'ಕೆಡಿ' ಅಖಾಡಕ್ಕೆ ಎಂಟ್ರಿ ಕೊಟ್ಟೇಬಿಟ್ರು ಕಿಚ್ಚ; ಎಲ್ಲಿ ಶೂಟಿಂಗ್? ಸುದೀಪ್ ಪಾತ್ರ ಏನು?
ವದಂತಿಗಳು ನಿಜವಾಗಿದೆ. ಧ್ರುವ ಸರ್ಜಾ ನಟನೆಯ 'ಕೆಡಿ' ಚಿತ್ರದಲ್ಲಿ ಕಿಚ್ಚ ಸುದೀಪ್ ಬಣ್ಣ ಹಚ್ಚಿದ್ದಾರೆ. ಸದ್ದಿಲ್ಲದೇ ಹೈದರಾಬಾದ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೀತಿದೆ. ಈ ಹಿಂದೆ ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರದಲ್ಲಿ ಸುದೀಪ್ ನಟಿಸಿದ್ದರು. ಇದೀಗ 'ಕೆಡಿ'ಗೆ ಸಾಥ್ ಕೊಟ್ಟಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 'ಕೆಡಿ' ಸಿನಿಮಾ ನಿರ್ಮಾಣವಾಗುತ್ತಿದೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಈಗಾಗಲೇ 2 ಸಾಂಗ್ಸ್ ಹಾಗೂ 2 ಟೀಸರ್ ರಿಲೀಸ್ ಆಗಿ ಸದ್ದು ಮಾಡಿದೆ. ದೀಪಾವಳಿ ವೇಳೆಗೆ ಸಿನಿಮಾ ತೆರೆಗೆ ತರಲು ಪ್ರೇಮ್ ಪ್ರಯತ್ನಿಸುತ್ತಿದ್ದಾರೆ.

3 ವರ್ಷಗಳ ಹಿಂದೆ ಶುರುವಾಗಿದ್ದ ಸಿನಿಮಾ ಕಾರಣಾಂತರಗಳಿಂದ ತಡವಾಗುತ್ತಲೇ ಬರ್ತಿದೆ. ಕಳೆದ ವರ್ಷವೇ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ.ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಪ್ರೇಮ್ ಈ ಚಿತ್ರವನ್ನು 2 ಭಾಗಗಳಾಗಿ ತೆರೆಗೆ ತರುತ್ತಿದ್ದಾರೆ. ಸೀಕ್ವೆಲ್‌ಗೆ ಲೀಡ್ ಕೊಡಲು ಕ್ಲೈಮ್ಯಾಕ್ಸ್‌ನಲ್ಲಿ ಸುದೀಪ್ ಎಂಟ್ರಿ ಆಗುತ್ತದೆ ಎನ್ನುವ ಊಹಾಪೋಹಗಳಿವೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
'ಕೆಡಿ' ಚಿತ್ರದಲ್ಲಿ ದರ್ಶನ್ ಬದಲು ಸುದೀಪ್ ನಟಿಸುತ್ತಿದ್ದಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ. ದರ್ಶನ್ ಜೈಲಿನಲ್ಲಿದ್ದಾರೆ, ಹಾಗಾಗಿ ಸುದೀಪ್ ಈ ಪಾತ್ರ ಮಾಡ್ತಿದ್ದಾರೆ ಅಂತೆ ಕಂತೆ ಸುದ್ದಿ ಹರಡಲಾಗುತ್ತಿದೆ. ಆದರೆ ಅದೆಲ್ಲ ಸತ್ಯಕ್ಕೆ ದೂರವಾದ ಮಾತು ಎನ್ನಲಾಗ್ತಿದೆ. 'ಕೆಡಿ' ಚಿತ್ರದಲ್ಲಿ ಕಿಚ್ಚನಿಗಾಗಿ ಪ್ರೇಮ್ ವಿಭಿನ್ನ ಪಾತ್ರ ಡಿಸೈನ್ ಮಾಡಿದ್ದಾರೆ. ಅದರ ಚಿತ್ರೀಕರಣ ಬಾಕಿ ಇದ್ದ ಕಾರಣಕ್ಕೆ ಸಿನಿಮಾ ರಿಲೀಸ್ ಡೇಟ್ ಘೋಷಣೆ ಮಾಡಿರಲಿಲ್ಲ ಎಂದು ಮಾತುಗಳು ಕೇಳಿಬರ್ತಿದೆ.
ಕಿಚ್ಚನ ಎಂಟ್ರಿಯಿಂದ 'ಕೆಡಿ' ಚಿತ್ರಕ್ಕೆ ಆನೆ ಬಲ ಬಂದಂತಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರಕ್ಕೆ ಒಳ್ಳೆ ಮೈಲೇಜ್ ಸಿಗಲಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗ್ತಿದೆ. ಅರ್ಜುನ್ ಜನ್ಯಾ ಸಂಗೀತದಲ್ಲಿ ಚಿತ್ರದ ಆಲ್ಬಮ್ ಸದ್ದು ಮಾಡ್ತಿದೆ. ವಿದೇಶದಲ್ಲಿ ಸಾಂಗ್ ರೆಕಾರ್ಡಿಂಗ್ ಮಾಡಲಾಗಿದೆ. ಸ್ವಿರ್ಜರ್‌ಲ್ಯಾಂಡ್‌ನಲ್ಲಿ 'ಸೆಟ್ ಆಗಲ್ಲ ಹೋಗೆ ನಂಗು ನಿಂಗು' ಸಾಂಗ್ ಶೂಟ್ ಮಾಡಿದ್ದಾರೆ.
"ಇನ್ನು ಗಾಸಿಪ್‌ಗಳಿಲ್ಲ... ನೀವು ಅಧಿಕೃತವಾಗಿ ನಮ್ಮಲ್ಲಿ ಒಬ್ಬರು" ಎಂದು ಸುದೀಪ್ ಜೊತೆಗಿನ ಫೋಟೊಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ನಿರ್ದೇಶಕ ಪ್ರೇಮ್ ಪೋಸ್ಟ್ ಮಾಡಿದ್ದಾರೆ. ಸದ್ಯ ಸುದೀಪ್ 'ಮಾರ್ಕ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಕ್ಕಾಗಿ ತಮ್ಮ ಹೇರ್‌ಸ್ಟೈಲ್ ಬದಲಿಸಿಕೊಂಡಿದ್ದಾರೆ. ಅದೇ ಲುಕ್‌ನಲ್ಲಿ 'ಕೆಡಿ' ಸೆಟ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಆದರೆ ಚಿತ್ರದಲ್ಲಿ ಸುದೀಪ್ ಲುಕ್ ಬದಲಾಗಿರುತ್ತಾ ಎಂದು ಕಾದು ನೋಡಬೇಕಿದೆ.
ಈ ವರ್ಷವೇ 'ಕೆಡಿ' ಸಿನಿಮಾ ಬಿಡುಗಡೆ ಆಗುತ್ತಾ ಎನ್ನುವ ಅನುಮಾನ ಕೂಡ ಮೂಡಿದೆ. ಶೀಘ್ರದಲ್ಲೇ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. 70ರ ದಶಕದ ಬೆಂಗಳೂರಿನ ಭೂಗತಲೋಕದ ಕಥೆಯನ್ನು ಪ್ರೇಮ್ ಈ ಚಿತ್ರದಲ್ಲಿ ಕಟ್ಟಿಕೊಡುತ್ತಿದ್ದಾರೆ. ರೆಟ್ರೋ ಲುಕ್‌ನಲ್ಲಿ ಎಲ್ಲರನ್ನು ತೋರಿಸುತ್ತಿದ್ದಾರೆ ಟೀಸರ್‌ನಲ್ಲಿ ಸಂಜಯ್ ದತ್, ಧ್ರುವ ಸರ್ಜಾ ಆರ್ಭಟ ಗಮನ ಸೆಳೆದಿದೆ. ರವಿಚಂದ್ರನ್ ಹಾಗೂ ರಮೇಶ್ ಅರವಿಂದ್ ಪಾತ್ರಗಳು ಕುತೂಹಲ ಮೂಡಿಸಿದೆ.
ರೀಷ್ಮಾ ನಾಣಯ್ಯ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಧ್ರುವಗೆ ಸಮನಾಗಿ ಹೆಜ್ಜೆ ಹಾಕಿ ರಂಜಿಸೋಕೆ ಬರ್ತಿದ್ದಾರೆ. 'ಕೆಡಿ' ಸಿನಿಮಾ ಯಾವಾಗ ಬಿಡುಗಡೆ ಆಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಪ್ರೇಮ್ ಹಾಗೂ ಧ್ರುವ ಇಬ್ಬರಿಗೂ ಒಂದೊಳ್ಳೆ ಬ್ರೇಕ್ ಬೇಕಿದೆ.


Click it and Unblock the Notifications











