ಕೆಂಗೇರಿ ಬಳಿ ಸುದೀಪ್ ನೇತೃತ್ವದಲ್ಲಿ ನಿರ್ಮಿಸುತ್ತಿರುವ ವಿಷ್ಣು ಸ್ಮಾರಕ ಹೇಗಿರಲಿದೆ? ವಿಶೇಷತೆಗಳೇನು?
ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಪುಣ್ಯಭೂಮಿ ಭೂ ವಿವಾದ ಕಗ್ಗಂಟಾಗಿಯೇ ಉಳಿದಿದೆ. ಅಲ್ಲಿ ಸ್ಮಾರಕ ನಿರ್ಮಾಣ ಕನಸು ಈಡೇರುವ ಮುನ್ನ ನಟ ಬಾಲಕೃಷ್ಣ ಕುಟುಂಬಸ್ಥರು ಸಮಾಧಿ ನೆಲಸಮ ಮಾಡಿಸಿದ್ದಾರೆ. ಈಗಾಗಲೇ ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣವಾಗಿದೆ. ಇದೆಲ್ಲದರ ನಡುವೆ ಕೆಂಗೇರಿ ಬಳಿ ಸುದೀಪ್ ನೇತೃತ್ವದಲ್ಲಿ ಮತ್ತೊಂದು ಸ್ಮಾರಕ ತಲೆ ಎತ್ತಲಿದೆ.
ಹೌದು. ನಟ ಸುದೀಪ್ ಇತ್ತೀಚೆಗೆ ವಿಷ್ಣುವರ್ಧನ್ ಸ್ಮಾರಕ ವಿಚಾರವಾಗಿ ಮಾತನಾಡಿದ್ದರು. ದಾದಾ ಸಮಾಧಿ ಧ್ವಂಸ ಮಾಡಿದ ಬಗ್ಗೆ ನೋವು ತೋಡಿಕೊಂಡಿದ್ದರು. ತಾನೇ ಮುಂದೆ ನಿಂತು ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಮಾಡಲು ಸಿದ್ಧ. ಅದಕ್ಕಾಗಿ ಕೋರ್ಟ್‌ಗೆ ಹೋಗಲು ಹಿಂದೇಟು ಹಾಕಲ್ಲ, ಹಣಕಾಸಿನ ನೆರವಿಗೂ ತಲೆ ಕೆಡಿಸಿಕೊಳ್ಳಲ್ಲ ಎಂದಿದ್ದರು. ಆದರೆ ಸದ್ಯಕ್ಕೆ ಆ ಜಾಗದ ವಿವಾದ ಬಗೆಹರಿಯುವಂತೆ ಕಾಣುತ್ತಿಲ್ಲ. ಅದಕ್ಕೂ ಮುನ್ನ ಕೆಂಗೇರಿ ಬಳಿ ವಿಷ್ಣು ದರ್ಶನ ಕೇಂದ್ರ ಸ್ಥಾಪನೆಗೆ ಕಿಚ್ಚ ಮುಂದಾಗಿದ್ದಾರೆ.

ಸುದೀಪ್ ಜೊತೆ ದಾದಾ ಅಭಿಮಾನಿಗಳು ಕೈ ಜೋಡಿಸುತ್ತಿದ್ದಾರೆ. ಅಭಿಮಾನ್ ಸ್ಟುಡಿಯೋದಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿ ವಿಷ್ಣು ಸ್ಮಾರಕ ನಿರ್ಮಾಣದಕ್ಕೆ ಕಿಚ್ಚ ಅರ್ಧ ಎಕರೆ ಜಾಗ ಖರೀದಿಸಿದ್ದಾರೆ. ಅದಕ್ಕಾಗಿ ತಾವು ಸಂಪೂರ್ಣ ಹಣ ಕೊಟ್ಟಿದ್ದಾರೆ. ಈ ವರ್ಷ ಸೆಪ್ಟೆಂಬರ್ 18ರಂದು ವಿಷ್ಣು ಹುಟ್ಟುಹಬ್ಬದ ದಿನವೇ ಅಲ್ಲಿ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುತ್ತಿದೆ. ಈ ಬಗ್ಗೆ ಕಿಚ್ಚನ ಹುಟ್ಟುಹಬ್ಬದ ದಿನ ಮತ್ತಷ್ಟು ಮಾಹಿತಿ ಸಿಗುತ್ತದೆ ಎಂದು ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಪುಣ್ಯಭೂಮಿ ಜಾಗಕ್ಕಾಗಿ ಅಭಿಮಾನಿಗಳ ಹೋರಾಟ ನಿಲ್ಲುವುದಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ಆದರೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳು ಎಲ್ಲಿಗೆ ಹೋಗಬೇಕು. ಎಲ್ಲರಿಗೂ ಮೈಸೂರಿಗೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಕೆಂಗೇರಿ ಬಳಿ ಸ್ಮಾರಕ ನಿರ್ಮಾಣ ಮಾಡಲಿದ್ದೇವೆ. ಅದಕ್ಕೆ ಸುದೀಪ್ ಸರ್ ಕೈ ಜೋಡಿಸಿದ್ದಾರೆ. ಅರ್ಧ ಎಕರೆ ಜಾಗ ಖರೀದಿಸಿದ್ದಾರೆ ಎಂದು ವೀರಕಪುತ್ರ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

ಕೆಂಗೇರಿ ಬಳಿ ನಿರ್ಮಾಣವಾಗುವ ವಿಷ್ಣು ಸ್ಮಾರಕ ಹೇಗಿರುತ್ತದೆ, ವಿಶೇಷತೆಗಳೇನು ಎನ್ನುವ ಬಗ್ಗೆಯೂ ವೀರಕಪುತ್ರ ಶ್ರೀನಿವಾಸ್ ಮಾತನಾಡಿದ್ದಾರೆ. "ವಿಷ್ಣುವರ್ಧನ್ ಅವರ 25 ಅಡಿ ಪುತ್ಥಳಿ ಇರುತ್ತದೆ. ಜೊತೆಗೆ ಒಂದು ಲೈಬ್ರರಿ ಇರುತ್ತದೆ. ಇನ್ನು ಏನೆಲ್ಲಾ ಮಾಡಲು ಸಾಧ್ಯವೋ ನೋಡೋಣ" ಎಂದು ಹೇಳಿದ್ದಾರೆ. ಒಟ್ಟಾರೆ ವಿಷ್ಣು ಹುಟ್ಟುಹಬ್ಬ ಹಾಗೂ ಪುಣ್ಯಸ್ಮರಣೆಯ ದಿನ ಅವರನ್ನು ದರ್ಶನ ಮಾಡಲು ಜಾಗ ಬೇಕು, ಅದಕ್ಕೆ ಈ ವಿಷ್ಣು ದರ್ಶನ ಕೇಂದ್ರ ಸ್ಥಾಪನೆ ಆಗುತ್ತಿದೆ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 2ರಂದು ನಟ ಕಿಚ್ಚ ಸುದೀಪ್ ಹುಟ್ಟುಹಬ್ಬ. ಆ ದಿನವೇ ಅವರ ಕನಸಿನ ವಿಷ್ಣು ಸ್ಮಾರಕದ ರೂಪುರೇಷೆ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ. ಸ್ಮಾರಕ ಹೇಗಿರುತ್ತದೆ ಎನ್ನುವ ಬಗ್ಗೆ ವೀಡಿಯೋ ಮಾಡಿ ಪ್ರದರ್ಶಿಸುವ ಪ್ರಯತ್ನವೂ ನಡೀತಿದೆ. ವಿಷ್ಣು ಹುಟ್ಟುಹಬ್ಬದ ದಿನವೇ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ತೀರ್ಮಾನಿಸಲಾಗಿದೆ.
ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಪುಣ್ಯಭೂಮಿ ಜಾಗವನ್ನು ಉಳಿಸಿಕೊಳ್ಳಲು ಹೋರಾಟ ಮುಂದುವರೆಯುತ್ತದೆ. ಅಭಿಮಾನ್ ಸ್ಟುಡಿಯೋದ ಸಂಪೂರ್ಣ ಜಾಗವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಆ ಜಾಗವನ್ನು ಮುಟ್ಟಿಗೋಲು ಹಾಕಿಕೊಂಡು ಸ್ಟುಡಿಯೋ ಮಾಡಬೇಕು ಎನ್ನುವ ಆ ಜಾಗದ ಮುಖ್ಯ ಉದ್ದೇಶ ಏನಿತ್ತು ಅದು ಸಾಧ್ಯವಾಗುವಂತೆ ಮಾಡಲು ಬೇಕಾದ ಎಲ್ಲಾ ಹೋರಾಟಕ್ಕೂ ಸಿದ್ಧ ಎಂದು ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.


Click it and Unblock the Notifications











