ಪ್ರೀತಿಯ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ಕಿಚ್ಚ ಸುದೀಪ್
'ಮ್ಯಾಕ್ಸ್' ಕಾಂಬಿನೇಷನ್‌ನಲ್ಲಿ ನಿರ್ಮಾಣವಾಗುತ್ತಿರುವ 'ಮಾರ್ಕ್' ಚಿತ್ರ ಹೈಪ್ ಕ್ರಿಯೇಟ್ ಮಾಡ್ತಿದೆ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು ಸುದೀಪ್ ಮತ್ತೊಮ್ಮೆ ಪೊಲೀಸ್ ಆಫೀಸರ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ಚಿತ್ರದ ಬಗ್ಗೆ ಸುದೀಪ್ ಬಿಗ್ ಅಪ್‌ಡೇಟ್ ಕೊಟ್ಟಿದ್ದಾರೆ.
ಕ್ರಿಸ್‌ಮಸ್ ಹಬ್ಬದ ಸಂಭ್ರಮದಲ್ಲಿ 'ಮಾರ್ಕ್' ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ಈಗಾಗಲೇ ಚಿತ್ರದ ಹಾಡೊಂದು ರಿಲೀಸ್ ಆಗಿ ಹಿಟ್ ಆಗಿದೆ. ಶೀಘ್ರದಲ್ಲೇ ಟೀಸರ್ ಅನಾವರಣ ಮಾಡಲು ಚಿತ್ರತಂಡ ಮುಂದಾಗಿದೆ. ಅದಕ್ಕೆ ಮುಹೂರ್ತ ಫಿಕ್ಸ್ ಆಗಿದೆ ಸುದೀಪ್ ಅಧಿಕೃತವಾಗಿ ಮಾಹಿತಿ ಕೊಟ್ಟಿದ್ದಾರೆ.

ಒಂದ್ಕಡೆ ಬಿಗ್‌ಬಾಸ್ ಶೋ ನಿರೂಪಣೆ ಜೊತೆ ಜೊತೆಗೆ 'ಮಾರ್ಕ್' ಚಿತ್ರವನ್ನು ಸುದೀಪ್ ಮುಗಿಸುತ್ತಿದ್ದಾರೆ. ಸಿನಿಮಾ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಪ್ರಚಾರಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಜೊತೆ ಸೇರಿ ಕಿಚ್ಚ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸೂರತ್ಕಲ್ ಪೊಲೀಸ್ ಠಾಣೆ ಹಿನ್ನೆಲೆಯಲ್ಲಿ ಕಥೆ ಹೇಳಲು ನಿರ್ದೇಶಕರು ಮುಂದಾಗಿದ್ದಾರೆ.
ಕಳೆದ ವರ್ಷ ಬಂದಿದ್ದ 'ಮ್ಯಾಕ್ಸ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಉಪೇಂದ್ರ ಅವರ 'ಯುಐ' ಸಿನಿಮಾ ಆರ್ಭಟದ ನಡುವೆಯೂ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ವಿಜಯ್ ಕಾರ್ತಿಕೇಯನ್ ಮೊದಲ ಪ್ರಯತ್ನದಲ್ಲೇ ಭರವಸೆ ಮೂಡಿಸಿದ್ದಾರೆ. ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಬಹಳ ಸೊಗಸಾಗಿ ತೆರೆಗೆ ತಂದು ತಂಡ ಗೆದ್ದಿತ್ತು. ಈ ಬಾರಿ ಕೂಡ ಅಂಥದ್ದೇ ಪ್ರಯತ್ನ ನಡೀತಿದೆ. ಮತ್ತಷ್ಟು ರೋಚಕವಾಗಿ ಕಥೆ ಹೇಳಲು ನಿರ್ದೇಶಕರು ಮುಂದಾಗಿದ್ದಾರೆ.
ಇದೇ ಶುಕ್ರವಾರ(ನವೆಂಬರ್ 7) 'ಮಾರ್ಕ್' ಚಿತ್ರದ ಟೀಸರ್ ಹೊರ ಬರಲಿದೆ. ಸಂಜೆ 6.45ಕ್ಕೆ ಸತ್ಯಜ್ಯೋತಿ ಫಿಲ್ಮ್ಸ್ ಯೂಟ್ಯೂಬ್ ಚಾನಲ್‌ನಲ್ಲಿ ಟೀಸರ್ ಅಪ್‌ಲೋಡ್ ಆಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಬಾರಿ ಸಿನಿಮಾ ತೆರೆಗೆ ತರುವ ಚಿತ್ರತಂಡ ಮನಸ್ಸು ಮಾಡಿದೆ. ವಿಜಯ್ ಕಾರ್ತಿಕೇಯನ್ ಕೆಲಸದ ಬಗ್ಗೆ ಸುದೀಪ್ ಬಹಳ ಖುಷಿಯಾಗಿದ್ದಾರೆ. ಚಿತ್ರೀಕರಣ ಮುಗಿಯುವ ಮುನ್ನ ನಿರ್ದೇಶಕರಿಗೆ ಕಾರ್ ಉಡುಗೊರೆಯಾಗಿ ಕೊಟ್ಟಿದ್ದಾರೆ. 'ಮ್ಯಾಕ್ಸ್' ಚಿತ್ರಕ್ಕೆ ಕೆಲಸ ಮಾಡಿದ್ದ ತಂಡವೇ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಕಟ್ಟಿ ಕೊಡುತ್ತಿದೆ.
ಶೇಖರ್ ಚಂದ್ರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಚಿತ್ರದಲ್ಲಿ ಅಜಯ್ ಮಾರ್ಕೆಂಡೆ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಪಾತ್ರಕ್ಕಾಗಿ ಹೇರ್‌ಸ್ಟೈಲ್ ಬದಲಿಸಿಕೊಂಡು ದರ್ಶನ ಕೊಟ್ಟಿದ್ದಾರೆ. ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಟೈಟಲ್ ಟೀಸರ್ ರಿಲೀಸ್ ಆಗಿ ಹಿಟ್ ಆಗಿತ್ತು. ಇದೀಗ ಅಸಲಿ ಟೀಸರ್ ಬಿಡುಗಡೆ ಆಗಲಿದೆ.
ಕ್ರಿಸ್‌ಮಸ್ ಸಂಭ್ರಮದಲ್ಲೇ ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ '45' ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಅರ್ಜುನ್ ಜನ್ಯಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗೆ ಚಿತ್ರದ ಪ್ರಮೋಷನಲ್ ಸಾಂಗ್ ರಿಲೀಸ್ ಆಗಿ ಹಿಟ್ ಆಗಿದೆ. ಎರಡೂ ಸಿನಿಮಾಗಳಲ್ಲಿ ಯಾವುದಾದರೂ ಸಿನಿಮಾ ರಿಲೀಸ್ ಡೇಟ್ ತಡವಾಗುತ್ತಾ? ಎನ್ನುವುದನ್ನು ಕಾದು ನೋಡಬೇಕಿದೆ. ಅಭಿಮಾನಿಗಳಂತೂ 'ಮಾರ್ಕ್' ಆರ್ಭಟ ನೋಡಲು ಕಾಯುತ್ತಿದ್ದಾರೆ.
ನವೀನ್ ಚಂದ್ರ, ದೀಪ್ಶಿಕಾ, ಅರ್ಚನಾ ಕೊಟ್ಟಿಗೆ, ರೋಶಿನಿ ಪ್ರಕಾಶ್ ಹಾಗೂ ನಿಶ್ವಿಕಾ ನಾಯ್ಡು 'ಮಾರ್ಕ್' ಚಿತ್ರದ ತಾರಾಗಣದಲ್ಲಿದ್ದಾರೆ. ಈ ಚಿತ್ರದಲ್ಲಿ ಕೂಡ ನಾಯಕ-ನಾಯಕಿ ಡುಯೆಟ್ ಕಾನ್ಸೆಪ್ಟ್ ಬಿಟ್ಟು ಭರ್ಜರಿ ಆಕ್ಷನ್ ಧಮಾಕ ಪ್ರೇಕ್ಷಕರಿಗೆ ಕಾದಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಬಹುತೇಕ ಚಿತ್ರೀಕರಣ ಈಗಾಗಲೇ ಮುಗಿದಿದೆ.


Click it and Unblock the Notifications











