Sudeep to Join BJP : ಇಂದು ಕಿಚ್ಚ ಸುದೀಪ್ ಸೇರೋದು ಕನ್ಫರ್ಮ್; ಪಕ್ಷ ಸೇರ್ಪಡೆಗೆ ಸಮಯ ಕೂಡ ಫಿಕ್ಸ್!?
ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ರಾಜಕೀಯಕ್ಕೆ ಎಂಟ್ರಿಯಾಗ್ತಾರೆ ಎಂಬ ಸುದ್ದಿ ಪ್ರತಿ ಬಾರಿಯ ಎಲೆಕ್ಷನ್ ಬಂದಾಗಲೂ ಕೇಳಿ ಬರುತ್ತಲೇ ಇರುತ್ತದೆ. ಕಿಚ್ಚ ಸುದೀಪ್ ಆ ಪಕ್ಷ ಸೇರುತ್ತಾರಂತೆ, ಸುದೀಪ್ ಈ ಪಕ್ಷಕ್ಕೆ ಸೇರುವುದು ಪಕ್ಕಾ ಅಂತೆ ಎಂಬ ಸುದ್ದಿಗಳು ಹರಿದಾಡಿದ್ದವು. ಮೊದಲಿಗೆ ಸುದೀಪ್ ಕಾಂಗ್ರೆಸ್ ಸೇರುವುದು ಪಕ್ಕಾ ಎಂಬ ಸುದ್ದಿ ಹರಿದಾಡಿದ್ದರೆ, ನಂತರ ಕಿಚ್ಚ ಜಾತ್ಯಾತೀತ ಜನತಾ ದಳ ಪಕ್ಷ ಸೇರುವುದು ಖಚಿತ ಎನ್ನಲಾಗಿತ್ತು.
ಆದರೆ ಬಳಿಕ ಈ ಸುದ್ದಿಗಳೆಲ್ಲಾ ಹುಸಿ ಸುದ್ದಿಗಳಾಗಿ ಉಳಿದುಕೊಂಡುಬಿಟ್ಟವು. ಸುದೀಪ್ ಯಾವ ಪಕ್ಷವನ್ನೂ ಸಹ ಸೇರಲಿಲ್ಲ. ಆದರೆ ಈ ಬಾರಿ ನಡೆಯಲಿರುವ 16ನೇ ವಿಧಾನಸಭೆ ಚುನಾವಣೆಗೂ ಮುನ್ನ ಕಿಚ್ಚ ಸುದೀಪ್ ಖಚಿತವಾಗಿ ಬಿಜೆಪಿ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿ ಕಳೆದ ಎರಡು ಮೂರು ತಿಂಗಳಿನಿಂದ ಹರಿದಾಡುತ್ತಲೇ ಇದೆ. ಇಷ್ಟು ಬಾರಿ ಸುದೀಪ್ ಪಕ್ಷವನ್ನು ಸೇರಬಹುದು, ಸೇರುವ ಸಾಧ್ಯತೆ ಇದೆ ಎಂದು ಸುದ್ದಿಗಳು ಹರಿದಾಡುತ್ತಿದ್ದರೆ, ಈ ಬಾರಿ ಖಚಿತವಾಗಿ ಸೇರಲಿದ್ದಾರೆ ಎಂದು ಸುದ್ದಿಯಾಗಿದೆ.

ಹೌದು, ಇಂದು ( ಏಪ್ರಿಲ್ 5 ) ಮಧ್ಯಾಹ್ನ 1.30ಕ್ಕೆ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ಕಿಚ್ಚ ಸುದೀಪ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಇನ್ನು ಸುದೀಪ್ ಅವರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಬಿಜೆಪಿ ಪಕ್ಷದವರು ಮನವೊಲಿಸುವ ಯತ್ನದಲ್ಲಿ ಯಶಸ್ವಿಯಾಗಿದ್ದು, ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಕ್ಕೆ ಫಿದಾ ಆಗಿರುವ ಸುದೀಪ್ ಬಿಜೆಪಿ ಸೇರಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಾರಿಯ ವಿಧಾನಸಭೆಯಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷ ಮಾಡಿರುವ ಮನವಿಗೆ ಸ್ಪಂದಿಸಿರುವ ಸುದೀಪ್ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಬದಲಾಗಿ 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದೇನೆ ಎಂದಿದ್ದಾರಂತೆ. ಹೀಗೆ ಮುಂದಿನ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವೆ ಎಂದಿರುವ ಕಿಚ್ಚ ಸುದೀಪ್ ಮನವಿ ಒಂದನ್ನು ಮಾಡಿದ್ದಾರಂತೆ.
ಅದೇನೆಂದರೆ ತನಗೆ ಟಿಕೆಟ್ ಬೇಡ ಆದರೆ ತಮ್ಮ ಆಪ್ತ ಗೆಳೆಯ ಜ್ಯಾಕ್ ಮಂಜುನಾಥ್ ಅವರಿಗೆ ಚುನಾವಣಾ ಟಿಕೆಟ್ ನೀಡಿ ಎಂದು ಸುದೀಪ್ ಕೇಳಿಕೊಂಡಿದ್ದಾರಂತೆ. ಒಂದುವೇಳೆ ಚಿಕ್ಕಪೇಟೆ ಕ್ಷೇತ್ರದಲ್ಲಿ ಉದಯ್ ಗರುಡಾಚಾರ್ ಅವರಿಗೆ ಟಿಕೆಟ್ ನೀಡದೇ ಇದ್ದರೆ ತಮ್ಮ ಸ್ನೇಹಿತ ಮಂಜುನಾಥ್ ಗೌಡ ( ಜ್ಯಾಕ್ ಮಂಜು ) ಅವರಿಗೆ ಟಿಕೆಟ್ ನೀಡಿ ಎಂದಿದ್ದಾರಂತೆ.

ಇನ್ನು ಕಿಚ್ಚ ಸುದೀಪ್ ರಾಜಕೀಯದಲ್ಲಿ ಮಾತ್ರವಲ್ಲದೇ ಸಿನಿಮಾ ನಿರ್ಮಾಣ ಹಾಗೂ ವಿತರಣೆಯಲ್ಲಿಯೂ ಸಹ ಮೊದಲಿಗೆ ತಮ್ಮ ಗೆಳೆಯ ಜ್ಯಾಕ್ ಮಂಜು ಅವರನ್ನು ಮುಂದೆ ಕಣಕ್ಕೆ ಬಿಟ್ಟು ಬಳಿಕ ತಾವು ಅಖಾಡಕ್ಕೆ ಇಳಿಯುವ ರೂಢಿ ಮಾಡಿಕೊಂಡಿದ್ದಾರೆ. ಮೊದಲಿಗೆ ನಿರ್ಮಾಪಕನಾಗಿ ಜ್ಯಾಕ್ ಮಂಜು ಅವರನ್ನು ಮುಂದೆ ಬಿಟ್ಟು ಬೆಂಬಲ ನೀಡಿದ್ದ ಸುದೀಪ್ ಬಳಿಕ ತಾವೇ ನಿರ್ಮಾಪಕರಾದರು. ಅದೇ ರೀತಿ ಈ ಬಾರಿ ಚುನಾವಣೆಯಲ್ಲಿ ಜ್ಯಾಕ್ ಮಂಜು ಅವರನ್ನು ನಿಲ್ಲಿಸಿ ಅವರ ಪರ ಪ್ರಚಾರ ಮಾಡುವುದು ಸುದೀಪ್ ಅವರ ಯೋಜನೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಇಷ್ಟು ದಿನಗಳ ಕಾಲ ಸಿನಿಮಾ ರಂಗದಲ್ಲಿ ಒಳ್ಳೊಳ್ಳೆ ಸಿನಿಮಾಗಳನ್ನು ಮಾಡಿ ಅಭಿನಯ ಚಕ್ರವರ್ತಿ, ಬಾಕ್ಸ್ ಆಫೀಸ್ ಬಾದ್‌ಶಾ ಎನಿಸಿಕೊಂಡಿದ್ದ ಕಿಚ್ಚ ಸುದೀಪ್ ರಾಜಕೀಯಕ್ಕೆ ಕಾಲಿಟ್ಟರೆ ಅವರ ಅಭಿಮಾನಿಗಳು ಯಾವ ರೀತಿ ಸ್ವೀಕಾರ ಮಾಡಲಿದ್ದಾರೆ ಎಂಬುದು ಈಗ ಕಾಡುತ್ತಿರುವ ಪ್ರಶ್ನೆಯಾಗಿದೆ.


Click it and Unblock the Notifications











