'ಮಾರ್ಕ್' ಮೇನಿಯಾ ಶುರು ; ಗ್ಯಾಂಗ್‌ಸ್ಟರ್ಸ್ Vs ಪೊಲೀಸ್ - ಕಿಚ್ಚ ಸುದೀಪ್ ರೌದ್ರಾವತಾರ
ಸುದೀಪ್ .. ಕನ್ನಡ ಚಿತ್ರರಂಗದ ಕೆಚ್ಚೆದೆಯ ಕಿಚ್ಚ. ಅಭಿಮಾನಿಗಳ ಪಾಲಿನ ಪ್ರೀತಿಯ ಅಭಿನಯ ಚಕ್ರವರ್ತಿ. ನಾನು ನ್ಯಾಷನಲ್ ಸ್ಟಾರ್ ಎಂದು ಈಗ ಕಾಲರ್ ಎತ್ತಿಕೊಂಡು ಓಡಾಡುವರ ನಡುವೆ ಆ ಕಾಲದಲ್ಲಿಯೇ ಕನ್ನಡ, ತೆಲುಗು, ತಮಿಳು, ಹಿಂದಿ ಈ ಐದೂ ಭಾಷೆಗಳಲ್ಲಿ ಮಿಂಚಿದ ಸುದೀಪ್ ಕೇವಲ ನಾಯಕ ಮಾತ್ರ ಅಲ್ಲ ನಿರ್ದೇಶಕ ಕೂಡ ಹೌದು. ಗಾಯಕ ಕೂಡ ಹೌದು.
ಕ್ರಿಕೆಟ್ ಪ್ಲೇಯರ್ ಕೂಡ ಹೌದು. ಕೇವಲ ಇಷ್ಟೇ ಅಲ್ಲ ಅತ್ಯುತ್ತಮ ನಿರೂಪಕ ಕೂಡ ಹೌದು. ಇಂಥಾ ಸುದೀಪ್ ಕಳೆದ ವರ್ಷ ''ಮ್ಯಾಕ್ಸ್'' ಮೂಲಕ ಬೆಳ್ಳಿತೆರೆಯಲ್ಲಿ ಅಬ್ಬರಿಸಿದ್ದರು. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಸಿದ್ದರು. ಈ ವರ್ಷ ''ಮಾರ್ಕ್'' ಚಿತ್ರದ ಸರದಿ.

ಹೌದು.. ''ಮಾರ್ಕ್'', ಪಕ್ಕದ ಮನೆಯ ನಿರ್ದೇಶಕ ವಿಜಯ್ ಕಾರ್ತಿಕೆಯನ್ ಜೊತೆ ಸೇರಿ ಸುದೀಪ್ ಮಾಡಿರುವ ಎರಡನೇ ಮಹಾಯಜ್ಞ. ''ಪ್ಯಾನ್ ಇಂಡಿಯಾ'' ಲೆವಲ್‌ನಲ್ಲಿ ಇದೇ ಡಿಸೆಂಬರ್ 25ಕ್ಕೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿರುವ ಈ ಚಿತ್ರದ ಮತ್ತೊಂದು ಟೀಸರ್ ಇಂದು (ನವೆಂಬರ್ 7 ) ಬಿಡುಗಡೆಯಾಗಿದೆ. ಕಿಚ್ಚ ಸುದೀಪ್ ಅವರ ಅಸಂಖ್ಯಾತ.. ಅಗಣಿತ.. ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಬಿಡುಗಡೆಯಾದ ಒಂದು ಗಂಟೆಯಲ್ಲಿ (06-45 ರಿಂದ 07-45ರವರೆಗೆ ) ಕನ್ನಡದಲ್ಲಿ 107,245ಕ್ಕೂ ಅಧಿಕ ವೀವ್ಸ್‌ನ ಈ ಇಂಟ್ರಡಕ್ಷನ್ ಟೀಸರ್ ಪಡೆದಿದೆ ಅಂದರೆ, ''ಮಾರ್ಕ್'' ಕ್ರೇಜ್ ಹೇಗಿದೆ ಎನ್ನುವುದನ್ನು ನೀವೆ ಲೆಕ್ಕ ಹಾಕಿ.
1; 13 ನಿಮಿಷ ಇರುವ ಈ ಟೀಸರ್ ಚಿತ್ರದ ಮೇಲಿನ ನಿರೀಕ್ಷೆಗಳನ್ನು ಇನ್ನೂ ಹೆಚ್ಚಿಸಿದ್ದು, ಚಿತ್ರವನ್ನು ಬೆಳ್ಳಿತೆರೆಯಲ್ಲಿ ಕಣ್ತುಂಬಿಕೊಳ್ಳುವ ಆತುರ ಕಾತುರ ಚಿತ್ರ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವರು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ''ಮಾರ್ಕ್''ಗೆ ಉಘೇ ಉಘೇ ಎನ್ನುತ್ತಿದ್ದಾರೆ. ಟೀಸರ್ ಮಾತ್ರ ಬೆಂಕಿ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.''ಮಾರ್ಕ್'' ಬಗ್ಗೆ ಮಾತಾಡಬೇಕಾದರೆ ಮನಸಲ್ಲೇ ಮಾತಾಡ್ಬೇಕು ಎಂಬ ಡೈಲಾಗ್‌ಗೆ ಹಲವರು ಈಗಲೇ ಶಿಳ್ಳೆ ಹೊಡೆಯಲು ಶುರು ಮಾಡಿದ್ದಾರೆ.
ಎಂದಿನಂತೆ ಸುದೀಪ್ ಅವರ ಸ್ಟೈಲ್ ಮತ್ತು ಸ್ವ್ಯಾಗ್‌ಗೆ ಇವರ ಅಭಿಮಾನಿಗಳು ಫಿದಾ ಆಗಿದ್ಧಾರೆ. ಅದರಲ್ಲಿಯೂ ರೌಡಿಯ ಕುತ್ತಿಗೆ ಹಿಡಿದು ಮೇಲಕ್ಕೆತ್ತಿ ಮದ್ಯ ಕುಡಿಯುವ ದೃಶ್ಯವನ್ನು ನೋಡಿ ಸುದೀಪ್ ಅವರಿಗೆ ಸುದೀಪ್ ಅವರೆ ಸಾಟಿ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ''ಮಾರ್ಕ್'' ಯಾರು ..? ಈ ಪ್ರಶ್ನೆಗೆ ಪೊಲೀಸ್, ಇವರ ಪಾತ್ರದ ಹೆಸರು ಅಜಯ್ ಮಾರ್ಕೆಂಡೆ ಎಂಬ ಉತ್ತರ ಎಲ್ಲರಿಗೆ ಈಗಾಗಲೇ ಗೊತ್ತು. ಆದರೆ ಈ ''ಮಾರ್ಕ್''ನ ಕಥೆ ಮತ್ತು ರೌಡಿಗಳ ವ್ಯಥೆ ಏನು ಎನ್ನುವುದರ ಸುಳಿವು, ಬಿಡುಗಡೆಯಾದ ಟೀಸರ್‌ನಲ್ಲಿ ಇಲ್ಲದಿದ್ದರೂ ಕೂಡ ''ಮಾರ್ಕ್'' ಗ್ಯಾಂಗಸ್ಟರ್ ಮತ್ತು ಒಬ್ಬ ಅಸಾಧಾರಣ ಅಸಾಮಾನ್ಯ ಪೊಲೀಸ್ ಅಧಿಕಾರಿಯ ಘರ್ಷಣೆಯ ಕಥೆ ಎನ್ನುವುದು ಟೀಸರ್ ನೋಡಿದರೆ ಮೇಲ್ನೋಟಕ್ಕೆ ಗೊತ್ತಾಗುತ್ತೆ.

''ಮಾರ್ಕ್''ನ ಕೊಂದವರಿಗೆ ಬಹುಮಾನವನ್ನು ಗ್ಯಾಂಗಸ್ಟರ್‌ಗಳ ಲೀಡರ್ ಘೋಷಣೆ ಮಾಡುತ್ತಾನೆ. ಹಣದಾಸೆಗೆ ''ಮಾರ್ಕ್'' ಜೀವ ತೆಗೆಯಲು ರೌಡಿಗಳ ಗುಂಪು ಹಪಹಪಿಸುತ್ತೆ. ಆದರೆ ಉರುಳುವುದು ಹೆಣಗಳ ರಾಶಿಯೇ ಹೊರತು ''ಮಾರ್ಕ್'' ಇಲ್ಲಿ ಕದಲುವುದಿಲ್ಲ. ಹೆದರುವುದಿಲ್ಲ.
ಸುದೀಪ್ ಅವರ ಜೊತೆ ನವೀನ್ ಚಂದ್ರ, ದೀಪ್ಶಿಕಾ, ಅರ್ಚನಾ ಕೊಟ್ಟಿಗೆ, ರೋಶಿನಿ ಪ್ರಕಾಶ್ ಹಾಗೂ ನಿಶ್ವಿಕಾ ನಾಯ್ಡು 'ಮಾರ್ಕ್' ಚಿತ್ರದ ತಾರಾಗಣದಲ್ಲಿದ್ದಾರೆ. ಡ್ರ್ಯಾಗನ್ ಮಂಜು ಕೂಡ ಚಿತ್ರದಲ್ಲಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಚಿತ್ರವನ್ನು ಸತ್ಯಜ್ಯೋತಿ ಫಿಲ್ಮ್ಸ್
ನಿರ್ಮಾಣ ಮಾಡಿದೆ. ಕಿಚ್ಚ ಸುದೀಪ್ ಕೂಡ ಚಿತ್ರಕ್ಕೆ ಕಾಸು ಹೂಡಿದ್ದಾರೆ.
ಸದ್ಯ ಟೀಸರ್ ಬಿಡುಗಡೆಯಾಗಿದೆ. ''ಮಾರ್ಕ್'' ಮೇನಿಯಾ ಶುರುವಾಗಿದೆ. ಇನ್ನೇನು ಕೆಲವೇ ದಿನ ಈ ಡಿಸೆಂಬರ್ 25ರಂದು ''ಮಾರ್ಕ್'' ಮೆರವಣಿಗೆ ದೇಶದೆಲ್ಲೆಡೆ ಹೊರಡಲಿದೆ. ಅದಕ್ಕೂ ಮುನ್ನ ಚಿತ್ರತಂಡ ದೇಶವ್ಯಾಪಿ ಚಿತ್ರದ ಪ್ರಚಾರವನ್ನು ಮಾಡಲು ಕಣಕ್ಕಿಳಿಯಲಿದೆ.


Click it and Unblock the Notifications










