'ಡಿಯರ್ ಕಣ್ಮಣಿ' ಎನ್ನುತ್ತಿರುವ 'ಬಿಗ್ ಬಾಸ್' ಖ್ಯಾತಿಯ ಕಿಶನ್ ಗೆ ಕಿಚ್ಚ ಸುದೀಪ್ ಸಾಥ್
'ಕಣ್ಣಮಣಿಯೇ...'ಎಂದು ರೊಮ್ಯಾಂಟಿಕ್ ಹಾಡಿನ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದ ಕಿಚ್ಚ ಸುದೀಪ್ ಇದೀಗ 'ಡಿಯರ್ ಕಣ್ಮಣಿ' ಎನ್ನುತ್ತಿರುವ ಬಿಗ್ ಬಾಸ್ ಖ್ಯಾತಿಯ ಕಿಶನ್ ಅವರಿಗೆ ಸಾಥ್ ನೀಡಿದ್ದಾರೆ.
ಹೌದು, ಬಿಗ್ ಬಾಸ್ ಮೂಲಕ ಪ್ರೇಕ್ಷಕರ ಮನಗೆದಿದ್ದ ಖ್ಯಾತ ಡ್ಯಾನ್ಸರ್ ಕಿಶನ್ ಬಿಳಗಲಿ ಬೆಳ್ಳಿ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಕಿಶನ್ ಮೊದಲ ಸಿನಿಮಾಗೆ 'ಡಿಯರ್ ಕಣ್ಮಣಿ' ಎಂದು ಟೈಟಲ್ ಇಡಲಾಗಿದೆ. ವಿಶೇಷ ಎಂದರೆ ಇಂದು ಚಿತ್ರಕ್ಕೆ ಮುಹೂರ್ತ ಮಾಡಿ, ಟೈಟಲ್ ಅನಾವರಣ ಮಾಡಲಾಗಿದೆ.
ಕಿಶನ್ ಮೊದಲ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್ ನೀಡಿರುವುದು ವಿಶೇಷ. ಬೆಂಗಳೂರಿನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಮತ್ತು ಶೀರ್ಷಿಕೆ ಅನಾವರಣ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಚಿತ್ರಕ್ಕೆ ಕ್ಲ್ಯಾಪ್ ಮಾಡಿ ಟೈಟಲ್ ಅನಾವರಣ ಗೊಳಿಸಿ, ಡಿಯರ್ ಕಣ್ಮಣಿಗೆ ಶುಭಹಾರೈಸಿದ್ದಾರೆ.

ಅಂದಹಾಗೆ ಡಿಯರ್ ಕಣ್ಮಣಿ ಚಿತ್ರಕ್ಕೆ ವಿಸ್ಮಯಾ ಗೌಡ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ವಿಸ್ಮಯಾ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈ ಮೂಲಕ ಚಂದನವನಕ್ಕೆ ಮತ್ತೋರ್ವ ಲೇಡಿ ನಿರ್ದೇಶಕಿ ಎಂಟ್ರಿ ಕೊಟ್ಟಿದ್ದಾರೆ.
ಡಿಯರ್ ಕಣ್ಮಣಿ ಹೆಸರೇ ಹೇಳುವ ಹಾಗೆ ಇದೊಂದು ರೊಮ್ಯಾಂಟಿಕ್ ಸಿನಿಮಾವಾಗಿದೆ. ಕಿಶನ್ ಇಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಕ್ರಿಕೆಟಿಗ ಪ್ರವೀಣ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದು, ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದಾರೆ.

ಚಿತ್ರದಲ್ಲಿ ಕಿಶನ್ ಗೆ ನಾಯಕಿಯಾಗಿ ರೇಖಾ ದಾಸ್ ಮಗಳು ಸಾತ್ವಿಕಾ ನಾಯಕಿಯಾಗಿ ಮಿಂಚುತ್ತಿದ್ದಾರೆ. ಈ ರೊಮ್ಯಾಂಟಿಕ್ ಸಿನಿಮಾದ ಚಿತ್ರೀಕರಣ ಮಡಿಕೇರಿ ಮತ್ತು ಮೈಸೂರು ಸುತ್ತಮುತ್ತ ನಡೆಸಲು ಸಿನಿಮಾತಂಡ ಪ್ಲಾನ್ ಮಾಡಿದೆ.
'ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಸಂತಸ ವ್ಯಕ್ತ ಪಡಿಸಿದ ಕಿಶನ್, ಲವರ್ ಬಾಯ್ ಪಾತ್ರ ನನಗೆ ಹೊಂದುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಇದನ್ನು ತೆರೆಮೇಲೆ ಸಾಧ್ಯವಾಗಿಸಬೇಕಿದೆ' ಎಂದಿದ್ದಾರೆ. ಬಿಗ್ ಬಾಸ್ ಮತ್ತು ಅದ್ಭುತ ಡ್ಯಾನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಕಿಶನ್ ಬೆಳ್ಳಿ ಪರದೆ ಮೇಲೆ ಮೋಡಿ ಮಾಡುತ್ತಾರಾ ಎಂದು ಕಾದುನೋಡಬೇಕಿದೆ.


Click it and Unblock the Notifications











