Kiccha47: ಸ್ಪೆಷಲ್ ಪೋಸ್ಟರ್ ಬಿಟ್ಟು ಕುತೂಹಲ ಕೆರಳಿಸಿದ ಅಭಿನಯ ಚಕ್ರವರ್ತಿ
ಬಾದ್‌ಶಾ ಕಿಚ್ಚ ಸುದೀಪ್ ಸದ್ಯ 'ಮ್ಯಾಕ್ಸ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಮಹಾಬಲಿಪುರಂನಲ್ಲಿ ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ನಡೀತಿದೆ. ಈಗಾಗಲೇ 70% ಭಾಗದ ಶೂಟಿಂಗ್ ಕಂಪ್ಲೀಟ್ ಆಗಿದೆ. ಇದರ ಬೆನ್ನಲ್ಲೇ ಸುದೀಪ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಅಪ್‌ಡೇಟ್ ಕೊಡೋಕೆ ಮುಂದಾಗಿದ್ದಾರೆ.
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಕಿಚ್ಚ47 ಸಿನಿಮಾ ಅಪ್‌ಡೇಟ್ ಸಿಗುವ ಸೂಚನೆ ಸಿಕ್ಕಿದೆ. ಸಣ್ಣ ಟೀಸರ್ ಜೊತೆ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಮಾಡುವ ಸಾಧ್ಯತೆಯಿದೆ. ಇದೇ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ. ಇನ್ನು ಪೋಸ್ಟರ್ ನೋಡಿದವರು ಇದು ಐತಿಹಾಸಿಕ ಸಿನಿಮಾನಾ? ಎಂದು ಹುಬ್ಬೇರಿಸಿದ್ದಾರೆ. ಅಂದಹಾಗೆ ಕಿಚ್ಚ47 ಚಿತ್ರವನ್ನು ತಮಿಳಿನ ಚೇರನ್ ನಿರ್ದೇಶನ ಮಾಡಲಿದ್ದಾರೆ.

ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಕಿಚ್ಚನಿಗೆ 'KGF' ಬೆಡಗಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚೇರನ್ ನಿರ್ದೇಶಿಸಿ ನಟಿಸಿದ್ದ 'ಆಟೋಗ್ರಾಫ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಆಗ ಸೋಲಿನ ಸುಳಿಗೆ ಸಿಲುಕಿದ್ದ ಕಿಚ್ಚ ಇದೇ ಚಿತ್ರವನ್ನು ಕನ್ನಡದಲ್ಲಿ ರೀಮೆಕ್ ಮಾಡಿ ಸಕ್ಸಸ್ ಕಂಡಿದ್ದರು. ಇದೀಗ ಚೇರನ್ ನಿರ್ದೇಶನದಲ್ಲೇ ಸುದೀಪ್ ನಟಿಸುತ್ತಿರುವುದು ಕುತೂಹಲ ಮೂಡಿಸಿದೆ. ಮುಂದಿನ ವರ್ಷಾರಂಭದಲ್ಲೇ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ.
'ವಿಕ್ರಾಂತ್ ರೋಣ' ಬಳಿಕ ಒಂದು ವರ್ಷ ಯಾವುದೇ ಸಿನಿಮಾ ಸುದೀಪ್ ಒಪ್ಪಿಕೊಂಡಿರಲಿಲ್ಲ. ಆದರೆ ಕತೆಗಳನ್ನು ಕೇಳುತ್ತಲೇ ಇದ್ದರು. ಆ ಗ್ಯಾಪ್‌ನಲ್ಲಿ 3 ಕತೆಗಳನ್ನು ಫೈನಲ್ ಮಾಡಿದ್ದರು. ಒಂದು ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮ್ಯಾಕ್ಸ್'. ಮತ್ತೊಂದು ಚೇರನ್ ನಿರ್ದೇಶನದ ಸಿನಿಮಾ. ಇನ್ನು ಆರ್. ಚಂದ್ರು ಕಾಂಬಿನೇಷನ್ ಚಿತ್ರದಲ್ಲೂ ಸುದೀಪ್ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಜೊತೆಗೆ ತಮ್ಮದೇ ನಿರ್ದೇಶನದಲ್ಲಿ KRG ಸ್ಟುಡಿಯೋ ಸಂಸ್ಥೆಗೆ ಒಂದು ಸಿನಿಮಾ ಮಾಡಿ ಕೊಡಲಿದ್ದಾರೆ. ಒಟ್ನಲ್ಲಿ ಒಂದು ವರ್ಷ ಬಿಡುವು ಮಾಡಿಕೊಂಡಿದ್ದ ಸುದೀಪ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಮಾರ್ಚ್ ವೇಳೆಗೆ 'ಮ್ಯಾಕ್ಸ್' ಸಿನಿಮಾ ತೆರೆಗೆ ಬರುತ್ತದೆ ಎನ್ನಲಾಗ್ತಿದೆ. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಕಲೈಪುಲಿ ಎಸ್. ತನು ಜೊತೆಗೆ ತಮ್ಮದೇ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸುದೀಪ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್, ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ವರಲಕ್ಷ್ಮೀ ಶರತ್ ಕುಮಾರ್ ಚಿತ್ರದ ತಾರಾಗಣದಲ್ಲಿದ್ದಾರೆ. ತೆಲುಗು ಹಾಸ್ಯ ನಟ ಸುನಿಲ್ 'ಮ್ಯಾಕ್ಸ್' ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಹಾಸ್ಯ ನಟನಾಗಿಯೇ ಗುರ್ತಿಸಿಕೊಂಡಿದ್ದ ಸುನಿಲ್, 'ಪುಷ್ಪ' ಚಿತ್ರದಲ್ಲಿ ಮಂಗಳಂ ಸೀನು ಎನ್ನುವ ನೆಗೆಟಿವ್ ರೋಲ್‌ನಲ್ಲಿ ಅಬ್ಬರಿಸಿದ್ದರು. ಇದೀಗ ಕಿಚ್ಚನ ಜೊತೆಗೆ ನಟಿಸುತ್ತಿದ್ದಾರೆ.
ಇನ್ನು 'ವಿಕ್ರಾಂತ್ ರೋಣ' ನಂತರ ಅನೂಪ್ ಭಂಡಾರಿ ಕೂಡ ಕಿಚ್ಚನಿಗಾಗಿ ಒಂದು ಕತೆ ಸಿದ್ಧಪಡಿಸುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಈ ಹಿಂದೆ 'ಬಿಲ್ಲ ರಂಗ ಬಾಷ', 'ಅಶ್ವತ್ಥಾಮ' ಸಿನಿಮಾಗಳು ಘೋಷಣೆ ಆಗಿತ್ತು. ಆದರೆ ಯಾವುದು ಸೆಟ್ಟೇರಲಿಲ್ಲ. ಮುಂದೆ ಈ ಜೋಡಿಯಾಗಿ ಯಾವ ಚಿತ್ರಕ್ಕೆ ಮತ್ತೆ ಕೈ ಜೋಡಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಒಟ್ನಲ್ಲಿ ಸುದೀಪ್ ಮುಂದಿನ ಸಿನಿಮಾ ಲೈನಪ್ ಬಹಳ ಕುತೂಹಲ ಮೂಡಿಸುತ್ತಿದೆ. ಇನ್ನು ಮುಂದೆ ಬೇಗ ಬೇಗ ಸಿನಿಮಾಗಳು ತೆರೆಗೆ ಬರುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.


Click it and Unblock the Notifications











