Nandi film award: ನಂದಿ ಹೆಸರಲ್ಲಿ ಅವಾರ್ಡ್ ನೀಡುತ್ತಿದ್ದಿರಿ, ಅಷ್ಟೇ ಶುದ್ಧವಾಗಿರಲಿ ಎಂದ ಕಿಚ್ಚ ಸುದೀಪ್
ಪಕ್ಕದ ಆಂಧ್ರಪ್ರದೇಶದಂತೆಯೇ ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ನಂದಿ ಪ್ರಶಸ್ತಿ ಆರಂಭವಾಗಿದೆ. ಡಿಸೆಂಬರ್ 6 ರಂದು ಪ್ರಶಸ್ತಿ ಸಮಾರಂಭ ನಡೆಯುತ್ತಿದ್ದು, ಅದಕ್ಕಾಗಿ ಸಕಲ ಸಿದ್ದತೆ ನಡೆದಿದೆ. ನಂದಿ ಚಲನಚಿತ್ರ ಪ್ರಶಸ್ತಿ-2023ರ ಕರ್ಟನ್ ರೈಸ್‌ಗೆ ಕಿಚ್ಚ ಸುದೀಪ್ ಚಾಲನೆ ನೀಡಿ ಹೊಸ ಪ್ರಶಸ್ತಿ ಸಮಾರಂಭಕ್ಕೆ ಶುಭ ಹಾರೈಸಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್, "ನಾನು ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಹೋಗುವುದು ಬಿಟ್ಟು ತುಂಬಾ ವರ್ಷವಾಗಿದೆ. 2003 - 2004 ಕೊನೆ. ಆ ಬಳಿಕ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಹೋಗೇ ಇಲ್ಲ. ಅದಕ್ಕೆ ಬೇರೆ ಇತಿಹಾಸವಿದೆ. ಆದರೆ ಇಲ್ಲಿ ಆ ಅವಾರ್ಡ್ಸ್ ಮಹತ್ವ ಬೇರೆ ಕಲಾವಿದರಿಗೆ ಆಗಲಿ. ಎಲ್ಲರಿಗೂ ಎಷ್ಟು ಮುಖ್ಯ ಎನ್ನುವುದನ್ನು ನೋಡಿದ್ದೇನೆ. ನನ್ನ ಮನವಿ ಏನೆಂದರೆ ಯಾರಿಗೆ ಹೋಗಬೇಕು ಅವರಿಗೆ ಅವಾರ್ಡ್ ಹೋಗಲಿ" ಎಂದು ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಅವರು, "ಪ್ರಶಸ್ತಿ ಹೋಗುವವರಿಗೆ ಹೋಗಲಿ. ಮಿಕ್ಕಿದವರೆಲ್ಲಾ ದುಡ್ಡು ಮಾಡುತ್ತಿದ್ದಾರೆ. ಅವಾರ್ಡ್, ದುಡ್ಡು ಅಂತಾ ನೋಡಿದಾಗ ಪ್ರಶಸ್ತಿ ಬಿಟ್ಟು ದುಡ್ಡಿಗೆ ಕೈ ಹಾಕುವವರು ಇದ್ದಾರೆ. ಪ್ರಶಸ್ತಿಗೆ ಗೌರವ ಕೊಟ್ಟು ಅದಕ್ಕಾಗಿ ಬಾಳಿ ಬದುಕುವವರಿಗೆ ನೀಡಿ" ಎಂದು ಕಿವಿಮಾತು ಹೇಳಿದ್ದಾರೆ.
"ನಂದಿ ಬಹಳ ಶ್ರೇಷ್ಠ. ಅದರ ಹೆಸರಲ್ಲಿ ಕಾರ್ಯಕ್ರಮ ನಡೆಸುತ್ತೀರಾ ಎಂದರೆ ಅಷ್ಟೇ ಶುದ್ಧವಾಗಿ ಇರಲಿ. ಕರ್ನಾಟಕದಲ್ಲಿ ಅವಾರ್ಡ್ಸ್ ಪ್ರೋಗ್ರಾಂ ನಡೆಸಲು ಬಹಳ ಕೊರತೆ ಇದೆ. ತಲೆ ಎತ್ತಿ ನೋಡುವ ಅವಾರ್ಡ್ಸ್ ಪ್ರೋಗ್ರಾಂ ಇಲ್ಲ. ಅಂತಹ ಪ್ರಶಸ್ತಿ ಕಾರ್ಯಕ್ರಮ ನಂದಿ ಆಗಲಿ" ಎಂದು ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ.
ಆಂಧ್ರಪ್ರದೇಶದ ರಾಜ್ಯ ಪ್ರಶಸ್ತಿಗೂ ನಂದಿ ಅವಾರ್ಡ್ಸ್ ಎಂದೇ ಹೆಸರಿದೆ. ಆದರೆ, ನಂದಿ ಎನ್ನುವುದು ಕನ್ನಡದ ಪಾಲಿಗೂ ಒಂದು ಪವರ್‌ಫುಲ್ ಇಮೇಜ್ ಎನಿಸುವ ಲಾಂಛನ. ಆ ಕಾರಣದಿಂದಲೇ 'ನಂದಿ' ಎಂಬ ಹೆಸರನ್ನೇ ಕನ್ನಡದ ಪ್ರಶಸ್ತಿಗೂ ಇಡಲಾಗಿದೆ. ಇನ್ನು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮಾ.ಹರೀಶ್, ನಿರ್ಮಾಪಕ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್ ಹಾಗೂ ಅನಿತಾ ರೆಡ್ಡಿ 'ನಂದಿ ಫಿಲ್ಮಂ ಅವಾರ್ಡ್' ಸಂಸ್ಥಾಪರಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಒರಿಯನ್ ಮಾಲ್‌ನಲ್ಲಿ ಡಿಸೆಂಬರ್ 6 ರಂದು ನಡೆಯಲಿದೆ. ನಂದಿ ಪ್ರಶಸ್ತಿಯಲ್ಲಿ ಕನ್ನಡ ಸಿನಿಮಾಗಳು, ಪ್ರಾದೇಶಿಕವಾಗಿ ಭಾಷೆಗಳಾದ ತುಳು, ಕೊಡವ, ಕೊಂಕಣಿ, ಬ್ಯಾರಿ ಹಾಗೂ ಬಂಜಾರ ಈ ಭಾಷೆಗಳಿಗೆ ಪ್ರಾಮುಖ್ಯತೆ ಕೊಡಲಾಗುತ್ತದೆ. ಸಾಹಿತ್ಯ, ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಿಗೂ ಪ್ರಶಸ್ತಿ ನೀಡಲಾಗುತ್ತದೆ. 50ಕ್ಕೂ ಹೆಚ್ಚು ವಿಭಾಗದ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ.


Click it and Unblock the Notifications











