»   » ಕಿಚ್ಚ ಸುದೀಪ್ ಅಭಿಮಾನಿಗಳಿಗೆ 'ಬರ್ತ್ ಡೇ' ಗಿಫ್ಟ್

ಕಿಚ್ಚ ಸುದೀಪ್ ಅಭಿಮಾನಿಗಳಿಗೆ 'ಬರ್ತ್ ಡೇ' ಗಿಫ್ಟ್

Posted By:
Subscribe to Filmibeat Kannada
ಸುದೀಪ್ ಹುಟ್ಟುಹಬ್ಬದಂದು (ಸೆಪ್ಟೆಂಬರ್ 2) ಅವರ ನಾಯಕತ್ವದಲ್ಲಿ ಹೊಸ ಚಿತ್ರವೊಂದು ಘೋಷಣೆಯಾಗಲಿದೆ. ನಿರ್ಮಾಪಕ ಹಾಗೂ ವಿತರಕರಾದ 'ಎನ್ ಕುಮಾರ್' ಈ ಹೊಸ ಚಿತ್ರವನ್ನು ನಿರ್ಮಿಸಲಿದ್ದು ಅದನ್ನು ಮೂರು ಭಾಷೆಗಳಲ್ಲಿ ತರಲು ಯೋಚಿಸಿದ್ದಾರೆ. ಈ ಹೊಸ ಚಿತ್ರಕ್ಕೆ ಬಾಲಿವುಡ್ ಬೆಡಗಿಯೊಬ್ಬರನ್ನು, ಅದರಲ್ಲೂ ನಂ 1 ನಟಿಯನ್ನು ನಾಯಕಿ ಮಾಡಲಿದ್ದಾರೆ ಎಂಬ ವದಂತಿಗಳು ಗಾಂಧಿನಗರದಲ್ಲಿ ದಟ್ಟವಾಗಿವೆ.

ಈ ಮೊದಲು ಕಿಚ್ಚ ಸುದೀಪ್ ನಾಯಕರಾಗಿದ್ದ 'ರಂಗ ಎಸ್ಸೆಸ್ಸೆಲ್ಸಿ', 'ಕಾಶಿ ಫ್ರಂ ವಿಲೇಜ್' ಚಿತ್ರಗಳನ್ನು ನಿರ್ಮಿಸಿದ್ದ ಈ ಎನ್ ಕುಮಾರ್, ನಂತರ ತೆಲುಗಿನ 'ಕಿಕ್' ಚಿತ್ರವನ್ನು ಕನ್ನಡಕ್ಕೆ ರಿಮೇಕ್‌ ಮಾಡಲು ಹಾಗೂ ಅದರಲ್ಲೂ ಕಿಚ್ಚರನ್ನೇ ಹೀರೋ ಮಾಡಲು ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಆದರೆ ಆ ಪ್ರಾಜೆಕ್ಟ್ ಸದ್ದು ಮಾಡಿ ಬಿದ್ದು ಹೋಯ್ತು! ಸುದೀಪ್ ಬೇರೆ ಬೇರೆ ಚಿತ್ರಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದರು.

ಈಗ ಮತ್ತೆ ಸುದೀಪ್ ಚಿತ್ರ ಮಾಡುವ ಮನಸ್ಸು ಮಾಡಿದ್ದಾರೆ ಎನ್ ಕುಮಾರ್. ಎಸ್ ಎಸ್ ರಾಜಮೌಳಿಯ 'ಈಗ' ತೆಲುಗು ಚಿತ್ರದ ಮೂಲಕ ಇದೀಗ ಜಗತ್ತಿನಾದ್ಯಂತ ಪ್ರಕಾಶಿಸುತ್ತಿರುವ ಸುದೀಪ್, ಬರಲಿರುವ ಎನ್ ಕುಮಾರ್ ನಿರ್ಮಾಣದ 'ತ್ರಿಭಾಷಾ' ಚಿತ್ರದಲ್ಲಿ ನಟಿಸುತ್ತಿರುವ ಹೊಸ ಸುದ್ದಿ ಕೇಳಿ ಕಿಚ್ಚ ಸುದೀಪ್ ಅಭಿಮಾನಿಗಳ 'ದಿಲ್ ಫುಲ್ ಖುಷ್' ಆಗಿದೆ. ಈ ಸುದ್ದಿ ನಿಜವಾಗಲಿ ಎಂದು ಕಿಚ್ಚ ಅಭಿಮಾನಿಗಳು ಕಾಣದ ದೇವರಿಕೆ ಹರಕೆ ಹೊತ್ತಿದ್ದಾರೆ.

ಬರಲಿರುವ ಈ ಚಿತ್ರಕ್ಕೆ ಈಗಾಗಲೇ ಮಹಾದೇವ್ ಎಂಬವರು ಕಥೆ ಬರೆದಿದ್ದು ಅದು ಸುದೀಪ್ ಅವರಿಗೂ ಇಷ್ಟವಾಗಿದೆ ಎಂಬ ಮಾಹಿತಿಯಿದೆ. ದಕ್ಷಿಣ ಭಾರತದ ಮೂರು ಭಾಷೆಗಳಲ್ಲಿ (ಕನ್ನಡ, ತಮಿಳು, ತೆಲುಗು) ಸದ್ಯಕ್ಕೆ ನಿರ್ಮಾಣವಾಗುವ ಈ ಚಿತ್ರವನ್ನು ನಂತರ ಹಿಂದಿಯಲ್ಲೂ ನಿರ್ಮಿಸಲು ನಿರ್ಮಾಪಕ ಕುಮಾರ್ ಯೋಚಿಸಿದ್ದಾರೆ. ಒಟ್ಟಿನಲ್ಲಿ ಚತುರ್ಭಾಷಾ ನಟ ಸುದೀಪ್ ಚಿತ್ರ ನಾಲ್ಕೂ ಭಾಷೆಗಳಲ್ಲಿ ಬರಲಿದೆ.

"ಈ ಚಿತ್ರಕ್ಕೆ ಕಥೆ ರೆಡಿಯಾಗಿದೆ. ಚಿತ್ರಕ್ಕೆ ನಿರ್ದೇಶಕರು ಯಾರು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಈಗಾಗಲೇ ಹಲವರ ಜೊತೆ ಮಾತುಕತೆ ನಡೆಯುತ್ತಿದೆ. ಯಾರೂ ನಮಗೆ ಹೊಂದಾಣಿಕೆ ಆಗಿಲ್ಲ ಎಂದರೆ ಸ್ವತಃ ಸುದೀಪ್ ಈ ಚಿತ್ರವನ್ನು ನಿರ್ದೇಶಿಸುತ್ತಾರೆ" ಎಂದಿದ್ದಾರೆ ಕುಮಾರ್. ಇದುವರೆಗೂ 25ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿರುವ ಕುಮಾರ್, ಬರಲಿರುವ ಚಿತ್ರಕ್ಕೆ ತಮ್ಮ ಈ ಮೊದಲಿನ ಎಲ್ಲಾ ಚಿತ್ರಗಳಿಗೆ ಹಾಕಿದ್ದ ಒಟ್ಟೂ ಹಣವನ್ನು ಸೇರಿಸಿದ್ದಕ್ಕಿಂತ ಹೆಚ್ಚು ಹಣವನ್ನು ಹೂಡಲಿದ್ದಾರಂತೆ.

ಚಿತ್ರವು ಅದ್ದೂರಿಯಾಗಿ ಮೂಡಿಬರಲಿದೆ ಎಂಬುದೀಗ ಕುಮಾರ್ ಮಾತಿನಿಂದ ಬಹಿರಂಗ. ಆದರೂ ಚಿತ್ರದ ಬಜೆಟ್ ಹಾಗೂ ಉಳಿದ ಎಲ್ಲಾ ಸಂಗತಿಗಳು ಸುದೀಪ್ ಅವರಿಗೆ ಬಿಟ್ಟಿದ್ದು ಎಂದಿದ್ದಾರೆ ಎನ್ ಕುಮಾರ್. ಒಟ್ಟಿನಲ್ಲಿ ಈ ಹೊಸ ಪ್ರಾಜೆಕ್ಟ್ ಸುದೀಪ್ ಹುಟ್ಟುಹಬ್ಬದಂದೇ ಘೋಷಣೆಯಾಗಲಿದೆ, ಎನ್ ಕುಮಾರ್ ಅದನ್ನು ನಿರ್ಮಿಸಲಿದ್ದಾರೆ ಎಂಬುದನ್ನು ಬಿಟ್ಟರೆ ಮಿಕ್ಕ ಮಾಹಿತಿಗಳೆಲ್ಲಾ ಸದ್ಯಕ್ಕೆ ಅಡ್ಡ ಗೋಡೆಯ ಮೇಲಿನ ದೀಪ. (ಒನ್ ಇಂಡಿಯಾ ಕನ್ನಡ)

English summary
Kichcha Sudeep New project Launches on his Birthday, 02 September 2012. Kannada famous Producer and Distributor N Kumar to Produce this movie for Sudeep in Three Languages. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada