ನಂಬಿಕೆ ದ್ರೋಹ, ಆರ್ಥಿಕ ನಷ್ಟ, ಅನಾರೋಗ್ಯ, ಕಿಚ್ಚ ಸುದೀಪ್ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಜ್ಯೋತಿಷಿ, ಫ್ಯಾನ್ಸ್ ಗರಂ
ವೈಜ್ಞಾನಿಕ ಯುಗದಲ್ಲಿದ್ದರೂ ಕೂಡ ಜ್ಯೋತಿಷ್ಯದ ಮೇಲೆ ಹಲವರಿಗೆ ನಂಬಿಕೆ ಇದೆ. ಜ್ಯೋತಿಷ್ಯ ಹೇಳುವುದೆಲ್ಲಾ ಸತ್ಯನಾ? ಎಲ್ಲವನ್ನೂ ಕುಂಡಲಿಯಲ್ಲಿರುವ ಗ್ರಹಗಳೇನಿರ್ಧರಿಸುವುದಾದರೆ ವಿಜ್ಞಾನಿಗಳೇಕೆ ? ವಿಜ್ಞಾನವೇಕೆ ? ಎನ್ನುವ ಪ್ರಶ್ನೆ ಎದ್ದರೂ ಕೂಡ ಜ್ಯೋತಿಷ್ಯದ ಸುತ್ತ ಕುತೂಹಲ ಹೆಚ್ಚಾಗಿದೆ. ಜ್ಯೋತಿಷ್ಯಶಾಸ್ತ್ರವು ವಿಜ್ಞಾನವೇ. ಅದರಲ್ಲಿರುವ ವೈಜ್ಞಾನಿಕ ಅಂಶಗಳನ್ನು ಸಾಕಷ್ಟು ಗ್ರಂಥಗಳಲ್ಲಿ ನೋಡಬಹುದು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತದೆ.
ಈ ವಾದ-ವಿವಾದಗಳು ಏನೇ ಇರಲಿ ಆದರೆ ಸದ್ಯ ಕನ್ನಡ ಚಿತ್ರರಂಗದ ಹೆಮ್ಮೆಯ ಸ್ಟಾರ್ ಕಿಚ್ಚ ಸುದೀಪ್ ಅವರ ವಿಚಾರದಲ್ಲಿ, ಪ್ರಶಾಂತ್ ಕಿಣಿ ಜ್ಯೋತಿಷ್ಯವೊಂದನ್ನು ನುಡಿದಿದ್ದಾರೆ. ಸದ್ಯ ಇವರ ಈ ಜ್ಯೋತಿಷ್ಯ ಸುದೀಪ್ ಅವರ ಅಸಂಖ್ಯಾತ.. ಅಗಣಿತ.. ಅಭಿಮಾನಿಗಳನ್ನು ಕೆರಳಿಸಿದ್ದು ಪ್ರಶಾಂತ್ ಕಿಣಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಕುರಿತು ತಮ್ಮ ಟ್ವಿಟರ್ (ಎಕ್ಸ್)ನಲ್ಲಿ ಬರೆದುಕೊಂಡಿರುವ ಪ್ರಶಾಂತ್ ಕಿಣಿ, 2032ರವರೆಗೆ ಕನ್ನಡ ಚಲನಚಿತ್ರ ನಟ ಕಿಚ್ಚ ಸುದೀಪ್ ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಗುತ್ತೆ. ಇದಲ್ಲದೇ ಸೋಲು ಕೂಡ ಕಾಡಲಿದ್ದು, ಗಾಯಗಳಾಗಲಿವೆ, ಆರ್ಥಿಕ ನಷ್ಟ ಕೂಡ ಆಗಲಿದೆ ಎಂದು ಹೇಳಿದ್ದಾರೆ.
ಮುಂದುವರೆದು ನಂಬಿದವರಿಂದಲೇ ದ್ರೋಹವಾಗಲಿದ್ದು ಬೆನ್ನಿಗೆ ಚೂರಿ ಹಾಕಲಿದ್ದಾರೆ ಇದಲ್ಲದೇ ಇದರ ಜೊತೆ ಆರೋಗ್ಯ ಸಮಸ್ಯೆ ಕೂಡ ಕಾಡಲಿದೆ ಎಂದು ಕೂಡ ಹೇಳಿರುವ ಪ್ರಶಾಂತ್ ಕಿಣಿ ಏಪ್ರಿಲ್ 2028ರಿಂದ ಏಪ್ರಿಲ್ 2029ರವರೆಗೆ ಮತ್ತು ಏಪ್ರಿಲ್ 2030ರಿಂದ ಮೇ 2031ರವರೆಗೆ ತುಂಬಾ ಎಚ್ಚರಿಕೆಯಿಂದ ಇರಬೇಕು, ಜಾಗರೂಕರಾಗಿರಬೇಕು ಎಂದು ಕೂಡ ಹೇಳಿದ್ದಾರೆ.
ಪ್ರಶಾಂತ್ ಕಿಣಿ ಅವರ ಈ ಭವಿಷ್ಯ ಸಹಜವಾಗಿಯೇ ಸುದೀಪ್ ಅವರ ಅಭಿಮಾನಿಗಳನ್ನು ಕೆರಳಿಸಿದೆ. ಹೀಗಾಗಿಯೇ ಕೆರಳಿ ಕೆಂಡವಾಗಿರುವ ಸುದೀಪ್ ಸೈನ್ಯದ ಅನೇಕ ಸೈನಿಕರು ಸೋಶಿಯಲ್ ಮೀಡಿಯಾಗೆ ದಾಂಗುಡಿ ಇಟ್ಟಿದ್ದಾರೆ. ಪ್ರಶಾಂತ್ ಕಿಣಿ ಅವರ ವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಬದುಕಿನಲ್ಲಿ ನಾಳೆ ಏನಾಗಲಿದೆ ಎನ್ನುವುದು ನಿಮಗೆ ಗೊತ್ತಾ ? ಬಾಂಗ್ಲಾದೇಶದ ಮುಂದಿನ ಪ್ರಧಾನ ಮಂತ್ರಿ ಯಾರು ..? ಕಾಂತಾರ ಚಿತ್ರದ ಸೋಲು ಗೆಲುವಿನ ಬಗ್ಗೆ ಭವಿಷ್ಯ ಹೇಳಿ ನೋಡೋಣ..? ಎಂದೆಲ್ಲಾ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಪ್ರಶಾಂತ್ ಕಿಣಿ ಅವರ ಜ್ಯೋತಿಷ್ಯ ಶಾಸ್ತ್ರಕ್ಕೆ ಸವಾಲನ್ನು ಹಾಕುತ್ತಿದ್ದಾರೆ.
'ಎಕ್ಸ್' (ಟ್ವಿಟರ್)ನಲ್ಲಿ 76.763 ಫಾಲೋವರ್ಸ್‌ಗಳನ್ನೊಂದಿರುವ ಪ್ರಶಾಂತ್ ಕಿಣಿ ಈ ಹಿಂದೆ ಅಂದರೆ ಕಳೆದ ವರ್ಷ ದರ್ಶನ್ ಜೈಲಿನಲ್ಲಿದ್ದಾಗ ಕೂಡ ಭವಿಷ್ಯ ಹೇಳಿದ್ದರು. 2027ಕ್ಕೆ ದರ್ಶನ್ ರಾಜಕೀಯಕ್ಕೆ ಬರುವುದು ಖಚಿತ ಎಂದು ಹೇಳಿದ್ದರು. ರಾಜಕೀಯದಲ್ಲಿ ಅದ್ಭುತವಾದ ಯಶಸ್ಸು ದರ್ಶನ್ ಅವರಿಗೆ ಸಿಗಲಿದೆ ಎಂದು ಹೇಳಿದ್ದ ಪ್ರಶಾಂತ್ ಕಿಣಿ ತಮ್ಮ ಗತಕಾಲದ ದಿನಗಳನ್ನು ದರ್ಶನ್ ಮತ್ತೆ ನೋಡಲಿದ್ದಾರೆ ಎಂದಿದ್ದರು.
ರಾಜಕೀಯಕ್ಕೆ ಹೋದ ಮೇಲೆ ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡ್ತಾರೆ ಆದರೆ ಆ ಎಲ್ಲ ಸಿನಿಮಾಗಳು ಚೆನ್ನಾಗಿರುತ್ತವೆ ಎಂದು ಹೇಳಿದ್ದ ಪ್ರಶಾಂತ್ ಕಿಣಿ, ಇದೇ ಸಮಯದಲ್ಲಿ 2025ರ ಏಪ್ರಿಲ್ ಅಥವಾ ಮೇನಲ್ಲಿ ದರ್ಶನ್ ಜೈಲಿಂದ ಬಿಡುಗಡೆಯಾಗುತ್ತಾರೆ ಎಂದು ಕೂಡ ಹೇಳಿದ್ದರು. ಎಲ್ಲರಿಗೆ ಗೊತ್ತಿರುವಂತೆ ದರ್ಶನ್ ಕಳೆದ ವರ್ಷ ಡಿಸೆಂಬರ್‌ನಲ್ಲಿಯೇ ಜೈಲಿಂದ ಬಿಡುಗಡೆಯಾಗಿದ್ದರು. ಮೊನ್ನೆ ಮೊನ್ನೆವರೆಗೆ ತಮ್ಮ ಪತ್ನಿ ಮತ್ತು ಮಗನ ಜೊತೆ ನೆಮ್ಮದಿಯಿಂದ ಕೂಡ ಇದ್ದರು.
ಈ ಹಿನ್ನೆಲೆ ಸುದೀಪ್ ಅವರ ವಿಚಾರದಲ್ಲಿ ಪ್ರಶಾಂತ್ ಕಿಣಿ ಹೇಳಿರುವ ಈ ಭವಿಷ್ಯವನ್ನು ಹಲವರು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದಾರೆ. ಪ್ರಚಾರಕ್ಕೆ ತಮಗೆ ಅನಿಸಿದ್ದನ್ನೆಲ್ಲ ಹೇಳುತ್ತಿದ್ದಾರೆ, ಇವರ ಜ್ಯೋತಿಷ್ಯವನ್ನು ಗಂಭೀರವಾಗಿ ಪರಿಗಣಿಸಬೇಡಿ ಎನ್ನುವ ಅಭಿಪ್ರಾಯವನ್ನು ಕೂಡ ಹಲವರು ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











