'ಮ್ಯಾಕ್ಸ್', 'ಟಾಕ್ಸಿಕ್', 'ಭೈರತಿ ರಣಗಲ್', 'ಮಾರ್ಟಿನ್'; ಕಥೆ ಮುಗಿದಿಲ್ಲ.. ಪಿಕ್ಚರ್ ಅಬಿ ಬೀ ಬಾಕಿ ಹೈ
ಸಿನಿಮಾ ಬಿಡುಗಡೆಗೆ ಮುನ್ನ ಟೀಸರ್ ರಿಲೀಸ್, ಟ್ರೈಲರ್ ಬಿಡುಗಡೆ, ಹಾಡುಗಳ ಬಿಡುಗಡೆ ಹೀಗೆ ಹಲವಾರು ಕಾರ್ಯಕ್ರಮಗಳು ಇದ್ದೇ ಇರುತ್ತವೆ. ಸದ್ಯಕ್ಕೆ ಟೀಸರ್ ಬಿಟ್ಟು ನಿರೀಕ್ಷೆ ಹುಟ್ಟಿಸಿರುವ, ಈ ವರ್ಷ ಬಿಡುಗಡೆಗೆ ಸಜ್ಜಾಗಿರುವ ಫೇಮಸ್ ಕನ್ನಡ ಸ್ಟಾರ್‌ಗಳ ಸಿನಿಮಾಗಳ ಕುರಿತು ನೋಡೋಣ ಬನ್ನಿ.
ಮ್ಯಾಕ್ಸ್' ಗಾಗಿ ಕಾಯುತ್ತಿರುವ ಫ್ಯಾನ್ಸ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾ 'ಮ್ಯಾಕ್ಸ್'ನ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್ ಅವರೊಂದಿಗೆ ಸುನೀಲ್ ಮತ್ತು ವರಲಕ್ಷ್ಮಿ ಶರತ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸುದೀಪ್ ಅವರ ಧ್ವನಿಯಲ್ಲಿ ನರ್ಸರಿ ರೈಮ್ 'ಬಾ ಬಾ ಬ್ಲ್ಯಾಕ್ ಶೀಪ್' ಸಾಲುಗಳು ಸಿನಿಮಾದ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅಲ್ಲದೆ, ಸುದೀಪ್ ಅವರ ಪಾತ್ರವು ಬೇರೆ ಬೇರೆ ವ್ಯಕ್ತಿಗಳನ್ನು ಭೇಟೆಯಾಡುವ ಮೂಲಕ ಸಸ್ಪೆನ್ಸ್ ಕ್ರಿಯೇಟ್ ಮಾಡಿದೆ. ಇನ್ನು ಟೀಸರ್‌ನ ಕೊನೆಯಲ್ಲಂತೂ ತಮ್ಮ ನೆಚ್ಚಿನ ನಾಯಕ ಹಾಕಿರುವ ಸ್ಟೆಪ್ಟ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಒಟ್ಟಿನಲ್ಲಿ 'ಮ್ಯಾಕ್ಸ್' ಚಿತ್ರತಂಡವು ನಿರೀಕ್ಷೆಯನ್ನು ಹೆಚ್ಚಿಸಿರುವುದರೊಂದಿಗೆ ಬೇಗ ಬಿಡುಗಡೆ ಮಾಡುವ ಭರವಸೆಯನ್ನೂ ನೀಡಿದೆ. ಚಿತ್ರವು ಕನ್ನಡವನ್ನು ಹೊರತುಪಡಿಸಿ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸದ್ಯ ಮ್ಯಾಕ್ಸ್ ಶೂಟಿಂಗ್ ಮುಗಿಸಿರುವ ಸುದೀಪ್ ತಮ್ಮ ಹೊಸ ಚಿತ್ರ ಬಿಡುಗಡೆಗೆ ಮುನ್ನವೇ ಮುಂದಿನ ಸಿನೆಮಾ 'ಬಿಲ್ಲ ರಂಗ ಭಾಷಾ'ಗಾಗಿ ತಯಾರಾಗುತ್ತಿದ್ದಾರೆ.
ಧ್ರುವ ಸರ್ಜಾ 'ಮಾರ್ಟಿನ್'
'ಮ್ಯಾಕ್ಸ್'ಗಿಂತಲೂ ಮುನ್ನ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ರಿಲೀಸ್ ಆಗುತ್ತಿದೆ. ಎಪಿ ಅರ್ಜುನ್ ನಿರ್ದೇಶಿಸಿದ ಈ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಿರುವುದರಿಂದ ನಿರೀಕ್ಷೆಗಳೇನು ಕಮ್ಮಿಯಿಲ್ಲ. ಈಗಾಗಲೇ ಟೀಸರ್ ರಿಲೀಸ್ ಆಗಿದ್ದು, ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಹೇಗೆ ಸದ್ದು ಮಾಡುತ್ತೆ ಅನ್ನೋ ಕುತೂಹಲವಿದೆ.
ತೆರೆಗೆ 'ಟಾಕ್ಸಿಕ್' ಯಾವಾಗ?
'ಕೆಜಿಎಫ್'ನಲ್ಲಿ ತಮ್ಮ ಅಮೋಘ ಅಭಿನಯದಿಂದ ಹೆಸರುವಾಸಿಯಾಗಿರುವ ರಾಕಿಂಗ್ ಸ್ಟಾರ್ ಯಶ್, ತಮ್ಮ ಮುಂದಿನ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್'ಗಾಗಿ ಸಜ್ಜಾಗಿದ್ದಾರೆ. ಮಲಯಾಳಂ ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

ಗ್ರಾಫಿಕ್ಸ್ ಒಳಗೊಂಡು ಗಮನ ಸೆಳೆದಿರುವ 'ಟಾಕ್ಸಿಕ್' ಚಿತ್ರದ ಟೀಸರ್ ಅಭಿಮಾನಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಅದ್ಭುತವಾದ ಹಿನ್ನೆಲೆ ಸಂಗೀತದೊಂದಿಗೆ ಮೂಡಿ ಬಂದ ಟೀಸರ್ ನಲ್ಲಿ ಯಶ್ ಅವರ ರಾಕಿಂಗ್ ಸ್ಟೈಲ್ ಎಲ್ಲರನ್ನೂ ಮೋಡಿ ಮಾಡಿತ್ತು. ಅಲ್ಲದೆ ಕರೀನಾ ಕಪೂರ್, ಸಾಯಿ ಪಲ್ಲವಿ ಸೇರಿದಂತೆ ಫೇಮಸ್ ಕಲಾವಿದರು ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಅಂತೂ ಟಾಕ್ಸಿಕ್ ಮತ್ತೊಂದು ದೊಡ್ಡ ಪ್ಯಾನ್-ಇಂಡಿಯಾ ಚಲನಚಿತ್ರವಾಗಲಿದೆ ಎಂಬ ನಿರೀಕ್ಷೆ ಇದೆ. ಎಲ್ಲವು ಅಂದುಕೊಂಡಂತೆ ಆದಲ್ಲಿ ಏಪ್ರಿಲ್ 10, 2025ರಂದು 'ಟಾಕ್ಸಿಕ್' ತೆರೆಗೆ ಬರಲಿದೆ.
ಯಾವಾಗ ಬರುತ್ತೆ 'ಭೈರತಿ ರಣಗಲ್'
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ರುಕ್ಮಿಣಿ ವಸಂತ್ ಅಭಿನಯದ 'ಭೈರತಿ ರಣಗಲ್' ಕನ್ನಡಿಗರು ಕಾತುರದಿಂದ ಕಾಯುತ್ತಿರುವ ಮತ್ತೊಂದು ಸಿನಿಮಾ. ನರ್ತನ್ ನಿರ್ದೇಶನದ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಗೀತಾ ಪಿಕ್ಚರ್ಸ್ ಅಡಿಯಲ್ಲಿ ಬರುತ್ತಿರುವ ಸಿನಿಮಾದಲ್ಲಿ ದೇವರಾಜ್, ರಾಹುಲ್ ಬೋಸ್, ವಸಿಷ್ಟ ಸಿಂಹ ಸೇರಿದಂತೆ ಕನ್ನಡಿಗ ತಾರಾ ಬಳಗವಿದೆ. ಸೆಪ್ಟೆಂಬರ್ 2024ಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.
ಡೆವಿಲ್ ಎಂಟ್ರಿ ಯಾವಾಗ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಆಕ್ಷನ್ ಎಂಟರ್‌ಟೈನರ್ ಚಿತ್ರವಾದ 'ಡೆವಿಲ್ ದಿ ಹೀರೋ' ಈ ವರ್ಷದ ನಿರೀಕ್ಷಿತ ಸಿನೆಮಾಗಳಲ್ಲಿ ಒಂದು. ಫೆಬ್ರವರಿ 15 ರಂದು ಬಿಡುಗಡೆಯಾದ ಈ ಚಿತ್ರದ ಟೀಸರ್ ಭಾರೀ ಪ್ರತಿಕ್ರಿಯೆಯನ್ನು ಪಡೆದಿತ್ತು. ಅಲ್ಲದೆ ಡೆವಿಲ್ ಸಿನಿಮಾ ಮೂಲಕ ನಿರ್ದೇಶಕ ಕಮ್ ನಟ ಮಹೇಶ್ ಮಂಜ್ರೇಕರ್ ಅವರು 19 ವರ್ಷಗಳ ನಂತರದ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಈ ವರ್ಷದ ಕೊನೆಯಲ್ಲಿ ಬಿಡುಗಡೆಗೆ ಸಜ್ಜಾಗಿತ್ತು. ಆದರೆ, ದರ್ಶನ್ ಜೈಲಿನಲ್ಲಿ ಇರುವುದರಿಂದ ಮುಂದಿನ ನಡೆ ಏನೆಂದು ಸದ್ಯಕ್ಕೆ ಕುತೂಹಲ.


Click it and Unblock the Notifications











