ಹಾಸನದಲ್ಲಿ ಬೆಳ್ಳಂಬೆಳ್ಳಗ್ಗೆ ಜೆಸಿಬಿ ಘರ್ಜನೆ; ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಮನೆ ಕಾಂಪೌಂಡ್ ಧ್ವಂಸ
ಯಶ್ ಯಶೋಗಾಥೆಯ ಹಿಂದೆ ಕೇವಲ ರಾಧಿಕಾ ಪಂಡಿತ್ ಅವರ ತ್ಯಾಗ ಮತ್ತು ಶ್ರಮ ಮಾತ್ರ ಇಲ್ಲ. ಅವರ ಈ ಬೆಳವಣಿಗೆಯಲ್ಲಿ ಅವರ ತಾಯಿಯ ಪಾತ್ರ ಕೂಡ ಇದೆ. ಯಶ್ ಅವರ ಆರಂಭಿಕ ದಿನಗಳಲ್ಲಿ ತಮ್ಮ ಮಗನ ಕನಸುಗಳಿಗೆ ನೀರೆರೆದು ಪೋಷಿಸಿದವರು ಪುಷ್ಪಾ. ಇದೆಲ್ಲದರ ಪರಿಣಾಮ ಇವತ್ತು ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಹಾಲಿವುಡ್‌ಗೆ ಗಾಳ ಬೀಸಿದ್ದಾರೆ.
ಜಗತ್ತೇ ತಿರುಗಿ ನೋಡಬೇಕೆಂಬ ಉದ್ದೇಶದಿಂದ ''ಟಾಕ್ಸಿಕ್'' ಚಿತ್ರದ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಆದರೆ.. ಯಶ್ ತಮ್ಮ ಮೊದಲ ಚಿತ್ರದಲ್ಲಿ ಪಡೆಯದ ಪ್ರಚಾರವನ್ನು ಯಶ್ ಅವರ ತಾಯಿ ಪುಷ್ಪಾ ತಮ್ಮ ಮೊದಲ ಚಿತ್ರ ''ಕೊತ್ತಲವಾಡಿ''ಯಲ್ಲಿ ಪಡೆದಿದ್ದರು.

''ಕೊತ್ತಲವಾಡಿ'' ಬಾಕ್ಸಾಫೀಸ್‌ನಲ್ಲಿ ಗೆಲ್ತಾ..? ಸೋಲ್ತಾ..? ಅದು ಸೆಕೆಂಡರಿಯಾದರೂ ದೇಶವನ್ನೇ ಗೆದ್ದ.. ತನ್ನ ಕೆಲಸದಿಂದ ಎಲ್ಲರ ಬಾಯಿಯನ್ನೂ ಕೂಡ ಮುಚ್ಚಿಸಿದ ಯಶ್ ತಮ್ಮ ಚಿತ್ರಕ್ಕಿಂತ ಕಡಿಮೆ ಬದಲಿಗೆ ತಮ್ಮ ತಾಯಿಯ ವಿಚಾರದಿಂದ ಈಗೀಗ ಸುದ್ದಿಯಾಗುತ್ತಿದ್ದಾರೆ. ಇದಕ್ಕೆ ಹಾಸನದಲ್ಲಿನ ಪ್ರಕರಣ ಮತ್ತೊಂದು ಸಾಕ್ಷಿ.
ಹೌದು, ಹಾಸನದ ವಿದ್ಯಾನಗರ ಬಡಾವಣೆಯಲ್ಲಿ ಯಶ್ ಅವರ ಭವ್ಯವಾದ ಬಂಗಲೆ ಇದೆ. ಈ ಮನೆಯಲ್ಲಿ ಯಶ್ ಅವರ ತಾಯಿ ಮತ್ತು ತಂದೆ ವಾಸ ಇರುತ್ತಾರೆ. ಇವರ ಮನೆ ಪಕ್ಕದಲ್ಲಿಯೇ ಲಕ್ಷ್ಯಮ್ಮ ಎಂಬವರ ಜಾಗ ಇದೆ. ಯಶ್‌ಗೆ ತಲೆ ನೋವಾಗಿದ್ದು ಇದೇ ಜಾಗ. ಯಶ್ ಅವರ ತಾಯಿ ಈ ಜಾಗದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಿದ್ದರು.
ಈ ಹಿನ್ನೆಲೆ ಪುಷ್ಪಾ ಅರುಣ್ ಕುಮಾರ್ ಕಾಂಪೌಂಡ್ ಹಾಕಿದ ದಿನದಂದೇ ಕೆರಳಿದ್ದ ಲಕ್ಷ್ಮ್ಯಮ್ಮ ಅವರ ಪರವಾದ ಜಿಪಿಎ ಹೋಲ್ಡರ್ ದೇವರಾಜು ಯಶ್ ತಾಯಿ ಪುಷ್ಪಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸುಮಾರು 1,500 ಅಡಿ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು.
ಆ ನಂತರ ದೇವರಾಜು ಕೋರ್ಟ್ ಮೆಟ್ಟಿಲೇರಿದ್ದರು. ಆ ನಂತರ ಹಾಸನ ಹಿರಿಯ ಜೆಎಂಎಫ್‌ಸಿ ನ್ಯಾಯಾಲಯ ಹಲವಾರು ಬಾರಿ ಸಮನ್ಸ್ ಹೊರಡಿಸಿದರೂ ಯಶ್ ತಾಯಿ ಕೋರ್ಟ್‌ಗೆ ಬರಲಿಲ್ಲ. ದಾಖಲೆಯನ್ನು ಕೂಡ ಒದಗಿಸಲಿಲ್ಲ. ಹೀಗಾಗಿ ನ್ಯಾಯಾಲಯ ದೇವರಾಜು ಪವರ ಪರ ಆದೇಶ ನೀಡಿದೆ. ಕೋರ್ಟ್ ಆದೇಶದ ಮೇರೆಗೆ ಇಂದು (ಜನವರಿ 4) ಹಾಸನದ ವಿದ್ಯಾನಗರದಲ್ಲಿರುವ ಪುಷ್ಪಾ ಅವರ ಮನೆಯ ಕಾಂಪೌಂಡ್‌ನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನು ನೀಡಿರುವ ದೇವರಾಜು, ನ್ಯಾಯಾಲಯಕ್ಕೆ ಸೂಕ್ತ ದಾಖಲಾತಿಯನ್ನು ಪುಪ್ಪ ಅವರು ಒದಗಿಸಿಲ್ಲವಾದ್ದರಿಂದ ನಮ್ಮ ಪರ ತೀರ್ಪು ಬಂದಿದೆ ಎಂದು ಹೇಳಿದ್ದಾರೆ. ನ್ಯಾಯಾಲಯದ ಅನುಮತಿಯಂತೆ ನಾವು ಇಂದು ಅಕ್ರಮವಾಗಿ ಕಟ್ಟಿದ್ದ ಕಾಂಪೌಂಡ್‌ನ್ನು ತೆರವುಗೊಳಿಸಿದ್ದೇವೆ ಎಂದಿದ್ದಾರೆ.
ಅಂದ್ಹಾಗೇ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಅವರಿಗೆ ಈ ವಾದ ವಿವಾದ ಹೊಸದೇನಲ್ಲ. ಈ ಹಿಂದೆಯೂ ಕೂಡ ಹಲವು ಬಾರಿ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಮಾಡಿಕೊಂಡಿದ್ದಾರೆ. ಚೀಟಿ ವ್ಯವಹಾರದಿಂದಲೂ ಕೂಡ ಹಿಂದೆ ಜನಪ್ರಿಯರಾಗಿದ್ದ ಪುಷ್ಪಾ ಆ ನಂತರ ಬೆಂಗಳೂರಿನ ಬನಶಂಕರಿಯಲ್ಲಿನ ಮನೆಯ ಬಾಡಿಗೆ ವಿಚಾರಕ್ಕೆ ಕೂಡ ಸದ್ದು ಮಾಡಿದ್ದರು. ಸುದ್ದಿಯಾಗಿದ್ದರು. ಆಗ ನನ್ನ ಮಗ ಯಶ್ ದೊಡ್ಡ ಹೀರೋ. ನಮಗೆ ಅಭಿಮಾನಿ ಬಳಗ ದೊಡ್ಡದಾಗಿದೆ. ನಾವು ಯಾರಿಗೂ ಬಾಡಿಗೆ ಕೊಡಬೇಕಾಗಿಲ್ಲ. ನಮ್ಮ ತಂಟೆಗೆ ಬಂದ್ರೆ ಅಷ್ಟೆ. ಅಭಿಮಾನಿಗಳು ನಿಮಗೆ ಸರಿಯಾಗಿ ಮಾಡ್ತಾರೆ ಎಂದು ಯಶ್ ತಾಯಿ ಪುಷ್ಪ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಮನೆ ಮಾಲೀಕರಾದ ಡಾ.ಮುನಿಪ್ರಸಾದ್ ಪತ್ನಿ ಡಾ.ವನಜಾ ಮಾಧ್ಯಮಗಳಿಗೆ ಹೇಳಿಕೆಯನ್ನು ಕೂಡ ನೀಡಿದ್ದರು.


Click it and Unblock the Notifications










