ಬಹುಭಾಷಾ ಚಿತ್ರದಲ್ಲಿ ಕಿಚ್ಚನಿಗೆ ಜೋಡಿಯಾದ 'ಬೇಬಿ'
ರನ್ನ ಚಿತ್ರದ ಯಶಸ್ಸಿನ ನಂತರ ಕಿಚ್ಚ ಸುದೀಪ್ ಅವರು ಈಗ ತಮಿಳಿನ ಖ್ಯಾತ ನಿರ್ದೇಶಕ ಕೆಎಸ್ ರವಿಕುಮಾರ್ ಅವರ ನಿರ್ದೇಶನ ಬಹುಭಾಷಾ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
ಇದರ ಜೊತೆಗೆ ಇಳಯದಳಪತಿ ವಿಜಯ್ ಜೊತೆಗೆ ಪುಲಿ ಚಿತ್ರದಲ್ಲೂ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಎಸ್ ರವಿಕುಮಾರ್ ಚಿತ್ರಕ್ಕೆ ಸುದೀಪ್ ಜೋಡಿಯಾಗಿ ಆ ಕಾಲದ ಸೂಪರ್ ಬೇಬಿ ಶಾಮಿಲಿ ಅವರು ನಟಿಸುತ್ತಿದ್ದಾರೆ.

ಕ್ಯಾಮರಾಮೆನ್ ಕೃಷ್ಣ ನಿರ್ದೇಶಿಸುತ್ತಿರುವ 'ಹೆಬ್ಬುಲಿ' ಬಹುಭಾಷಾ ಚಿತ್ರದಲ್ಲಿ ಆರ್ಮಿ ಆಫೀಸರ್ ಆಗಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯಿದೆ. ಕೃಷ್ಣ ಅವರು ಸದ್ಯಕ್ಕೆ ಕಿರುತೆರೆಯಲ್ಲಿ ಗೃಹಲಕ್ಷ್ಮಿಯನ್ನು ಮನೆ ಮನೆಗೆ ಮುಟ್ಟಿಸುವ ಯತ್ನದಲ್ಲಿದ್ದಾರೆ.
ಈ ನಡುವೆ ಜೂ.12ರಂದು ಕೆಎಸ್ ರವಿಕುಮಾರ್ ಅವರು ತಮ್ಮ ಚಿತ್ರ ಸೆಟ್ಟೇರುವಂತೆ ಮಾಡಿದ್ದಾರೆ. ಚಿತ್ರಕ್ಕೆ ಸ್ಟಾರ್ ನಟ ಅಜಿತ್ ಅವರ ನಾದಿನಿ, ನಟಿ ಶಾಲಿನಿ ತಂಗಿ 'ಬೇಬಿ' ಶಾಮಿಲಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಕಿಚ್ಚ ಸುದೀಪ್ ಅವರು ತಮಿಳಿನ ಪುಲಿ, ಬಹುಭಾಷಾ ಹೆಬ್ಬುಲಿ ಅಲ್ಲದೆ ಲೀಡರ್ ಹೆಸರಿನ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇದೆಲ್ಲದರ ಜೊತೆಗೆ ತಮಿಳಿನಿಂದ ಸಿದ್ದಾರ್ಥ್ ಅಭಿನಯದ 'ಜಿಗರ್ಥಾಂಡ' ಚಿತ್ರದ ರಿಮೇಕ್ ಹಕ್ಕು ಖರೀದಿಸಿದ್ದು, ಈ ಚಿತ್ರದ ಮೂಲಕ ರಾಹುಲ್ ಅವರನ್ನು ರೀ ಲಾಂಚ್ ಮಾಡುತ್ತಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ರಾಜಮೌಳಿ ನಿರ್ದೇಶನದ ಮಹೋನ್ನತ ಚಿತ್ರ ಬಾಹುಬಲಿಯಲ್ಲಿ ಕಿಚ್ಚ ಸುದೀಪ್ ಪಾತ್ರದ ಹೆಸರು ಹಾಗೂ ಪೋಸ್ಟರ್ ಬಿಟ್ಟರೆ ಬೇರೆ ಏನು ಮಾಹಿತಿ ಅಭಿಮಾನಿಗಳಿಗೆ ಸಿಕ್ಕಿಲ್ಲ.
ಭಾನುವಾರ ತಿರುಪತಿಯಲ್ಲಿ ನಡೆದ ಅದ್ದೂರಿ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲೂ ಸುದೀಪ್ ಬಗ್ಗೆ ಯಾರು ಮಾತನಾಡಲಿಲ್ಲ. ಕೊನೆಗೂ ಈ ಬಗ್ಗೆ ಬಾಯ್ಬಿಟ್ಟಿರುವ ನಿರ್ದೇಶಕ ರಾಜಮೌಳಿ ಟ್ವೀಟ್ ಮಾಡಿ, ಸುದೀಪ್ ಬಗ್ಗೆ ಬೆಂಗಳೂರಿಗೆ ಬಂದು ಮಾತನಾಡುತ್ತೇನೆ ಎಂದಿದ್ದಾರೆ.


Click it and Unblock the Notifications











