Kichcha 46: ಕಿಚ್ಚ 46 ಚಿತ್ರದ ಅಪ್‌ಡೇಟ್ ಯಾವಾಗ? ನಿರ್ಮಾಪಕರು, ಸುದೀಪ್ ಕೊಟ್ಟೇ ಬಿಟ್ರು ಉತ್ತರ
ಅಭಿನಯ ಚಕ್ರವರ್ತಿ, ಬಾಕ್ಸ್ ಆಫೀಸ್ ಬಾದ್‌ಷಾ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಬಳಿಕ ನಾಯಕನಾಗಿ ಯಾವ ಚಿತ್ರದಲ್ಲಿ ನಟಿಸಬಹುದು ಎಂಬ ಪ್ರಶ್ನೆ ಸಿನಿ ರಸಿಕರನ್ನು ಹಲವು ದಿನಗಳಿಂದ ಕಾಡುತ್ತಿದೆ. ಈ ವರ್ಷ ತೆರೆಕಂಡ ಕಬ್ಜ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ನಟಿಸಿರುವ ಕಿಚ್ಚ ಸುದೀಪ್ ಈ ಹಿಂದೆ ಟ್ವೀಟ್ ಮಾಡುವ ಮೂಲಕ 3 ಸ್ಕ್ರಿಪ್ಟ್‌ಗಳು ಓಕೆಯಾಗಿದ್ದು, ಆದಷ್ಟು ಬೇಗ ಈ ಕುರಿತು ಸುದ್ದಿ ಹಂಚಿಕೊಳ್ಳಿದ್ದೇನೆ ಎಂದಿದ್ರು.
ಅದರಂತೆ ಕಳೆದ ತಿಂಗಳು ತಮಿಳಿನ ಕಲೈಪ್ಪುಲಿ ಎಸ್ ಧನು ಎಂಬ ನಿರ್ಮಾಪಕರು ಕಿಚ್ಚ ಸುದೀಪ್ ನಟನೆಯ ಮುಂದಿನ ಚಿತ್ರವನ್ನು ನಿರ್ಮಿಸುವುದಾಗಿ ವಿಶೇಷ ಟೀಸರ್ ಒಂದನ್ನು ಬಿಡುಗಡೆ ಮಾಡುವ ಮೂಲಕ ತಿಳಿಸಿದ್ದರು. ಆದರೆ ಈ ಚಿತ್ರಕ್ಕೆ ಯಾರು ಆಕ್ಷನ್ ಕಟ್ ಹೇಳಲಿದ್ದಾರೆ ಹಾಗೂ ನಾಯಕಿಯಾಗಿ ಯಾವ ನಟಿ ನಟಿಸಲಿದ್ದಾರೆ ಎಂಬ ಎಂಬ ಮಾಹಿತಿಯನ್ನು ಹಂಚಿಕೊಂಡರಲಿಲ್ಲ.

ಹೀಗೆ ಈ ಅಪ್‌ಡೇಟ್ ಹಂಚಿಕೊಂಡು ತಿಂಗಳು ಕಳೆದರೂ ಸಹ ಚಿತ್ರದ ಕುರಿತು ಹೆಚ್ಚುವರಿ ಮಾಹಿತಿ ಹೊರಬೀಳದ ಕಾರಣ ಕಿಚ್ಚನ ಅನುಯಾಯಿಗಳು ತುಸು ಬೇಸರವನ್ನೂ ಸಹ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹಾಗೂ ಆಫ್‌ಲೈನ್‌ನಲ್ಲಿ ಕಿಚ್ಚ 46 ಚಿತ್ರದ ನಿರ್ದೇಶಕರು ಯಾರು ಎಂಬ ಪ್ರಶ್ನೆಯನ್ನು ಹೆಚ್ಚಾಗಿ ಕೇಳಲಾಗಿತ್ತು.
ಹೀಗೆ ಹೆಚ್ಚಾಗಿ ಕೇಳಿ ಬರುತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡಲು ಕಿಚ್ಚ 46 ಚಿತ್ರದ ನಿರ್ಮಾಪಕರು ಮುಂದಾಗಿದ್ದು, ಚಿತ್ರದ ಕುರಿತಾದ ಅಪ್‌ಡೇಟ್ ಯಾವಾಗ ಹೊರ ಬೀಳಲಿದೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಹೌದು, ಕಲೈಪ್ಪುಲಿ ಎಸ್ ಧನು ಇಂದು ( ಜೂನ್ 27 ) ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಒಂದನ್ನು ಹಂಚಿಕೊಂಡಿದ್ದು, ಕಿಚ್ಚ 46 ಚಿತ್ರದ ಗ್ಲಿಂಪ್ಸ್ ಅನ್ನು ಜುಲೈ 2ರಂದು ಬೆಳಗ್ಗೆ 11.46ಕ್ಕೆ ಬಿಡುಗಡೆಗೊಳಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.
ಚಿತ್ರದ ನಾಯಕಿ ಬಗ್ಗೆ ಹರಿದಾಡಿತ್ತು ಸುದ್ದಿ: ಇಂಡಿಯಾ ಟುಡೇ ಸುದ್ದಿಯ ಪ್ರಕಾರ ಮಹಾರಾಷ್ಟ್ರದ ಮುಂಬೈ ಮೂಲದ ನಟಿ ಸಿಮ್ರಾತ್ ಕೌರ್ ಸುದೀಪ್ 46ನೇ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಸುದ್ದಿ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ನಟಿ ಯಾರು, ಯಾವ ಚಿತ್ರಗಳಲ್ಲಿ ನಟಿಸಿದ್ದಾರೆ ಎಂಬ ಹುಡುಕಾಟ ಶುರುವಿಟ್ಟುಕೊಂಡಿದ್ದಾರೆ. ಈ ನಟಿಯ ಸಾಮಾಜಿಕ ಜಾಲತಾಣದ ಖಾತೆಗಳನ್ನು ಜಾಲಾಡುತ್ತಿರುವ ಸಿನಿ ರಸಿಕರು ನಟಿಯ ಲುಕ್‌ಗೆ ಫಿದಾ ಆಗಿದ್ದರು.
ಸುದೀಪ್ ಅವರಿಗೆ ತೆರೆ ಮೇಲೆ ಒಳ್ಳೆಯ ಜೋಡಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಸಿಮ್ರಾತ್ ಕೌರ್ ಮೂಲತಃ ಮಹಾರಾಷ್ಟ್ರದ ನಟಿಯಾದರೂ ನಟನೆ ಆರಂಭಿಸಿದ್ದು ತೆಲುಗು ಚಿತ್ರರಂಗದ ಮೂಲಕ. ಕಾರ್ತಿಕೇಯ ನಾಯಕನಾಗಿ ನಟಿಸಿದ್ದ ಪ್ರೇಮತೊ ಮೀ ಕಾರ್ತಿಕ್ ಎಂಬ ಚಿತ್ರದಲ್ಲಿ ನಟಿಸಿದ್ದ ಈಕೆ ಬಳಿಕ ಪರಿಚಯಂ ಎಂಬ ಮತ್ತೊಂದು ತೆಲುಗು ಚಿತ್ರದಲ್ಲಿ ನಟಿಸಿದ್ದರು. ನಂತರ ಸೋನಿ ಎಂಬ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಸಿಮ್ರಾತ್ ಕೌರ್ ಡರ್ಟಿ ಹರಿ ಹಾಗೂ ಬಂಗಾರ್ರಾಜು ಎಂಬ ಸಿನಿಮಾಗಳಲ್ಲಿ ನಟಿಸಿ ಈಗ ಬಿಡುಗಡೆಗೆ ಸಿದ್ಧವಾಗಿರುವ ಗದಾರ್ 2 ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ.


Click it and Unblock the Notifications











