'ಮ್ಯಾಂಗೋ ಪಚ್ಚ' ಬ್ಯಾನರ್‌ನಲ್ಲಿ ದರ್ಶನ್ ಫೋಟೊ; ಕಿಚ್ಚ ಸುದೀಪ್ ಹೇಳಿದ್ದಿಷ್ಟು
ದರ್ಶನ್ ಹಾಗೂ ಸುದೀಪ್ ಸ್ನೇಹ, ಮನಸ್ತಾಪ ಎಲ್ಲಾ ಗೊತ್ತೇಯಿದೆ. ಒಂದ್ಕಾಲದಲ್ಲಿ ಬಹಳ ಆತ್ಮೀಯರಾಗಿದ್ದವರು ಬಳಿಕ ದೂರಾದರು. ಆ ಬಳಿಕ ಸುದೀಪ್ ಬಗ್ಗೆ ದರ್ಶನ್ ಮಾತನಾಡಲೇ ಇಲ್ಲ. ಆದರೆ ಸುದೀಪ್ ಮಾತ್ರ ಇವತ್ತಿಗೂ ದರ್ಶನ್ ಬಗ್ಗೆ ಮಾತನಾಡುತ್ತಾ ಬರ್ತಿದ್ದಾರೆ. 'ಮ್ಯಾಂಗೋ ಪಚ್ಚ' ಸಿನಿಮಾ ಬ್ಯಾನರ್ ಅಲ್ಲಿ ಕೂಡ ದರ್ಶನ್ ಫೋಟೊ ರಾರಾಜಿಸುತ್ತಿದೆ.
ಸುದೀಪ್ ಅಕ್ಕನ ಮಗ ಸಂಚಿತ್ ನಟನೆಯ 'ಮ್ಯಾಂಗೋ ಪಚ್ಚ' ಸಿನಿಮಾ ತೆರೆಕಂಡು ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಬರ್ತಿಲ್ಲ. ಅದನ್ನು ಪಕ್ಕಕ್ಕಿಟ್ಟರೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಜೊತೆ ಸೇರಿ ತಮ್ಮ ಸುಪ್ರಿಯಾನ್ವಿ ಬ್ಯಾನರ್ ಅಡಿಯಲ್ಲಿ ಸುದೀಪ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಸುದೀಪ್ ಮಾತನಾಡಿದ್ದಾರೆ.

ನಗರದ ಕೆಜಿ ರಸ್ತೆಯ ಸಂತೋಷ್ ಚಿತ್ರಮಂದಿರದಲ್ಲಿ 'ಮ್ಯಾಂಗೋ ಪಚ್ಚ' ಸಿನಿಮಾ ಬಿಡುಗಡೆಯಾಗಿದೆ. ದೊಡ್ಡ ಬ್ಯಾನರ್ ಹಾಕಿ ಚಿತ್ರವನ್ನು ಭರ್ಜರಿಯಾಗಿ ಅಭಿಮಾನಿಗಳು ಸ್ವಾಗತಿಸಿದ್ದಾರೆ. ಇನ್ನು ಚಿತ್ರಮಂದಿರದ ಮುಂಭಾಗದಲ್ಲಿ ಹಾಕಿದ್ದ ದೊಡ್ಡ ಬ್ಯಾನರ್‌ನಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ಫೋಟೊಗಳನ್ನು ಹಾಕಲಾಗಿತ್ತು. ಸುದೀಪ್ ಫೋಟೊ ಪಕ್ಕದಲ್ಲೇ ದರ್ಶನ್ ಫೋಟೊ ಕೂಡ ಇತ್ತು. ಈ ಬಗ್ಗೆ ಕೇಳಿದ ಪ್ರಶ್ನೆಗೆ ಸುದೀಪ್ ಉತ್ತರಿಸಿದ್ದಾರೆ.
ಆ ಬ್ಯಾನರ್ ಹಾಕಿಸುವ ಐಡಿಯಾ ನನ್ನದೇ ಎಂದು ಕಿಚ್ಚ ಹೇಳಿದ್ದಾರೆ. ಕಾರಣ ಏನು ಎಂದು ವಿವರಿಸಿದ್ದಾರೆ. "ಹುಚ್ಚ ಸಿನಿಮಾ ಬಿಡುಗಡೆಯಾದಾಗ ಕಟೌಟ್ ಹಾಕುವ ಪದ್ಧತಿ ಇತ್ತು. ಮೊದಲ ವಾರ ಯಾವುದೇ ಕಟೌಟ್‌ಗೆ ಒಂದು ಹಾರ ಕೂಡ ಬಿದ್ದಿರಲಿಲ್ಲ. ಕಾರಣ ನಾವು ಯಾರು ಎಂದು ಯಾರಿಗೂ ಗೊತ್ತಿರಲಿಲ್ಲ. 'ಮ್ಯಾಂಗೋ ಪಚ್ಚ' ಕಟೌಟ್ ಹಾಕಿಸಿದ್ರೆ, ಖಾಲಿ ಬಿಡೋಕೆ ಆಗಲ್ಲ. ಹಾರ ಹಾಕಿದ್ರೆ, ಯಾರು ಹಾಕ್ಸಿದ್ರು ಅಂತ ಪ್ರಶ್ನೆ ಬರುತ್ತೆ. ಒಂದೇ ಹಾರ ಇದ್ರೆ ಅವಮಾನ, ಜಾಸ್ತಿ ಇದ್ರೆ, ನಾವು ಹಾಕ್ಸಿದ್ದು ಅಂತ ಗೊತ್ತಾಗತ್ತೆ. ಕಟೌಟ್ ಅಭಿಮಾನಿಗಳು ಮುಂದೊಂದು ದಿನ ಹಾಕಲಿ, ಇವತ್ತು ಅವರೆಲ್ಲರ ಆಶೀರ್ವಾದದ ಜೊತೆ ಹೋಗು" ಎಂದು ಸಲಹೆ ನೀಡಿದ್ದಾಗಿ ಹೇಳಿದ್ದಾರೆ.
ನನ್ನ ಅಭಿಪ್ರಾಯ ಹೇಳಿದಾಗ ಎಲ್ಲರೂ ಒಪ್ಪಿಕೊಂಡ್ರು. ಅವ್ರು ಮಾಡಿದ ಮೇಲೆ ಆ ಬ್ಯಾನರ್ ನೋಡಿ ನನಗೂ ಬಹಳ ತೃಪ್ತಿ ಆಯ್ತು ಎಂದು ಸುದೀಪ್ ಹೇಳಿದ್ದಾರೆ. ಚಿತ್ರರಂಗದಲ್ಲಿರು ಸ್ಟಾರ್ ವಾರ್ ನಿಲ್ಲಿಸೋಕೆ ಏನಾದರೂ ಸಲಹೆ ಇದ್ದರೆ ಕೊಡಿ ಎಂದು ಸುದೀಪ್ ಮರುಪ್ರಶ್ನೆ ಹಾಕಿದ್ದಾರೆ.
ನಾನು- ಸುದೀಪ್ ಇನ್ಮುಂದೆ ಸ್ನೇಹಿತರಲ್ಲ ಎಂದು ದರ್ಶನ್ ಅಂದು ಟ್ವೀಟ್ ಮಾಡಿದ್ದರು. ಆದರೆ ಆ ಬಳಿಕ ಕೂಡ ಬಹಳಷ್ಟು ದಿನಗಳ ಕಾಲ ಸುದೀಪ್ ತಮ್ಮ ಮನೆಯಲ್ಲಿ ದರ್ಶನ್ ಜೊತೆಗಿನ ಫೋಟೊ ಇಟ್ಟುಕೊಂಡಿದ್ದರು. ಸ್ನೇಹಿತನ ಬಗ್ಗೆ ಯಾವುದೇ ಏನು ಮಾತನಾಡಲಿಲ್ಲ. ದರ್ಶನ್‌ಗೆ ಸಂಕಷ್ಟ ಎದುರಾದಾಗ ಪ್ರತಿಕ್ರಿಯಿಸಿದ್ದಾರೆ. ಕಾರು ಅಪಘಾತದಲ್ಲಿ ದರ್ಶನ್ ಗಾಯಗೊಂಡಾಗ ಬೇಗ ಚೇತರಿಸಿಕೊಳ್ಳುವಂತೆ ಹಾರೈಸಿದ್ದರು.
ಹೊಸಪೇಟೆಯಲ್ಲಿ ದರ್ಶನ್ ಮೇಲೆ ಚಪ್ಪಲಿ ತೂರಿದ ಘಟನೆ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿದ್ದರು. ಯಾವುದೇ ನಟನಿಗೆ ಹೀಗೆ ಅವಮಾನ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ದರ್ಶನ್ ಕೂಡ ಪ್ರತಿಕ್ರಿಯಿಸಿದ್ದರು. ಸುಮಲತಾ ಅಂಬರೀಶ್ ಬರ್ತ್‌ಡೇ ಪಾರ್ಟಿಯಲ್ಲಿ ಇಬ್ಬರೂ ಭಾಗಿ ಆಗಿದ್ದರು. ಆದ್ರೆ ಒಬ್ಬರ ಮುಖ ಮತ್ತೊಬ್ಬರು ನೋಡಿರಲಿಲ್ಲ. ಇಬ್ಬರನ್ನು ಒಟ್ಟಿಗೆ ನೋಡಬೇಕು, ಇಬ್ಬರೂ ಎಲ್ಲಾ ಭಿನ್ನಾಭಿಪ್ರಾಯ ಮರೆತು ಮತ್ತೆ ಸ್ನೇಹಿತರಾಗಬೇಕು ಎಂದು ಸಾಕಷ್ಟು ಜನ ಬಯಸುತ್ತಲೇ ಇದ್ದಾರೆ.


Click it and Unblock the Notifications