BBK 12: ಬಿಗ್‌ಬಾಸ್ ಕನ್ನಡ ಸೀಸನ್ 12ರ ನಿರೂಪಣೆ ಬಗ್ಗೆ ಮೌನ ಮುರಿದ ಕಿಚ್ಚ
ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡದಲ್ಲಿ ಕೂಡ ಭರ್ಜರಿ ಸಕ್ಸಸ್ ಕಂಡಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲಿ 11 ಸೀಸನ್ ಯಶಸ್ವಿಯಾಗಿ ಮುಕ್ತಾಯವಾಗಿದೆ. ಮುಂದಿನ ಸಿನಿಮಾ ಯಾವಾಗ ಎಂದು ವೀಕ್ಷಕರು ಕಾಯುತ್ತಿದ್ದಾರೆ. ಆದರೆ ಶೋ ನಿರೂಪಣೆ ಮಾಡೋದು ಯಾರು ಎನ್ನುವ ಪ್ರಶ್ನೆಯೂ ಮೂಡಿದೆ.
ಸೀಸನ್ 11 ಮುಕ್ತಾಯಕ್ಕೂ ಮುನ್ನವೇ ಸೀಸನ್ 12 ನಾನು ನಿರೂಪಣೆ ಮಾಡಲ್ಲ ಎಂದು ಸುದೀಪ್ ಹೇಳಿದ್ದರು. ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಕಲರ್ಸ್ ಕನ್ನಡ ಜೊತೆಗಿನ ಕೆಲ ಭಿನ್ನಾಭಿಪ್ರಾಯಗಳಿಂದ ಕಿಚ್ಚ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿತ್ತು. ಬಳಿಕ ಮುಂದಿನ ಸೀಸನ್ ಹೋಸ್ಟ್ ಯಾರು ಮಾಡ್ತಾರೆ ಎನ್ನುವ ಚರ್ಚೆ ಶುರುವಾಗಿತು. ಆದರೆ ಇವತ್ತಿಗೂ ಸುದೀಪ್ ಅವರೇ ನಿರೂಪಣೆ ಮಾಡಬೇಕು ಎನ್ನುವುದು ಬಹಳ ಜನರ ಆಸೆಯಾಗಿದೆ.

ಒಂದಷ್ಟು ಷರತ್ತು ವಿಧಿಸಿ ಸುದೀಪ್ ಮತ್ತೆ ಬಿಗ್‌ಬಾಸ್ ನಿರೂಪಣೆ ಮಾಡಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಇತ್ತೀಚೆಗೆ ಕೇಳಿಬಂದಿತ್ತು. ಸುದೀಪ್ ಹಾಕಿರುವ ಕಂಡೀಷನ್ ಅನ್ನು ಕಲರ್ಸ್ ಕನ್ನಡ ಒಪ್ಪಿಕೊಂಡಿದೆ. ಹಾಗಾಗಿ ಅವರೇ ಸೀಸನ್ 12 ಜವಾಬ್ದಾರಿ ವಹಿಸಿಕೊಳ್ಳುತ್ತಾರೆ ಎನ್ನುವ ಅಂತೆ ಕಂತೆ ಸುದ್ದಿ ಹರಿದಾಡಿತ್ತು. ಇದೀಗ ಈ ಬಗ್ಗೆ ನೇರಾನೇರ ಪ್ರಶ್ನೆಗೆ ಸುದೀಪ್ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ರಿಪಬ್ಲಿಕ್ ಕನ್ನಡ ವಾಹಿನಿ ಸಂದರ್ಶನದಲ್ಲಿ ನಟ ಸುದೀಪ್ ಭಾಗಿ ಆಗಿದ್ದರು. ಈ ವೇಳೆ ಬಿಗ್‌ಬಾಸ್ ಸೀಸನ್ 12ರ ನಿರೂಪಣೆ ಮಾಡುವ ಬಗ್ಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ಕಿಚ್ಚ ಉತ್ತರಿಸಿದ್ದಾರೆ. "ಈ ಬಗ್ಗೆ ಸಾಕಷ್ಟು ಪ್ರಶ್ನೆಗಳಿವೆ, ಚರ್ಚೆ ಇದೆ. ಊಹಾಪೋಹಗಳಿವೆ. ಯಾವ ವೇದಿಕೆಯಲ್ಲಿ ಉತ್ತರಗಳ ಸಮೇತ ನಾನು ಅದನ್ನು ಹೇಳ್ತಿನೋ, ಯಾಕೆ, ಏನೆಲ್ಲಾ ಆಯ್ತು ಎಂದು. ಆಗ ಅದಕ್ಕೆ ಸರಿಯಾದ ಆರಂಭ, ಅಂತ್ಯ ಸಿಗುತ್ತದೆ. ಇವತ್ತು ಏನೇ ಮಾತನಾಡಿದರೂ ಅದು ಅರ್ಧಬರ್ಧ ಟಾಪಿಕ್ ಆಗುತ್ತೆ. ಎಲ್ಲಾ ಕ್ಲಿಯರ್ ಆದಮೇಲೆ ಮಾತಾಡ್ತೀನಿ" ಎಂದಿದ್ದಾರೆ.
ಸುದೀಪ್ ಉತ್ತರ ಕೇಳಿ ಬಿಗ್‌ಬಾಸ್ ಸೀಸನ್ 12 ನಿರೂಪಣೆ ಅವ್ರೇ ಮಾಡೋದು ಖಚಿತ ಎಂದು ಕೆಲವರು ಭಾವಿಸುತ್ತಿದ್ದಾರೆ. ಶೋನಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಕೊಡಬೇಕು ಎನ್ನುವುದು ಸುದೀಪ್ ಬೇಡಿಕೆ ಎನ್ನುವ ಅಂತೆಕಂತೆ ಸುದ್ದಿ ಕೇಳಿಬಂದಿತ್ತು. ಈ ಬಗ್ಗೆ ಕೇಳಿದ್ದಕ್ಕೆ "ಏನೇನು ಊಹಾಪೋಹ ಇದ್ಯೋ ಎಲ್ಲಾ ನಿಜ ಎಂದುಕೊಳ್ಳಿ. ಸುದ್ದಿ ಮಾಡುವಾಗ ಯಾರು ಕೇಳಲಿಲ್ಲ. ಈಗ ಕೇಳಿ ಏನು ಪ್ರಯೋಜನ. ಇದರಲ್ಲಿ ಕೊಂಚ ಸತ್ಯ ಇದೆ. ಕೊಂಚ ವಾಸ್ತವಕ್ಕೆ ದೂರ ಇದೆ. ಸಮಯದ ಬಂದಾಗ ನಾನು ಉತ್ತರಿಸುತ್ತೇನೆ" ಎಂದು ಸುದೀಪ್ ಹೇಳಿದ್ದಾರೆ.
ಕಳೆದ ವರ್ಷ ಅಕ್ಟೋಬರ್ 13ರಂದು ಸುದೀಪ್ ಟ್ವೀಟ್ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. "BBK11ಗೆ ತೋರಿದ ಪ್ರೀತಿಗೆ ಎಲ್ಲರಿಗೂ ಧನ್ಯವಾದಗಳು. ಈ ಟಿವಿಆರ್ (ಸಂಖ್ಯೆ) ಅಂದ್ರೆ ಟಿಆರ್‌ಪಿ, ಕಾರ್ಯಕ್ರಮಕ್ಕೆ ಮತ್ತು ನನ್ನ ಬಗ್ಗೆ ನೀವೆಲ್ಲರೂ ತೋರಿದ ಪ್ರೀತಿ ಎಂಥದ್ದು ಎಂದು ಹೇಳುತ್ತದೆ. 10+1 ಒಟ್ಟು 11 ವರ್ಷಗಳ ಕಾಲ ಒಟ್ಟಿಗೆ ಸಾಗಿದ ಪ್ರಯಾಣ ಇದು. ಮುಂದೆ ನಾನು ಏನು ಮಾಡಬೇಕೋ ಅದನ್ನು ಮುಂದುವರಿಸುತ್ತೇನೆ. ಇದು ಬಿಗ್‌ಬಾಸ್ ಕನ್ನಡ ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್ ಆಗಿರುತ್ತದೆ. ನನ್ನ ನಿರ್ಧಾರವನ್ನು ನನ್ನ ಕಲರ್ಸ್ ಹಾಗೂ ಇಷ್ಟು ವರ್ಷಗಳಿಂದ ಬಿಗ್ಬಾಸ್ಅನ್ನು ನೋಡಿದ ಎಲ್ಲರೂ ಗೌರವಿಸುತ್ತಾರೆ ಎಂದು ನಿಜವಾಗಿಯೂ ನಂಬುತ್ತೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ, ಮತ್ತು ನಾನು ಕೂಡ ಅತ್ಯುತ್ತಮವಾಗಿ ನಿಮ್ಮೆಲ್ಲರನ್ನು ರಂಜಿಸುತ್ತೇನೆ" ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಅಕ್ಟೋಬರ್ ಕೊನೆಗೆ ಬಿಗ್‌ಬಾಸ್ ಹೊಸ ಸೀಸನ್ ಆರಂಭವಾಗಲಿದೆ. ಈ ಬಾರಿ ಯಾರೆಲ್ಲಾ ದೊಡ್ಮನೆ ಒಳಗೆ ಹೋಗುತ್ತಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ವಿವಾದಗಳಿಂದ ಸುದ್ದಿಯಾಗಿದ್ದ ಕೆಲವರ ಜೊತೆಗೆ ಕಿರುತೆರೆ ನಟ, ನಟಿಯರು ಮನೆಯೊಳಗೆ ಹೋಗಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿದೆ. ಈ ಬಾರಿ ಸೀಸನ್ ಮತ್ತಷ್ಟು ಇಂಟ್ರೆಸ್ಟಿಂಗ್ ಆಗಿ ಇರಲಿದೆ.


Click it and Unblock the Notifications











