ಪರಭಾಷೆ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಲ್ಲ.. ಕಾರಣ ಏನಂದ್ರೆ?- ನಟ ಸುದೀಪ್
ನಟ ಕಿಚ್ಚ ಸುದೀಪ್ 'ಮಾರ್ಕ್' ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಮುಂದೆ 'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ನಟಿಸಬೇಕಿದೆ. ಮುಂದಿನ ವರ್ಷ 2 ಸಿನಿಮಾಗಳನ್ನು ಬಿಡುಗಡೆ ಮಾಡಲು ಲೆಕ್ಕಾಚಾರದಲ್ಲಿದ್ದಾರೆ. ಸಾಕಷ್ಟು ಕಥೆಗಳನ್ನು ಕೇಳಿ ಒಂದಷ್ಟು ಫೈನಲ್ ಮಾಡಿದ್ದಾರೆ. ಇದೆಲ್ಲದರ ನಡುವೆ ಪರಭಾಷೆ ಸಿನಿಮಾಗಳಲ್ಲಿ ನಟಿಸೋ ಬಗ್ಗೆ ಮಾತನಾಡಿದ್ದಾರೆ.
ಪರಭಾಷೆಯ ದೊಡ್ಡ ದೊಡ್ಡ ಸಿನಿಮಾಗಳು ಘೋಷಣೆ ಆದಾಗ ಅದರಲ್ಲಿ ಸುದೀಪ್ ಕೂಡ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗುತ್ತದೆ. ಸುದೀಪ್ ಅದ್ಭುತ ನಟ. ರಾಜಮೌಳಿ, ರಾಮ್‌ಗೋಪಾಲ್ ವರ್ಮಾ ರೀತಿಯ ದಿಗ್ಗಜ ನಟರೊಟ್ಟಿಗೆ ಕೆಲಸ ಮಾಡಿದ್ದಾರೆ. ಪೋಷಕ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅದೇ ಕಾರಣಕ್ಕೆ ದೊಡ್ಡ ಸಿನಿಮಾಗಳ ಜೊತೆ ಅವರ ಹೆಸರು ಲಿಂಕ್ ಮಾಡಿ ಸುದ್ದಿ ತೇಲಿ ಬಿಡುತ್ತಾರೆ.

ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದಲ್ಲಿ ಸುದೀಪ್ ನಟಿಸುತ್ತಾರೆ ಎನ್ನುವ ವದಂತಿ ಹರಿದಾಡಿತ್ತು. ತೆಲುಗು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದು ಗೊತ್ತೇಯಿದೆ. ಬಳಿಕ ಅದೆಲ್ಲಾ ಸುಳ್ಳು ಎನ್ನುವುದು ಗೊತ್ತಾಗಿತ್ತು. ಈ ಬಗ್ಗೆ ನೇರಾನೇರ ಪ್ರಶ್ನೆಗೆ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ಟಿವಿ9 ಸಂದರ್ಶನದಲ್ಲಿ ಈ ಬಗ್ಗೆ ಕಿಚ್ಚ ಮಾತನಾಡಿದ್ದಾರೆ.
"ಎಲ್ಲಾ ದೊಡ್ಡ ಸಿನಿಮಾ ನಿರ್ಮಾಣವಾಗುವಾಗ ನನ್ನ ಹೆಸರು ಸೇರಿಬಿಡ್ತಾರೆ. ಅದು ಯಾರು ಸೇರಿಸ್ತಾರೋ ಗೊತ್ತಿಲ್ಲ. ಕೇಳೋದಕ್ಕೆ ಖುಷಿಯಾಗುತ್ತೆ. ಆದರೆ ಸಾಧ್ಯವಾಗಲ್ಲ. ನನಗೆ ಪೋಷಕ ನಟನಾಗಿ ನಟಿಸೋದು ಕಮ್ಮಿ ಮಾಡಿದ್ದೀನಿ. ನಮ್ಮ ಭಾಷೆಯ ಸಿನಿಮಾಗಳಿಗೆ ವಾಯ್ಸ್ ಕೊಟ್ಟಿದ್ದೀನಿ, ಹಾಡಿದ್ದೀನಿ. ಆದರೆ ಬೇರೆ ಭಾಷೆಯ ಪೋಷಕ ಪಾತ್ರಗಳನ್ನು ಕಮ್ಮಿ ಮಾಡಿದ್ದೀನಿ. ಕಾರಣ ನಾವು ಇಲ್ಲಿ ನಮ್ಮ ಸಿನಿಮಾ ಮಾಡುವಾಗ ಅಲ್ಲಿ ಹೋಗಿ 60 ದಿನ, 100 ದಿನ ಬ್ಲಾಕ್ ಆಗುವುದು ಇಷ್ಟವಿಲ್ಲ. ನಮ್ಮಲ್ಲಿ ಕನ್ನಡ ಸಿನಿಮಾ ಮಾಡೋಣ" ಎಂದು ಸುದೀಪ್ ಹೇಳಿದ್ದಾರೆ.
ಪೌರಾಣಿಕ ಸಿನಿಮಾಗಳನ್ನು ಮಾಡುವ ಬಗ್ಗೆಯೂ ಇದೇ ಸಂದರ್ಶನದಲ್ಲಿ ಸುದೀಪ್ ಮಾತನಾಡಿದ್ದಾರೆ. "ಒಂದೆರಡು ಕಥೆ ಕೇಳಿದ್ದೀನಿ. ಮುಂದೆ ಘೋಷಣೆ ಆಗುತ್ತದೆ. ಬಹಳ ಇಂಟ್ರೆಸ್ಟಿಂಗ್ ಆಗಿದೆ. ಮೈಥಾಲಜಿ ಸಿನಿಮಾ ಅಂದ್ರೆ ಭಯ ನಂಗೆ. ಇವರೆಲ್ಲಾ ಮಾಡುವಾಗ ಪಾತ್ರಕ್ಕೆ ಹಿಂಗೆಲ್ಲಾ ರೆಡಿ ಆಗಬೇಕಾ? ಅಂತ ಭಯವಾಗುತ್ತದೆ. ಆದರೆ ಆ ರೀತಿ ನಟಿಸುವವರ ಬಗ್ಗೆ ಗೌರವ ಇದೆ. ನಾವು ಜೀನ್ಸ್, ಟೀ ಶರ್ಟ್ ಹಾಕ್ಕೊಂಡು ಕೂರುವವರು. ಮಾಡೋಕೆ ಸಾಧ್ಯವಿಲ್ಲ ಅಂತಲ್ಲ. ಅದು ಬೇರೆಯದ್ದೇ ಸವಾಲು ಎಂದು ಸುದೀಪ್ ವಿವರಿಸಿದ್ದಾರೆ.
ಸುದೀಪ್ ಬರೀ ಮಾಸ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರೊಮ್ಯಾಂಟಿಕ್ ಪಾತ್ರಗಳಲ್ಲಿ ಅವರನ್ನು ನೋಡಲು ಅಭಿಮಾನಿಗಳು ಬಯಸುತ್ತಿದ್ದಾರೆ. ಶೀಘ್ರದಲ್ಲೇ ಅಂತಾದೊಂದು ಸಿನಿಮಾ ಮಾಡುವುದಾಗಿಯೂ ಸುದೀಪ್ ಹೇಳಿದ್ದಾರೆ. ಒಂದು ರೊಮ್ಯಾಂಟಿಕ್ ಕಾಮಿಡಿ ಕಥೆ ಕೇಳಿ ಫೈನಲ್ ಮಾಡಿದ್ದೀನಿ ಎಂದು ನ್ಯೂಸ್ 18 ಕನ್ನಡ ಸಂದರ್ಶನದಲ್ಲಿ ಸುದೀಪ್ ಹೇಳಿದ್ದಾರೆ.
ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮಾರ್ಕ್' ಸಿನಿಮಾ ಡಿಸೆಂಬರ್ 25ಕ್ಕೆ ತೆರೆಗೆ ಬರಲಿದೆ. ಇದೇ ಕಾಂಬಿನೇಷನ್‌ನಲ್ಲಿ ಮಗದೊಂದು ಸಿನಿಮಾ ಮಾಡುವ ಬಗ್ಗೆ ಕೂಡ ಚರ್ಚೆ ನಡೀತಿದೆ ಎಂದು ಸುದೀಪ್ ಸುಳಿವು ಕೊಟ್ಟಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ವಿತರಣೆ ಮಾಡಲಿದೆ.
ಈಗಾಗಲೇ 'ಮಾರ್ಕ್' ಚಿತ್ರದ ಟೀಸರ್, ಸಾಂಗ್ಸ್, ಟ್ರೈಲರ್ ರಿಲೀಸ್ ಆಗಿ ಹಿಟ್ ಆಗಿದೆ. ಹುಬ್ಬಳ್ಳಿಯಲ್ಲಿ ಗ್ರ್ಯಾಂಡ್ ಪ್ರೀ ರಿಲೀಸ್ ಈವೆಂಟ್ ಪ್ಲ್ಯಾನ್ ನಡೀತಿದೆ. ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಿಚ್ಚ ಸುದೀಪ್ ಬಣ್ಣ ಹಚ್ಚಿದ್ದಾರೆ. ಗುಂಗುರು ಹೇರ್‌ಸ್ಟೈಲ್‌ನಲ್ಲಿ ಬಹಳ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ 'ಮಾರ್ಕ್' ಭರ್ಜರಿ ಮನರಂಜನೆ ಉಣಬಡಿಸುವ ಸುಳಿವು ಸಿಕ್ತಿದೆ.


Click it and Unblock the Notifications











