ಹಿಮ ಬೀಳುತ್ತಿರುವ ಪ್ರದೇಶ, ಹಣೆಯ ಮೇಲೆ ಕನ್ನಡಕ, ಕಟ್ಟಡಕ್ಕೆ ಬೆಂಕಿ ; 'ಬಿಲ್ಲಾ ರಂಗ ಬಾಷಾ' ಕಿಚ್ಚನ ಲುಕ್ ಚಿಂದಿ..!
ಸುದೀಪ್ .. ಕನ್ನಡ ಚಿತ್ರರಂಗದ ಕೆಚ್ಚೆದೆಯ ಕಿಚ್ಚ. ಅಭಿಮಾನಿಗಳ ಪಾಲಿನ ಪ್ರೀತಿಯ ಅಭಿನಯ ಚಕ್ರವರ್ತಿ. ನಾನು ನ್ಯಾಷನಲ್ ಸ್ಟಾರ್ ಎಂದು ಈಗ ಕಾಲರ್ ಎತ್ತಿಕೊಂಡು ಓಡಾಡುವರ ನಡುವೆ ಆ ಕಾಲದಲ್ಲಿಯೇ ಕನ್ನಡ, ತೆಲುಗು, ತಮಿಳು, ಹಿಂದಿ ಈ ಐದೂ ಭಾಷೆಗಳಲ್ಲಿ ಮಿಂಚಿದ ಸುದೀಪ್, ಕನ್ನಡ ಚಿತ್ರರಂಗದಲ್ಲಿ 29 ವರ್ಷಗಳನ್ನು ಪೂರೈಸಿದ್ದಾರೆ.ತಮ್ಮ ವೃತ್ತಿಯಲ್ಲಿ ಹಲವು ಏರಿಳಿತಗಳನ್ನು ನೋಡಿದ್ದಾರೆ.
ಹೆಚ್ಚು ಕಡಿಮೆ ಎರಡು ದಶಕಗಳಿಂದ ಬಾಲಿವುಡ್ಡು.. ಕಾಲಿವುಡ್ಡು .. ಟಾಲಿವುಡ್ಡು .. ಅಂಗಳದಲ್ಲಿ ಓಡಾಡಿರೋ ಅಭಿನಯ ಚಕ್ರವರ್ತಿ ಸುದೀಪ್ ಅವರಿಗೆ ಕೇವಲ ಕರುನಾಡಿನಲ್ಲಿ ಮಾತ್ರವಲ್ಲ ಅಕ್ಕ-ಪಕ್ಕದ ರಾಜ್ಯದಲ್ಲಿ ಕೂಡ ಅಭಿಮಾನಿಗಳಿದ್ದಾರೆ. ಇಂಥಾ ಸುದೀಪ್ ಸದ್ಯ ಬಿಲ್ಲಾ ರಂಗ ಬಾಷಾ ಚಿತ್ರದ ಅಖಾಡಕ್ಕೆ ಇಳಿದಿದ್ದಾರೆ. ಚಿತ್ರದ ಚಿತ್ರೀಕರಣ ಶುರುಮಾಡಿದ್ದಾರೆ.

ಹೌದು, ಮ್ಯಾಕ್ಸ್ ಚಿತ್ರದ ಬ್ಲಾಕ್‌ಬಸ್ಟರ್ ಸಕ್ಸಸ್‌ನ ಖುಷಿಯಲ್ಲಿರುವ ಸುದೀಪ್, ಬಿಲ್ಲಾ ರಂಗ ಬಾಷಾ ಚಿತ್ರವನ್ನು ಅನೂಪ್ ಭಂಡಾರಿ ಜೊತೆ ಮಾಡುವುದಾಗಿ ಹೇಳಿದ ದಿನದಿಂದ ಈ ಚಿತ್ರದ ಸುತ್ತ ಕುತೂಹಲ ಮನೆ ಮಾಡಿತ್ತು. ಆದರೆ ಕಾರಣಾಂತರಗಳಿಂದ ಚಿತ್ರದ ಆರಂಭ ತಡವಾಗುತ್ತಲೇ ಬಂದಿತ್ತು. ಇದರಿಂದ ಸುದೀಪ್ ಅಭಿಮಾನಿಗಳು ಬೇಸರವನ್ನು ಕೂಡ ಮಾಡಿಕೊಂಡಿದ್ದರು. ತಮ್ಮ ಅಸಮಾಧಾನವನ್ನು ಕೂಡ ಹೊರ ಹಾಕಿದ್ದರು. ಹೀಗಾಗಿಯೇ ಕಳೆದ ವಾರ ಸುದೀಪ್ ಬಿಲ್ಲಾ ರಂಗ ಬಾಷಾ ಚಿತ್ರದ ಮಾಹಿತಿಯನ್ನು ನೀಡಿದ್ದರು. ಇನ್ನೊಂದೇ ವಾರ ಬಿಲ್ಲಾ ರಂಗ ಬಾಷಾ ಶುರು ಎಂದು ಹೇಳಿದ್ದರು. ಅದ್ರಂತೆ ಇದೀಗ ಬಿಲ್ಲಾ ರಂಗ ಬಾಷಾ ಚಿತ್ರವನ್ನು ಸುದೀಪ್ ಮತ್ತು ಅನೂಪ್ ಭಂಡಾರಿ ಶುರು ಮಾಡಿದ್ದಾರೆ. ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಿದ್ದಾರೆ.
ಸಹಜವಾಗಿಯೇ ಚಿತ್ರದ ಫಸ್ಟ್ ಲುಕ್ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ಯಾಕೆಂದರೆ ಸುದೀಪ್ ಹಿಂದೆಂದೂ ಕಾಣಿಸದ ಅವತಾರದಲ್ಲಿ ಇಲ್ಲಿ ಪ್ರತ್ಯಕ್ಷರಾಗಿದ್ದಾರೆ. ಇನ್ನು, ಹಿಮದ ಪ್ರದೇಶ, ಅಲ್ಲಿ ಹೊತ್ತಿ ಉರಿಯುತ್ತಿರುವ ಕಟ್ಟಡ, ಸುದೀಪ್ ಹಣೆಯ ಮೇಲಿನ ಕನ್ನಡಕ, ಹೀಗೆ ಫಸ್ಟ್ ಲುಕ್‌ನಲ್ಲಿ ಅಡಕವಾಗಿರುವ ಅಂಶಗಳು ಚಿತ್ರದ ಮೇಲಿನ ಕುತೂಹಲವನ್ನು ಇನ್ನು ಹೆಚ್ಚಿಸಿವೆ. ಬಿಲ್ಲಾ ರಂಗ ಬಾಷಾ ಚಿತ್ರದ ಮೂಲಕ ಅನೂಪ್ ಭಂಡಾರಿ ಮತ್ತು ಸುದೀಪ್ ಏನು ಹೇಳಲು ಹೊರಟಿದ್ದಾರೆ ಎನ್ನುವ ಪ್ರಶ್ನೆಯನ್ನು ಕೂಡ ಈ ಫಸ್ಟ್ ಲುಕ್ ಮೂಡಿಸಿದೆ.
ಫಸ್ಟ್ ಲುಕ್ ಜೊತೆ ಇಂದು ಸುದೀಪ್ ಚಿತ್ರದ ಉಳಿದ ತಾರಾಬಳಗದ ಮಾಹಿತಿಯನ್ನು ಕೂಡ ಹಂಚಿಕೊಳ್ಳುವ ನಿರೀಕ್ಷೆ ಇತ್ತು. ಆದರೆ ಸದ್ಯಕ್ಕೆ ಸುದೀಪ್ ಫಸ್ಟ್ ಲುಕ್ ಹಂಚಿಕೊಂಡು ಚಿತ್ರೀಕರಣ ಇಂದಿನಿಂದ ಪ್ರಾರಂಭ ಎಂದು ಮಾತ್ರ ಹೇಳಿದ್ದು ಮುಂಬರುವ ದಿನಗಳಲ್ಲಿ ಒಂದೊಂದೇ ಮಾಹಿತಿಯನ್ನು ಹಂಚಿಕೊಳ್ಲುವ ಸಾಧ್ಯತೆ ಇದೆ. ಇನ್ನು ಬಿಲ್ಲಾ ರಂಗ ಬಾಷಾ ನನ್ನ ವೃತ್ತಿ ಬದುಕಿನ ಅತಿ ದೊಡ್ಡ ಸಿನಿಮಾ ಎಂದು ಹಿಂದೊಮ್ಮೆ ಸುದೀಪ್ ಹೇಳಿದ್ದರು. ಹೀಗಾಗಿ ಈ ಚಿತ್ರ ಕನ್ನಡದಲ್ಲಿ ಮಾತ್ರವಲ್ಲ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಮೂಡಿ ಬರುವುದು ಖಚಿತ. ಬಿಡುಗಡೆಯಾದ ಫಸ್ಟ್ ಲುಕ್‌ನಲ್ಲಿ ಕೂಡ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ ಅನೂಪ್ ಭಂಡಾರಿ. ಇನ್ನು ತೆಲುಗಿನಲ್ಲಿ ಹನುಮಾನ್ ಚಿತ್ರವನ್ನು ನಿರ್ಮಾಣ ಮಾಡಿದ್ದ ಚೈತನ್ಯ ರೆಡ್ಡಿ ಮತ್ತು ನಿರಂಜನ್ ರೆಡ್ಡಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಎರಡು ಭಾಗಗಳಲ್ಲಿ ಈ ಚಿತ್ರ ಸಿದ್ಧವಾಗಲಿದೆ.
ಒಟ್ನಲ್ಲಿ ಸದ್ಯ ಬಿಲ್ಲಾ ರಂಗ ಬಾಷಾ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಅಭಿಮಾನಿಗಳ ಕಿಕ್ಕೇರಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದನ್ನು ಕೂಡ ಮಾಡುತ್ತಿದೆ. ಇಂದಿನಿಂದ ಚಿತ್ರೀಕರಣ ಆರಂಭ ಮಾಡಿರುವ ಕಿಚ್ಚ ಸುದೀಪ್ ಮುಂದೆ ಏನೆಲ್ಲ ಅಪ್‌ಡೇಟ್ ನೀಡುತ್ತಾರೆ ? ಎನ್ನುವುದನ್ನು ಕಾದು ನೋಡಬೇಕಿದೆ. ಮುಂದಿನ ವರ್ಷ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.


Click it and Unblock the Notifications











