Kiccha 46: ಮಿಲಿಯನ್ ಡಾಲರ್ ಪ್ರಶ್ನೆಗೆ ಸಿಕ್ತು ಉತ್ತರ: ಹೊಸ ಪ್ರಪಂಚಕ್ಕೆ ಬಾದ್‌ಶಾ ಎಂಟ್ರಿ
'ವಿಕ್ರಾಂತ್ ರೋಣ' ರಿಲೀಸ್ ಆಗಿ ವರ್ಷ ಆಗುತ್ತಾ ಬಂದರೂ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಅಭಿಮಾನಿಗಳು Kiccha 46 ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದರು. ಇದೀಗ ಕೊನೆಗೂ ಸುದೀಪ್ ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಮುಂದಿನ ಸಿನಿಮಾ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. ಹೆಚ್ಚು ಮಾಹಿತಿ ಸಿಗದಿದ್ರು ಸಣ್ಣ ಮಟ್ಟಿಗೆ ಅಭಿಮಾನಿಗಳಿಗೆ ಸಮಾಧಾನವಾಗಿದೆ.
ತಮಿಳಿನ ಕಲೈಪುಲಿ ಎಸ್. ತನು ನಿರ್ಮಾಣದ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾರೆ. ಜಬರ್ದಸ್ತ್ ಬಿಜಿಎಂ ಜೊತೆಗೆ ಟೀಸರ್ ಶೂಟಿಂಗ್‌ಗಾಗಿ ಸುದೀಪ್ ಸೆಟ್‌ಗೆ ಬಂದಿರುವ ವಿಡಿಯೋ ಶೇರ್ ಮಾಡಲಾಗಿದೆ. ಕಿಚ್ಚನ ಲುಕ್ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. 'ವಿಕ್ರಾಂತ್ ರೋಣ' ನಂತರ ಬಹಳ ದಿನಗಳ ಕಾಲ ಸುದೀಪ್ ವಿರಾಮ ಪಡೆದುಕೊಂಡಿದ್ದರು. ಈ ನಡುವೆ ಸಿಸಿಎಲ್ ಕ್ರಿಕೆಟ್, ಚುನಾವಣೆ ಪ್ರಚಾರ ಅಂತೆಲ್ಲಾ ಬ್ಯುಸಿ ಇದ್ದರು. ಇತ್ತೀಚೆಗೆ 3 ಕತೆಗಳನ್ನು ಫೈನಲ್ ಮಾಡಿದ್ದು ಶೀಘ್ರದಲ್ಲೇ ಒಂದು ಸಿನಿಮಾ ಘೋಷಣೆ ಮಾಡುವುದಾಗಿ ಹೇಳಿದ್ದರು.

ಟೀಸರ್ ಶೂಟಿಂಗ್ ಬಗ್ಗೆ ಕೂಡ ಸುದೀಪ್ ಮಾಹಿತಿ ನೀಡಿದ್ದರು. ಇದೀಗ ಚಿತ್ರದ ಮೊದಲ ಅಪ್‌ಡೇಟ್ ಸಿಕ್ಕಿದೆ. ಚಿತ್ರದ ನಿರ್ಮಾಪಕರು ಯಾರು ಅನ್ನೋದು ಕನ್ಫರ್ಮ್ ಆಗಿದೆ. ಮುಂದೆ ಸಿನಿಮಾ ನಿರ್ದೇಶಕರು ಯಾರು? ನಾಯಕಿ ಯಾರು? ಕಲಾವಿದರು ಯಾರು? ಅನ್ನುವ ಮಾಹಿತಿ ಸಿಗಲಿದೆ. ಒಟ್ನಲ್ಲಿ ಕೊನೆಗೂ Kiccha 46 ಅಪ್‌ಡೇಟ್ ಸಿಕ್ತಲ್ಲ ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಇದೇ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ.
ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿ "ಬಹಳ ಖುಷಿಯಾಗುತ್ತಿದೆ ತನು ಸರ್ ಹಾಗೂ ವಿ ಕ್ರಿಯೇಷನ್ಸ್. ಟೀಸರ್ ಚಿತ್ರೀಕರಣದ ಸಮಯದಲ್ಲಿ ಸೆಟ್‌ನಲ್ಲಿ ಅದ್ಭುತ ಸಮಯಕ್ಕಾಗಿ ತಂಡಕ್ಕೆ ಧನ್ಯವಾದಗಳು. ಟೀಸರ್ ಫಸ್ಟ್ ಝಲಕ್ ನೋಡಲು ಕಾತರದಿಂದ ಕಾಯುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಚಿತ್ರಕ್ಕೆ ಆಕ್ಷನ್ ಕಟ್ ಹೇಳೋದ್ಯಾರು?
ಈ ಹಿಂದೆ ಸುದೀಪ್ ಅವರನ್ನು ತಮಿಳು ನಿರ್ದೇಶಕ ವೆಂಕಟ್ ಪ್ರಭು ಭೇಟಿ ಮಾಡಿದ್ದರು. ಹಾಗಾಗಿ ಮುಂದಿನ ಚಿತ್ರಕ್ಕೆ ಅವ್ರೇ ಆಕ್ಷನ್ ಕಟ್ ಹೇಳ್ತಾರೆ ಅನ್ನಲಾಗಿತ್ತು. ಆದರೆ ಇತ್ತೀಚೆಗೆ ವೆಂಕಟ್ ಪ್ರಭು ದಳಪತಿ ವಿಜಯ್ ಜೊತೆ ಸಿನಿಮಾ ಘೋಷಿಸಿದ್ದಾರೆ. ಹಾಗಾಗಿ ಸುದೀಪ್ ಜೊತೆಗೆ ಸದ್ಯಕ್ಕೆ ಸಿನಿಮಾ ಮಾಡ್ತಿಲ್ಲ ಅನ್ನೋದು ಸ್ಪಷ್ಟವಾಗ್ತಿದೆ. ಇನ್ನು 'ವಿಕ್ರಾಂತ್ ರೋಣ' ನಂತರ ಅನೂಪ್ ಭಂಡಾರಿ ಕೂಡ ಕಿಚ್ಚನಿಗಾಗಿ ಹೊಸ ಕತೆ ಸಿದ್ದಪಡಿಸುತ್ತಿದ್ದಾರೆ.
ಶೀಘ್ರದಲ್ಲೇ ಸಿಗಲಿದೆ ಮಾಹಿತಿ
ಈಗಾಗಲೇ ಟೀಸರ್ ಶೂಟಿಂಗ್ ಕೂಡ ಆಗಿರುವುದರಿಂದ ಆದಷ್ಟು ಬೇಗ ಚಿತ್ರದ ನಿರ್ದೇಶಕರು, ನಾಯಕಿ, ಇನ್ನುಳಿದ ತಾರಾಗಣದ ಬಗ್ಗೆ ಮಾಹಿತಿ ಸಿಗುವ ಸಾಧ್ಯತೆಯಿದೆ. ಇದೀಗ ಟೀಸರ್ ಮೇಕಿಂಗ್ ಝಲಕ್ ಅಷ್ಟೇ ಬಂದಿದೆ. ಅಸಲಿ ಟೀಸರ್ ಮುಂದಿನ ದಿನಗಳಲ್ಲಿ ಅಂದರೆ ಬಹಳ ಬೇಗ ರಿಲೀಸ್ ಆಗಲಿದೆ. ಕಿಚ್ಚನನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಬಿಲ್ಲ ರಂಗ ಬಾಷಾ, ಅಶ್ವತ್ಥಾಮ
ಅನೂಪ್ ಭಂಡಾರಿ ಈಗಾಗಲೇ 'ಬಿಲ್ಲ ರಂಗ ಬಾಷ' ಹಾಗೂ 'ಅಶ್ವತ್ಥಾಮ' ಸಿನಿಮಾಗಳನ್ನು ಘೋಷಿಸಿದ್ದಾರೆ. ಇನ್ನು ಕೆಆರ್‌ಜಿ ಸ್ಟುಡಿಯೋಸ್ ಜೊತೆಗೂ ಸುದೀಪ್ ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೀತಿದೆ. ನಂದ ಕಿಶೋರ್ ಕೂಡ ಕಿಚ್ಚನಿಗಾಗಿ ಹೊಸ ಕಥೆ ಸಿದ್ಧಪಡಿಸುತ್ತಿದ್ದಾರೆ. ಇದೆಲ್ಲದರ ನಡುವೆ ಇದೀಗ 'ಕಬಾಲಿ' ನಿರ್ಮಾಪಕರ ಜೊತೆ ಕಿಚ್ಚನ ಸಿನಿಮಾ ಘೋಷಣೆಯಾಗಿದೆ.
ತಮಿಳಿನ ಖ್ಯಾತ ನಿರ್ಮಾಪಕ
80ರ ದಶಕದಿಂದಲೂ ಕಲೈಪುಲಿ ಎಸ್. ತನು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬರ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ 'ತೇರಿ', 'ತುಫಾಕಿ', 'ಕಬಾಲಿ', 'ವಿಐಪಿ- 2', 'ಅಸುರನ್', 'ಕರ್ಣನ್' ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ರಜನಿಕಾಂತ್, ವಿಜಯ್, ಧನುಷ್‌ರಂತಹ ಸ್ಟಾರ್‌ಗಳ ಜೊತೆ ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದಾರೆ. ಇದೇ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿ ಬರ್ತಿರೋದು ಕುತೂಹಲ ಕೆರಳಿಸಿದೆ.


Click it and Unblock the Notifications











