CCL 2026: ಒಮ್ಮೆ ಸ್ಲೆಡ್ಜಿಂಗ್, ಮತ್ತೊಮ್ಮೆ ದಿಢೀರ್ ಮೈದಾನಕ್ಕೆ ನುಗ್ಗಿ ಗೊಂದಲ ಮೂಡಿಸಿದ ಕಿಚ್ಚ ಸುದೀಪ್
ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಸೀಸನ್ 12ಕ್ಕೆ ಅದ್ಧೂರಿಯಾಗಿ ತೆರೆ ಬಿದ್ದಿದೆ. ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಫೈನಲ್ ಪಂದ್ಯ ಗೆದ್ದು ಚಾಂಪಿಯನ್ ಪಟ್ಟಕ್ಕೇರಿದೆ. ಬೆಂಗಾಲ್ ಟೈಗರ್ಸ್ ವಿರುದ್ಧದ ಅಂತಿಮ ಹಣಾಹಣಿಯಲ್ಲಿ ಬುಲ್ಡೋಜರ್ಸ್ ಸುಲಭವಾಗಿ ಗೆದ್ದು ಬೀಗಿದರು. ಅಭಿಮಾನಿಗಳು ತಾರೆಯರ ಕ್ರಿಕೆಟ್ ನೋಡಿ ಸಂಭ್ರಮಿಸಿದರು.
ಬಹಳ ಹಿಂದೆ ಎರಡು ಬಾರಿ ಚಾಂಪಿಯನ್ ಆಗಿದ್ದ ಕಿಚ್ಚನ ಪಡೆ ಈ ಬಾರಿ ಮತ್ತೆ ಟ್ರೋಫಿ ಎತ್ತಿ ಹಿಡಿದರು. ಲೀಗ್ ಹಂತದ 3 ಪಂದ್ಯ ಗೆದ್ದು ಸೆಮಿಫೈನಲ್‌ನಲ್ಲಿ ಚೆನ್ನೈ ವಿರುದ್ಧ ಜಯಭೇರಿ ಬಾರಿಸಿ ಯಶಸ್ವಿಯಾಗಿ ಕಿಚ್ಚನ ಪಡೆ ಫೈನಲ್ ಪ್ರವೇಶಿಸಿತ್ತು. ಅದೇ ರೀತಿ ಬೆಂಗಾಲ್ ಟೈಗರ್ಸ್ ತಂಡ ಕೂಡ 3 ಲೀಗ್ ಪಂದ್ಯ ಗೆದ್ದು ಕೇರಳ ತಂಡವನ್ನು ಸೆಮಿಫೈನಲ್‌ನಲ್ಲಿ ಮನೆಗೆ ಕಳಿಸಿ ಅಂತಿಮ ಕದನಕ್ಕೆ ಬಂದಿತ್ತು. ಮೈದಾನದ ಒಳಗೆ ಹೊರಗೆ ಕಿಚ್ಚ ದರ್ಬಾರ್ ಜೋರಾಗಿತ್ತು.

ಮತ್ತೊಮ್ಮೆ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಕಿಚ್ಚ ಸುದೀಪ್ ಯಶಸ್ವಿಯಾಗಿ ಮುನ್ನಡೆಸಿ ಟ್ರೋಫಿಗೆ ಮುತ್ತಿಟ್ಟರು. ರೋಹಿತ್ ಶರ್ಮಾ ರೀತಿ ಕಿಚ್ಚ ಸುದೀಪ್ ರೋಬೊ ವಾಕ್ ಮಾಡುತ್ತಾ ಹೋಗಿ ಟ್ರೋಫಿ ಸ್ವೀಕರಿಸಿದ ವಿಡಿಯೋ ಸಖತ್ ವೈರಲ್ ಆಗ್ತಿದೆ. ಇನ್ನು ಬೆಂಗಾಲ್ ಟೈಗರ್ಸ್ ಬ್ಯಾಟಿಂಗ್ ವೇಳೆ ಸುದೀಪ್ ಸ್ಲೆಡ್ಜಿಂಗ್ ಮಾಡಿದಂತೆ ಕಂಡುಬಂದಿತ್ತು. ಎದುರಾಳಿ ತಂಡದ ಬ್ಯಾಟ್ಸಮನ್ ಇಂದ್ರಸಿಶ್ ಔಟ್ ಆಗಿದ್ದರು. ಆಗ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಕಿಚ್ಚ ಪೆವಿಲಿಯನ್ ದಾರಿ ತೋರಿಸುವಂತೆ ಸನ್ನೆ ಮಾಡಿದ್ದಾರೆ.
ಸುದೀಪ್ ಪಂದ್ಯದ ವೇಳೆ ಬಹಳ ಅಗ್ರೆಸ್ಸಿವ್ ಆಗಿ ಕಂಡುಬಂದರು. ಸುನಿಲ್ ರಾವ್ ಕೊನೆ ಓವರ್ ಬೌಲಿಂಗ್ ಮಾಡಿದ್ದರು. ಇಂದ್ರಸಿಶ್ ಬೋಲ್ಡ್ ಆಗಿದ್ದರು. ಆಗ ಸುದೀಪ್ ಸ್ಲೆಡ್ಜ್ ಮಾಡಿದ್ದರು. ಕ್ರಿಕೆಟ್ ಪಂದ್ಯಗಳಲ್ಲಿ ಇಂತಹ ನಡೆಗೆ ಅವಕಾಶ ಇರುವುದಿಲ್ಲ. ಅದು ತಪ್ಪಾಗುತ್ತದೆ. ಅಷ್ಟೇ ಅಲ್ಲ ಕರ್ನಾಟಕ ಬುಲ್ಡೋಜರ್ಸ್ ಬ್ಯಾಟಿಂಗ್ ವೇಳೆ ಕೂಡ ಸುದೀಪ್ ಏಕಾಏಕಿ ಮೈದಾನದ ಒಳಗೆ ಹೋದ ಸನ್ನಿವೇಶ ಕೂಡ ಎದುರಾಗಿತ್ತು. ಬ್ಯಾಟ್ ಮಾಡುತ್ತಿದ್ದ ಜೆಕೆ ಹಾಗೂ ಮಂಜುನಾತ್ ಅವರಿಗೆ ಸಲಹೆ ನೀಡುವ ಪ್ರಯತ್ನ ಮಾಡಿದ್ದರು. ಇದು ಬೆಂಗಾಲ್ ಟೈಗರ್ಸ್ ತಂಡದ ಆಟಗಾರರಿಗೆ ಗೊಂದಲ ಮೂಡಿಸಿತ್ತು.
ಪಂದ್ಯದ ನಿಯಮಗಳ ಪ್ರಕಾರ ಓವರ್ ಮುಗಿಯುವ ಮುನ್ನ ಹೀಗೆ ಸಹ ಆಟಗಾರರರು ಹೋಗುವಂತಿಲ್ಲ. ಅಂಪೇರ್ ಕೂಡ ಕಿಚ್ಚನನ್ನು ತಡೆಯುವ ಪ್ರಯತ್ನ ಮಾಡಿದಂತೆ ಕಂಡುಬಂತು. ಬಳಿಕ ಬೆಂಗಾಲ್ ಟೈಗರ್ಸ್ ತಂಡದ ಕ್ಯಾಪ್ಟನ್ ಜಿಸ್ಸು ಸೇನ್‌ಗುಪ್ತಾ ಎಲ್ಲರನ್ನು ಸಮಾಧಾನ ಮಾಡಿದರು. ಸುದೀಪ್ ಕೂಡ ಹೊರಗೆ ಬಂದರು. ಎಲ್ಲವೂ ತಿಳಿಯಾಯಿತು. ಇನ್ನು ಪಂದ್ಯ ಗೆಲ್ಲುತ್ತಿದ್ದಂತೆ ಅಲ್ಲಿ ನೆರೆದಿದ್ದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.
ಸುದೀಪ್ ವೇದಿಕೆ ಏರಿ ಮಾತನಾಡುವಾಗ ಕೆಲವರು ಕಿರುಚಾಡುತ್ತಿದ್ದರು. ಕೂಡಲೇ ಗರಂ ಆಗಿ ಸುದೀಪ್ ಮಾತನಾಡದೇ ಸುಮ್ಮನಿರುವಂತೆ ತಾಕೀತು ಮಾಡಿದರು. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಹೀಗೆ ಹಲವು ಗೊಂದಲದ ಕ್ಷಣಗಳು ಸಿಸಿಎಲ್ ಫೈನಲ್ ಪಂದ್ಯದ ವೇಳೆ ಕಂಡು ಬಂದಿತ್ತು. ಒಟ್ಟಾರೆ ಕರ್ನಾಟಕ ಬುಲ್ಡೋಜರ್ಸ್ 3ನೇ ಬಾರಿ ಟ್ರೋಫಿ ಗೆದ್ದು ಸಂಭ್ರಮಿಸಿದೆ.
ಕಳೆದ ತಿಂಗಳು 'ಮಾರ್ಕ್' ಸಿನಿಮಾ ಮೂಲಕ ತೆರೆಮೇಲೆ ಕಿಚ್ಚ ಅಬ್ಬರಿಸಿದ್ದರು. ಇದೀಗ ಕಿಚ್ಚನ ಹುಡುಗರು ಕ್ರಿಕೆಟ್ ಮೈದಾನದಲ್ಲಿ ಗೆದ್ದು ಬೀಗಿದ್ದಾರೆ. ಚಿತ್ರರಂಗದಲ್ಲಿ ಸುದೀಪ್ 30 ವರ್ಷ ಪೂರೈಸಿದ್ದಾರೆ. ಈ ಸಂಭ್ರಮದಲ್ಲಿ ಸಿಸಿಎಲ್ ಟ್ರೋಫಿ ಉಡುಗೊರೆ ಸಿಕ್ಕಂತಾಗಿದೆ. ಅಭಿಮಾನಿಗಳ ಸಂಭ್ರಮ ಹೆಚ್ಚಿದೆ. ಶೀಘ್ರದಲ್ಲೇ 'ಬಿಲ್ಲ ರಂಗ ಬಾಷ' ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ಭಾಗಿ ಆಗಲಿದ್ದಾರೆ.


Click it and Unblock the Notifications











