ಹೊಸ ದಾಖಲೆ ಬರೆಯಲಿದೆ ಸುದೀಪ್ 'ಕೋಟಿಗೊಬ್ಬ-3'
Recommended Video

'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಿರುವ ಕಿಚ್ಚ ಸುದೀಪ್ 'ಪೈಲ್ವಾನ್' ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನೂ ಮುಗಿಸಿಕೊಟ್ಟಿದ್ದಾರೆ. ಈ ನಡುವೆ ಕೊಂಚ ಕೂಡ ಗ್ಯಾಪ್ ಪಡೆಯದೆ 'ಕೋಟಿಗೊಬ್ಬ-3' ಶೂಟಿಂಗ್ ಗೆ ಸುದೀಪ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಬಹುಕೋಟಿ ವೆಚ್ಚದಲ್ಲಿ ತಯಾರಾಗಲಿರುವ 'ಕೋಟಿಗೊಬ್ಬ-3' ಚಿತ್ರ, ಶೂಟಿಂಗ್ ಹಂತದಲ್ಲಿಯೇ ದಾಖಲೆ ಬರೆಯಲು ಸಜ್ಜಾಗಿದೆ. 'ಕೋಟಿಗೊಬ್ಬ-3' ಚಿತ್ರದ ಬಹುತೇಕ ಚಿತ್ರೀಕರಣ ವಿದೇಶದಲ್ಲಿಯೇ ನಡೆಯಲಿದೆ. ಹೀಗಾಗಿ 40 ದಿನಗಳ ಕಾಲ ಸರ್ಬಿಯಾದ ರಾಜಧಾನಿದಲ್ಲಿ 'ಕೋಟಿಗೊಬ್ಬ-3' ಚಿತ್ರದ 51 ಜನರ ತಂಡ ಠಿಕಾಣಿ ಹೂಡಲಿದೆ.
ಹಾಗ್ನೋಡಿದ್ರೆ, ಸರ್ಬಿಯಾದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಮೊದಲ ಕನ್ನಡ ಚಿತ್ರ 'ಕೋಟಿಗೊಬ್ಬ-3'. ಯಾವುದೇ ಪರಭಾಷೆಯ ಚಿತ್ರಗಳಲ್ಲೂ ಸರ್ಬಿಯಾದ ಸುಂದರ ಪ್ರದೇಶಗಳನ್ನ ಅಷ್ಟಾಗಿ ತೋರಿಸಿಲ್ಲ. ಹೀಗಾಗಿ ಸರ್ಬಿಯಾದಲ್ಲೇ ಶೂಟಿಂಗ್ ಮಾಡಿ ದಾಖಲೆ ಬರೆಯಲು ನಿರ್ಮಾಪಕ ಸೂರಪ್ಪ ಬಾಬು ಮುಂದಾಗಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ಕ್ರೈಂ ಕಥೆ ಕುರಿತಾದ ಚಿತ್ರ 'ಕೋಟಿಗೊಬ್ಬ-3'. ಸಿನಿಮಾದ ಕಥೆಯ ಎಳೆಯನ್ನ ಸುದೀಪ್ ರವರೇ ಹೇಳಿದ್ಮೇಲೆ, ಚಿತ್ರಕ್ಕೆ ಬಂಡವಾಳ ಹೂಡಲು ಸೂರಪ್ಪ ಬಾಬು ಸೈ ಎಂದರು. ಶಿವ ಕಾರ್ತಿಕ್ ಎಂಬುವರು 'ಕೋಟಿಗೊಬ್ಬ-3' ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ಚಿತ್ರದಲ್ಲಿ ಸುದೀಪ್, ರವಿಶಂಕರ್, ರಾಜೇಶ್ ನಟರಂಗ, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ, ನವಾಬ್ ಸಾ, ತಬಲಾ ನಾಣಿ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಇವರೆಲ್ಲರೂ ಸದ್ಯದಲ್ಲಿಯೇ ಸರ್ಬಿಯಾಗೆ ಫ್ಲೈಟ್ ಹತ್ತಲಿದ್ದಾರೆ. ಸರ್ಬಿಯಾದಲ್ಲಿ ಆಕ್ಷನ್ ಸನ್ನಿವೇಶಗಳ ಚಿತ್ರೀಕರಣ ನಡೆಯಲಿದ್ದು, ಗ್ರೀಸ್ ನಲ್ಲಿ ಎರಡು ಸಾಂಗ್ ಶೂಟಿಂಗ್ ನಡೆಯಲಿದೆ.
2001 ರಲ್ಲಿ ಬಿಡುಗಡೆಯಾದ 'ಕೋಟಿಗೊಬ್ಬ', 2016 ರಲ್ಲಿ ರಿಲೀಸ್ ಆದ 'ಕೋಟಿಗೊಬ್ಬ-2' ಚಿತ್ರಗಳ ಯಶಸ್ಸಿನ ಸ್ಫೂರ್ತಿ ಪಡೆದು ಇದೀಗ 'ಕೋಟಿಗೊಬ್ಬ-3' ಸಿನಿಮಾ ಸೆಟ್ಟೇರುತ್ತಿದೆ.


Click it and Unblock the Notifications











