"420 ಎನ್ ಕುಮಾರ್‌ಗೆ ಧಿಕ್ಕಾರ" ಎಂದು ಕೂಗಿದ ಕಿಚ್ಚನ ಫ್ಯಾನ್ಸ್: ಚಾಮರಾಜನಗರದಲ್ಲಿ ನಿರ್ಮಾಪಕರ ಫೋಟೊಗಳಿಗೆ ಚಪ್ಪಲಿ ಸೇವೆ
ಕಳೆದ ನಾಲ್ಕೈದು ದಿನಗಳಿಂದ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕರಿಬ್ಬರು ಹಾಗೂ ಕಿಚ್ಚ ಸುದೀಪ್ ನಡುವೆ ಕಿತ್ತಾಟ ನಡೆಯುತ್ತಿದೆ. ಕಿಚ್ಚ ಸುದೀಪ್ ಹಣ ಪಡೆದು ಸಿನಿಮಾ ಮಾಡಿಕೊಡದೇ ಸತಾಯಿಸುತ್ತಿದ್ದಾರೆಂದು ನಿರ್ಮಾಪಕ ಎಂಎನ್ ಕುಮಾರ್ ಬಹಿರಂಗವಾಗಿ ಆರೋಪ ಮಾಡಿದ್ದರು.
ಇಲ್ಲಿಂದ ನಿರ್ಮಾಪಕ ಕುಮಾರ್ ಹಾಗೂ ಕಿಚ್ಚ ಸುದೀಪ್ ನಡುವಿನ ವಿವಾದ ತಾರಕ್ಕೇರುತ್ತಲೇ ಇದೆ. ಸುದೀಪ್ ಮಾನಹಾನಿ ಕೇಸು ದಾಖಲಿಸಿದರೆ, ಇತ್ತ ನಿರ್ಮಾಪಕ ಕುಮಾರ್ ಎರಡೆರಡು ಪತ್ರಿಕಾಗೋಷ್ಠಿಗಳನ್ನು ಮಾಡಿ ಆರೋಪ ಮಾಡಿದ್ದರು. ಈ ಬೆನ್ನಲೇ 'ಹುಚ್ಚ' ಸಿನಿಮಾದ ನಿರ್ಮಾಪಕ ರೆಹಮಾನ್ ಕೂಡ ಸುದೀಪ್ ಮೇಲೆ ಆರೋಪ ಮಾಡಿದ್ದರು.

ಈ ಬೆನ್ನಲೇ ಕಿಚ್ಚ ಸುದೀಪ್ ಅಭಿಮಾನಿಗಳು ಚಾಮರಾಜನಗರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದಾರೆ. ಕಿಚ್ಚ ಸುದೀಪ್ ವಿರುದ್ಧ ಆರೋಪ ಮಾಡಿದವರ ವಿರುದ್ಧ ಅಭಿಮಾನಿಗಳು ಕಿಡಿ ಕಾರಿದ್ದಾರೆ.
ರಸ್ತೆ ತಡೆ.. ಧಿಕ್ಕಾರ.. ಪ್ರತಿಭಟನೆ
ಕಿಚ್ಚ ಸುದೀಪ್ ವಿರುದ್ಧ ಆರೋಪಗಳ ಸುರಿಮಳೆಯನ್ನು ಸುರಿಸಿರೋ ನಿರ್ಮಾಪಕ ಎಂ ಎನ್ ಕುಮಾರ್ ವಿರುದ್ಧ ಅಭಿಮಾನಿಗಳು ಕೆಂಡಾಮಂಡವಾಗಿದ್ದರು. ಈ ಸಂಬಂಧ ಸುದೀಪ್ ಅಭಿಮಾನಿಗಳಿಂದ ಚಾಮರಾಜನಗರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು. ಈ ವೇಳೆ ಕುಮಾರ್‌ಗೆ ಬೆಂಬಲ ನೀಡಿದ್ದ ನಿರ್ಮಾಪಕರಾದ ಎ ಗಣೇಶ್, ಪ್ರವೀಣ್ ಕುಮಾರ್ ವಿರುದ್ಧವೂ ಘೋಷಣೆಗಳನ್ನು ಕೂಗಿದ್ದಾರೆ.
ಇದೇ ಸಂದರ್ಭದಲ್ಲಿ ಆಕ್ರೋಶ ಭರಿತರಾಗಿದ್ದ ಅಭಿಮಾನಿಗಳು ನಿರ್ಮಾಪಕರಾದ ಕುಮಾರ್, ಗಣೇಶ್ ಹಾಗೂ ಪ್ರವೀಣ್ ಅವರ ಬ್ಯಾನರ್ ತಂದು ರಸ್ತೆ ಮಧ್ಯದಲ್ಲೇ ಚಪ್ಪಲಿ ಸೇವೆ ಮಾಡಿ, ಧಿಕ್ಕಾರ ಕೂಗಿದ್ದಾರೆ. ತಮ್ಮ ನಟನ ವಿರುದ್ಧ ಆರೋಪ ಮಾಡಿದ್ದನ್ನು ಭೇಷರತ್ ಖಂಡಿಸಿದ್ದಾರೆ.

"ಕಿಚ್ಚ ಸುದೀಪ್ ಬಳಿ ಕ್ಷೇಮೆ ಕೇಳಬೇಕು"
ಪ್ರತಿಭಟನೆ ವೇಳೆ ಕಿಚ್ಚ ಸುದೀಪ್ ಅಭಿಮಾನಿಗಳು ನಿರ್ಮಾಪಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ಕೂಡಲೇ ನಿರ್ಮಾಪಕ ತಮ್ಮದು ತಪ್ಪು ಆರೋಪ ಎಂದು ಒಪ್ಪಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ, ಕಿಚ್ಚ ಸುದೀಪ್ ಬಳಿ ಕ್ಷೇಮೆ ಕೇಳಬೇಕು ತಪ್ಪಿದ್ದಲ್ಲಿ ಅವರ ಚಿತ್ರ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಚಾಮರಾಜನಗರದ ಭುವನೇಶ್ವರಿ ವೃತ್ತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಕೆಲವು ಕಾಲ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ಹೊರ ಹಾಕಿದರು. ಈ ವೇಳೆ ಪೊಲೀಸರು ಬಂದು ಪ್ರತಿಭಟನಾಕಾರರನ್ನು ಚದುರಿಸಿದರು. ಸುಮಾರು ಒಂದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದಾರೆ.
ಏನಿದು ಕಿತ್ತಾಟ?
ನಿರ್ಮಾಪಕ ಎಂಎನ್ ಕುಮಾರ್ ಎಳೆಂಟು ವರ್ಷಗಳ ಹಿಂದೆ ಕಿಚ್ಚ ಸುದೀಪ್‌ಗೆ ಸಿನಿಮಾ ಮಾಡಿಕೊಡುವಂತೆ ಸಂಭಾವನೆ ನೀಡಿದ್ದರು. ಅಲ್ಲಿಂದ ತಮಗೆ ಸಿನಿಮಾ ಮಾಡಿಕೊಡದಂತೆ ಸತಾಯಿಸುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿದ್ದರು. ಎನ್‌ಎಂ ಸುರೇಶ್, ಎ ಗಣೇಶ್, ಪ್ರವೀಣ್ ಕುಮಾರ್ ಸೇರಿದಂತೆ ಕೆಲ ಕನ್ನಡದ ನಿರ್ಮಾಪಕರು ಬೆಂಬಲ ನೀಡಿದ್ದರು.
ಇಲ್ಲಿಂದ ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ನಡುವೆ ವಾದ ಪ್ರತಿವಾದ ನಡೆಯುತ್ತಿದೆ. ಅಲ್ಲದೆ, ಕಿಚ್ಚ ಸುದೀಪ್ ನಿರ್ಮಾಪಕ ಕುಮಾರ್ ಹಾಗೂ ಎನ್‌ಎಂ ಸುರೇಶ್ ವಿರುದ್ಧ 10 ಕೋಟಿ ರೂ. ಮಾನಹಾನಿ ಕೇಸ್ ಅನ್ನು ದಾಖಲಿಸಿದ್ದರು. ಅದೀಗ ಪ್ರತಿಭಟನೆವರೆಗೂ ಬಂದು ನಿಂತಿದೆ.


Click it and Unblock the Notifications











