"ನಾವು ಮೈ ಮಾರ್ಕೊಂಡು ಬದುಕ್ತಿಲ್ಲ": ಡಿಸಿಎಂ 'ನಟ್ಟು ಬೋಲ್ಟು ಟೈಟ್' ಹೇಳಿಕೆಗೆ ಕಿಚ್ಚ ಕೌಂಟರ್
16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ (BIFFes) ಉದ್ಘಾಟನೆ ವೇದಿಕೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕನ್ನಡ ಚಿತ್ರರಂಗದ ಬಗ್ಗೆ ನೀಡಿದ್ದ 'ನಟ್ಟು ಬೋಲ್ಟ್ ಟೈಟ್ ' ಮಾಡುವೆ ಹೇಳಿಕೆ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಈ ವಿಚಾರ ರಾಜಕೀಯರಂಗದಲ್ಲಿ ಕೂಡ ಸದ್ದು ಮಾಡಿತ್ತು. ನಟಿ ರಮ್ಯಾ ಸೇರಿ ಕೆಲವರು ಇದನ್ನು ವಿರೋಧಿಸಿದ್ದರು. ಇದೀಗ ನಟ ಸುದೀಪ್ ಮಾತನಾಡಿದ್ದಾರೆ.
ಅಂತಾರಾಷ್ಟ್ರೀಯ ಚಿತ್ರೋತ್ಸವ ಉದ್ಘಾಟನೆ ಕಾರ್ಯಕ್ರಮಕ್ಕೆ ಅಂದು ಕನ್ನಡ ಚಿತ್ರರಂಗದ ತಾರೆಯರು ಬರಲಿಲ್ಲ ಎಂದು ಡಿಕೆ ಶಿವಕುಮಾರ್ ಬೇಸರಗೊಂಡಿದ್ದರು. ಇನ್ನು ನಮ್ಮ ಕಾರ್ಯಕ್ರಮ ಅಲ್ಲ, ನಿಮ್ಮ ಕಾರ್ಯಕ್ರಮ ನೀವೇ ಬರದಿದ್ದರೆ ಹೇಗೆ ಎಂದಿದ್ದರು. "ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿಯೂ ನಿಮ್ಮ ಮೇಲೆ ಇದೆ. ನಾವು ನಮ್ಮ ಜಲ ನಮ್ಮ ಹಕ್ಕು ಎಂಬ ಜಾಥಾ ಮಾಡಿದ್ದೆವು. ಆಗ ಸಾಧು ಕೋಕಿಲ, ದುನಿಯಾ ವಿಜಯ್ ಬಿಟ್ಟರೆ ಯಾರು ಬೆಂಬಲ ಕೊಡಲಿಲ್ಲ. ನಮಗೂ ಗೊತ್ತು ನೆಟ್ಟು ಬೋಲ್ಟು ಎಲ್ಲಿ ಟೈಟ್ ಮಾಡಬೇಕೆಂದು" ಡಿಕೆ ಶಿವಕುಮಾರ್ ಹೇಳಿದ್ದರು.

ನಟ ಸುದೀಪ್ ಇತ್ತೀಚೆಗೆ ರಿಪಬ್ಲಿಕ್ ಕನ್ನಡ ವಾಹಿನಿ ಸಂವಾದ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. "ನೆಟ್ಟು ಬೋಲ್ಟು ಟೈಟ್" ವಿಚಾರದ ಬಗ್ಗೆಯೂ ಪ್ರಶ್ನೆ ಎದುರಾಗಿತ್ತು. ಈ ವೇಳೆ ನೇರವಾಗಿ ಕಿಚ್ಚ ತಿರುಗೇಟು ನೀಡಿದ್ದಾರೆ. ನಾವು ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿ ಆಗಿದ್ದೇವೆ ಎಂದಿದ್ದಾರೆ.
"ನಾವು ಓಡಾಡುವ ಕಾರುಗಳ ನೆಟ್ಟು ಬೋಲ್ಟು ಕೂಡ ಟೈಟ್ ಆಗಿರಬೇಕು. ಕಾರಿನ ನೆಟ್ಟು ಬೋಲ್ಟು ಟೈಟ್ ಇರಬೇಕೆಂದರೆ ನಾನು ಹೋದರೆ ಸರಿ ಇರಲ್ಲ. ಅದಕ್ಕೆ ಮೆಕಾನಿಕ್ ಬಳಿ ಹೋಗಬೇಕು. ಆ ಮೆಕಾನಿಕ್‌ಗೆ ಮಾತ್ರ ಗೊತ್ತಿರುತ್ತೆ ಕಾರಿನ ವಿಚಾರ. ಅದೇ ರೀತಿ ಚಿತ್ರರಂಗದ ವಿಚಾರ ಚಿತ್ರರಂಗದಲ್ಲಿರುವವರಿಗೆ ಮಾತ್ರ ಗೊತ್ತು. ನಮಗಷ್ಟೆ ಗೊತ್ತು. ಅದಕ್ಕೆ ಪ್ರತಿ ಚುನಾವಣೆ ಪ್ರಚಾರದಲ್ಲಿ ನಾವಿರುತ್ತೇವೆ" ಎಂದು ವ್ಯಂಗ್ಯವಾಗಿ ಸುದೀಪ್ ಹೇಳಿದ್ದಾರೆ.

ಮಾತು ಮುಂದುವರೆಸಿದ ಕಿಚ್ಚ "ಇದರಲ್ಲಿ ಮಾಡುವುದಕ್ಕೆ ಏನು ಇಲ್ಲ. ಡಿಕೆ ಸರ್ ಯಾವ ಅರ್ಥದಲ್ಲಿ ಆ ರೀತಿ ಹೇಳಿದರು ಗೊತ್ತಿಲ್ಲ. ಅವರ ಮೇಲೆ ನನಗೆ ಬಹಳ ಗೌರವ ಇದೆ. ಆದರೆ ಅವ್ರು ಅದನ್ನು ಹೇಳುವ ಮುಂಚೆ ಕೆಲ ಸತ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲಾ ತಿಳಿದುಕೊಂಡು ಹೇಳಿದ್ದರೆ ನಾವು ಅವ್ರ ಮೇಲಿಡುವ ಗೌರವ ಹೆಚ್ಚುತ್ತಿತ್ತು. ಇದರಿಂದ ಚಿತ್ರರಂಗದ ಎಷ್ಟೋ ಜನರಿಗೆ ನೋವಾಗುತ್ತಿರಲಿಲ್ಲ. ಕಾರಣ ಅವ್ರು ಕರೆದ ಕಾರ್ಯಕ್ರಮಗಳಿಗೆ ಹೋಗಿದ್ದೀವಿ. ಜೊತೆ ನಿಂತಿದ್ದೀವಿ. ಚಿತ್ರರಂಗದಲ್ಲಿ ತುಂಬಾ ಗೌರವಸ್ಥರು ಇದ್ದೀವಿ. ನಾವ್ಯಾರು ಮೈಮಾರಿಕೊಂಡು ಬದುಕುತ್ತಿಲ್ಲ. ಕೆಲ ವಿಚಾರ ಮಾತನಾಡುವಾಗ ತಿಳಿದು ಮಾತನಾಡಿ ಅಷ್ಟೇ" ಎಂದು ಸುದೀಪ್ ತಿರುಗೇಟು ನೀಡಿದ್ದಾರೆ.
"ರಾಜಕೀಯ ಅಂತ ಬಂದಾಗ ರಾಜಕೀರಂಗ, ರಾಜಕಾರಣಿಗಳ ಬಗ್ಗೆ ಚರ್ಚೆ ನಡೆಯುತ್ತದೆ. ನಾವು ಎಲ್ಲರನ್ನು ಒಂದೇ ಎಂದು ಹೇಳುವುದು ಕಷ್ಟ. ಮಂತ್ರಿಯಾಗಿ ಈ ಕೆಲಸ ಮಾಡಬಹುದಲ್ಲ ಎಂದು ಹೇಳುವುದು ಸುಲಭ. ಆದರೆ ಒಳಗೆ ಬಹಳ ಸಮಸ್ಯೆ ಇರುತ್ತೆ. ಮಾಡಲು ಸಾಧ್ಯವಿಲ್ಲ. ಅವರ ಪ್ರಾಬ್ಲಂ ಅವರಿಗೆ ಗೊತ್ತು. ಚಿತ್ರರಂಗದಲ್ಲಿ ನಾವು ಇರುವುದು ಎಲ್ಲರನ್ನು ರಂಜಿಸಲು. ಹಾಗಾಗಿ ಎಲ್ಲಾ ತಿಳಿದು ಮಾತನಾಡಿದರೆ ಎಲ್ಲವೂ ಚೆನ್ನಾಗಿರುತ್ತದೆ. ಅವರಿಗೆ ಯಾರ್ಯಾರೋ ಏನೆನೋ ಹೇಳಿ ನೆಟ್ಟು ಬೋಲ್ಟು ಎಲ್ಲಾ ಬಂದುಬಿಡ್ತು. ಇಲ್ಲ ಎಲ್ಲರ ನೆಟ್ಟು ಬೋಲ್ಟು ಟೈಟ್ ಆಗಿಯೇ ಇದೆ" ಎಂದು ಸುದೀಪ್ ಹೇಳಿದ್ದಾರೆ.


Click it and Unblock the Notifications











