕೆಜಿಎಫ್ 2' ನೋಡಲು ಕಾಯುತ್ತಿರುವುದಾಗಿ 3 ಲಕ್ಷಕ್ಕೂ ಹೆಚ್ಚು ಮಂದಿ ಬುಕ್ ಮೈ ಶೋನಲ್ಲಿ ಆಸಕ್ತಿ ವ್ಯಕ್ತಪಡಿಸಿದ್ದಾರೆ.

3 ಲಕ್ಷಕ್ಕೂ ಹೆಚ್ಚು ಮಂದಿ ಆಸಕ್ತಿ ವ್ಯಕ್ತಪಡಿಸಿದ್ದಾರೆ.
'ಕೆಜಿಎಫ್ 2' ಹೊರತಾಗಿ ಭಾರತದ ಇನ್ನಾವುದೇ ಸಿನಿಮಾಕ್ಕೆ ಇಷ್ಟೋಂದು ಮಂದಿ ಸಿನಿಮಾ ನೋಡಲು ಕಾತರರಾಗಿರುವುದಾಗಿ 'ಬುಕ್ ಮೈ ಶೋ'ನಲ್ಲಿ ಆಸಕ್ತಿ ವ್ಯಕ್ತಪಡಿಸಿಲ್ಲ. 3 ಲಕ್ಷಕ್ಕೂ ಹೆಚ್ಚು ಮಂದಿ ಸಿನಿಮಾ ನೋಡಲು ಕಾತರವಾಗಿದ್ದೇವೆಂದು ಬುಕ್ ಮೈ ಶೋನಲ್ಲಿ ಪ್ರತಿಕ್ರಿಯಿಸಿರುವುದು ಇದೇ ಮೊದಲು.

ಜುಲೈ 16 ರಂದು ಸಿನಿಮಾ ಬಿಡುಗಡೆ ಆಗಲಿದೆ
ಪ್ರಶಾಂತ್ ನೀಲ್ ನಿರ್ದೇಶಿಸಿ ಯಶ್ ನಟಿಸಿ 2018 ರಲ್ಲಿ ಬಿಡುಗಡೆ ಆಗಿದ್ದ 'ಕೆಜಿಎಫ್' ಸಿನಿಮಾದ ಮುಂದುವರೆದ ಭಾಗ 'ಕೆಜಿಎಫ್ 2' ಆಗಿದ್ದು, ಸಿನಿಮಾ ಜುಲೈ 16 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಯಶ್ ಜೊತೆಗೆ ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಪ್ರಕಾಶ್ ರೈ ಇನ್ನೂ ಹಲವು ಪ್ರಮುಖ ನಟರು ನಟಿಸಿದ್ದಾರೆ.

ದಾಖಲೆ ನಿರ್ಮಿಸಿದ 'ಕೆಜಿಎಫ್ 2' ಟ್ರೇಲರ್
'ಕೆಜಿಎಫ್ 2' ಸಿನಿಮಾದ ಟ್ರೇಲರ್ ಸಹ ಭಾರತದಲ್ಲಿ ಯೂಟ್ಯೂಬ್‌ನಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಟ್ರೇಲರ್ ಎಂಬ ಖ್ಯಾತಿಗೆ ಒಳಗಾಗಿತ್ತು. ಅತ್ಯಂತ ಕಡಿಮೆ ಅವಧಿಯಲ್ಲಿ 100 ಮಿಲಿಯನ್‌ಗೂ ಹೆಚ್ಚು ಮಂದಿ ಕೆಜಿಎಫ್ 2 ಟ್ರೇಲರ್ ವೀಕ್ಷಿಸಿದ್ದರು.
Recommended Video

'ಕೆಜಿಎಫ್' ಸರಣಿಯ ಕೊನೆಯ ಸಿನಿಮಾ 'ಕೆಜಿಎಫ್ 2'
'ಕೆಜಿಎಫ್ 2' ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಸಿನಿಮಾವು ಜುಲೈ 16 ಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. 'ಕೆಜಿಎಫ್' ಸರಣಿಯ ಕೊನೆಯ ಸಿನಿಮಾ ಇದಾಗಿದೆ. 'ಕೆಜಿಎಫ್ 2' ನಂತರ 'ಕೆಜಿಎಫ್ 3' ಸಿನಿಮಾ ಬರುವುದಿಲ್ಲ ಎಂದು ಪ್ರಶಾಂತ್ ನೀಲ್ ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











