ಕಬ್ಜ ಚಿತ್ರ ಯಾವ ರೀತಿ ಪ್ರದರ್ಶನ ಕಾಣುತ್ತಿದೆ ಎಂದು ತಿಳಿಸಿದ ಕಿಚ್ಚ ಸುದೀಪ್

ಆರ್ ಚಂದ್ರು ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಶನ್‌ನ ಬಹುನಿರೀಕ್ಷಿತ ಚಿತ್ರ ಕಬ್ಜ ನಿನ್ನೆ ( ಮಾರ್ಚ್ 17 ) ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ತೆರೆಗೆ ಬಂದಿದೆ. ರಿಚ್ ಮೇಕಿಂಗ್, ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವ ರಾಜ್‌ಕುಮಾರ್ ರೀತಿಯ ದೊಡ್ಡ ತಾರಗಣವಿರುವ ಕಬ್ಜ ಭಾರೀ ನಿರೀಕ್ಷೆಯೊಂದಿಗೆ ಥಿಯೇಟರ್ ಅಂಗಳಕ್ಕೆ ಕಾಲಿಟ್ಟು ಸಿನಿ ರಸಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಬಿಡುಗಡೆ ದಿನವೇ ಕಬ್ಜ ರಾಜ್ಯದಲ್ಲಿ 26 ಕೋಟಿ ಗಳಿಕೆ ಮಾಡಿದೆ ಎನ್ನಲಾಗುತ್ತಿದ್ದು, ಉಪೇಂದ್ರ ಸಿನಿ ಕೆರಿಯರ್‌ನಲ್ಲೇ ಇದು ಅತಿದೊಡ್ಡ ಓಪನಿಂಗ್ ಪಡೆದುಕೊಂಡ ಸಿನಿಮಾ ಎನಿಸಿಕೊಂಡಿದೆ ಹಾಗೂ ಕೆಜಿಎಫ್ ಚಾಪ್ಟರ್ 2 ಬಳಿಕ ಅತಿಹೆಚ್ಚು ಗಳಿಕೆ ಮಾಡಿದ ಕನ್ನಡ ಸಿನಿಮಾ ಎನಿಸಿಕೊಂಡಿದೆ. ನಿರೀಕ್ಷೆಯೊಂದಿಗೆ ಚಿತ್ರಮಂದಿರಗಳಿಗೆ ತೆರಳಿದ ಸಿನಿ ರಸಿಕರು ಚಿತ್ರದ ಮೇಕಿಂಗ್, ಛಾಯಾಗ್ರಹಣ, ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಹಾಗೂ ಸಂಕಲನಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದು, ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.
ಇನ್ನು ಇದು ಉಪೇಂದ್ರ ಸಿನಿ ಕೆರಿಯರ್‌ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಎಲ್ಲಾ ಭಾಷೆಗಳಲ್ಲಿಯೂ ಚಿತ್ರ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ. ಇನ್ನು ಕಬ್ಜ ಸಿನಿಮಾ ದೊಡ್ಡ ಮಟ್ಟದ ಓಪನಿಂಗ್ ಪಡೆದುಕೊಂಡು ಹಿಟ್ ಆಗಿದೆ ಎಂದು ನಿರ್ದೇಶಕ ಆರ್ ಚಂದ್ರು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದರೆ, ಕಿಚ್ಚ ಸುದೀಪ್ ಸಹ ಟ್ವೀಟ್ ಮಾಡಿ ಚಿತ್ರದ ಯಶಸ್ಸನ್ನು ಸಂಭ್ರಮಿಸಿದ್ದಾರೆ.
ಹೌದು, ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕಬ್ಜ ಚಿತ್ರದ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ಕಬ್ಜ ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿರುವುದನ್ನು ಕೇಳ್ಪಟ್ಟೆ ಎಂದು ಬರೆದುಕೊಂಡಿದ್ದು ಚಿತ್ರದ ನಿರ್ದೇಶಕ ಆರ್ ಚಂದ್ರು ಹಾಗೂ ನಟ ಉಪೇಂದ್ರ ಅವರ ಟ್ವಿಟರ್ ಖಾತೆಗಳನ್ನು ಉಲ್ಲೇಖಿಸಿ ನಿಮ್ಮ ಬಗ್ಗೆ ಸಂತಸವಾಗ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಕಬ್ಜ ಚಿತ್ರ ಗೆದ್ದಿರುವುದನ್ನು ಕಿಚ್ಚ ಸುದೀಪ್ ತಿಳಿಸಿದ್ದಾರೆ. ಈ ಟ್ವೀಟ್‌ಗೆ ನಿರ್ದೇಶಕ ಆರ್ ಚಂದ್ರು ಹಾಗೂ ಉಪೇಂದ್ರ ಧನ್ಯವಾದ ತಿಳಿಸಿದ್ದಾರೆ.
ಇನ್ನು ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಸದ್ಯ ಸುದೀಪ್ ಅಭಿಮಾನಿಗಳಲ್ಲಿ ತಮ್ಮ ನೆಚ್ಚಿನ ನಟನ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆ ಮೂಡಿದೆ. ವಿಕ್ರಾಂತ್ ರೋಣ ಬಳಿಕ ಸುದೀಪ್ ನಟನೆಯ ಮುಂದಿನ ಚಿತ್ರ ಯಾವುದೆಂದು ಘೋಷಣೆಯಾಗಿಲ್ಲ. ವಿಕ್ರಾಂತ್ ರೋಣ ನಿರ್ದೇಶಕ ಅನುಪ್ ಭಂಡಾರಿ ನಿರ್ದೇಶನದಲ್ಲಿಯೇ ಸುದೀಪ್ ಬಿಲ್ಲಾ ರಂಗ ಭಾಷಾ ಸಿನಿಮಾದಲ್ಲಿ ನಟಿಸಲಿದ್ದು, ಈ ಚಿತ್ರವೇ ಸುದೀಪ್ ನಟನೆಯ ಮುಂದಿನ ಚಿತ್ರವಾಗುತ್ತಾ ಅಥವಾ ಬೇರೆ ನಿರ್ದೇಶಕರ ಕಥೆಯನ್ನು ಸುದೀಪ್ ಓಕೆ ಮಾಡಿ ಘೋಷಣೆ ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











