'ಮಾರ್ಕ್' ಚಿತ್ರದ 'ಸೈಕೋ ಸೈತಾನ್' ಯೂಟ್ಯೂಬ್‌ನಿಂದ ಮಾಯವಾಗಿದ್ದೇಕೆ? ತಂಡದಿಂದ ಸಿಕ್ತು ಅಪ್‌ಡೇಟ್
ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಇತ್ತೀಚೆಗೆ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿತ್ತು. ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಲಿರಿಕಲ್ ವೀಡಿಯೋ ಸಾಂಗ್ ಬಂದಿತ್ತು. ಅಭಿಮಾನಿಗಳಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಬಳಿಕ ಇದ್ದಕ್ಕಿದಂತೆ ಯೂಟ್ಯೂಬ್‌ನಲ್ಲಿ ಸಾಂಗ್ ಮಾಯವಾಗಿತ್ತು. ಇದೀಗ ಚಿತ್ರತಂಡದಿಂದ ಹೊಸ ಅಪ್‌ಡೇಟ್ ಬಂದಿದೆ.
ಕಳೆದ ವರ್ಷದ ಕೊನೆಗೆ 'ಮ್ಯಾಕ್ಸ್' ಸಿನಿಮಾ ಬಂದು ಸೂಪರ್ ಹಿಟ್ ಆಗಿತ್ತು. ಅದೇ ಕಾಂಬಿನೇಷನ್‌ನಲ್ಲಿ 'ಮಾರ್ಕ್' ಸಿನಿಮಾ ನಿರ್ಮಾಣವಾಗುತ್ತಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರ್ತಿದೆ. ಈ ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕೂ ಇದೆ.

ಅನೂಪ್ ಭಂಡಾರಿ ಸಾಹಿತ್ಯ ಬರೆದು ವಿಜಯಪ್ರಕಾಶ್ ಹಾಡಿದ್ದ 'ಸೈಕೋ ಸೈತಾನ್' ಸಾಂಗ್ ರಿಲೀಸ್ ಆಗಿತ್ತು. ಅಭಿಮಾನಿಗಳಿಗೆ ಇಷ್ಟವಾಗಿದ್ದರೂ ಸಾಹಿತ್ಯ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದರು. ಇದೆಲ್ಲದರ ನಡುವೆ ಯೂಟ್ಯೂಬ್‌ನಿಂದ ಸಾಂಗ್ ಯಾಕೆ ತೆಗೆದರು ಎನ್ನುವ ಪ್ರಶ್ನೆ ಮೂಡಿತ್ತು. ಇದಕ್ಕೆ ಸತ್ಯಜ್ಯೋತಿ ಫಿಲ್ಮ್ಸ್ ಚಿತ್ರನಿರ್ಮಾಣ ಸಂಸ್ಥೆ ಸ್ಪಷ್ಟನೆ ನೀಡಿತ್ತು.
"ನಮ್ಮ ಬಾದ್‌ಶಾ ಕಿಚ್ಚ ಸುದೀಪ್ ಅವರ 'ಮಾರ್ಕ್' ಚಿತ್ರದ ಮೊದಲ ಸಿಂಗಲ್ 'ಸೈಕೋ ಸೈತಾನ್' ಬಗ್ಗೆ ತೋರಿಸಿದ ಎಲ್ಲಾ ಪ್ರೀತಿಗೆ ಧನ್ಯವಾದಗಳು... ಅನಿರೀಕ್ಷಿತ ತಾಂತ್ರಿಕ ದೋಷದಿಂದಾಗಿ, ನಾವು ಹಾಡನ್ನು ರೀ-ಲಾಂಚ್ ನಿರ್ಧರಿಸಿದ್ದೇವೆ. ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಮತ್ತು ನಿಮ್ಮ ತಾಳ್ಮೆ, ಪ್ರೀತಿ ಮತ್ತು ಅಚಲ ಬೆಂಬಲವನ್ನು ನಾವು ಆಳವಾಗಿ ಪ್ರಶಂಸಿಸುತ್ತೇವೆ" ಎಂದು ಚಿತ್ರತಂಡ ಪ್ರತಿಕ್ರಿಯಿಸಿತ್ತು.
ಇದೀಗ ಹೊಸ ಅಪ್‌ಡೇಟ್ ಬಂದಿದ್ದು "ಕೆಲವೊಮ್ಮೆ ಸ್ವಲ್ಪ ಕಾಯುವುದರಿಂದ ಬೀಟ್ ಗಟ್ಟಿಯಾಗುತ್ತದೆ. ನಾಳೆ(ಅಕ್ಟೋಬರ್ 7) ಬೆಳಿಗ್ಗೆ 11 ಗಂಟೆಗೆ 'ಮಾರ್ಕ್' ಚಿತ್ರದ 'ಸೈಕೋ ಸೈತಾನ್' ಸಾಂಗ್ ರೀ-ಲಾಂಚ್ ಮಾಡುತ್ತೇವೆ. ನಿಮ್ಮ ತಾಳ್ಮೆ, ಪ್ರೀತಿ ಮತ್ತು ಬೆಂಬಲಕ್ಕಾಗಿ ಪ್ರತಿಯೊಬ್ಬ ಅಭಿಮಾನಿಗೂ ಹೃತ್ಪೂರ್ವಕ ಧನ್ಯವಾದಗಳು. ಇದನ್ನು ಮತ್ತೆ ಟ್ರೆಂಡ್ ಮಾಡೋಣ ... ಮೊದಲಿಗಿಂತ ಜೋರಾಗಿ" ಎಂದು ಸಾರೆಗಮ ಆಡಿಯೋ ಸಂಸ್ಥೆ ಮಾಹಿತಿ ನೀಡಿದೆ.
ಚೆನ್ನಾಗಿದ್ದ ಸಾಂಗ್ ಯಾಕೆ ತೆಗೆದಿದ್ದು? ಅಷ್ಟಕ್ಕೂ ಏನು ಬದಲಾವಣೆ ಮಾಡುತ್ತೀರಾ? ಸಾಹಿತ್ಯ ಬದಲಿಸುತ್ತೀರಾ? ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಎಲ್ಲವನ್ನು ಸರಿಯಾಗಿ ಪರಿಶೀಲಿಸಿ ಸಾಂಗ್ ಬಿಡುಗಡೆ ಮಾಡಬೇಕಿತ್ತಲ್ಲ ಎಂದು ಕೇಳುತ್ತಿದ್ದಾರೆ. ಇನ್ನು ಸಾಂಗ್‌ನಲ್ಲಿ ಸುದೀಪ್ ಡ್ಯಾನ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿಕ್ಕಾಪಟ್ಟೆ ಜೋಶ್‌ನಲ್ಲಿ ಸುದೀಪ್ ಕುಣಿದು ರಂಗೇರಿಸಿದ್ದಾರೆ. ತೆಲುಗು, ತಮಿಳು ವರ್ಷನ್ ವೀಕ್ಷಣೆಗೆ ಲಭ್ಯವಿದೆ.
ಸುದೀಪ್ ಡ್ಯಾನ್ಸ್ ಮಾಡಿರೋ ಸಣ್ಣ ಸಣ್ಣ ಝಲಕ್ ಮಿಕ್ಸ್ ಮಾಡಿ 'ಸೈಕೋ ಸೈತಾನ್' ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್ ಮಾಡಿದ್ದರು. ಟೈಟಲ್‌ನಿಂದಲೇ 'ಮಾರ್ಕ್' ಸಿನಿಮಾ ಕುತೂಹಲ ಮೂಡಿಸಿದೆ. 'ಮ್ಯಾಕ್ಸ್' ಮ್ಯಾಜಿಕ್ ರಿಪೀಟ್ ಮಾಡಲು ತಂಡ ಮುಂದಾಗಿದೆ. ಪೊಲೀಸ್ ಆಫೀಸರ್ ಅಜಯ್ ಮಾರ್ಕಂಡೆ ಪಾತ್ರದಲ್ಲಿ ಸುದೀಪ್ ಅಬ್ಬರಿಸಲು ಬರ್ತಿದ್ದಾರೆ. ಸೂರತ್ಕಲ್ ಪೊಲೀಸ್ ಠಾಣೆ ಹಿನ್ನೆಲೆಯಲ್ಲಿ ಚಿತ್ರದ ಕಥೆ ನಡೆಯಲಿದೆ.
ಶೇಖರ್ ಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ. ಕನ್ನಡ ಹಾಗೂ ತಮಿಳು ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಕಿಚ್ಚ ಕ್ರಿಯೇಷನ್ಸ್ ಸಂಸ್ಥೆ ಕೂಡ 'ಮಾರ್ಕ್' ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದೆ. 'ಕ್ರಿಸ್‌ಮಸ್' ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ಅದೇ ವಾರ '45' ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬರಲಿದೆ.


Click it and Unblock the Notifications











