ಬ್ಲಾಕ್‌ಬಸ್ಟರ್ 'KGF-2'ಗೆ 3 ವರ್ಷ; ಚಾಪ್ಟರ್- 3 ಬಗ್ಗೆ ಹೊಂಬಾಳೆ ಬಿಗ್ ಅಪ್‌ಡೇಟ್
ಇವತ್ತಿಗೆ ಸರಿಯಾಗಿ 3 ವರ್ಷಗಳ ಹಿಂದೆ ಭಾರತೀಯ ಚಿತ್ರರಂಗದಲ್ಲಿ ರಾಕಿಭಾಯ್ ಆರ್ಭಟ ನಡೀತಿತ್ತು. ರಾತ್ರಿಯಿಂದಲೇ ಹಲವೆಡೆ ಸಿನಿಮಾ ಪ್ರದರ್ಶನ ಆರಂಭವಾಗಿ ಬಾಕ್ಸಾಫೀಸ್ ಶೇಕ್ ಆಗಿತ್ತು. ಅಧೀರನ ಎದುರು ರಾಕಿ ದರ್ಬಾರ್ ನೋಡಿ ಸಿನಿರಸಿಕರು ಫಿದಾ ಆಗಿದ್ದರು. ನೋಡ ನೋಡುತ್ತಲೇ ಸಿನಿಮಾ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಕಡೆ ಓಟ ಆರಂಭಿಸಿತ್ತು.
ಬ್ಲಾಕ್‌ಬಸ್ಟರ್ 'KGF' ಚಾಪ್ಟರ್-2 ಸಿನಿಮಾ ಇದೀಗ 3 ವರ್ಷ ಪೂರೈಸಿದೆ. ಸ್ಪೆಷಲ್ ವಿಡಿಯೋ ಮೂಲಕ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಇದನ್ನು ಮೆಲುಕು ಹಾಕಿದೆ. ಜೊತೆಗೆ 'KGF' ಚಾಪ್ಟರ್-3 ಬಗ್ಗೆ ಸುಳಿವು ಕೊಟ್ಟಿದೆ. ಪ್ರಶಾಂತ್ ನೀಲ್ ನಿರ್ದೇಶನದ 'KGF' ಸರಣಿ ಕನ್ನಡ ಚಿತ್ರರಂಗ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ದಾಖಲೆಗಳನ್ನು ಹುಟ್ಟು ಹಾಕಿತ್ತು. ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿತ್ತು. ಮಾಸ್ ಕಮರ್ಷಿಯಲ್ ಸಿನಿಮಾಗಳಲ್ಲಿ ಹೊಸ ಬೆಂಚ್ ಮಾರ್ಕ್ ಕ್ರಿಯೇಟ್ ಮಾಡಿತ್ತು.

ಇವತ್ತಿಗೂ ಸಾಕಷ್ಟು ಕಮರ್ಷಿಯಲ್ ಸಿನಿಮಾಗಳು 'KGF' ಸ್ಟೈಲ್ ಫಾಲೋ ಮಾಡ್ತಿವೆ. ಮಾಸ್ ಫಿಲ್ಮ್ ಮೇಕರ್ಸ್ ಯಶ್ ಚಿತ್ರವನ್ನು ರೆಫರೆನ್ಸ್ ಆಗಿ ಇಟ್ಟುಕೊಳ್ಳುವಂತಾಗಿದೆ. ಮೊನ್ನೆ ಮೊನ್ನೆ ಬಂದ ಮಲಯಾಳಂನ 'ಮಾರ್ಕೊ', 'ಎಂಪುರಾನ್' ಸಿನಿಮಾಗಳಲ್ಲಿ 'KGF' ಛಾಯೆ ಎದ್ದು ಕಾಣುವಂತಿದೆ. ವಿಜಯ್ ದೇವರಕೊಂಡ ನಟನೆಯ 'ಕಿಂಗ್ಡಮ್' ಕೂಡ 'KGF' ಸಿನಿಮಾ ರೀತಿಯ ಸಿನಿಮಾ ಎಂದು ಇತ್ತೀಚೆಗೆ ನಿರ್ಮಾಪಕರು ಹೇಳಿದ್ದಾರೆ. ಅಷ್ಟರಮಟ್ಟಿಗೆ ಈ ಸಿನಿಮಾ ಫಿಲ್ಮ್ ಮೇಕರ್ಸ್ ಮೇಲೆ ಪ್ರಭಾವ ಬೀರಿದೆ.
2022, ಏಪ್ರಿಲ್ 14ರಂದು 'KGF'-2 ಸಿನಿಮಾ ತೆರೆಗಪ್ಪಳಿಸಿತ್ತು. ಮೊದಲ ದಿನವೇ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಕನ್ನಡಕ್ಕಿಂತ ಹಿಂದಿ ವರ್ಷನ್ ಹೆಚ್ಚು ಕಲೆಕ್ಷನ್ ಮಾಡಿತ್ತು. ಅತ್ತ ತಮಿಳಿನಲ್ಲಿ ದಳಪತಿ ವಿಜಯ್ ನಟನೆಯ 'ಬೀಸ್ಟ್' ಸಿನಿಮಾ ತೆರೆಗೆ ಬಂದಿತ್ತು. ಆದರೆ ಆ ಚಿತ್ರವನ್ನು ಹಿಂದಿಕ್ಕಿ ಕಾಲಿವುಡ್ ಬಾಕ್ಸಾಫೀಸ್‌ನಲ್ಲಿ ಕೂಡ ರಾಕಿ ಅಬ್ಬರಿಸಿ ಬೊಬ್ಬಿರಿದಿದ್ದ. ಪ್ರಶಾಂತ್ ನೀಲ್ ಎಲಿವೇಷನ್ಸ್, ಯಶ್ ಪರ್ಫಾರ್ಮನ್ಸ್, ರವಿ ಬಸ್ರೂರು ಬಿಜಿಎಂ ಇವತ್ತಿಗೂ ಸಿನಿರಸಿಕರಿಗೆ ಗೂಸ್‌ಬಂಪ್ಸ್ ತರುವಂತಿದೆ.
'KGF' ಚಾಪ್ಟರ್-1 ಚಿತ್ರಕ್ಕೆ ಚಿತ್ರತಂಡ ಭಾರೀ ಪ್ರಚಾರ ಮಾಡಿತ್ತು. ಆದರೆ ಚಾಪ್ಟರ್-2ಗೆ ಅಷ್ಟೇನು ಪ್ರಚಾರ ಮಾಡುವ ಗೋಜಿಗೆ ಹೋಗಿರಲಿಲ್ಲ. ಕಾರಣ ಜನರೇ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡುಬಿಟ್ಟಿದ್ದರು. ಸಿನಿಮಾ ಬಿಡುಗಡೆ ದಿನಾಂಕ ಗೊತ್ತಾದರೆ ಸಾಕು ಎನ್ನವಂತಾಗಿತ್ತು. ಮೊದಲ ದಿನವೇ ಸಿನಿಮಾ ಭಾರತದಲ್ಲಿ 134.5 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡ ಘೋಷಿಸಿತ್ತು. ಆ ಮೂಲಕ ಬಾಲಿವುಡ್ ಸಿನಿಮಾಹಳ ದಾಖಲೆಯನ್ನು ರಾಕಿ ಅಳಿಸಿ ಹಾಕಿದ್ದ.
ಚಾಪ್ಟರ್-1 ಬಾಲಿವುಡ್‌ನಲ್ಲಿ ಒಟ್ಟಾರೆ 44 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆದರೆ ಚಾಪ್ಟರ್-2 ಸಿನಿಮಾ 25 ದಿನಕ್ಕೆ ಬಾಲಿವುಡ್ ಅಂಗಳಲ್ಲಿ ಬರೋಬ್ಬರಿ 400 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಹುಬ್ಬೇರಿಸಿತ್ತು. 'ಬಾಹುಬಲಿ' ಸರಣಿ ಮೂಲಕ ರಾಜಮೌಳಿ ಹುಟ್ಟಾಕಿದ ಪ್ಯಾನ್ ಇಂಡಿಯಾ ಸಿನಿಮಾ ಟ್ರೆಂಡ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದು ಕನ್ನಡದ 'KGF' ಸರಣಿ. ಈ ಮಟ್ಟಿಗೆ ಮತ್ಯಾವುದೇ ಸಿನಿಮಾ ಸದ್ದು ಮಾಡಲಿಲ್ಲ.
ಬ್ಲಾಕ್‌ಬಸ್ಟರ್ 'KGF-2' ಸಿನಿಮಾ 3 ವರ್ಷ ಪೂರೈಸಿರುವ ಸಂತಸವನ್ನು ಸ್ಪೆಷಲ್ ವೀಡಿಯೋ ಮಾಡಿ ಹೊಂಬಾಳೆ ಹಂಚಿಕೊಂಡಿದೆ. ಕೊನೆಗೆ 'KGF' ಚಾಪ್ಟರ್ -2 ಪೋಸ್ಟರ್ ಹಾಕಿ 'ಸೀ ಯೂ ಸೂನ್' ಎಂಬ ರಾಕಿ ಡೈಲಾಗ್ ಹಾಕಲಾಗಿದೆ. ಆ ಮೂಲಕ ಆದಷ್ಟು ಬೇಗ ಚಾಪ್ಟರ್ -3 ಸಿನಿಮಾ ಶುರುವಾಗುತ್ತದೆ ಎನ್ನುವ ಸುಳಿವು ಕೊಟ್ಟಿದೆ ಚಿತ್ರತಂಡ.
ಪ್ರಶಾಂತ್ ನೀಲ್ ಮೊದಲಿಗೆ 'KGF' ಕಥೆಯನ್ನು ಒಂದು ಸಿನಿಮಾ ಮಾಡಲು ಮುಂದಾಗಿದ್ದರು. ಸಿನಿಮಾ ಕೆಲಸಗಳು ನಡೆಯುತ್ತಿದ್ದಂತೆ ಅದನ್ನು 2 ಭಾಗಗಳಾಗಿ ಮಾಡಬಹುದು ಎಂದು ಚಿತ್ರತಂಡಕ್ಕೆ ಅನಿಸಿತ್ತು. ಯಶ್ ಈ ವಿಚಾರದಲ್ಲಿ ಬಹಳ ಉತ್ಸುಕತೆ ತೋರಿಸಿದ್ದರು. ನಿರ್ದೇಶಕರು, ನಿರ್ಮಾಪಕರು ಎಲ್ಲರನ್ನು ಒಪ್ಪಿಸಿದ್ದರು. ಹಾಗಾಗಿ ರಾಕಿಭಾಯ್ ಕಥೆಯನ್ನು ಎರಡೂ ಭಾಗಗಳಾಗಿ ಮಾಡುವ ಪ್ರಯತ್ನ ನಡೀತು. ಬಾಲಿವುಡ್ ವಿತರಕ ಅನಿಲ್ ತದಾನಿ ತಂಡದ ಜೊತೆ ಕೈಜೋಡಿಸಿದರು. ಬಳಿಕ ಸಿನಿಮಾ ದೊಡ್ಡದಾಗುತ್ತಾ ಹೋಯಿತು.
ತಾಯಿ ಆಸೆ ಈಡೇರಿಸುವುದರೊಂದಿಗೆ ರಾಕಿಭಾಯ್ ಕಥೆ ಮುಗಿಯಿತು ಎಂದು ಎಲ್ಲರೂ ಅಂದುಕೊಂಡರು. ರಾಕಿ ಸತ್ತಮೇಲೆ ಕಥೆ ಏನಿದೆ? ಎನ್ನುವುದು ಎಲ್ಲರ ಲೆಕ್ಕಾಚಾರ ಆಗಿತ್ತು. ಆದರೆ ಅದನ್ನು ಸ್ಪಷ್ಟವಾಗಿ ತೋರಿಸದೇ ಚಾಪ್ಟರ್- 2 ಕ್ಲೈಮ್ಯಾಕ್ಸ್‌ನಲ್ಲಿ ಟ್ವಿಸ್ಟ್ ಇಟ್ಟು ಚಾಪ್ಟರ್- 3 ಬಗ್ಗೆ ಕುತೂಹಲ ಹುಟ್ಟುಹಾಕಿತ್ತು ಚಿತ್ರತಂಡ. ಕನ್ನಡ ಸಿನಿರಸಿಕರು ಮಾತ್ರವಲ್ಲ ಪರಭಾಷಿಕರು ಕೂಡ ರಾಕಿಯ ಮುಂದಿನ ಕಥೆಯನ್ನು ನೋಡಲು, ಸಂಭ್ರಮಿಸಲು ಕಾಯುತ್ತಿದ್ದಾರೆ. ಹಾಗಾಗಿ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸೀಕ್ವೆಲ್ ಸಿನಿಮಾ ಇದಾಗಿರಲಿದೆ.
ಯಶ್ ಹಾಗೂ ಪ್ರಶಾಂತ್ ನೀಲ್ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಚಾಪ್ಟರ್-3 ಚಿತ್ರಕ್ಕೆ ಕಥೆ ಸಿದ್ಧವಿದೆ. ಆದರೆ ಸಿನಿಮಾ ಯಾವಾಗ ಎನ್ನುವುದು ಯಾರಿಗೂ ಗೊತ್ತಿಲ್ಲ. ಯಶ್ ಈಗ 'ಟಾಕ್ಸಿಕ್' ಗುಂಗಿನಲ್ಲಿದ್ದಾರೆ. ತಾವೇ ಸಿನಿಮಾ ನಿರ್ಮಿಸಿ, ನಟಿಸುತ್ತಿದ್ದಾರೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮುಂದಿನ ವರ್ಷ ಮಾರ್ಚ್ 19ಕ್ಕೆ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲಿದೆ.
ಅತ್ತ ಪ್ರಶಾಂತ್ ನೀಲ್ ಮೊನ್ನೆ ಮೊನ್ನೆ 'ಡ್ರ್ಯಾಗನ್' ಸಿನಿಮಾ ಆರಂಭಿಸಿದ್ದಾರೆ. ಮುಂದಿನ ವಾರ ಜ್ಯೂ. ಎನ್‌ಟಿಆರ್ ತಂಡ ಸೇರಿಕೊಳ್ಳಲಿದ್ದಾರೆ. 'KGF' ರೀತಿಯಲ್ಲೇ ಇದು ಕೂಡ ದೊಡ್ಡ ಪ್ರಾಜೆಕ್ಟ್. ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. 'ಟಾಕ್ಸಿಕ್' ಸಿನಿಮಾ ಮುಗಿಸಿ ಯಶ್, 'ಡ್ರ್ಯಾಗನ್' ಸಿನಿಮಾ ಕಂಪ್ಲೀಟ್ ಮಾಡಿ ನೀಲ್ ಮತ್ತೆ 'KGF'-3 ಚಿತ್ರಕ್ಕಾಗಿ ಕೈ ಜೋಡಿಸುವ ಸಾಧ್ಯತೆಯಿದೆ.
ಪ್ರಶಾಂತ್ ನೀಲ್ ಹಾಗೂ ಯಶ್ ಇಬ್ಬರೂ ಈಗ ಪ್ಯಾನ್ ಇಂಡಿಯಾ ಸಿನಿಮಾಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅಷ್ಟು ಬೇಗ ಯಾವುದೇ ಸಿನಿಮಾ ಮುಗಿಯುವುದಿಲ್ಲ. ಇಬ್ಬರೂ ತಮ್ಮ ಕಮೀಟ್‌ಮೆಂಟ್ ಮುಗಿದ ಬಳಿಕ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸದ್ಯ ಸುಳಿವು ಕೊಟ್ಟಿರುವುದು ಗಮನಿಸಿದರೆ ಮುಂದಿನ ವರ್ಷವೇ ಚಾಪ್ಟರ್-3 ಶುರುವಾಗುವ ಸಾಧ್ಯತೆ ದಟ್ಟವಾಗಿದೆ. 'ಟಾಕ್ಸಿಕ್' ಜೊತೆ ಯಶ್ 'ರಾಮಾಯಣ' ಸರಣಿ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ.
ದೇಶ ವಿದೇಶಗಳಲ್ಲಿ 'KGF' ಸಿನಿಮಾ ಸದ್ದು ಮಾಡಿತ್ತು. ಈ ಸಿನಿಮಾ ಬಳಿಕ ಹೊರ ರಾಜ್ಯಗಳಲ್ಲಿ ಹೊರ ದೇಶಗಳಲ್ಲಿ ಕೂಡ ಯಶ್ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಮಲೇಷಿಯಾದಲ್ಲಿ ರಾಕಿಂಗ್ ಸ್ಟಾರ್ ಅಭಿಮಾನಿ ಸಂಘ ಹುಟ್ಟಿಕೊಂಡಿದೆ. 'KGF' ಚಿತ್ರಕ್ಕಾಗಿ ಯಶ್ ಏಳೆಂಟು ವರ್ಷ ವ್ಯಯಿಸಿದ್ದರು. ಅವರ ಲೆಕ್ಕಾಚಾರ ತಪ್ಪಾಗಲಿಲ್ಲ. ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪಟ್ಟಕ್ಕೇರಿಬಿಟ್ಟರು.
ರಾಕಿಂಗ್ ಸ್ಟಾರ್ ಸಿನಿಬದುಕನ್ನು 'KGF'ಗೂ ಮುನ್ನ 'KGF' ಬಳಿಕ ಎಂದು ಪ್ರತ್ಯೇಕಿಸಿ ಹೇಳುವ ಮಟ್ಟಕ್ಕೆ ಸಿನಿಮಾ ನೇಮು ಫೇಮು ತಂದುಕೊಟ್ಟಿದೆ. ಕನ್ನಡ ಸಿನಿಮಾಗಳು ಕೂಡ 100 ಕೋಟಿ, 500 ಕೋಟಿ ಅಷ್ಟೇ ಅಲ್ಲ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಬಹುದು ಎಂದು ಈ ಸಿನಿಮಾ ತೋರಿಸಿಕೊಟ್ಟಿತ್ತು. ಮುಂದೆ ಚಾಪ್ಟರ್- 3 ಸಿನಿಮಾ ಯಾವೆಲ್ಲಾ ದಾಖಲೆ ಬರೆಯುತ್ತೆ ಕಾದು ನೋಡಬೇಕಿದೆ.


Click it and Unblock the Notifications











