ಹತ್ತು ತಿಂಗಳ ಪ್ರಯಾಣ ಮುಗಿಸಿದ ಕಿಚ್ಚ ಸುದೀಪ್ ; ಶೀಘ್ರದಲ್ಲಿ ಮ್ಯಾಕ್ಸ್ ಮ್ಯಾಜಿಕ್..!
ಸಾಮಾನ್ಯವಾಗಿ ಒಬ್ಬ ಸ್ಟಾರ್ ನಟನ ಸಿನಿಮಾ ಆರಂಭವಾದರೆ, ಆ ಚಿತ್ರದ ಸುತ್ತ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ತಾವೆ. ಚಿತ್ರದ ಕಥೆ ಆದಿ ಸೇರಿ ಹಲವು ವಿಚಾರಗಳಿಂದ ಕುತೂಹಲ ತಂತಾನೇ ಗರಿಗೇದರುತ್ತೆ. ಇನ್ನೂ ತಮ್ಮ ನೆಚ್ಚಿನ ನಾಯಕನ ಚಿತ್ರದ ಕುರಿತು ಪ್ರತಿಯೊಂದು ವಿಚಾರ ತಿಳಿದುಕೊಳ್ಳುವ ಆತುರ ಕಾತುರ ಅಭಿಮಾನಿಗಳಲ್ಲಿ ಇದ್ದೇ ಇರುತ್ತೆ.
ಹೀಗಾಗಿಯೇ ಸ್ಟಾರ್ ನಟರ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಚಿತ್ರದ ಕುರಿತು ಮಾಹಿತಿ ನೀಡುವಂತೆ ಸೂಪರ್ ಸ್ಟಾರ್ ಗಳಿಗೆ ದುಂಬಾಲು ಬೀಳ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮ್ಯಾಕ್ಸ್ ಚಿತ್ರದ ವಿಚಾರದಲ್ಲಿ ಕೂಡ ಇಂಥಹದ್ದೇ ವಾತಾವರಣ ಇದೆ. ತಾನೇ ಖುದ್ದು ಮಾಹಿತಿ ನೀಡುವುದಾಗಿ ಹಿಂದೆ ಸುದೀಪ್ ಹೇಳಿದ್ದು ಇದೆ. ಅದರಂತೆ ಸುದೀಪ್ ಈಗ ತಮ್ಮ ಚಿತ್ರದ ಕುರಿತು ಮಾಹಿತಿಯನ್ನ ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.

ಹೌದು. ಮ್ಯಾಕ್ಸ್ ಚಿತ್ರದ ಚಿತ್ರೀಕರಣ ಕೊನೆಗೂ ಮುಕ್ತಾಯವಾಗಿದೆ. ಮೂರಲ್ಲ.. ನಾಲ್ಕಲ್ಲ.. ಹತ್ತು ತಿಂಗಳ ಚಿತ್ರೀಕರಣಕ್ಕೆ ಮಹಾಬಲಿಪುರಂನಲ್ಲಿ ತೆರೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಈ ಹತ್ತು ತಿಂಗಳ ಪ್ರಯಾಣ ಹಿಂದೆ ತಿರುಗಿ ನೋಡಿರುವ ಸುದೀಪ್ , ಮಹಾಬಲಿಪುರಂನಲ್ಲಿ 'ಮ್ಯಾಕ್ಸ್' ಸಿನಿಮಾದ ಚಿತ್ರೀಕರಣ ಮುಗಿಸಿದೆವು. 10 ತಿಂಗಳ ಸುದೀರ್ಘ ಪಯಣ ಇದಾಗಿತ್ತು. ಈ ಹತ್ತು ತಿಂಗಳ ಪಯಣದ ಪ್ರತಿ ನಿಮಿಷವನ್ನೂ ನಾನು ಎಂಜಾಯ್ ಮಾಡಿದ್ದೇನೆ. ಅದ್ಭುತವಾದ ತಂಡ ಹಾಗೂ ಕಲಾವಿದರೊಟ್ಟಿಗೆ ಈ ಹತ್ತು ತಿಂಗಳು ಕೆಲಸ ಮಾಡಿದೆ. ಚಿತ್ರೀಕರಣ ಸುಗಮವಾಗಿ ಸಾಗಲು ನೆರವಾದ ಧನು ಸರ್ ಅವರಿಗೆ ಧನ್ಯವಾದ ಎಂದಿರುವ ಸುದೀಪ್, ಸಿನಿಮಾದ ನಿರ್ದೇಶಕ ವಿಜಯ್ ಹಾಗೂ ಅವರ ತಂಡಕ್ಕೆ ವಿಶೇಷ ಧನ್ಯವಾದಗಳನ್ನು ಸಹ ಹೇಳಿದ್ದಾರೆ.
ಸದ್ಯಕ್ಕೆ ಸುದೀಪ್ ಅವರ ಮನದ ಈ ಮಾತು ಅಭಿಮಾನಿಗಳ ಹುಚ್ಚನ್ನ ಹೆಚ್ಚಿಸಿದೆ. ಚಿತ್ರದ ಟ್ರೇಲರ್ ಬೇಗ ಬಿಡುಗಡೆ ಮಾಡಿಯೆಂಬ ಮನವಿ ಪತ್ರ ಕೂಡ ಸಾಮಾಜಿಕ ಜಾಲತಾಣದಲ್ಲಿ ಕಾಣ್ತಿದೆ. ಚಿತ್ರವನ್ನ ಆದಷ್ಟು ಬೇಗ ಬಿಡುಗಡೆ ಮಾಡಿ ಎಂಬ ಅಹವಾಲನ್ನೂ ಕೂಡ ಸಲ್ಲಿಸುತ್ತಿದೆ ಕಿಚ್ಚ ಸುದೀಪ್ ಅವರ ಭಕ್ತಗಣ.
ಅಂದ್ಹಾಗೇ ಮ್ಯಾಕ್ಸ್ ನಲ್ಲಿ ಮ್ಯಾಕ್ಸಿಮಮ್ ಸಂಖ್ಯೆಯಲ್ಲಿ ಇರುವುದು ಕನ್ನಡಿಗರೇ. ಉದಾಹರಣೆಗೆ ಸುಕೃತಾ ವಾಗ್ಲೇ, ಸಂಯುಕ್ತ ಹೊರನಾಡು, ಉಗ್ರಂ ಮಂಜು. ಅನಿರುದ್ಧ್ ಭಟ್. ಇನ್ನೂ ಸಂಗೀತ ನೀಡಿರುವುದು ಅಜನೀಶ್ ಲೋಕನಾಥ್.ಕಲಾ ನಿರ್ದೇಶಕ ಶಿವಕುಮಾರ್ ಅವರದ್ದಾದರೆ, ಶೇಖರ್ ಚಂದ್ರ ಚಿತ್ರವನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ.

ಮಿಕ್ಕಂತೆ ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯ ನಿರ್ದೇಶನ ಇರುವ ಚಿತ್ರದಲ್ಲಿ ವರಲಕ್ಷ್ಮೀ ಶರತ್ ಕುಮಾರ್ ಕೂಡ ಇದ್ದಾರೆ. ಇಳವರಸು, ಸುನಿಲ್ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ. ಕಲಿಪುಲಿ ಎಸ್ ತನು ಚಿತ್ರದ ನಿರ್ಮಾಪಕರು.
ಪೊಲೀಸ್ ರೋಲ್ ನಲ್ಲಿ ಕಿಚ್ಚ..?
ಅರ್ಜುನ್ ಮಹಾಕ್ಷಯ್. ಖಡಕ್ ಪೊಲೀಸ್ ಆಫೀಸರ್. 2 ತಿಂಗಳು ಅಮಾನತಿನಲ್ಲಿದ್ದ ಅರ್ಜುನ್ ಬಳಿಕ ಹೊಸ ಪೊಲೀಸ್ ಠಾಣೆಯಲ್ಲಿ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳುತ್ತಾನೆ. ಈ ಹಾದಿಯಲ್ಲಿ ಮಂತ್ರಿಗಳ ಮಗ ತನ್ನ ಇಲಾಖೆಯ ಅಧಿಕಾರಿಗಳ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ನೋಡಿ ಬಂಧಿಸುತ್ತಾನೆ. ದುರದೃಷ್ಟವಶಾತ್ ಆತ ಸಾಯ್ತಾನೆ. ಮುಂದೆ ಅರ್ಜುನ್ ಏನು ಮಾಡ್ತಾನೆ? ಅನ್ನೋದೇ 'ಮ್ಯಾಕ್ಸ್' ಸಿನಿಮಾ ಕಥೆ ಅನ್ನುವ ವಿಚಾರ ಬುಕ್ ಮೈ ಶೋನಲ್ಲಿ ಹಿಂದೆ ಕಂಡು ಬಂದಿತ್ತು. ನಿಜಕ್ಕೂ ಚಿತ್ರದ ಕಥೆ ಇದೇನಾ ಅನ್ನುವುದಕ್ಕೆ ಉತ್ತರ ಚಿತ್ರ ತೆರೆಗೆ ಬಂದಾಗಲೇ ಗೊತ್ತಾಗಲಿದೆ.
ವ್ಯಂಗ್ಯ ಬೇಡ ಎಂದಿದ್ದ ಸುದೀಪ್
ಕೆಲ ದಿನಗಳ ಹಿಂದೆ, ಮ್ಯಾಕ್ಸ್ ಚಿತ್ರದ ಮಾಹಿತಿಯನ್ನ ಮೇಲಿಂದ ಮೇಲೆ ಕೇಳುತ್ತಿದ್ದವರಿಗೆ ಸುದೀಪ್ ಉತ್ತರ ಕೊಟ್ಟಿದ್ದರು. ಅಪ್ಡೇಟ್ಸ್ ಬಗ್ಗೆ ಅನೇಕರು ಟ್ವೀಟ್ಗಳನ್ನು ಮಾಡುತ್ತಿರುವುದು ನೋಡಲು ಕ್ರೇಜಿ ಎನಿಸುತ್ತದೆ. ಬಿಡುಗಡೆ ಆಗುತ್ತಿರುವ ಬೇರೆ ಸಿನಿಮಾಗಳ ಜೊತೆ ಸ್ಪರ್ಧೆ ಮಾಡಲು ಅಥವಾ ಬೇರೆ ನಟರ ಜೊತೆ ಪೈಪೋಟಿ ಮಾಡಲು ಅಪ್ಡೇಟ್ಸ್ ನೀಡುವುದಿಲ್ಲ. ಚಿತ್ರತಂಡದಿಂದ ಪೂರ್ಣವಾಗಿ ಏನನ್ನಾದರೂ ಅನೌನ್ಸ್ ಮಾಡಬೇಕು ಎಂದಾಗ ಅಪ್ಡೇಟ್ಸ್ ನೀಡಲಾಗುವುದು ಎಂದು ಹೇಳಿದ್ದರು


Click it and Unblock the Notifications











