ತೆಲುಗು, ತಮಿಳು, ಹಿಂದಿ ಬಳಿಕ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸುದೀಪ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾರಂಗದಲ್ಲೂ ಮಿಂಚಿದ್ದಾರೆ. ಪರಭಾಷೆಯಲ್ಲೂ ಕಿಚ್ಚನಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ಬೇರೆ ಬೇರೆ ಭಾಷೆಯಲ್ಲಿ ಅಬ್ಬರಿಸಿರುವ ಸುದೀಪ್ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರಲಿಲ್ಲ.
ಮಲಯಾಳಂನ ಅಳಿಯನಾಗಿದ್ದರೂ ಸುದೀಪ್ ಆ ಭಾಷೆಲ್ಲಿ ಸಿನಿಮಾ ಮಾಡಿರಲಿಲ್ಲ. ಇದೀಗ ಮಲಯಾಳಂ ಸಿನಿಮಾದ ಬಗ್ಗೆ ಸುದೀಪ್ ರಿವೀಲ್ ಮಾಡಿದ್ದಾರೆ. ಇಂದು ದುಬೈನಿಂದ ಪತ್ರಿಕಾಗೋಷ್ಠಿ ಮಾಡಿದ್ದ ಕಿಚ್ಚ ಸುದೀಪ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಬಣ್ಣದ ಲೋಕದಲ್ಲಿ 25 ವರ್ಷ ಪೂರೈಸಿರುವ ಸುದೀಪ್, ಇಷ್ಟು ವರ್ಷದ ಸಿನಿಮಾ ಬದುಕಿನ ಏಳು-ಬೀಳಿನ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಇವತ್ತಿಗೆ 25ನೇ ವರ್ಷ ಮುಗಿಯುತ್ತಿದೆ. ನಾಳೆಯಿಂದ 26ನೇ ವರ್ಷ ಪ್ರಾರಂಭಿಸುತ್ತಿದ್ದೇನೆ ಎಂದು ಕಿಚ್ಚ ಹೇಳಿದ್ದಾರೆ.

ಇದೇ ಸಮಯದಲ್ಲಿ ಕಿಚ್ಚ ಮಲಯಾಳಂ ಸಿನಿಮಾದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಮಲಯಾಳಂನಿಂದ ಸಿನಿಮಾಗೆ ಆಫರ್ ಬಂದಿದೆ. ಆ ಸಿನಿಮಾದಲ್ಲಿ ಕನ್ನಡದಲ್ಲೇ ಮಾತನಾಡುತ್ತೇನೆ ಎಂದು ಕಿಚ್ಚ ಹೇಳಿದ್ದಾರೆ.
'ಪ್ರಿಯಾ ಯಾವಾಗಲು ಗಲಾಟೆ ಮಾಡುತ್ತಿರುತ್ತಾರೆ. ಎಲ್ಲಾ ಭಾಷೆಯಲ್ಲೂ ಮಾಡಿದ್ದೀರಿ ಮಲಯಾಳಂ ಮಾಡಿಲ್ಲ ಎಂದು. ನನಗೆ ಭಾಷೆ ಬರಲ್ಲ ಹೇಗೆ ಮಾಡೋದು ಎಂದು ಹೇಳುತ್ತಿದ್ದೆ. ಭಾಷೆ ಅರ್ಥ ಮಾಡಿಕೊಳ್ಳುವುದಾ ಅಥವಾ ಪರ್ಫಾಮೆನ್ಸ್ ಬಗ್ಗೆ ಗಮನ ಕೊಡುವುದೊ ಗೊತ್ತಾಗಲ್ಲ. ಅಲ್ಲಿ ಅದ್ಭುತವಾದ ಕಲಾವಿದರಿದ್ದಾರೆ. ಭಾಷೆ ಬಂದಿಲ್ಲ ಎಂದರೆ ನನಗೆ ಕಷ್ಟವಾಗುತ್ತೆ. ಇತ್ತೀಚಿಗಷ್ಟೆ ಮಲಯಾಳಂನಿಂದ ಆಫರ್ ಬಂದಿದೆ. ಆ ಸಿನಿಮಾದಲ್ಲಿ ಕನ್ನಡದಲ್ಲೇ ಮಾತನಾಡುತ್ತೇೆನೆ' ಎಂದು ಹೇಳಿದ್ದಾರೆ.


Click it and Unblock the Notifications











