'ಮ್ಯಾಕ್ಸ್' ಗೆದ್ದ ಬೆನ್ನಲ್ಲೇ 'ಬಾಸ್‌ಇಸಂ' ಅಂತ್ಯ ಎಂದ ಪ್ರದೀಪ್; ದರ್ಶನ್ ಫ್ಯಾನ್ಸ್ ಗರಂ
ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಕ್ರಿಸ್‌ಮಸ್ ರಜೆ ಚಿತ್ರಕ್ಕೆ ಪ್ಲಸ್ ಆಗಿದೆ. ಮೊದಲ ದಿನವೇ ಸಿನಿಮಾ 8 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಬಾಕ್ಸಾಫೀಸ್ ಪಂಡಿತರು ಅಂದಾಜಿಸುತ್ತಿದ್ದಾರೆ. ಈ ಸಕ್ಸಸ್ ಕಿಚ್ಚನಿಗೆ ಸಂತಸ ತಂದಿದೆ. ಆಪ್ತರ ಜೊತೆ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ಪತ್ನಿ ಪ್ರಿಯಾ ಜೊತೆ ಸುದೀಪ್ 'ಮ್ಯಾಕ್ಸ್' ಸಕ್ಸಸ್ ಸೆಲೆಬ್ರೇಟ್ ಮಾಡಿರುವ ವೀಡಿಯೋ ವೈರಲ್ ಆಗುತ್ತಿದೆ. ಸುದೀಪ್ ಆಪ್ತ ಪ್ರದೀಪ್ ಸೇರಿದಂತೆ ಹಲವರು ಈ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಆದರೆ ಸುದೀಪ್ ಕಟ್ ಮಾಡಿದ ಕೇಕ್ ಮೇಲೆ ಬರೆದಿರುವ ಬರಹ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟಾಕ್ಕಿದೆ. ಮುಖ್ಯವಾಗಿ ದರ್ಶನ್ ಅಭಿಮಾನಿಗಳು ಈ ಬಗ್ಗೆ ಟ್ರೋಲ್ ಮಾಡುತ್ತಿದ್ದಾರೆ. ಇದು ಸಹಜವಾಗಿಯೇ ಇಬ್ಬರು ನಟರ ಅಭಿಮಾನಿಗಳ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ.

ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಪದೇ ಪದೆ ಸೋಶಿಯಲ್ ಮೀಡಿಯಾದಲ್ಲಿ ಕಿರಿಕ್ ನಡೆಯುತ್ತಿರುತ್ತದೆ. ಇವರನ್ನು ಅವರು ಅವರನ್ನು ಇವರು ಕೆಣಕುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. 'ಮ್ಯಾಕ್ಸ್' ಸಿನಿಮಾ ಬಗ್ಗೆಯೂ ನೆಗೆಟಿವ್ ಹಬ್ಬಿಸುವ ಪ್ರಯತ್ನ ನಡೀತಿದೆ. ಆದರೆ ಅದನ್ನೆಲ್ಲಾ ಮೀರಿ ಸಿನಿಮಾ ಸದ್ದು ಮಾಡ್ತಿದೆ. ಇದೀಗ ಈ ಕೇಕ್ ವಿಚಾರ ಹೊಸ ಚರ್ಚೆ ಹುಟ್ಟಾಕ್ಕಿದೆ.
ನಟ ಪ್ರದೀಪ್ "Bossism ಕಾಲ ಮುಗೀತು. Maximum Mass ಕಾಲ ಶುರುವಾಯ್ತು" ಎಂದು ಬರೆದಿರುವ ಕೇಕ್ ತಂದು ಸುದೀಪ್ ಅವರಿಂದ ಕಟ್ ಮಾಡಿಸಿದ್ದಾರೆ. ಆದರೆ ಇದು ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಪರೋಕ್ಷವಾಗಿ ನಮ್ಮ ನೆಚ್ಚಿನ ನಟ ಹಾಗೂ ಅಭಿಮಾನಿಗಳನ್ನು ಉದ್ದೇಶಿಸಿ ಇಂತಾದೊಂದು ಬರಹ ಬರೆಸಿದ್ದಾರೆ ಎಂದು ಗರಂ ಆಗಿದ್ದಾರೆ.
ಟ್ವಿಟರ್‌ನಲ್ಲಿ ಪ್ರದೀಪ್ ಈ ಫೋಟೊ ಹಂಚಿಕೊಳ್ಳುತ್ತಿದ್ದಂತೆ ಕಾಮೆಂಟ್ ಬಾಕ್ಸ್‌ನಲ್ಲಿ ದರ್ಶನ್ ಅಭಿಮಾನಿಗಳು ಆಕ್ಟೀವ್ ಆಗಿದ್ದಾರೆ. ಟ್ರೋಲ್ ಮಾಡಲು ಆರಂಭಿಸಿದ್ದಾರೆ. ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು 'ಬಾಸ್' ಎಂದು 'ಡಿಬಾಸ್' ಎಂದು ಸ್ಯಾಂಡಲ್‌ವುಡ್ 'ಬಾಸ್' ಎಂದು ಕರೆಯುತ್ತಾರೆ. ಇತ್ತೀಚೆಗೆ ಅಭಿಮಾನಿಯೊಬ್ಬ ಬಾಸ್ ರೆಕಾರ್ಡ್ ಮುರಿಯೋಕೆ ಬಾಸ್ ಬರಬೇಕು ಎಂದು ಹೇಳಿದ್ದ ವೀಡಿಯೋ ವೈರಲ್ ಆಗಿತ್ತು. ಇದೆಲ್ಲದರ ನಡುವೆ ಪ್ರದೀಪ್ ಕೇಕ್ ವಿಚಾರ ಮುನ್ನಲೆಗೆ ಬಂದಿದೆ.
ಸುದೀಪ್ ಆಪ್ತರಾದ ಪ್ರದೀಪ್ ಅದ್ಯಾವ ಕಾರಣಕ್ಕೆ ಈ ರೀತಿ ಕೇಕ್ ಮೇಲೆ ಬರೆಸಿದರು ಎನ್ನುವುದು ಗೊತ್ತಿಲ್ಲ. ಆದರೆ ದರ್ಶನ್ ಅಭಿಮಾನಿಗಳು ಮಾತ್ರ ನಮಗೆ ಹೇಳಿದ್ದು ಎಂದುಕೊಂಡು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಸದ್ಯ ಟ್ವಿಟರ್‌ನಲ್ಲಿ ಇದು ವೈರಲ್ ಆಗ್ತಿದೆ. ನಟ ಸುದೀಪ್ ಇಂತಹ ಹೊಗಳು ಭಟ್ಟರನ್ನು ದೂರ ಇಡಬೇಕು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಮೊದಲ ದಿನ ನರ್ತಕಿ ಚಿತ್ರಮಂದಿರದಲ್ಲಿ ಬೆಳಗ್ಗೆ 10.30ಕ್ಕೆ ಪ್ರದೀಪ್ 'ಮ್ಯಾಕ್ಸ್' ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. 'ರಂಗನ್ ಸ್ಟೈಲ್', 'ಟೈಗರ್', 'ಎಲ್ಲೋ ಬೋರ್ಡ್' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಪ್ರದೀಪ್ ನಟಿಸಿದ್ದಾರೆ. ಸಿಸಿಎಲ್ ಕ್ರಿಕೆಟ್‌ನಲ್ಲಿ ಕೂಡ ಸುದೀಪ್ ಜೊತೆ ಆಡಿದ್ದರು.
'ಮ್ಯಾಕ್ಸ್' ಸಿನಿಮಾ ವಿಚಾರಕ್ಕೆ ಬಂದರೆ ಕಿಚ್ಚನ ಮಾಸ್ ಅವತಾರಕ್ಕೆ ಸಿನಿರಸಿಕರು ಫಿದಾ ಆಗಿದ್ದಾರೆ. ಕೆಲ ಸಣ್ಣ ಪುಟ್ಟ ತಪ್ಪುಗಳನ್ನು ಬಿಟ್ಟರೆ ಒಟ್ಟಾರೆ ಸಿನಿಮಾ ನೋಡುಗರನ್ನು ರಂಜಿಸುತ್ತಿದೆ. ಕಿಚ್ಚನ ಅಭಿನಯಕ್ಕೆ ಹೆಚ್ಚಿನ ಅಂಕ ಸಿಕ್ಕಿದೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ದೊಡ್ಡದಾಗಿ ಸದ್ದು ಮಾಡುವ ಸುಳಿವು ಸಿಗುತ್ತಿದೆ. ಈ ವೀಕೆಂಡ್ ಚಿತ್ರಕ್ಕೆ ರೆಸ್ಪಾನ್ಸ್ ಹೇಗಿರುತ್ತದೆ ಕಾದು ನೋಡಬೇಕಿದೆ.


Click it and Unblock the Notifications











