ಎರಡೆರಡು ಸಿಹಿ ಸುದ್ದಿ ಕೊಟ್ಟ ಕಿಚ್ಚ ಸುದೀಪ್; ಹೆಚ್ಚಾಯ್ತು ಅಭಿಮಾನಿಗಳ ಕಾತರ
ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಡಿಸೆಂಬರ್ 25ಕ್ಕೆ ತೆರೆಮೇಲೆ ಕಿಚ್ಚನ ಆರ್ಭಟ ಶುರುವಾಗಲಿದೆ. ಒಂದ್ಕಡೆ ಬಿಗ್‌ಬಾಸ್ ಶೋ ನಿರೂಪಣೆ ಮಾಡುತ್ತಿರುತ್ತಿರುವ ಸುದೀಪ್ 'ಮಾರ್ಕ್' ಚಿತ್ರೀಕರಣ ಮುಗಿಸಿ ಕೊಂಚ ಬಿಡುವಾಗಿದ್ದಾರೆ. ಕೆಲ ಕಾರ್ಯಕ್ರಮಗಳಲ್ಲಿ ಇತ್ತೀಚೆಗೆ ಭಾಗಿ ಆಗಿದ್ದರು.
ರಕ್ಷಿತಾ ಸಹೋದರ ರಾಣಾ ಒಡೆತನದ ಹೊಸ ಪಬ್ ಉದ್ಘಾಟನೆ ಸಮಾರಂಭದಲ್ಲಿ ಇತ್ತೀಚೆಗೆ ಸುದೀಪ್ ಭಾಗಿ ಆಗಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗ್ತಿದೆ. ಇದೆಲ್ಲದರ ನಡುವೆ 'ಮಾರ್ಕ್' ಚಿತ್ರದ ಬಗ್ಗೆ ಸುದೀಪ್ ಹೊಸ ಅಪ್‌ಡೇಟ್ ನೀಡಿದ್ದಾರೆ. ಟ್ರೈಲರ್ ಹಾಗೂ ಮತ್ತೊಂದು ಸಾಂಗ್ ಶೀಘ್ರದಲ್ಲೇ ಬರ್ತಿದೆ ಎಂದಿದ್ದಾರೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮಾರ್ಕ್' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ.

ಕಳೆದ ವರ್ಷ ಕ್ರಿಸ್‌ಮಸ್ ಸಂಭ್ರಮದಲ್ಲಿ ಬಂದಿದ್ದ 'ಮ್ಯಾಕ್ಸ್' ಚಿತ್ರ ಸೂಪರ್ ಹಿಟ್ ಆಗಿತ್ತು. ಅದೇ ಕಾಂಬಿನೇಷನ್‌ನಲ್ಲಿ 'ಮಾರ್ಕ್' ಚಿತ್ರ ಸಿದ್ಧವಾಗ್ತಿದೆ. ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು ಸುದೀಪ್ ಕೂಡ ಸಹ ನಿರ್ಮಾಪಕರಾಗಿದ್ದಾರೆ. ಇದು ಪೊಲೀಸ್ ಆಫೀಸರ್ ಕಥೆ.
ಅಜೇಯ್ ಮಾರ್ಕಂಡೇ ಎಂಬ ಪಾತ್ರದಲ್ಲಿ ಸುದೀಪ್ ಮಿಂಚಿದ್ದಾರೆ. ಚಿತ್ರದ ಪೋಸ್ಟರ್, ಟೀಸರ್ ಹಾಗೂ ಫಸ್ಟ್ ಸಾಂಗ್ ಹಿಟ್ ಆಗಿದೆ. ಸುದೀಪ್ ಟ್ವೀಟ್ ಮಾಡಿ "ಟ್ರೈಲರ್ ಬರ್ತಿದೆ. ನೋಡಲು ಸಿದ್ಧರಾಗಿ. ಹೈ-ವೋಲ್ಟೇಜ್ ಹಾಡು ಹಾಗೂ ಟ್ರೈಲರ್ ಕ್ರಿಸ್‌ಮಸ್ ಸಂಭ್ರಮದಲ್ಲಿ ಬಿಡುಗಡೆ ಆಗಲಿರುವ 'ಮಾರ್ಕ್' ಚಿತ್ರದ ಝಲಕ್ ತೋರಿಸುತ್ತದೆ" ಎಂದು ಬರೆದುಕೊಂಡಿದ್ದಾರೆ.
ಸುದೀಪ್ ಜೊತೆ ನವೀನ್ ಚಂದ್ರ, ಅರ್ಚನಾ ಕೊಟ್ಟಿಗೆ, ದೀಪ್ಷಿಕಾ, ಗುರು ಸೋಮಸುಂದರಮ್ ಹಾಗೂ ರೋಶಿನಿ ಪ್ರಕಾಶ್ ಚಿತ್ರದಲ್ಲಿ ನಟಿಸಿದ್ದಾರೆ. ಟೈಟಲ್‌ನಿಂದಲೇ 'ಮಾರ್ಕ್' ಸಿನಿಮಾ ಕುತೂಹಲ ಮೂಡಿಸಿದೆ. ಪಾತ್ರಕ್ಕಾಗಿ ಗುಂಗುರು ಕೂದಲಿನ ಹೇರ್‌ಸ್ಟೈಲ್ ಮಾಡಿಕೊಂಡು ಗಮನ ಸೆಳೆದಿದ್ದಾರೆ. ಚಿತ್ರೀಕರಣ ಮುಗಿಸಿ ಇತ್ತೀಚೆಗೆ ಹೇರ್‌ಸ್ಟೈಲ್ ಅನ್ನು ಸುದೀಪ್ ಬದಲಿಸಿಕೊಂಡಿದ್ದಾರೆ. ತಮಿಳು ಹಾಗೂ ಕನ್ನಡ ತಂತ್ರಜ್ಞರು ಒಟ್ಟಿಗೆ ಸೇರಿ 'ಮಾರ್ಕ್' ಚಿತ್ರಕ್ಕೆ ಕೆಲಸ ಮಾಡಿದ್ದಾರೆ.
ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಸೂರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಪ್ರಕರಣದ ಸುತ್ತಾ 'ಮಾರ್ಕ್' ಚಿತ್ರದ ಕಥೆ ಸುತ್ತಲಿದೆ. ಚಿತ್ರದ ಥ್ರಿಯೇಟ್ರಿಕಲ್ ರೈಟ್ಸ್‌ಗೆ ಭಾರೀ ಡಿಮ್ಯಾಂಡ್ ಶುರುವಾಗಿದೆ ಎನ್ನಲಾಗ್ತಿದೆ. 'ಮ್ಯಾಕ್ಸ್' ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋ ಸಂಸ್ಥೆ ವಿತರಣೆ ಮಾಡಿತ್ತು. 'ಮಾರ್ಕ್' ಚಿತ್ರವನ್ನು ಅದೇ ಸಂಸ್ಥೆ ಪ್ರೇಕ್ಷಕರ ಮುಂದೆ ತರುವ ಸಾಧ್ಯತೆಯಿದೆ.
ಡಿಸೆಂಬರ್ ಮೊದಲ ವಾರದಲ್ಲಿ 'ಮಾರ್ಕ್' ಟ್ರೈಲರ್ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮತ್ತೊಂದು '45' ಚಿತ್ರದ ಟ್ರೈಲರ್ ಅನ್ನು ಕೂಡ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಎರಡೂ ಸಿನಿಮಾಗಳು ಒಮ್ಮೆಲೆ ತೆರೆಗೆ ಬಂದು ಬಾಕ್ಸಾಫೀಸ್ ಶೇಕ್ ಮಾಡುವ ಸುಳಿವು ಸಿಕ್ಕಿದೆ. 'ಮ್ಯಾಕ್ಸ್' ರೀತಿಯಲ್ಲೇ 'ಮಾರ್ಕ್' ಕೂಡ ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸಲಿದೆ.
'ಮಾರ್ಕ್' ಚಿತ್ರದ ಓಟಿಟಿ ರೈಟ್ಸ್ ಅಮೇಜಾನ್ ಪ್ರೈಂ ವೀಡಿಯೋಗೆ ಮಾರಾಟವಾಗಿದೆ ಎನ್ನಲಾಗ್ತಿದೆ. ಭಾರೀ ಮೊತ್ತಕ್ಕೆ ಈ ಡೀಲ್ ಕುದುರಿಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆ ಆಗಿ 4 ವಾರಕ್ಕೆ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆ ದಟ್ಟವಾಗಿದೆ. ಇನ್ನು ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ತೆಲುಗಿಗೆ ಡಬ್ ಆಗಿ ಈ ಭಾನುವಾರ ಸಂಜೆ 'ಸ್ಟಾರ್ ಮಾ' ವಾಹಿನಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











