"ಯಾರೋ ಕಿತ್ತೋಗಿರೋ ನನ್ಮಕ್ಕಳ ಬಗ್ಗೆ ತಲೆ ಕೆಡ್ಸ್ಕೊಬೇಡಿ"; ಕಿಚ್ಚನ ಖಡಕ್ ಸಂದೇಶ
ನಟ ಕಿಚ್ಚ ಸುದೀಪ್ 52ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಂಡಿದ್ದಾರೆ. ಮೊದಲೇ ಮಾತು ಕೊಟ್ಟಂತೆ ಸೆಪ್ಟೆಂಬರ್ 1ರಂದು ರಾತ್ರಿ 12 ಗಂಟೆ ಸುಮಾರಿಗೆ ನಂದಿ ಲಿಂಕ್ಸ್ ಗ್ರೌಂಡ್ಸ್‌ನಲ್ಲಿ ಅಭಿಮಾನಿಗಳನ್ನು ಭೇಟಿ ಆಗಿದ್ದರು. ಅಭಿಮಾನಿಗಳ ಪ್ರೀತಿಗೆ ಶರಣಾದರು. ಈ ವೇಳೆ ಖಡಕ್ ಸಂದೇಶವನ್ನು ರವಾನಿಸಿದ್ದಾರೆ.
ನೆಚ್ಚಿನ ನಟನ ಹುಟ್ಟುಹಬ್ಬ ಅಂದರೆ ಅಭಿಮಾನಿಗಳು ಅವರ ನಿವಾಸದ ಬಳಿ ಜಮಾಯಿಸುತ್ತಾರೆ. ಪ್ರತಿವರ್ಷ ಸುದೀಪ್ ಮನೆ ಬಳಿ ಕೂಡ ಹಬ್ಬದ ವಾತಾವರಣ ಇರುತ್ತಿತ್ತು. ಆದರೆ ಈ ಬಾರಿ ಮನೆ ಬಳಿ ಬೇಡ, ಬೇರೆ ಕಡೆ ಸಿಗೋಣ ನಿಮ್ಮ ಸಂಭ್ರಮದಲ್ಲಿ ನಾನು ಬಾಗಿ ಆಗ್ತೀನಿ ಎಂದು ಸುದೀಪ್ ಹೇಳಿದ್ದರು. ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಕಿಚ್ಚ ಹುಟ್ಟುಹಬ್ಬ ಆಚರಿಸಿಕೊಂಡರು. ಇನ್ನು ಅವರ 'ಮಾರ್ಕ್' ಚಿತ್ರದ ಸಣ್ಣ ಟೀಸರ್ ಝಲಕ್ ಕೂಡ ರಿಲೀಸ್ ಆಗಿದೆ.

ಹುಟ್ಟುಹಬ್ಬ ಸಂಭ್ರಮಾಚರಣೆ ವೇದಿಕೆಯಲ್ಲಿ ನಟ ಸುದೀಪ್ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಕೊನೆಗೆ ಎರಡು ಮನವಿ ಮಾಡಿದರು. ಎಲ್ಲರೂ ಕ್ಷೇಮವಾಗಿ ಮನೆಗೆ ತಲುಪಿ, ಬಹಳ ಪ್ರೀತಿಯಿಂದ ಇಲ್ಲಿಗೆ ಬರ್ತೀರಾ, ಏನಾದರೂ ಸಮಸ್ಯೆ ಆದರೆ ನೋವಾಗುತ್ತದೆ. ಹಾಗಾಗಿ ಎಲ್ಲರೂ ಹುಷಾರಾಗಿ ಮನೆಗೆ ಹೋಗಿ ಎಂದು ಕೇಳಿಕೊಂಡರು.
ಮತ್ತೊಂದು ಬಹುಮುಖ್ಯ ವಿಚಾರದ ಬಗ್ಗೆ ಸುದೀಪ್ ಮಾತನಾಡಿದ್ದಾರೆ. ನೇರವಾಗಿ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ಮನವಿ ಮಾಡಿದ್ದಾರೆ. ಅದು ಆನ್ಲೈನ್ ಟ್ರೋಲಿಂಗ್ ಬಗ್ಗೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾ ಟ್ರೋಲ್ ಯಾವ ಮಟ್ಟಕ್ಕೆ ಹೋಗುತ್ತಿದೆ ಎನ್ನುವುದು ಗೊತ್ತೇಯಿದೆ. ಈ ಸಂಬಂಧ ದೂರು ದಾಖಲಾಗಿ ಕಿಡಿಗೇಡಿಗಳು ಪೊಲೀಸರ ಅತಿಥಿಗಳಾಗುತ್ತಿದ್ದಾರೆ. ದರ್ಶನ್ ಅಭಿಮಾನಿಗಳು ನನಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದಾರೆ ಎಂದು ನಟಿ ರಮ್ಯಾ ದೂರು ನೀಡಿದ್ದರು. ಪ್ರಕರಣದಲ್ಲಿ 8 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ಟಾರ್ ನಟರು ತಮ್ಮ ಅಭಿಮಾನಿಗಳಿಗೆ ತಿಳಿ ಹೇಳಬೇಕು. ದರ್ಶನ್ ಈ ಕೆಲಸ ಮಾಡಲಿಲ್ಲ. ಅದಕ್ಕೆ ಅಭಿಮಾನಿಗಳು ಈ ರೀತಿ ಹುಚ್ಚಾಟ ಮೆರೆಯುತ್ತಿದ್ದಾರೆ ಎಂದು ರಮ್ಯಾ ಹೇಳಿದ್ದರು. ಸ್ಟಾರ್ ನಟರು ತಮ್ಮ ಅಭಿಮಾನಿಗಳಿಗೆ ಈ ವಿಚಾರದಲ್ಲಿ ಕಿವಿಮಾತು ಹೇಳಬೇಕು ಎನ್ನುವುದು ಬಹಳಷ್ಟು ಜನರ ಒತ್ತಾಯ. ಇದೇ ಕೆಲಸವನ್ನು ನಟ ಸುದೀಪ್ ಮಾಡಿದ್ದಾರೆ. ಹುಟ್ಟುಹಬ್ಬ ಸಂಭ್ರಮಾಚರಣೆ ವೇದಿಕೆಯಲ್ಲಿ ಇಂತಾದೊಂದು ಮನವಿ ಮಾಡಿದ್ದಾರೆ.
"ನೀವೆಲ್ಲಾ ನನ್ನ ತುಂಬಾ ಪ್ರೀತಿಸ್ತೀರಾ ಅಂತ ಗೊತ್ತು. ಆನ್ಲೈನ್‌ನಲ್ಲಿ ಯಾರೇ, ಯಾವುದೇ ಪೇಜ್‌ನಿಂದ ನನಗೆ ಎಷ್ಟೇ ಬೈದರೂ ನೀವು ಮಾತ್ರ ಪ್ರತಿಕ್ರಿಯಿಸಬೇಡಿ. ನಮ್ಮ ಅಫೀಷಿಯಲ್ ಫ್ಯಾನ್ ಪೇಜ್‌ಗಳಿಂದ ಯಾವ ಕಲಾವಿದರಿಗೂ ಅವಮಾನ ಮಾಡಬೇಡಿ. ಯಾವತೆಗಳಿಯಿಂದ ನಾನು ಬಿದ್ದಿಲ್ಲ, ಹೊಗಳಿಕೆಯಿಂದ ನಾನು ಎದ್ದಿಲ್ಲ. ನಮ್ಮ ಸಿನಿಮಾ ಮಾತ್ರ ನಮ್ಮ ಆಸ್ತಿ. ಯಾವ ಪೇಜ್‌ಗೂ ತಲೆ ಬಾಗಬೇಡಿ. ಯಾವ ಅವಮಾನಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ಯಾರ್ ಯಾರ್ ಕಿತ್ತೋಗಿರೋ ನನ್ಮಕ್ಕಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಮೇಲೆ ನಂಬಿಕೆ ಇಡಿ. ಒಳ್ಳೆಯದು ಮಾಡಿ. ನಾನು ಯಾರ ಬಗ್ಗೆನೂ ತಲೆ ಕೆಡಿಸಿಕೊಳ್ಳಲ್ಲ. ನೀವ್ಯಾಕೆ ತಲೆ ಕೇಡಿಸಿಕೊಳ್ತೀರಾ" ಎಂದು ಸುದೀಪ್ ಮನವಿ ಮಾಡಿದ್ದಾರೆ.
ಬರೀ ರಮ್ಯಾ ಮಾತ್ರವಲ್ಲ ಸಾಕಷ್ಟು ನಟ, ನಟಿಯರಿಗೆ ಈ ಟ್ರೋಲಿಂಗ್ ಕಿರುಕುಳ ಎದುರಾಗಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಕೂಡ ಅವಹೇಳನಕಾರಿ ಪೋಸ್ಟ್ ಮಾಡಿದ್ದ ವಿಚಾರ ಹಿಂದೆ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಇತ್ತೀಚೆಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಬಗ್ಗೆಯೂ ಕಿಡಿಗೇಡಿಗಳು ಅಶ್ಲೀಲ ಪದಗಳನ್ನು ಬಳಸಿ ಕಾಮೆಂಟ್ ಮಾಡಿದ್ದರು. ಈ ಸಂಬಂಧ ಕ್ರಮಕ್ಕೆ ಆಗ್ರಹಿಸಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.


Click it and Unblock the Notifications











