ಅರ್ಥಪೂರ್ಣ ಸಂದೇಶದೊಂದಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ ಕಿಚ್ಚ ಸುದೀಪ್
ಅಂತೂ 2020 ಬಂದೇ ಬಿಟ್ಟಿದೆ. ನೂತನ ವರ್ಷಾರಂಭ ಆಗೇ ಬಿಟ್ಟಿದೆ. ಎಲ್ಲೆಲ್ಲೂ ಹೊಸ ವರ್ಷದ ಸಂಭ್ರಮ ಜೋರಾಗಿದೆ. ಹ್ಯಾಪಿ ನ್ಯೂ ಇಯರ್ ಎಂದು ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ. ಅದು ಅರ್ಥಪೂರ್ಣ ಸಂದೇಶದೊಂದಿಗೆ.!
'ಬಿಗ್ ಬಾಸ್' ವೇದಿಕೆ ಮೇಲೆ ಸ್ಪರ್ಧಿಗಳ ಕಿವಿ ಹಿಂಡಿ, ಬುದ್ಧಿ ಹೇಳುವ ಕಿಚ್ಚ ಸುದೀಪ್ ಹೊಸ ವರ್ಷದಂದು ತಮ್ಮೆಲ್ಲಾ ಅಭಿಮಾನಿಗಳಿಗೆ ಅದ್ಭುತ ಸಂದೇಶ ನೀಡಿದ್ದಾರೆ.

''2020ಗೆ ಹೆಜ್ಜೆಯಿಡುವ ಮುನ್ನ ಈ ವರ್ಷದ ನಿಮ್ಮ ಹೆಜ್ಜೆ ಗುರುತುಗಳತ್ತ ಒಮ್ಮೆ ಕಣ್ಣಾಯಿಸಿ ನೋಡಿ. ಈ ವರ್ಷದಲ್ಲಿ ನೀವು ಕಳೆದ ಅಮೂಲ್ಯ ಕ್ಷಣಗಳು ಮತ್ತು ಜೊತೆಯಾದ ವ್ಯಕ್ತಿಗಳು. ನೀವು ಕ್ಷಮೆ ಕೇಳಬೇಕಾದವರು ಮತ್ತು ನಿಮ್ಮಿಂದ ಕ್ಷಮೆಗೆ ಕಾದಿರುವವರು. ಬೇರೆಯವರಿಂದ ನಿಮಗೆ ಸಿಕ್ಕ ಒಳ್ಳೆಯದು ಮತ್ತು ನಿಮ್ಮಿಂದ ಬೇರೆಯವರಿಗಾದ ಒಳ್ಳೆಯದು. ಮುಂತಾದುವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿಕೊಂಡರೆ ನೀವು ನಡೆದು ಬಂದ ಹಾದಿ ಬಗ್ಗೆ ಸ್ಪಷ್ಟತೆಗಳು ಸಿಕ್ಕಿಬಿಡುತ್ತವೆ. ಆ ಸ್ಪಷ್ಟತೆಗಳ ಆಧಾರದ ಮೇಲೆ ಈ ವರ್ಷ ಮಾಡಬೇಕಾದ್ದೇನು? ಮಾಡಬಾರದ್ದೇನು? ನೀ ಬದಲಾಗಬೇಕಾದ್ದು ಎಲ್ಲಿ? ಸ್ಥಿರತೆ ಕಾಪಾಡಿಕೊಳ್ಳಬೇಕಾದ್ದು ಎಲ್ಲಿ? ಎಂಬುವುಗಳ ಬಗ್ಗೆ ದಿಟ್ಟ ನಿರ್ಧಾರ ಹೊಂದಿ 2020ನೇ ವರ್ಷಕ್ಕೆ ಹೆಜ್ಜೆಯಿಡೋಣ. 2020 ಅನ್ನು ಅತ್ಯಂತ ಹರ್ಷದಿಂದ ಸ್ವಾಗತಿಸಿ, ಹೆಚ್ಚು ಸಾರ್ಥಕವಾಗಿ ಕಳೆಯೋಣ. ಹ್ಯಾಪಿ 2020 to All'' ಎಂದು ಟ್ವೀಟ್ ಮಾಡುವ ಮೂಲಕ ಶುಭಾಶಯದ ಜೊತೆಗೆ ಅರ್ಥಪೂರ್ಣ ಸಂದೇಶವನ್ನೂ ನೀಡಿದ್ದಾರೆ ಕಿಚ್ಚ ಸುದೀಪ್.
ಕಿಚ್ಚ ಸುದೀಪ್ ರವರ ಈ ಮಾತುಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೆ, ಕಿಚ್ಚ ಸುದೀಪ್ ಸದ್ಯ 'ಕೋಟಿಗೊಬ್ಬ-3' ಮತ್ತು 'ಬಿಗ್ ಬಾಸ್'ನಲ್ಲಿ ಬಿಜಿಯಿದ್ದಾರೆ. ಅದು ಮುಗಿಯುತ್ತಿದ್ದ ಹಾಗೆ ಸುದೀಪ್ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ.


Click it and Unblock the Notifications











