ಒಂದಲ್ಲ, ಎರಡಲ್ಲ.. ಒಟ್ಟೊಟ್ಟಿಗೆ 4 ಸಿನಿಮಾ; ಮತ್ತೆ ಕಿಚ್ಚ ಸುದೀಪ್ ಆಕ್ಷನ್ ಕಟ್
'ಮಾರ್ಕ್' ಸಿನಿಮಾ ಬಳಿಕ ಕಿಚ್ಚ ಸುದೀಪ್ ಸೈಲೆಂಟ್ ಆಗಿದ್ದಾರೆ. ಇತ್ತೀಚೆಗೆ ಬಂದ 'ಕೆಡಿ' ಚಿತ್ರದ ಅತಿಥಿ ಪಾತ್ರದಲ್ಲಿ ಅಬ್ಬರಿಸಿದ್ದರು. ಕಿಚ್ಚನ ಸಾಥ್ ಧ್ರುವ ಚಿತ್ರಕ್ಕೆ ಪ್ಲಸ್ ಆಗಿದ್ದು ಸುಳ್ಳಲ್ಲ. ಆದರೆ 'ಮಾರ್ಕ್' ಬಳಿಕ ಸುದೀಪ್ ಹೀರೊ ಆಗಿ ಯಾವುದೇ ಚಿತ್ರದಲ್ಲಿ ನಟಿಸಲಿಲ್ಲ. ಚಿತ್ರೀಕರಣಕ್ಕೂ ಹೋಗಿಲ್ಲ. ಇದೀಗ ಒಮ್ಮೆಲೆ 4 ಸಿನಿಮಾಗಳನ್ನು ಕೈಗೆತ್ತಿಕೊಳ್ತಾರೆ ಎನ್ನಲಾಗ್ತಿದೆ.
'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಒಂದು ಶೆಡ್ಯೂಲ್ ಚಿತ್ರೀಕರಣ ಕೂಡ ಮುಗಿದಿದೆ. 2ನೇ ಶೆಡ್ಯೂಲ್ ಆರಂಭಿಸಲು ಸಿದ್ಧತೆ ನಡೀತಿದೆ. ಇದರ ಜೊತೆಗೆ ಒಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ ಆರಂಭವಾಗಲಿದೆ. ತೆಲುಗು ನಿರ್ದೇಶಕ ಸುಕುಮಾರ್ ಶಿಷ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಬಗ್ಗೆ ಸ್ವತಃ ಸುದೀಪ್ ಮಾಹಿತಿ ನೀಡಿದ್ದಾರೆ. ಆದರೆ ಸಿನಿಮಾ ನಿರ್ಮಾಪಕರು ಯಾರು? ಯಾವಾಗ ಚಿತ್ರೀಕರಣ ಎನ್ನುವ ಬಗ್ಗೆ ಮಾಹಿತಿ ಸಿಗಬೇಕಿದೆ.

'ಮಾರ್ಕ್' ಸಿನಿಮಾ ಬಳಿಕ ಕಾರ್ ರೇಸ್ ಜಗತ್ತಿಗೆ ಸುದೀಪ್ ಕಾಲಿಟ್ಟರು. ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನಲ್ಲಿ 'ಕಿಚ್ಚಾಸ್ ಕಿಂಗ್ಸ್ ಬೆಂಗಳೂರು' ಹೆಸರಿನ ಫ್ರಾಂಚೈಸಿ ತಂಡದ ಜೊತೆ ಭಾಗಿ ಆಗಿದ್ದರು. ಬಳಿಕ 'ಮ್ಯಾಂಗೋ ಪಚ್ಚ' ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಮುಂದಿನ ವಾರ ಸಿನಿಮಾ ತೆರೆಗೆ ಬರಲಿದೆ. ಸುದೀಪ್ ಅಕ್ಕನ ಮಗ ಸಂಚಿತ್ ಈ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಜೊತೆ ತಮ್ಮದೇ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಿಸಿದ್ದಾರೆ.
ಈಗಾಗಲೇ 'ಮ್ಯಾಂಗೋ ಪಚ್ಚ' ಸಿನಿಮಾ ಪ್ರಚಾರ ಆರಂಭವಾಗಿದೆ. ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮತ್ತೊಂದು ಕಡೆ ಸುದೀಪ್ ಮತ್ತೆ ಶೂಟಿಂಗ್ ಅಖಾಡಕ್ಕೆ ಹೋಗುವುದು ಯಾವಾಗ ಎನ್ನುವ ಚರ್ಚೆ ಶುರುವಾಗಿದೆ. 'ಬಿಲ್ಲ ರಂಗ ಬಾಷ' ಚಿತ್ರದ ಹೊಸ ಶೆಡ್ಯೂಲ್‌ಗಾಗಿ ಅನೂಪ್ ಭಂಡಾರಿ ತಯಾರಿ ನಡೆಸಿದ್ದಾರೆ. ಇದು ಭಾರೀ ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಎಲ್ಲವೂ ತಡವಾಗುತ್ತದೆ. ಹಾಗಾಗಿ ಜೊತೆ ಜೊತೆಗೆ ಮತ್ತೊಂದು ಸಿನಿಮಾ ಮಾಡಿ ಮುಗಿಸಲು ಸುದೀಪ್ ಪ್ಲ್ಯಾನ್ ಮಾಡುತ್ತಿದ್ದಾರೆ.
ಶೀಘ್ರದಲ್ಲೇ ಮತ್ತೆ ಸುದೀಪ್ ಡೈರೆಕ್ಟರ್ ಕ್ಯಾಪ್ ತೊಡಲು ಮನಸ್ಸು ಮಾಡಿದ್ದಾರೆ. 3 ವರ್ಷಗಳ ಹಿಂದೆಯೇ ತಮ್ಮ ಹುಟ್ಟುಹಬ್ಬಕ್ಕೆ ಸಿನಿಮಾವೊಂದನ್ನು ಸುದೀಪ್ ಘೋಷಿಸಿದ್ದರು. ತಾವೇ ನಿರ್ದೇಶಿಸಿ ನಟಿಸುವುದಾಗಿ ಹೇಳಿದ್ದರು. ಆದರೆ ಅದು ತಡವಾಗುತ್ತಲೇ ಇದೆ. 'ಮಾಣಿಕ್ಯ' ಬಳಿಕ ಸುದೀಪ್ ಯಾವುದೇ ಸಿನಿಮಾ ನಿರ್ದೇಶನ ಮಾಡಲಿಲ್ಲ. ತಮ್ಮ 50ನೇ ಚಿತ್ರಕ್ಕೆ ಸುದೀಪ್ ಆಕ್ಷನ್ ಕಟ್ ಹೇಳುತ್ತಾರೆ ಎನ್ನಲಾಗಿತ್ತು. ಈ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ವಿವರ ಸಿಗಲಿದೆ.
ಈ ವರ್ಷವೇ ಸುದೀಪ್ 4 ಸಿನಿಮಾಗಳನ್ನು ಘೋಷಣೆ ಮಾಡುತ್ತಾರೆ. ಸದ್ಯ ಆ ಸಿನಿಮಾಗಳ ಸ್ಕ್ರಿಪ್ಟ್ ಕೆಲಸಗಳು ಚಾಲ್ತಿಯಲ್ಲಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ನಡುವೆ ಬಿಗ್‌ಬಾಸ್ ಶೋ ನಿರೂಪಣೆ ಕೂಡ ಮಾಡಬೇಕಿದೆ. ಅಕ್ಟೋಬರ್ ವೇಳೆಗೆ ಕನ್ನಡ ಬಿಗ್‌ಬಾಸ್ ಸೀಸನ್ 13 ಆರಂಭವಾಗಲಿದೆ. ಈ ಬಾರಿ ಕೂಡ ಕಿಚ್ಚನ ಸಾರಥ್ಯದಲ್ಲೇ ಶೋ ಮೂಡಿ ಬರಲಿದೆ. ಇನ್ನು ಕೆಸಿಸಿ ಕ್ರಿಕೆಟ್ ಟೂರ್ನಿಯಲ್ಲಿ ಕೂಡ ಸುದೀಪ್ ಭಾಗವಹಿಸುವ ನಿರೀಕ್ಷೆಯಿದೆ.
ತಮಿಳು ನಿರ್ದೇಶಕ ಸಮುದ್ರಕನಿ ಜೊತೆ ಸುದೀಪ್ ಕಾಣಿಸಿಕೊಂಡಿರುವ ಫೋಟೊವೊಂದು ವೈರಲ್ ಆಗ್ತಿದೆ. ಇಬ್ಬರೂ ಸೇರಿ ಸಿನಿಮಾ ಮಾಡ್ತಾರಾ? ಎನ್ನುವ ಊಹಾಪೋಹ ಶುರುವಾಗಿದೆ. ಈ ಹಿಂದೆ ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ 'ಯಾರೇ ಕೂಗಾಡಲಿ' ಚಿತ್ರವನ್ನು ಸಮುದ್ರಕನಿ ಕಟ್ಟಿಕೊಟ್ಟಿದ್ದರು.


Click it and Unblock the Notifications