ಇನ್ನು ಮುಗಿದಿಲ್ಲ ಕೆಜಿಎಫ್ 2: ಬೆಂಗಳೂರಿನಲ್ಲಿ ಮುಂದುವರಿದ ಚಿತ್ರೀಕರಣ
ಭಾರತೀಯ ಚಿತ್ರರಂಗದ ಬಹುನಿರೀಕ್ಷೆಯ ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 2022ಕ್ಕೆ ವರ್ಲ್ಡ್‌ವೈಡ್ ಬಿಡುಗೆಯಾಗುತ್ತಿದೆ. ಕೋವಿಡ್ ಎರಡನೇ ಅಲೆಯ ಭೀತಿ ಇಲ್ಲದೇ ಹೋಗಿದ್ದರೆ ಕಳೆದ ಜುಲೈ ತಿಂಗಳಲ್ಲಿ ಕೆಜಿಎಫ್ 2 ಥಿಯೇಟರ್‌ಗೆ ಬರಬೇಕಿತ್ತು. ಆದರೆ, ಕೊರೊನಾ ಲಾಕ್‌ಡೌನ್‌ನಿಂದಾಗಿ ಚಿತ್ರಮಂದಿರಗಳು ಮುಚ್ಚಿದ್ದರಿಂದ ಮತ್ತಷ್ಟು ದಿನ ಮುಂದಕ್ಕೆ ಹೋಯಿತು.
ಮೂರು ವರ್ಷದಿಂದ ಕೆಜಿಎಫ್ ಚಿತ್ರಕ್ಕಾಗಿ ಸಿನಿಪ್ರೇಮಿಗಳು ಕಾಯುತ್ತಿದ್ದಾರೆ. ಸಿನಿಮಾದ ಅಪ್‌ಡೇಟ್ ಪ್ರಕಾರ ಕೆಜಿಎಫ್ ಚಾಪ್ಟರ್ 2 ಸಂಪೂರ್ಣ ಶೂಟಿಂಗ್ ಮುಗಿಸಿದೆ. ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸನೂ ಮುಗಿಸಿದ್ದ ಚಿತ್ರತಂಡ ಬಿಡುಗಡೆಗಾಗಿ ಯೋಜನೆ ರೂಪಿಸುವಲ್ಲಿ ನಿರತವಾಗಿದೆ. ಆ ಕಡೆ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಮುಗಿಸಿ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಮಾಡ್ತಿದ್ದಾರೆ.
ಹೊಂಬಾಳೆ ಫಿಲಂಸ್ ಸಂಸ್ಥೆ ಸಹ ಕೆಜಿಎಫ್ ರಿಲೀಸ್‌ಗೆ ರೆಡಿ ಮಾಡಿ ಬೇರೆ ಬೇರೆ ಚಿತ್ರಗಳ ನಿರ್ಮಾಣದಲ್ಲಿ ತೊಡಗಿಕೊಂಡಿದೆ. ಹೀಗೆ, ಕೆಜಿಎಫ್ ಕಂಪ್ಲೀಟ್ ಆಗಿದೆ ಎಂದುಕೊಂಡಿದ್ದ ಅಭಿಮಾನಿಗಳಿಗೆ ಚಿತ್ರತಂಡ ಸರ್ಪ್ರೈಸ್ ಕೊಟ್ಟಿದೆ. ಸದ್ಯದ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಶೂಟಿಂಗ್ ಮುಂದುವರಿದಿದೆ. ಮುಂದೆ ಓದಿ...

ನೈಸ್ ರಸ್ತೆಯಲ್ಲಿ ಕೆಜಿಎಫ್ ಶೂಟಿಂಗ್
ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಬಹುತೇಕ ಮುಗಿದಿದೆ. ಸ್ಕ್ರಿಪ್ಟ್ ಪ್ರಕಾರ ಬೇಕಿದ್ದ ಎಲ್ಲಾ ಪ್ರಮುಖ ದೃಶ್ಯಗಳ ಶೂಟಿಂಗ್ ಮುಕ್ತಾಯವಾಗಿದೆ. ಬಾಕಿ ಉಳಿದಿರುವ ಪ್ಯಾಚ್ ವರ್ಕ್ ಇನ್ನು ನಡೆಯುತ್ತಿದೆ ಎಂಬ ಮಾಹಿತಿ ಇದೆ. ಈಗಿನ ಅಪ್‌ಡೇಟ್ ಪ್ರಕಾರ ಕೆಜಿಎಫ್ 2 ಶೂಟಿಂಗ್ ಬೆಂಗಳೂರಿನ ನೈಸ್ ರಸ್ತೆಯಲ್ಲಿ ನಡೆದಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಜಿಎಫ್ ಛಾಯಾಗ್ರಾಹಕ ಭುವನ್ ಗೌಡ ಮೇಕಿಂಗ್ ಝಲಕ್ ವಿಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಯಶ್ ಶೂಟಿಂಗ್ ಮುಗಿದಿದೆ
ಕೆಜಿಎಫ್ ಸಿನಿಮಾದ ಎಲ್ಲಾ ಪ್ರಮುಖ ಕಲಾವಿದರ ಚಿತ್ರೀಕರಣ ಮುಗಿದಿದೆ. ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರಾವ್ ರಮೇಶ್, ಪ್ರಕಾಶ್ ರಾಜ್ ಹೀಗೆ ಎಲ್ಲ ಕಲಾವಿದರು ತಮ್ಮ ಭಾಗದ ಕೆಲಸ ಮುಗಿಸಿಕೊಟ್ಟಿದ್ದಾರೆ. ಡಬ್ಬಿಂಗ್ ಸಹ ಪೂರ್ಣಗೊಳಿಸಿದ್ದಾರೆ. ಈ ಕುರಿತು ಯಶ್ ಸಹ ಈ ಹಿಂದೆಯೇ ಸ್ಪಷ್ಟನೆ ಕೊಟ್ಟಿದ್ದು, ಕೆಜಿಎಫ್ ಪೂರ್ಣಗೊಂಡಿದೆ ಎಂದಿದ್ದರು.

ಏಪ್ರಿಲ್ 14ಕ್ಕೆ ಬಿಡುಗಡೆ
2021ರಲ್ಲಿ ಬಿಡುಗಡೆಯಾಗಬೇಕಿದ್ದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಡಿಸೆಂಬರ್‌ನಲ್ಲಿ ಬರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ 2022ರ ಏಪ್ರಿಲ್ 14ಕ್ಕೆ ದಿನಾಂಕ ನಿಗದಿ ಮಾಡಿದರು. ಅಷ್ಟಕ್ಕೂ ಆ ದಿನಕ್ಕೆ ಪ್ರಭಾಸ್-ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ತಯಾರಾಗುತ್ತಿರುವ ಸಲಾರ್ ಚಿತ್ರ ಬರಬೇಕಿತ್ತು. ಕೆಜಿಎಫ್ ಚಿತ್ರಕ್ಕಾಗಿ ಸಲಾರ್ ದಿನಾಂಕ ಬಿಟ್ಟುಕೊಟ್ಟಿದೆ. ಸಲಾರ್ ಚಿತ್ರ ಈಗ ಮುಂದಕ್ಕೆ ಹೋಗಿದೆ. ಕೆಜಿಎಫ್ ಬಿಡುಗಡೆಗೂ ಮುಂಚೆ ಉಳಿದ ಎಲ್ಲ ನಿರೀಕ್ಷೆಯ ಚಿತ್ರಗಳು ರಿಲೀಸ್ ಆಗುತ್ತಿದ್ದು, ರಾಕಿ ಭಾಯ್‌ಗೆ ಯಾವುದೇ ಪೈಪೋಟಿ ಇಲ್ಲ.

ಐದು ಭಾಷೆಯಲ್ಲಿ ಬಿಡುಗಡೆ
ಕೆಜಿಎಫ್ ಚಿತ್ರವನ್ನು ಎಕ್ಸ್‌ಕ್ಲೂಸಿವ್ ಆಗಿ ಒಟಿಟಿಯಲ್ಲಿ ಬಿಡುಗಡೆ ಮಾಡುವಂತೆ ಆಫರ್ ಮಾಡಲಾಗಿತ್ತು. ಅಮೇಜಾನ್, ನೆಟ್‌ಫ್ಲಿಕ್ಸ್, ಜೀ5 ಚಾನಲ್‌ಗಳು ಮುಗಿಬಿದ್ದವು. ಆದರೆ, ಥಿಯೇಟರ್ ರಿಲೀಸ್ ಮಾಡುವ ನಿರ್ಧಾರದಲ್ಲಿದ್ದ ನಿರ್ಮಾಪಕರು ಅದನ್ನು ನಿರಾಕರಿಸಿದರು. ಈಗಾಗಲೇ ಐದು ಭಾಷೆಗಳಿಗೆ ಕೆಜಿಎಫ್ ವಿತರಣೆ ಹಕ್ಕು ಮಾರಾಟವಾಗಿರುವ ಬಗ್ಗೆ ಮಾಹಿತಿ ಇದೆ. ನಿರೀಕ್ಷೆಯಂತೆ ಲಹರಿ-ಟಿ-ಸಿರೀಸ್ ಆಡಿಯೋ ಖರೀದಿ ಮಾಡಿದೆ. ಜೀ ಗ್ರೂಪ್ ಸ್ಯಾಟ್‌ಲೈಟ್ ಹಕ್ಕು ತೆಗೆದುಕೊಂಡಿದೆ.


Click it and Unblock the Notifications











