'ಬಿಲ್ಲ ರಂಗ ಬಾಷ' ಕಥೆ ಏನಾಯ್ತು? ಕಿಚ್ಚ ಸುದೀಪ್ ಫ್ಯಾನ್ಸ್ ಬೇಸರ
ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಅಂದಾಜು 50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಬಳಿಕ ಸುದೀಪ್ ಅನೂಪ್ ಭಂಡಾರಿ ನಿರ್ದೇಶನದ 'ಬಿಲ್ಲ ರಂಗ ಬಾಷ' ಚಿತ್ರದಲ್ಲಿ ನಟಿಸಬೇಕಿದೆ.
ಸ್ಟಾರ್ ನಟರು ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಕೂಗು ಕೇಳಿಬರುತ್ತಲೇ ಇದೆ. 'ವಿಕ್ರಾಂತ್ ರೋಣ' ಸಿನಿಮಾ ಬಂದ ಎರಡೂವರೆ ವರ್ಷದ ಬಳಿಕ 'ಮ್ಯಾಕ್ಸ್' ಬಂದಿತ್ತು. ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದರು. ಒಟ್ಟಾರೆ ಒಳ್ಳೆ ಸಿನಿಮಾ ಬಂತು ಎಂದು ಖುಷಿಪಟ್ಟಿದ್ದರು. ಸಾಮಾನ್ಯವಾಗಿ ಒಂದು ಸಿನಿಮಾ ರಿಲೀಸ್ ಮುನ್ನ ಸ್ಟಾರ್ ನಟರು ಮತ್ತೊಂದು ಸಿನಿಮಾ ಚಿತ್ರೀಕರಣ ಆರಂಭಿಸುತ್ತಿದ್ದಾರೆ. ಆದರೆ 'ಮ್ಯಾಕ್ಸ್' ಬಂದು 3 ತಿಂಗಳು ಕಳೆದರೂ ಕಿಚ್ಚನ ಹೊಸ ಸಿನಿಮಾ ಸುಳಿವಿಲ್ಲ.

ಮುಂದಿನ ಒಂದೂವರೆ ವರ್ಷದಲ್ಲಿ ನನ್ನ 2 ಸಿನಿಮಾಗಳು ತೆರೆಗೆ ಬರುತ್ತದೆ ಎಂದು ಸುದೀಪ್ ಹೇಳಿದ್ದರು. ಆದರೆ 'ಬಿಲ್ಲ ರಂಗ ಬಾಷ' ಚಿಕ್ಕ ಸಿನಿಮಾ ಕಂಡಿತ ಅಲ್ಲ. ಬಹುಕೋಟಿ ವೆಚ್ಚದ ಅದ್ಧೂರಿ ಸಿನಿಮಾ. ಮೇಕಿಂಗ್, ಪೋಸ್ಟ್ ಪ್ರೊಡಕ್ಷನ್ ಅಂತ ಬಹಳ ಸಮಯ ಬೇಡುತ್ತದೆ. ಹಾಗಾಗಿ ಈಗ ಶುರುವಾದರೂ ಸಿನಿಮಾ ತೆರೆಗೆ ಬರಲು ಒಂದೂವರೆ ವರ್ಷ ಬೇಕಾಗಬಹುದು. ಆಗ ಕೂಡ ಬರುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಇದೇ ಕಾರಣಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಇತ್ತೀಚೆಗೆ ಸಿಸಿಎಲ್ ಕ್ರಿಕೆಟ್ ವೇಳೆ ಸುದೀಪ್ ಟ್ವೀಟ್ ಮಾಡಿ ಮಾರ್ಚ್ 2ನೇ ವಾರ 'ಬಿಲ್ಲ ರಂಗ ಬಾಷ' ಸಿನಿಮಾ ಶುರುವಾಗುತ್ತದೆ ಎಂದಿದ್ದರು. ಆದರೆ ಮಾರ್ಚ್ ಮುಗಿದು ಏಪ್ರಿಲ್ ಹತ್ತಿರವಾಗುತ್ತಿದ್ದರೂ ಆ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಈ ಬಗ್ಗೆ ಚಿತ್ರತಂಡ ಕೂಡ ಪ್ರತಿಕ್ರಿಯಿಸುತ್ತಿಲ್ಲ. ಗಾಂಧಿನಗರ ಮೂಲಗಳ ಪ್ರಕಾರ ಏಪ್ರಿಲ್‌ನಲ್ಲಿ ಸಿನಿಮಾ ಸೆಟ್ಟೇರಬಹುದು ಎನ್ನಲಾಗ್ತಿದೆ. ಆ ಬಗ್ಗೆ ಕೂಡ ಖಚಿತತೆ ಇಲ್ಲ.
ಸದ್ಯ ಸುದೀಪ್ ಸಿನಿಮಾ ಸ್ಕ್ರಿಪ್ಟ್‌ಗಳನ್ನು ಕೇಳುವುದರಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ 2 ಕಥೆಗಳನ್ನು ಫೈನಲ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಅದರಲ್ಲಿ 'ಮ್ಯಾಕ್ಸ್' ಸೀಕ್ವೆಲ್ ಕೂಡ ಇದೆಯಂತೆ. ಮೊದಲ ಪ್ರಯತ್ನದಲ್ಲೇ ವಿಜಯ್ ಕಾರ್ತಿಕೇಯನ್ ಸಕ್ಸಸ್ ಕಂಡಿದ್ದರು. ಮಾಸ್ 'ಮ್ಯಾಕ್ಸ್' ಮನರಂಜನೆ ಉಣಬಡಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಅಭಿಮಾನಿಗಳು ಕೂಡ ಚಿತ್ರದ ಸೀಕ್ವೆಲ್ ಅಥವಾ ಪ್ರೀಕ್ವೆಲ್ ನೋಡಲು ಉತ್ಸುಕರಾಗಿದ್ದಾರೆ. ಸುದೀಪ್ ತೆಲುಗು ನಿರ್ದೇಶಕರಿಂದಲೂ ಕಥೆಗಳನ್ನು ಕೇಳುತ್ತಿದ್ದಾರಂತೆ.
'ವಿಕ್ರಾಂತ್ ರೋಣ' ಬಳಿಕ ಸುದೀಪ್ ಸತತ ಒಂದು ವರ್ಷ ಕಾಲ ವಿಶ್ರಾಂತಿ ಪಡೆದಿದ್ದರು. ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಆ ಬಳಿಕವೇ 'ಮ್ಯಾಕ್ಸ್' ಆಗಿ ಅಖಾಡಕ್ಕೆ ಇಳಿದಿದ್ದರು. 'ಬಿಗ್‌ಬಾಸ್' ಶೋ ನಿರೂಪಣೆ ನಡುನಡುವೆ ಸಿನಿಮಾ ಚಿತ್ರೀಕರಣ ಮಾಡಿದ್ದರು. ಇದೀಗ ಬಿಗ್‌ಬಾಸ್ ನಿರೂಪಣೆಗೂ ಗುಡ್‌ಬೈ ಹೇಳಿ ಸಂಪೂರ್ಣವಾಗಿ ಸಿನಿಮಾಗಳ ಕಡೆ ಮುಖ ಮಾಡಿದ್ದಾರೆ. ಆದರೂ ಹೊಸ ಸಿನಿಮಾ ತಡವಾಗುತ್ತಿದೆ ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡದಲ್ಲಿ ದೊಡ್ಡ ಸಿನಿಮಾಗಳಿಲ್ಲದೇ ಥಿಯೇಟರ್ ಬಾಗಿಲು ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ಸಿನಿಮಾ ತಡ ಮಾಡುವುದು ಯಾಕೆ? ಎಂದು ಸಿನಿರಸಿಕರು ಪ್ರಶ್ನಿಸುತ್ತಿದ್ದಾರೆ. ಈ ವರ್ಷ ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ ನಟನೆಯ '45', ರಿಷಬ್ ಶೆಟ್ಟಿ 'ಕಾಂತಾರ'-1 ಹಾಗೂ 'ಟಾಕ್ಸಿಕ್' ಚಿತ್ರಗಳು ಹೆಚ್ಚು ನಿರೀಕ್ಷೆ ಮೂಡಿಸಿವೆ. 'ಟಾಕ್ಸಿಕ್' ಇದೇ ವರ್ಷ ಬರುವ ಬಗ್ಗೆ ಯಾವುದೇ ಗ್ಯಾರೆಂಟಿ ಇಲ್ಲ.
ದೊಡ್ಡ ಸಿನಿಮಾಗಳನ್ನು ಬಿಟ್ಟರೆ ಬೇರೆ ಸಿನಿಮಾಗಳು ಅಷ್ಟಾಗಿ ಪ್ರೇಕ್ಷಕರನ್ನು ಸೆಳೆಯುತ್ತಿಲ್ಲ. ವಾರಕ್ಕೆ ಏಳೆಂಟು ಸಿನಿಮಾಗಳು ಬಂದರೂ ಜನ ಮಾತ್ರ ಚಿತ್ರಮಂದಿರಗಳ ಕಡೆ ಬರ್ತಿಲ್ಲ. ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಈ ವರ್ಷ ಬರುತ್ತಾ ಕಾದು ನೋಡಬೇಕಿದೆ. ಶ್ರೀಮುರಳಿ, ರಕ್ಷಿತ್ ಶೆಟ್ಟಿ ಹೊಸ ಸಿನಿಮಾಗಳನ್ನು ಶುರು ಮಾಡಲೇ ಇಲ್ಲ. ಕಳೆದ ವರ್ಷ ಗಣೇಶ್, ದುನಿಯಾ ವಿಜಯ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ಅವರ ಮುಂದಿನ ಸಿನಿಮಾಗಳು ಯಾವಾಗ ಬರುತ್ತದೆ ಎಂದು ಕಾದು ನೋಡಬೇಕಿದೆ.
ಕೆಲ ದಿನಗಳ ಹಿಂದೆ 'ಬಿಲ್ಲ ರಂಗ ಬಾಷ' ಚಿತ್ರದ ಸಣ್ಣ ಝಲಕ್ ತೋರಿಸಿ ಚಿತ್ರತಂಡ ಕುತೂಹಲ ಮೂಡಿಸಿತ್ತು. ತೆಲುಗಿನಲ್ಲಿ 'ಹನುಮಾನ್' ರೀತಿ ಬ್ಲಾಕ್‌ಬಸ್ಟರ್ ಸಿನಿಮಾ ನಿರ್ಮಿಸಿದ ನಿರಂಜನ್ ರೆಡ್ಡಿ, ಚೈತನ್ಯ ರೆಡ್ಡಿ ಈ ಚಿತ್ರಕ್ಕೆ ಹಣ ಹೂಡಲಿದ್ದಾರೆ. ಈ ಬಗ್ಗೆ ಮಾಹಿತಿ ಲಭ್ಯವಾಗಿತ್ತು. Once Upon A Time in 2209 AD ಎಂದು ಚಿತ್ರದಲ್ಲಿ ಭವಿಷ್ಯದ ಕಥೆ ಹೇಳುವ ಬಗ್ಗೆ ಅನೂಪ್ ಸುಳಿವು ಕೊಟ್ಟಿದ್ದಾರೆ.
'ಬಿಲ್ಲ ರಂಗ ಬಾಷ' ಒಂದು ಕಾಲ್ಪನಿಕ ಕಥೆಯಾಗಿದ್ದು ಅದಕ್ಕಾಗಿ ಹೊಸ ಪ್ರಪಂಚವನ್ನೇ ಕಟ್ಟಿಕೊಡಲು ತಂಡ ಮುಂದಾಗಿದೆ. ಇನ್ನು ಕಿಚ್ಚನನ್ನು ಕೂಡ ಬಹಳ ವಿಭಿನ್ನವಾಗಿ ತೋರಿಸಲು ಅನೂಪ್ ಭಂಡಾರಿ ಮನಸ್ಸು ಮಾಡಿದ್ದಾರೆ. ಕೆಲ ದಿನಗಳಿಂದ ಅದಕ್ಕಾಗಿ ಹಗಳಿರುಳು ಶ್ರಮಿಸುತ್ತಿದ್ದಾರೆ. ಇದೆಲ್ಲದರ ನಡುವೆ ಇಬ್ಬರೂ ಸಿಸಿಎಲ್ -11 ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿ ಆಡಿದ್ದರು. ಬಳಿಕ ಮತ್ತೆ ಸಿನಿಮಾ ಕೆಲಸ ಆರಂಭಿಸಿದ್ದಾರೆ.

ಐಫೆಲ್ ಟವರ್, ಲಿಬರ್ಟಿ ಪ್ರತಿಮೆ ಮತ್ತು ತಾಜ್ ಮಹಲ್ ಅನ್ನು 'ಬಿಲ್ಲ ರಂಗ ಬಾಷ' ಫಸ್ಟ್ ಗ್ಲಿಂಪ್ಸ್‌ನಲ್ಲಿ ತೋರಿಸಲಾಗಿತ್ತು. ಇದೆಲ್ಲದರ ಸುತ್ತಾ ಯಾವ ತರಹದ ಕಥೆಯನ್ನು ಹೇಳಲು ಮುಂದಾಗಿದ್ದಾರೆ ಎಂದು ಕಾದು ನೋಡಬೇಕಿದೆ. ಪ್ರೈಂಶೋ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದು ಬಜೆಟ್ 200 ಕೋಟಿ ರೂ. ದಾಟುತ್ತದೆ ಎಂದು ಹೇಳಲಾಗ್ತಿದೆ. ಚಿತ್ರದಲ್ಲಿ ಸುದೀಪ್ ಪಾತ್ರವನ್ನು ಕೂಡ ಬಹಳ ವಿಭಿನ್ನವಾಗಿ ಅನೂಪ್ ಡಿಸೈನ್ ಮಾಡುತ್ತಿದ್ದಾರೆ.
'ಮ್ಯಾಕ್ಸ್' ಸುದೀಪ್ ನಟಿಸಿದ 46ನೇ ಸಿನಿಮಾ. ತಮಿಳಿನ ಚೇರನ್ ನಿರ್ದೇಶನದ ಚಿತ್ರದಲ್ಲಿ ಸುದೀಪ್ ನಟಿಸಿಬೇಕಿದೆ. ಈ ಚಿತ್ರಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿ ಎನ್ನಲಾಗಿತ್ತು. ಆದರೆ ಸದ್ಯ ಈ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. 'ಬಿಲ್ಲ ರಂಗ ಬಾಷ' ಹಾಗೂ 'ಮ್ಯಾಕ್ಸ್'-2 ನಡುವೆ ಕಿಚ್ಚ47 ಸಿನಿಮಾ ನಿಂತೇ ಹೋಯ್ತಾ? ಎನ್ನುವ ಅನುಮಾನ ಮೂಡಿದೆ.
ಕೆಆರ್‌ಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಸುದೀಪ್ ಒಂದು ಚಿತ್ರವನ್ನು ನಿರ್ದೇಶಿಸಿ ನಟಿಸಲು ಮನಸ್ಸು ಮಾಡಿದ್ದಾರೆ. ಈ ಬಗ್ಗೆ ಚರ್ಚೆ ಕೂಡ ನಡೆದಿದೆ. 'ಮಾಣಿಕ್ಯ' ಬಳಿಕ ಕಿಚ್ಚ ಯಾವುದೇ ಚಿತ್ರ ನಿರ್ದೇಶನ ಮಾಡಿಲ್ಲ. ಹಾಗಾಗಿ ಬರೋಬ್ಬರಿ 10 ವರ್ಷಗಳ ಬಳಿಕ ಬಾದ್‌ಷಾ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಂತೆ ಆಗಲಿದೆ.
ಆರ್. ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದಲ್ಲಿ ಸುದೀಪ್ ಭಾರ್ಗವ್ ಭಕ್ಷಿ ಆಗಿ ಅಬ್ಬರಿಸಿದ್ದರು. ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿವೆ ಎನ್ನುವ ಊಹಾಪೋಹ ಇತ್ತು. ಅಷ್ಟರಲ್ಲಿ ಕಿಚ್ಚನ ಕಾಂಬಿನೇಷನ್‌ನಲ್ಲಿ ಆರ್. ಚಂದ್ರು ಮತ್ತೊಂದು ಸಿನಿಮಾ ಘೋಷಿಸಿದ್ದರು. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಆ ಚಿತ್ರದ ಕಥೆಗೆ ಕೈ ಜೋಡಿಸಿರುವುದಾಗಿ ಹೇಳಲಾಗಿತ್ತು.
ಕಿಚ್ಚನ 50ನೇ ಸಿನಿಮಾ ಯಾರು ನಿರ್ದೇಶನ ಮಾಡುತ್ತಾರೆ ಎನ್ನುವ ಕುತೂಹಲ ಕೂಡ ಇದೆ. ಆದರೆ ಅದಕ್ಕಿಂತ ಮುಂದೆ ಈ ಎಲ್ಲಾ ಸಿನಿಮಾಗಳು ಮುಗಿಯಬೇಕಿದೆ. ಮೊದಲಿಗೆ 'ಬಿಲ್ಲ ರಂಗ ಬಾಷ' ಸಿನಿಮಾ ಶುರುವಾಗಬೇಕಿದೆ.


Click it and Unblock the Notifications











