29 ವರ್ಷಗಳ ಸಿನಿಜರ್ನಿ; ಅಂತರಾಳ ತೆರೆದಿಟ್ಟ ಕಿಚ್ಚ ಸುದೀಪ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಮ್ಯಾಕ್ಸ್' ಸಕ್ಸಸ್ ಸಂಭ್ರಮದಲ್ಲಿದ್ದಾರೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ತೆರೆಗೆ ಬಂದಿದ್ದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಇದೀಗ ಸಿಸಿಎಲ್ ಕ್ರಿಕೆಟ್ ಟೂರ್ನಿಗಾಗಿ ಕಸರತ್ತು ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ಕಿಚ್ಚ ಚಿತ್ರರಂಗಕ್ಕೆ ಬಂದು 29 ವರ್ಷ ಕಳೆದಿದೆ. ಈ ಖುಷಿಯನ್ನು ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ.
ಇವತ್ತಿಗೆ ಸರಿಯಾಗಿ 29 ವರ್ಷಗಳ ಹಿಂದೆ ಸುದೀಪ್ ಮೊದಲ ಬಾರಿ ಬಣ್ಣ ಹಚ್ಚಿ ಕ್ಯಾಮರಾ ಮುಂದೆ ನಿಂತಿದ್ದರು. 'ಬ್ರಹ್ಮ' ಎಂಬ ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಜೊತೆ ನಟಿಸೋ ಅವಕಾಶ ಸಿಕ್ಕಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ತೆರೆಗೆ ಬರಲಿಲ್ಲ. ಬಳಿಯ 'ತಾಯವ್ವ' ಚಿತ್ರದಲ್ಲಿ ಸುದೀಪ್ ಮಿಂಚಿದ್ದರು. ಆ ನಂತರ 'ಪ್ರತ್ಯರ್ಥ' ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಬಳಿಕ 'ಸ್ಪರ್ಶ' ಚಿತ್ರದ ಮೂಲಕ ಹೀರೋ ಆಗಿದ್ದರು. 'ಹುಚ್ಚ' ಚಿತ್ರದಿಂದ ದೊಡ್ಡ ಬ್ರೇಕ್ ಸಿಕ್ಕಿತ್ತು.

ಕಂಠೀರವ ಸ್ಟುಡಿಯೋದಲ್ಲಿ ಮೊದಲ ದಿನ ಬಣ್ಣ ಹಚ್ಚಿ 'ಬ್ರಹ್ಮ' ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ಕಾಣಿಸಿಕೊಂಡಿದ್ದರು. ಮುಂದೆ 40ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಗೆದ್ದರು. ಕನ್ನಡ ಮಾತ್ರವಲ್ಲದೇ ಟಾಲಿವುಡ್, ಬಾಲಿವುಡ್, ಕಾಲಿವುಡ್ ಸಿನಿಮಾಗಳಲ್ಲಿ ಮಿಂಚಿದ್ದರು. ರಾಜಮೌಳಿ ಸೇರಿದಂತೆ ಖ್ಯಾತ ಫಿಲ್ಮ್ ಮೇಕರ್ಸ್ ಜೊತೆ ಸುದೀಪ್ ಕೆಲಸ ಮಾಡಿದರು. ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿತು. ಮುಂದೆ ನಿರ್ದೇಶಕನಾಗಿ, ನಿರ್ಮಾಪಕನಾಗಿಯೂ ಸುದೀಪ್ ಗೆದ್ದರು.
ಕನ್ನಡ ಚಿತ್ರರಂಗದ ಸಕಲಕಲಾವಲ್ಲಭ ಕಿಚ್ಚ ಸುದೀಪ್. ನಟ, ನಿರ್ಮಾಪಕ, ನಿರ್ದೇಶಕ ಅಷ್ಟೇ ಅಲ್ಲ, ಒಳ್ಳೆ ಗಾಯಕ. ಸ್ಟಾರ್ ನಿರೂಪಕ. ಇನ್ನು ಒಳ್ಳೆ ಬಾಣಸಿಗ ಕೂಡ. ಚಿತ್ರರಂಗದಲ್ಲಿ 29 ವಸಂತಗಳನ್ನು ಪೂರೈಸಿದ ಸಂಭ್ರಮವನ್ನು ಸುದೀಪ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಇನ್ನು ಅಭಿಮಾನಿಗಳು ಸ್ಪೆಷಲ್ ಸಿಡಿಪಿ ರಿಲೀಸ್ ಮಾಡಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.
29 ವರ್ಷಗಳು... ನಾನು ಅನುಭವಿಸಿದ ಪ್ರಯಾಣಕ್ಕಾಗಿ ಅಪಾರ ಕೃತಜ್ಞತೆ ಭಾವ ಇದೆ. ಪ್ರೇಕ್ಷಕರನ್ನು ರಂಜಿಸುವುದು ಹಾಗೂ ಎಲ್ಲರೊಂದಿಗೆ ಪ್ರತಿಧ್ವನಿಸುವ ಕಥೆಗಳನ್ನು ಹಂಚಿಕೊಳ್ಳುವುದು ಒಂದು ಗೌರವ. ನಿಮ್ಮೆಲ್ಲರಿಂದ ನನಗೆ ದೊರೆತ ಪ್ರೀತಿ ಮತ್ತು ಬೆಂಬಲ ನನಗೆ ಸದಾ ಪ್ರೇರಣೆ. ನನ್ನ ಕೆಲಸದ ಬಗ್ಗೆ ಅಭಿಮಾನಿಗಳ ಪ್ರೀತಿ ನಿಜಕ್ಕೂ ನನ್ನ ಸೌಭಾಗ್ಯ. ನಿಮ್ಮ ಅಚಲ ಪ್ರೋತ್ಸಾಹವು ಪ್ರತಿಯೊಂದು ಸವಾಲನ್ನು ಸಾರ್ಥಕಗೊಳಿಸಿದೆ. ಅದು ನನಗೆ ಎಷ್ಟು ಅರ್ಥಪೂರ್ಣವಾಗಿದೆ ಅಂತ ವ್ಯಕ್ತಪಡಿಸಲು ಸಾಧ್ಯವಿಲ್ಲ. ಈ ಅದ್ಭುತ ಪ್ರಯಾಣದ ಭಾಗವಾಗಿದ್ದಕ್ಕಾಗಿ ನನ್ನ ಹೃದಯಾಳದಿಂದ ಧನ್ಯವಾದಗಳು ಎಂದು ನಾನು ಹೇಳಬಲ್ಲೆ" ಎಂದ ಸುದೀಪ್ ಬರೆದುಕೊಂಡಿದ್ದಾರೆ.
'ಹುಚ್ಚ' ಚಿತ್ರದಿಂದ ದೊಡ್ಡದಾಗಿ ಗೆದ್ದರೂ ಆ ಬಳಿಕ ಕೂಡ ಸುದೀಪ್ ಸಿನಿಜರ್ನಿ ಅಷ್ಟು ಸರಾಗವಾಗಿ ಇರಲಿಲ್ಲ. ಆರಂಭದಲ್ಲೇ ಕೆಲವರು ಐರೆನ್ ಲೆಗ್ ಹಣೆಪಟ್ಟಿ ಕಟ್ಟಿದ್ದರು. ಸಾಕಷ್ಟು ಬಾರಿ ತಮ್ಮ ಸಿನಿಪಯಣದಲ್ಲಿ ಕಿಚ್ಚ ಏಳುಬೀಳು ಕಂಡಿದ್ದಾರೆ. ಪ್ರತಿ ಬಾರಿ ಸೋತಾಗ ಕೂಡ ಮತ್ತೆ ಪುಟಿದೆದ್ದು ಬಂದಿದ್ದಾರೆ. ಅವಮಾನ ಮಾಡಿದವರ ಎದುರು ಸಾಧಿಸಿ ತೋರಿಸಿದ್ದಾರೆ.
ಕಿಚ್ಚನ ಈ 29 ವರ್ಷಗಳ ಸಿನಿಪಯಣಕ್ಕೆ ಅಭಿಮಾನಿಗಳು, ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ. ಆಪ್ತ ಪ್ರದೀಪ್ ರಿಪ್ಲೇ ಮಾಡಿ "29 ವರ್ಷದ ಅವಧಿಯಲ್ಲಿ ನಿಮ್ಮ ಅತ್ಯುತ್ತಮ ಕೊಡುಗೆಗಳು, ವೈಶಿಷ್ಟ್ಯಪೂರ್ಣ ಪಾತ್ರಗಳು ಮತ್ತು ಸಿನಿ ಪ್ರೇಮಿಗಳಿಗಾಗಿ ಮಾಡಿದ ಮಹೋನ್ನತ ಚಿತ್ರಗಳು ಸದಾಕಾಲ ಹೆಮ್ಮೆಪಡುವಂತದ್ದು. ನಿಮ್ಮ ಮುಂದಿನ ಯಶಸ್ಸು ಇನ್ನೂ ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳಲಿ ಅಣ್ಣ" ಎಂದು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











