ಫೈನಲ್ ರೇಸ್‌ನಿಂದ ಹೊರಬಿದ್ದ ಆರ್‌ಸಿಬಿ: ಕೊಹ್ಲಿ ಬಗ್ಗೆ ಸುದೀಪ್ ಹೇಳಿದ್ದೇನು?
ಕಳೆದ ರಾತ್ರಿ ನಡೆದ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ವೀರೋಚಿತವಾಗಿ ಸೋಲು ಕಂಡಿದೆ. ಈ ಮೂಲಕ ಐಪಿಎಲ್ ಫೈನಲ್ ಆಡುವ ಆಸೆ ನಿರಾಸೆಯಾಗಿದೆ.
ಆರ್‌ಸಿಬಿ ಈ ಸಲ ಕಪ್ ಗೆದ್ದೆ ಗೆಲ್ಲುತ್ತದೆ ಎಂಬ ನಂಬಿಕೆ, ಭರವಸೆ ಈ ಸೋಲಿನೊಂದಿಗೆ ಕಮರಿ ಹೋಗಿದೆ. ಈ ಪಂದ್ಯ ಮತ್ತೊಂದು ವಿಚಾರಕ್ಕೆ ಬಹಳ ವಿಶೇಷವಾಗಿತ್ತು. ಆರ್‌ಸಿಬಿ ನಾಯಕನಾಗಿ ವಿರಾಟ್ ಕೊಹ್ಲಿ ಆಡಿದ ಕೊನೆಯ ಪಂದ್ಯ ಇದಾಗಿತ್ತು. ಮುಂದಿನ ಆವೃತ್ತಿಯಿಂದ ವಿರಾಟ್ ಕೊಹ್ಲಿ ಕೇವಲ ಆಟಗಾರನಾಗಿ ಮಾತ್ರ ಆರ್‌ಸಿಬಿ ತಂಡದಲ್ಲಿ ಇರಲಿದ್ದಾರೆ.
ರಾಯಲ್ ಚಾಲೆಂಜರ್ಸ್ ಅಭಿಮಾನಿಗಳ ಪಾಲಿಗೆ ಬಹಳ ಪ್ರಮುಖವಾಗಿದ್ದ ಈ ಪಂದ್ಯ ಸೋತ ನಂತರ ಕನ್ನಡ ನಟ ಕಿಚ್ಚ ಸುದೀಪ್ ಟ್ವಿಟ್ಟರ್‌ನಲ್ಲಿ ಆರ್‌ಸಿಬಿ ತಂಡ ಹಾಗೂ ಕೊಹ್ಲಿ ನಾಯಕತ್ವವನ್ನು ಪ್ರಶಂಸಿಸಿದ್ದಾರೆ.

''ಕೆಟ್ಟ ಸಮಯ ಆರ್‌ಸಿಬಿ....ತುಂಬಾ ಫೈಟ್ ಇತ್ತು. ಆದರೂ ಗೆಲುವಿಗೆ ಗಟ್ಟಿಯಾಗಿ ಹೋರಾಡಿದರು. ನಾವು ವಿರಾಟ್ ಕೊಹ್ಲಿಯ ನಾಯಕತ್ವವನ್ನು ಮಿಸ್ ಮಾಡಿಕೊಳ್ಳುತ್ತೇವೆ. ನೀವು ತೆಗೆದುಕೊಂಡಿರುವುದು ಬಹಳ ಕಠಿಣವಾದ ನಿರ್ಧಾರವೆಂದು ನಮಗೆ ಗೊತ್ತಿದೆ. ಫೈನಲ್‌ನಲ್ಲಿ ಆರ್‌ಸಿಬಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆರ್‌ಸಿಬಿ ಫಾರ್‌ಎವರ್'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಇನ್ನು ನಿರ್ದೇಶಕ ಹಾಗೂ ಆರ್‌ಸಿಬಿ ಕಟ್ಟಾಳು ಸಿಂಪಲ್ ಸುನಿ ಸಹ ಆರ್‌ಸಿಬಿ ಪಂದ್ಯ ಸೋತ ಬಳಿಕ ಟ್ವೀಟ್ ಮಾಡಿ ಬೇಸರ ಹಂಚಿಕೊಂಡರು.

''ಈ ಸಲನು ತಪ್ಪು ನಮ್ದೆ ಪರವಾಗಿಲ್ಲ
"ಮುಂದಿನ ಸಲ ಕಪ್ ನಮ್ದೆ"
ಈ #depression ಯುಗದಲ್ಲಿ
ಸೋತರು ಕುಗ್ಗದೆ, ಎದೆಏರಿಸಿ ಹುಮ್ಮಸ್ಸು
ತುಂಬುವಂತ ಅಭಿಮಾನಿಗಳು #ನಮ್ಮRCB ಅಭಿಮಾನಿಗಳು
ಇವರು ತಾಳ್ಮೆಯ ಪ್ರತಿರೂಪ.
ಆದರೂ ಯಾರದೋ ಇದೆ ಶಾಪ.
ಇರಲಿ, ಕಪ್ ಗೆಲ್ಲದಿದ್ದರೂ #ban ಆಗದೆ #fixing ಮಾಡದೆ ಪ್ರತಿಸಲವು ಮನಗೆಲ್ಲೊ ತಂಡ
#RCB
#ವಂದನೆಗಳು'' ಎಂದು ಅಭಿಮಾನಿಗಳ ನಂಬಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂದ್ಹಾಗೆ, ಆರ್‌ಸಿಬಿ ವಿರುದ್ಧ ಕೆಕೆಆರ್ ಮುಂದಿನ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಎರಡನೇ ಕ್ವಾಲಿಫಯರ್ ಆಡಬೇಕಿದೆ. ಈಗಾಗಲೇ ಡೆಲ್ಲಿ ವಿರುದ್ಧ ಮೊದಲ ಕ್ವಾಲಿಫಯರ್ ಪಂದ್ಯ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ ಪ್ರವೇಶಿಸಿದೆ. ಈ ಮೂರು ತಂಡಗಳಲ್ಲಿ ಯಾವ ತಂಡ ಐಪಿಎಲ್ 2021ರ ಕಪ್ ಎತ್ತಿ ಹಿಡಿಯಲಿದೆ ಎನ್ನುವುದು ರೋಚಕತೆಗೆ ಕಾರಣವಾಗಿದೆ.
ಸ್ಕ್ರೋರ್ ವಿವರ
ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಬ್ಯಾಟಿಂಗ್ ಮಾಡಿದರು. ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 138 ರನ್ ಕಲೆಹಾಕಿತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ 4 ಓವರ್ ಮಾಡಿದ ಸುನಿಲ್ ನರೈನ್ ಕೇವಲ 21 ರನ್ ನೀಡಿ 4 ವಿಕೆಟ್ ಪಡೆದರು. ಈ ಗುರಿಯನ್ನು ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ ಅಂತಿಮ ಓವರ್‌ನಲ್ಲಿ ಗೆಲುವು ಸಾಧಿಸಿದರು. ಶುಬ್ ಮನ್ ಗಿಲ್ 29, ವೆಂಕಟೇಶ್ ಐಯ್ಯರ್ 26, ನಿತೀಶ್ ರಾಣಾ 23 ಮತ್ತು ಸುನಿಲ್ ನರೈನ್ 26 ರನ್ ಬಾರಿಸಿದರು. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ 19.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 139 ರನ್ ಕಲೆ ಹಾಕಿ 4 ವಿಕೆಟ್‌ಗಳ ರೋಚಕ ಗೆಲುವನ್ನು ಸಾಧಿಸಿತು. ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಮಿಂಚಿದ ಸುನಿಲ್ ನರೈನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.


Click it and Unblock the Notifications











