Exclusive: ತಮಿಳು ನಿರ್ಮಾಪಕ.. ಹೊಸ ನಿರ್ದೇಶಕ.. ಚೆನ್ನೈನಲ್ಲೇ ಶೂಟಿಂಗ್.. ಕಿಚ್ಚ46 ತಮಿಳಾ, ಕನ್ನಡನಾ?
ಅಭಿನಯ ಚಕ್ರವರ್ತಿ ಸುದೀಪ್ ನಟನೆಯ 46ನೇ ಸಿನಿಮಾ ಅಪ್‌ಡೇಟ್ ಈಗಾಗಲೇ ಸಿಕ್ಕಿದೆ. 'ವಿಕ್ರಾಂತ್ ರೋಣ' ನಂತರ ಸುದೀಪ್ ತಮಿಳಿನ ವಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಕಲೈಪುಲಿ ಎಸ್ ತನು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಚಿತ್ರದ ನಿರ್ದೇಶಕರು ಯಾರು? ಸಿನಿಮಾ ಶೂಟಿಂಗ್ ಯಾವಾಗ ಎನ್ನುವ ಮಾಹಿತಿ ಸಿಕ್ಕಿದೆ. ಜೊತೆ ಒಂದು ಅನುಮಾನ ಕೂಡ ಹುಟ್ಟುಹಾಕಿದೆ.
ಕಿಚ್ಚ46 ಚಿತ್ರದ ಟೀಸರ್ ಮೇಕಿಂಗ್ ಝಲಕ್ ಜೊತೆಗೆ ಸುದೀಪ್ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದರು. ಕಳೆದೊಂದು ವರ್ಷದಿಂದ ಸುದೀಪ್ ಹೊಸ ಸಿನಿಮಾ ಘೋಷಣೆ ಮಾಡಿರಲಿಲ್ಲ. ಇದೀಗ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಟೀಸರ್ ಶೂಟಿಂಗ್ ಕೂಡ ಮುಗಿದಿದೆ. ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್ ತನು ಸಾರಥ್ಯ ವಹಿಸಿಕೊಂಡಿದ್ದಾರೆ. ಕಾಲಿವುಡ್ ನಿರ್ದೇಶಕನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾರೆ ಎನ್ನಲಾಗ್ತಿದೆ. ಈ ಸುದ್ದಿ ಈಗ ವೈರಲ್ ಆಗ್ತಿದೆ.

ಸುದೀಪ್ ಹೆಚ್ಚು ಕಡಿಮೆ ಒಂದು ವರ್ಷ ವಿರಾಮ ಪಡೆದಿದ್ದರು. ಈ ಗ್ಯಾಪ್‌ನಲ್ಲಿ 3 ಕತೆಗಳನ್ನು ಕೇಳಿ ಫೈನಲ್ ಮಾಡಿದ್ದಾರೆ. ಅದರಲ್ಲಿ ಒಂದು ಚಿತ್ರಕ್ಕೆ ಶೀಘ್ರದಲ್ಲೇ ಚಾಲನೆ ಸಿಗಲಿದೆ. ಟೀಸರ್ ಸಮೇತ ಇನ್ನುಳಿದ ಮಾಹಿತಿ ನೀಡಲು ಚಿತ್ರತಂಡ ಕಾಯುತ್ತಿದೆ. ಸ್ವತಃ ಸುದೀಪ್ ಕೂಡ ಕಿಚ್ಚ46 ಟೀಸರ್ ನೋಡಲು ಉತ್ಸುಕರಾಗಿರುವುದಾಗಿ ಟ್ವೀಟ್ ಮಾಡಿದ್ದಾರೆ. ಕಳೆದೆರಡು ದಿನಗಳಿಂದ ಕಿಚ್ಚ46 ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ.
ತಮಿಳು ನಿರ್ದೇಶಕ ಆಕ್ಷನ್ ಕಟ್
ಸುದೀಪ್ ಮುಂದಿನ ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ತಿದೆ. ತಮಿಳು ಯುವ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾರೆ ಎನ್ನಲಾಗ್ತಿದೆ. ಇದು ನಿರ್ದೇಶಕನ ಚೊಚ್ಚಲ ಸಿನಿಮಾ ಅಂತೆ. ಸುದೀಪ್ ಅವರಿಗೆ ಕಥೆ ಹೇಳಿ ಒಪ್ಪಿಸಿರುವ ವಿಜಯ್ ಕಾರ್ತಿಕೇಯನ್ ಟೀಸರ್ ಶೂಟ್ ಮಾಡಿ ಮುಗಿಸಿದ್ದಾರೆ.

ಚೆನ್ನೈನಲ್ಲೇ ಶೂಟಿಂಗ್
ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನದಲ್ಲಿ ಒಂದು ಭಾಷೆಯಲ್ಲಿ ನಿರ್ಮಾಣವಾಗುವ ಸಿನಿಮಾ ಬೇರೆ ಬೇರೆ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕಿಚ್ಚ46 ಚಿತ್ರಕ್ಕೆ ತಮಿಳು ನಿರ್ದೇಶಕ, ತಮಿಳು ನಿರ್ಮಾಪಕ ಜೊತೆಯಾಗಿದ್ದಾರೆ. ಚಿತ್ರದ ಬಹುತೇಕ ಕೆಲಸಗಳು ಚೆನ್ನೈನಲ್ಲೇ ನಡೆಯಲಿದೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಲಿದೆ. ತೆಲುಗು, ಹಿಂದಿ, ಮಲಯಾಳಂ ಭಾಷೆಗಳಿಗೂ ಡಬ್ ಆಗುವ ಸಾಧ್ಯತೆಯಿದೆ.
ಮುಂದಿನ ತಿಂಗಳು ಶೂಟಿಂಗ್
ಒಂದು ವಾರಗಳ ಕಾಲ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಜೊತೆ ಸುದೀಪ್ ಸಿನಿಮಾ ಕಥೆ ಬಗ್ಗೆ ಚರ್ಚಿಸಿದ್ದರಂತೆ. ಕೊನೆಗೂ ಕಥೆ ಇಷ್ಟವಾಗಿ ಸುದೀಪ್ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸುದೀಪ್ ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸ್ತಾರೆ ಎನ್ನಲಾಗ್ತಿದೆ. ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾ ಎನ್ನಲಾಗ್ತಿದ್ದು ಒಂದು ರಾತ್ರಿಯಲ್ಲಿ ನಡೆಯುವ ಕಥೆ ಎನ್ನಲಾಗ್ತಿದೆ.

ಜೂನ್ 1ಕ್ಕೆ ಟೀಸರ್ ರಿಲೀಸ್
ವಿಜಯ್ ಕಾರ್ತಿಕೇಯನ್ ಒಂದಷ್ಟು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸದ್ಯ ಕಿಚ್ಚ46 ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಜೂನ್ 1ಕ್ಕೆ ಟೀಸರ್ ರಿಲೀಸ್ ಮಾಡಿ ಸಿನಿಮಾ ಮುಹೂರ್ತ ಮಾಡುವ ಸಾಧ್ಯತೆಯಿದೆ. ಜೊತೆಗೆ ಚಿತ್ರೀಕರಣ ಕೂಡ ಶುರುವಾಗಲಿದೆ. ಮುಂದಿನ ವರ್ಷ ಸಮ್ಮರ್ ವೇಳೆಗೆ ಕಿಚ್ಚ ತೆರೆಮೇಲೆ ಅಬ್ಬರಿಸೋ ಸಾಧ್ಯತೆಯಿದೆ.


Click it and Unblock the Notifications











