Kichcha47: ಸುದೀಪ್- ಚೇರನ್ ಕಾಂಬಿನೇಷನ್ ಕಿಚ್ಚ47 ಚಿತ್ರಕ್ಕೆ ನಾಯಕಿ ಸಿಕ್ಕೇಬಿಟ್ಲು
'ವಿಕ್ರಾಂತ್ ರೋಣ' ಬಳಿಕ ಒಂದು ವರ್ಷ ಬಿಡುವು ಪಡೆದಿದ್ದ ನಟ ಸುದೀಪ್ ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಬಿಗ್‌ಬಾಸ್ ಜೊತೆ ಜೊತೆಗೆ 'ಮ್ಯಾಕ್ಸ್' ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಈ ಸಿನಿಮಾ ಮುಗಿಯೋಕು ಮುನ್ನ ಮತ್ತೊಂದು ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರಕ್ಕೆ ನಾಯಕಿಯ ಆಯ್ಕೆ ಕೂಡ ನಡೆದಿದೆ.
ತಮಿಳು ನಿರ್ದೇಶಕ ಚೇರನ್ ನಿರ್ದೇಶಿಸಿ ನಟಿಸಿ 'ಆಟೋಗ್ರಾಫ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಕಿಚ್ಚ ಸುದೀಪ್ ಕನ್ನಡದಲ್ಲಿ ರೀಮೆಕ್ ಮಾಡಿ ಗೆದ್ದಿದ್ದರು. ಇದೀಗ ಸುದೀಪ್‌ಗಾಗಿ ಸ್ವತಃ ಚೇರನ್ ಕತೆ ಸಿದ್ಧಪಡಿಸಿದ್ದು ಅದು ಫೈನಲ್ ಆಗಿದೆ. ಇನ್ನು ಹೆಸರಿಡದ ಈ ಚಿತ್ರವನ್ನು Kichcha47 ಎಂದು ಕರೆಯಲಾಗುತ್ತಿದೆ. ತಮಿಳಿನ ಸತ್ಯಜ್ಯೋತಿ ಫಿಲ್ಮ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ.

ಮಾರ್ಚ್ ವೇಳೆಗೆ 'ಮ್ಯಾಕ್ಸ್' ಸಿನಿಮಾ ತೆರೆಗೆ ಬರಲಿದೆ. ಅಷ್ಟರಲ್ಲಿ ಕಿಚ್ಚ47 ಚಿತ್ರೀಕರಣ ಕೂಡ ಆರಂಭವಾಗಲಿದೆ. ಸದ್ಯ ಚಿತ್ರದ ನಾಯಕಿ ಯಾರು ಅನ್ನೋದು ರಿವೀಲ್ ಆಗಿದೆ. ಈ ಚಿತ್ರದಲ್ಲಿ ಸುದೀಪ್ ಜೋಡಿಯಾಗಿ 'KGF' ಖ್ಯಾತಿಯ ಶ್ರೀನಿಧಿ ಶೆಟ್ಟಿ ನಟಿಸಲಿದ್ದಾರೆ. ಆಕೆಯ ಹುಟ್ಟುಹಬ್ಬದ ಸಂಭ್ರಮದಲ್ಲಿ ಈ ವಿಚಾರವನ್ನು ಚಿತ್ರತಂಡ ಘೋಷಿಸಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಚೆಲುವೆಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಇಂತಹ ಸಮಯದಲ್ಲೇ ಕಿಚ್ಚ47 ಸಿನಿಮಾ ಸುದ್ದಿ ಹೊರಬಿದ್ದಿದೆ.
ಶ್ರೀನಿಧಿ ಸಿನಿಮಾಗಳ ಆಯ್ಕೆ ವಿಚಾರದಲ್ಲಿ ಬಹಳ ಚೂಸಿಯಾಗಿದ್ದಾರೆ. 'KGF' ಸರಣಿ ಅಷ್ಟು ದೊಡ್ಡದಾಗಿ ಹಿಟ್ ಆದರೂ ಹೆಚ್ಚು ಸಿನಿಮಾಗಳಲ್ಲಿ ಆಕೆ ನಟಿಸಲಿಲ್ಲ. ತಮಿಳಿನ 'ಕೋಬ್ರಾ' ಚಿತ್ರದಲ್ಲಿ ಚಿಯಾನ್ ವಿಕ್ರಂ ಜೋಡಿಯಾಗಿ ನಟಿಸಿದ್ದರು. ಆ ಸಿನಿಮಾ ಹೀನಾಯವಾಗಿ ಸೋತಿತ್ತು. ಬಳಿಕ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಇತ್ತೀಚೆಗಷ್ಟೆ ತೆಲುಗಿನ 'ತೆಲುಸು ಕದಾ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಇದೀಗ ಸುದೀಪ್ ಜೋಡಿಯಾಗುವ ಅವಕಾಶ ಅರಸಿ ಬಂದಿದೆ.
ಕಿಚ್ಚ47 ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ರಾಕಿಭಾಯ್ ಜೋಡಿ ರೀನಾ ಆಗಿ ಶ್ರೀನಿಧಿ ಪ್ರೇಕ್ಷಕರ ಮನಗೆದ್ದಿದ್ದರು. ಇದೀಗ ಸುದೀಪ್ ಜೋಡಿಯಾಗಿ ಮತ್ತೆ ಕಮಾಲ್ ಮಾಡೋಕೆ ಬರ್ತಿದ್ದಾರೆ.
ಮಂಗಳೂರು ಮೂಲಕ ಶ್ರೀನಿಧ ರೂಪದರ್ಶಿಯಾಗಿ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಚೆಲುವೆ 2016ರಲ್ಲಿ ಮಿಸ್ ದಿವಾ ಸ್ಪರ್ಧೆಯ ವಿಜೇತರಾಗಿದ್ದರು. ಮಿಸ್ ಕರ್ನಾಟಕ ಮತ್ತು ಮಿಸ್ ಬ್ಯೂಟಿಫುಲ್ ಸ್ಮೈಲ್ ಸ್ಪರ್ಧೆ, ಮಿಸ್ ಸುಪ್ರನ್ಯಾಷನಲ್ ಸೇರಿದಂತೆ ಹಲವು ಕಿರೀಟಗಳು ಆಕೆಯ ಮುಡಿಗೇರಿದೆ.
ದೇಶ ವಿದೇಶದ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಚೆಲುವೆ ಆಡಿಶನ್ ಕೊಟ್ಟು KGF ಚಿತ್ರಕ್ಕೆ ಆಯ್ಕೆ ಆಗಿದ್ದರು. ಮೊದಲ ಪ್ರಯತ್ನದಲ್ಲೇ ಬಹಳ ದೊಡ್ಡ ಅವಕಾಶ ಆಕೆಗೆ ಸಿಕ್ಕಿತ್ತು. ಆದರೆ ಆ ಬಳಿಕ ಅವಕಾಶಗಳು ಬರಲಿಲ್ಲವೋ ಆಕೆ ನಟಿಸಲಿಲ್ಲವೋ ಗೊತ್ತಿಲ್ಲ. ಒಟ್ನಲ್ಲಿ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ.
ಇನ್ನು ಸುದೀಪ್ 'ಮ್ಯಾಕ್ಸ್', 'ಕಿಚ್ಚ47' ಮಾತ್ರವಲ್ಲ ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ. 'ಕೆಕೆ' ಹೆಸರಿನಲ್ಲಿ ಈ ಸಿನಿಮಾ ಆರಂಭವಾಗಲಿದ್ದು ಸ್ವತಃ ಸುದೀಪ್ ನಿರ್ದೇಶಿಸಿ ನಟಿಸುತ್ತಿದ್ದಾರೆ. ಇನ್ನು ಆರ್. ಚಂದ್ರು ನಿರ್ದೇಶನದಲ್ಲಿ ಮತ್ತೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ.


Click it and Unblock the Notifications











