ಕಾಟೇರ ಅಲ್ಲ, ಸುದೀಪ್ 46ನೇ ಚಿತ್ರದ ಗ್ಲಿಂಪ್ಸ್ ನಂಬರ್ 1 ಆಗಲು ಯುವ ಚಿತ್ರವನ್ನು ಹಿಂದಿಕ್ಕಬೇಕು!
ಸಿನಿಮಾ ಕ್ಷೇತ್ರವೆಂದಮೇಲೆ ಪೈಪೋಟಿ ಕಾಮನ್. ಈ ರೀತಿ ಪೈಪೋಟಿ ಇದ್ದ ಮೇಲೆ ಅಲ್ಲಿ ಫ್ಯಾನ್ ವಾರ್ ಹುಟ್ಟಿಕೊಳ್ಳುವುದು ಸಹಜ. ಇನ್ನು ಈ ಫ್ಯಾನ್ ವಾರ್ ಹಿಂದಿಗಿಂತ ಈಗಿನ ಆನ್‌ಲೈನ್ ಯುಗದಲ್ಲಿ ತುಸು ಹೆಚ್ಚೇ ಎಂದು ಹೇಳಬಹುದು.
ತಮ್ಮ ನೆಚ್ಚಿನ ನಟನ ಚಿತ್ರವೊಂದರ ಏನೇ ಅಪ್‌ಡೇಟ್ ಬಂದರೂ ಆ ವಿಚಾರ ದಾಖಲೆ ಬರೆಯಬೇಕು ಎಂಬುದು ಆ ನಟನ ಪ್ರತಿಯೊಬ್ಬ ಅಭಿಮಾನಿಯ ಕನಸೂ ಸಹ ಆಗಿರುತ್ತದೆ. ಈ ಕಾರಣದಿಂದಾಗಿ ಬೇರೆ ನಟರ ಹಳೆಯ ಚಿತ್ರಗಳು ಮಾಡಿದ್ದ ದಾಖಲೆಗಳು ಮುರಿದು ಹೋದಾಗ ಅದನ್ನು ಟ್ರೋಲ್ ಮಾಡಿ ಸಂಭ್ರಮಿಸಲಾಗುತ್ತದೆ. ನಟರಿಬ್ಬರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡಲು ಇದಕ್ಕಿಂತ ಇನ್ನೇನು ಬೇಕು.

ಈಗ ಅದೇ ರೀತಿ ಮುಂಬರುವ ಚಿತ್ರಗಳ ವಿಚಾರವಾಗಿ ಸ್ಯಾಂಡಲ್‌ವುಡ್ ನಟರ ಅಭಿಮಾನಿಗಳಲ್ಲಿ ಫ್ಯಾನ್ ವಾರ್ ನಿರ್ಮಾಣವಾಗಿದೆ. ಹೌದು, ಮುಂದಿನ ದಿನಗಳಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳ ಪೈಕಿ ಯಾವ ಚಿತ್ರದ ಫಸ್ಟ್ ಲುಕ್ ವಿಡಿಯೊ, ಯಾವ ಚಿತ್ರದ ಟೈಟಲ್ ಘೋಷಣೆಯ ವಿಡಿಯೊ ಯುಟ್ಯೂಬ್‌ನಲ್ಲಿ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಳ್ಳಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.
ಅದರಲ್ಲಿಯೂ ಸಾಮಾಜಿಕ ಜಾಲತಾಣದಲ್ಲಿ ಯುವ ರಾಜ್‌ಕುಮಾರ್ ನಟನೆಯ ಯುವ ಚಿತ್ರ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಹಾಗೂ ಸಂಚಿತ್ ಸಂಜೀವ್ ನಟಿಸಲಿರುವ ಜಿಮ್ಮಿ ಚಿತ್ರಗಳನ್ನು ಹೋಲಿಸಿ ಮಾತನಾಡಲು ಸಿನಿ ರಸಿಕರು ಆರಂಭಿಸಿದ್ದಾರೆ. ಯುವ ಚಿತ್ರ ಯುವ ರಾಜ್‌ಕುಮಾರ್ ನಟನೆಯ ಮೊದಲ ಸಿನಿಮಾವಾಗಿದ್ದರೂ ಸಹ ಕನ್ನಡ ಚಿತ್ರರಂಗದ ದೊಡ್ಡ ನಟರ ಚಿತ್ರಗಳಿಗೆ ಯಾವ ರೀತಿಯ ಕ್ರೇಜ್ ಇರುತ್ತೋ ಅಂತಹ ಕ್ರೇಜ್ ಅನ್ನು ಹುಟ್ಟುಹಾಕಿದೆ. ಹೀಗಾಗಿಯೇ ಯುವ ಚಿತ್ರದ ಟೈಟಲ್ ಘೋಷಣೆಯ ವಿಡಿಯೊ ಯುಟ್ಯೂಬ್‌ನಲ್ಲಿ ದಾಖಲೆಯ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಅತ್ತ ಇತ್ತೀಚೆಗಷ್ಟೇ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ನಟನೆಯ ಜಿಮ್ಮಿ ಚಿತ್ರದ ಕ್ಯಾರೆಕ್ಟರ್ ಗ್ಲಿಂಪ್ಸ್ ಸಹ ಬಿಡುಗಡೆಗೊಂಡಿದ್ದು, ಈ ವಿಡಿಯೊ ಸಹ ಯುಟ್ಯೂಬ್‌ನಲ್ಲಿ ಒಳ್ಳೆಯ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇನ್ನು ಜುಲೈ 2ರಂದು ಕಿಚ್ಚ ಸುದೀಪ್ ನಟಿಸಲಿರುವ ಮುಂದಿನ ಚಿತ್ರದ ಗ್ಲಿಂಪ್ಸ್ ಸಹ ಬಿಡುಗಡೆಗೊಳ್ಳಲಿದ್ದು, ಈಗ ಎಲ್ಲರ ಕಣ್ಣು ಈ ಚಿತ್ರದ ಗ್ಲಿಂಪ್ಸ್ ವಿಡಿಯೊ ಮೇಲಿದೆ.
ಹೌದು, ಕಿಚ್ಚ 46 ಚಿತ್ರದ ಈ ಗ್ಲಿಂಪ್ಸ್ ವಿಡಿಯೊ ಎಷ್ಟು ವೀಕ್ಷಣೆಗಳನ್ನು ಪಡೆದುಕೊಳ್ಳಬಹುದು ಎಂಬ ಲೆಕ್ಕಾಚಾರಗಳು ಶುರುವಾಗಿದ್ದು, ಸುದೀಪ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಚಿತ್ರದ ಗ್ಲಿಂಪ್ಸ್ ವಿಡಿಯೊ ದರ್ಶನ್ ಕಾಟೇರ ಚಿತ್ರದ ಟೈಟಲ್ ಘೋಷಣೆಯ ವಿಡಿಯೊಗಿಂತ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ನೆಟ್ಟಿಗರು ಕಿಚ್ಚ 46 ಚಿತ್ರದ ಗ್ಲಿಂಪ್ಸ್ ಈ ವರ್ಷ ಅತಿಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡ ಗ್ಲಿಂಪ್ಸ್ ಆಗಬೇಕೆಂದರೆ ಇದು ಕಡ್ಡಾಯವಾಗಿ ಸಂಚಿತ್ ಸಂಜೀವ್ ನಟನೆಯ ಜಿಮ್ಮಿ ಹಾಗೂ ಯುವ ರಾಜ್‌ಕುಮಾರ್ ನಟನೆಯ ಯುವ ಚಿತ್ರಗಳ ಗ್ಲಿಂಪ್ಸ್ ಹಾಗೂ ಟೈಟಲ್ ಘೋಷಣೆಯ ವಿಡಿಯೊಗಳ ವೀಕ್ಷಣೆಗಳನ್ನು ಹಿಂದಿಕ್ಕಬೇಕು ಎಂದು ಟ್ವೀಟ್ ಮಾಡಿದ್ದಾರೆ. ಹಾಗಿದ್ದರೆ ಈ ಮೂರು ಚಿತ್ರಗಳ ಪೈಕಿ ಯಾವ ಚಿತ್ರದ ಗ್ಲಿಂಪ್ಸ್ ವಿಡಿಯೊ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ ಹಾಗೂ ಕಿಚ್ಚ 46 ನಂಬರ್ ಒನ್ ಆಗಬೇಕೆಂದರೆ ಯಾವ ಚಿತ್ರವನ್ನು ಹಿಂದಿಕ್ಕಬೇಕು ಎಂಬ ಮಾಹಿತಿ ಈ ಕೆಳಕಂಡಂತಿದೆ..
ಯುವ ರಾಜ್‌ಕುಮಾರ್ ನಟನೆಯ ಯುವ ಚಿತ್ರದ ಟೈಟಲ್ ಘೋಷಣೆಯ ಟೀಸರ್ ಇಲ್ಲಿಯವರೆಗೂ ಯುಟ್ಯೂಬ್‌ನಲ್ಲಿ 3.8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ವರ್ಷ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಕನ್ನಡ ಚಿತ್ರವೊಂದರ ಘೋಷಣೆ ಎನಿಸಿಕೊಂಡಿದೆ. ಇನ್ನು ಸಂಚಿತ್ ಸಂಜೀವ್ ನಟನೆ ಹಾಗೂ ನಿರ್ದೇಶನದ ಜಿಮ್ಮಿ ಚಿತ್ರದ ಗ್ಲಿಂಪ್ಸ್ ಒಂದೇ ವಾರಕ್ಕೆ 2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅತ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಕಾಟೇರ ಚಿತ್ರದ ಟೈಟಲ್ ಅನಾವರಣದ ವಿಡಿಯೊ ಯುಟ್ಯೂಬ್‌ನಲ್ಲಿ 1.8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಹೀಗಾಗಿ ಕಿಚ್ಚ 46 ಚಿತ್ರದ ಫಸ್ಟ್ ಲಕ್ ಗ್ಲಿಂಪ್ಸ್ ಯುಟ್ಯೂಬ್ ವೀಕ್ಷಣೆಗಳ ವಿಷಯದಲ್ಲಿ ನಂಬರ್ ಒನ್ ಆಗಬೇಕೆಂದರೆ ಯುವರಾಜ್‌ಕುಮಾರ್ ನಟನೆಯ ಯುವ ಚಿತ್ರದ ಫಸ್ಟ್ ಲುಕ್ ಟೀಸರ್‌ನ 3.8 ಮಿಲಿಯನ್ ವೀಕ್ಷಣೆಗಳನ್ನು ಹಿಂದಿಕ್ಕಬೇಕಿದೆ.


Click it and Unblock the Notifications











