ಕಿಚ್ಚ ಸುದೀಪ್ ಜೊತೆ ತೆರೆಹಂಚಿಕೊಳ್ಳುತ್ತಿರುವ ಮಿಷ್ಕಾ ಗಂಭೀರ್; ಯಾರು ಈಕೆ, ಯಾವ ಸಿನಿಮಾ?
'ಮಾರ್ಕ್' ಬಳಿಕ ಕಿಚ್ಚ ಸುದೀಪ್ ಹೀರೊ ಆಗಿ ನಟಿಸುವ ಮುಂದಿನ ಸಿನಿಮಾ ಯಾವುದು ಎನ್ನುವ ಚರ್ಚೆ ಶುರುವಾಗಿದೆ. ಹೊಸದಾಗಿ ಯಾವುದೇ ಸಿನಿಮಾ ಸೆಟ್ಟೇರಿಲ್ಲ. ಈಗಾಗಲೇ ಒಂದು ಶೆಡ್ಯೂಲ್ ಮುಗಿಸಿರುವ 'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ಕಿಚ್ಚ ನಟಿಸಲಿದ್ದಾರೆ. ಜೂನ್ 26ರಿಂದ ಸಿನಿಮಾ ಚಿತ್ರೀಕರಣ ಶುರುವಾಗಲಿದೆ.
10 ದಿನ ಮುನ್ನ ಕ್ರೇಜ್ ನ್ಯೂಸ್ ಬಂದಿದೆ. ಕಿಚ್ಚು ಸುದೀಪ್ ಜೊತೆ ಬಾಲನಟಿ ಮಿಷ್ಕಾ ಗಂಭೀರ್ ಕಾಣಿಸಿಕೊಂಡಿರುವ ಫೋಟೊಗಳು ವೈರಲ್ ಆಗ್ತಿದೆ. 'ಬಿಲ್ಲ ರಂಗ ಬಾಷ' ಚಿತ್ರದ ಚಿತ್ರೀಕರಣ ಶುರುವಾಯ್ತಾ ಎನ್ನುವ ಅನುಮಾನ ಮೂಡಿದೆ. ಅಭಿಮಾನಿಗಳಂತೂ ಫೋಟೊ ವೈರಲ್ ಮಾಡಿ ಸಂಭ್ರಮಿಸುತ್ತಿದ್ದಾರೆ. 'ಬಿಲ್ಲ ರಂಗ ಬಾಷ' ಸಿನಿಮಾ ಚಿತ್ರೀಕರಣ ಶುರುವಾಯ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸುದೀಪ್ ಜೊತೆ ತೆರೆಹಂಚಿಕೊಳ್ಳುತ್ತಿರುವುದಾಗಿ ಸ್ವತಃ ಮಿಷ್ಕಾ ಗಂಭೀರ್ ಪೋಸ್ಟ್ ಮಾಡಿದ್ದಾಳೆ. ಆದರೆ ಸಿನಿಮಾನಾ ಅಥವಾ ಯಾವುದಾದರೂ ಜಾಹೀರಾತು ಚಿತ್ರೀಕರಣ ನಡೀತಿದ್ಯಾ? ಎನ್ನುವ ಬಗ್ಗೆ ಮಾಹಿತಿ ಇಲ್ಲ. ಸಾಕಷ್ಟು ಜಾಹೀರಾತುಗಳಲ್ಲಿ ಮಿಷ್ಕಾ ಗಂಭೀರ್ ಮಿಂಚಿದ್ದಾಳೆ. ಅದೇ ಕಾರಣಕ್ಕೆ ಇಂತಾದೊಂದು ಅನುಮಾನ ಮೂಡಿದೆ. 'ಡಿಸ್ಪ್ಯಾಚ್' ಎಂಬ ಬಾಲಿವುಡ್ ಸಿನಿಮಾದಲ್ಲಿ ಕೂಡ ಆಕೆ ಬಣ್ಣ ಹಚ್ಚಿದ್ದಳು.
ಕಿಚ್ಚ ಸುದೀಪ್ ಅವರನ್ನು ಪರದೆಯ ಮೇಲೆ ನೋಡುವುದರಿಂದ ಹಿಡಿದು ಅವರೊಂದಿಗೆ ತೆರೆ ಹಂಚಿಕೊಳ್ಳುವವರೆಗೆ..... ಎಂತಹ ಕ್ಷಣ.. ಸುದೀಪ್ ಸರ್ ಅವರೊಂದಿಗೆ ಕೆಲಸ ಮಾಡುವುದು ಅದ್ಭುತ ಅನುಭವ. ಈ ನೆನಪು ಶಾಶ್ವತ. ನಾನು ಕೃತಜ್ಞಳು, ಅದೃಷ್ಟವಂತೆ.. ಇದೆಲ್ಲಾ ದೇವರ ಅನುಗ್ರಹ ಎಂದು ಎಂದು ಮಿಷ್ಕಾ ಗಂಭೀರ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾಳೆ. ಸೆಟ್‌ನಲ್ಲಿ ನೆಚ್ಚಿನ ನಟನಿಂದ ಆಟೋಗ್ರಾಫ್ ಕೂಡ ಪಡೆದಿದ್ದು ಅದರ ಫೋಟೊವನ್ನು ಹಂಚಿಕೊಂಡಿದ್ದಾಳೆ.
ಅಂದಹಾಗೆ ಸುದೀಪ್ ಜೊತೆಗಿನ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಮಿಷ್ಕಾ ಗಂಭೀರ್ ಡಿಲೀಟ್ ಮಾಡಿದ್ದಾಳೆ. ಸುದೀಪ್ ಲುಕ್ ಲೀಕ್ ಆಗುತ್ತದೆ ಎನ್ನುವ ಕಾರಣಕ್ಕೆ ಚಿತ್ರತಂಡವೇ ಪೋಸ್ಟ್ ತೆಗೆಸಿದ್ರಾ ಎನ್ನುವ ಚರ್ಚೆ ಶುರುವಾಗಿದೆ. ಆದರೆ ಈಗಾಗಲೇ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
'ಬಿಲ್ಲ ರಂಗ ಬಾಷ' ಚಿತ್ರಕ್ಕೆ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳ್ತಿದ್ದಾರೆ. ಈ ಹಿಂದೆ 'ವಿಕ್ರಾಂತ್ ರೋಣ' ಚಿತ್ರದಲ್ಲಿ ಸುದೀಪ್ ಜೊತೆ ಅವರು ಕೆಲಸ ಮಾಡಿದ್ದರು. ಆ ಬಳಿಕ ಈ ಚಿತ್ರಕ್ಕಾಗಿ ಜೊತೆಯಾಗಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗ್ತಿದೆ. ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಕೆ. ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ತಯಾರಾಗುತ್ತಿದೆ.
ಬಿಗ್‌ಬಾಸ್ ಖ್ಯಾತಿಯ ವಿನಯ್ ಗೌಡ ಕೂಡ 'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ನಟಿಸ್ತಿದ್ದಾರೆ ಎನ್ನಲಾಗ್ತಿದೆ. ಮುಂದಿನ ಚಿತ್ರಕ್ಕಾಗಿ ದೇಹ ಉರಿಗೊಳಿಸಿ ಸಿದ್ಧತೆ ನಡೆಸುತ್ತಿರುವುದಾಗಿ ಇತ್ತೀಚೆಗೆ ಅವರು ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಆ ಪ್ರಾಜೆಕ್ಟ್ ಯಾವ್ದು ಗೆಸ್ ಮಾಡಿ ಎಂದು ಕುತೂಹಲ ಮೂಡಿಸಿದ್ದಾರೆ. 'ಬಿಲ್ಲ ರಂಗ ಬಾಷ' ಚಿತ್ರಕ್ಕಾಗಿಯೇ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
'ಬಿಲ್ಲ ರಂಗ ಬಾಷ' ಸಿನಿಮಾ ಜೊತೆಗೆ ಇನ್ನು 3 ಸ್ಕ್ರಿಪ್ಟ್ ಫೈನಲ್ ಮಾಡಿರುವುದಾಗಿ ಸುದೀಪ್ ಹೇಳ್ತಾ ಬರ್ತಿದ್ದಾರೆ. ಅದರಲ್ಲಿ ಒಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಕೂಡ ಇದೆ. ಈ ನಡುವೆ ಬಿಗ್‌ಬಾಸ್ ಸೀಸನ್ 13ರ ಪ್ರೋಮೊ ಬಂದಿದೆ. ಈ ಬಾರಿ ಸಾಮಾನ್ಯ ಜನರನ್ನು ದೊಡ್ಮನೆ ಒಳಗೆ ಕಳುಹಿಸುವ ಪ್ರಯತ್ನ ಶುರುವಾಗಿದೆ. ಈ ಬಾರಿ ಕೂಡ ಕಿಚ್ಚ ಸುದೀಪ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.


Click it and Unblock the Notifications