BBK 11: ಬಿಗ್‌ಬಾಸ್‌ಗೆ ಸುದೀಪ್ ದಿಢೀರ್ ಗುಡ್‌ಬೈ; ಅಧಿಕೃತವಾಗಿ ಘೋಷಿಸಿದ ಕಿಚ್ಚ
ಬಿಗ್ ಬಾಸ್ ಕನ್ನಡ ಶೋ ಅಂದ್ರೆನೇ ಥಟ್ ಅಂತ ನೆನಪಾಗುವುದು ಸುದೀಪ್. ಕಳೆದ ಹತ್ತು ವರ್ಷದಿಂದ ಬಿಗ್ ಬಾಸ್ ಜರ್ನಿಯಲ್ಲಿ ಮುಂದುವರೆದಿದ್ದಾರೆ. ಬಿಗ್ ಬಾಸ್‌ನಲ್ಲಿ ವಾರದ ಕಥೆ ಕಿಚ್ಚನ ಜೊತೆಗೆ ಪಂಚಾಯ್ತಿ ಕೇಳುವುದಕ್ಕೇನೆ ಚೆಂದ. ಅದೆಷ್ಟೋ ಅಭಿಮಾನಿಗಳು ಅವರ ಪಂಚಾಯ್ತಿಗಾಗಿ ಕಾಯುತ್ತಿರುತ್ತಾರೆ. ಕೆಲವೊಂದು ವಾರ ಅವರು ಬಾರದೆ ಇದ್ದಾಗ ಬಿಗ್ ಬಾಸ್ ಅಷ್ಟಾಗಿ ಖುಷಿ ಕೊಡೋದೆ ಇಲ್ಲ. ಬಿಗ್ ಬಾಸ್ ಮನೆಯೂ ಬಿಕೋ ಎನ್ನುತ್ತದೆ.
ಸುದೀಪ್ ಅವರದ್ದೇ ಆದ ಒಂದು ಸ್ಟೈಲ್ ಇದೆ. ಆ ಗತ್ತು, ಗಾಂಭೀರ್ಯ ಅವರಿಗೆ ಮಾತ್ರ ಬರೋದು. ಪಂಚಾಯ್ತಿ ಕಟ್ಟೆಯಲ್ಲಿ ಅಷ್ಟು ಜನರ ತಪ್ಪನ್ನು ಅರ್ಥ ಮಾಡಿಸುವುದು, ನೋವಾಗದಂತೆ ನೋಡಿಕೊಳ್ಳುವುದು, ಕಾಲೆಳೆಯುವುದು ಅಷ್ಟು ಸುಲಭಕ್ಕೆ, ಇಷ್ಟು ಪರ್ಫೆಕ್ಟ್ ಆಗಿ ಯಾರಿಗೂ ಬರಲು ಸಾಧ್ಯವಿಲ್ಲ. ಬಾದ್ ಶಾ ಸಮಾಜದ ನಡುವೆ ಇರುವುದು ಹಾಗೇ. ಆದರೆ ಇನ್ಮುಂದೆ ನಾವೂ ಕಿಚ್ಚನ ಬಿಗ್ ಬಾಸ್ ಮಿಸ್ ಮಾಡಿಕೊಳ್ಳೋದು ಪಕ್ಕಾ.

ಮೂರನೇ ವಾರದತ್ತ ಬಿಗ್ ಬಾಸ್ 11
ಬಿಗ್ ಬಾಸ್ ಸೀಸನ್ 11 ಶುರುವಾಗಿ ಇಂದಿಗೆ ಮೂರು ವಾರ ಕಳೆದಿದೆ. ಇಂದಿನ ಕಿಚ್ಚನ ಪಂಚಾಯ್ತಿಯಲ್ಲಿ ಬಿಗ್ ಬಾಸ್ ಮಂದಿ ನಕ್ಕು ನಲಿದಿದ್ದಾರೆ. ಒಂದಷ್ಟು ಗೇಮ್‌ಗಳನ್ನು ಕಿಚ್ಚ ಸುದೀಪ್ ಆಡಿಸೊ, ಅವರವರ ಬಗ್ಗೆಯೇ ಅರ್ಥ ಮಾಡಿಕೊಳ್ಳುವಂತೆ ಮಾಡಿದ್ದರು. ಕಿಚ್ಚನ ಪಂಚಾಯ್ತಿ ಅಂದ್ರೆ ವೀಕ್ಷಕರಿಗೆ ಮಾತ್ರವಲ್ಲ, ಸ್ಪರ್ಧಿಗಳಿಗೂ ಖುಷಿಯೋ ಖುಷಿ.
ಮೂರು ವಾರಕ್ಕೆ ಶಾಕಿಂಗ್ ನ್ಯೂಸ್
ಮೂರು ವಾರವಷ್ಟೇ ಕಳೆದಿದೆ. ಆದರೆ ಕಿಚ್ಚ ಸುದೀಪ್ ಶಾಕಿಂಗ್ ನ್ಯೂಸ್ ಒಂದನ್ನು ನೀಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಿಗ್ ಬಾಸ್ ಕೊನೆಯ ಶೋ ಎಂದು ಟ್ವೀಟ್ ಮಾಡಿದ್ದಾರೆ. "BBK11ಗೆ ತೋರಿದ ಪ್ರೀತಿಗೆ ಎಲ್ಲರಿಗೂ ಧನ್ಯವಾದಗಳು. ಈ ಟಿವಿಆರ್ (ಸಂಖ್ಯೆ) ಅಂದ್ರೆ ಟಿಆರ್‌ಪಿ, ಕಾರ್ಯಕ್ರಮಕ್ಕೆ ಮತ್ತು ನನ್ನ ಬಗ್ಗೆ ನೀವೆಲ್ಲರೂ ತೋರಿದ ಪ್ರೀತಿ ಎಂಥದ್ದು ಎಂದು ಹೇಳುತ್ತದೆ. 10+1 ಒಟ್ಟು 11 ವರ್ಷಗಳ ಕಾಲ ಒಟ್ಟಿಗೆ ಸಾಗಿದ ಪ್ರಯಾಣ ಇದು. ಮುಂದೆ ನಾನು ಏನು ಮಾಡಬೇಕೋ ಅದನ್ನು ಮುಂದುವರಿಸುತ್ತೇನೆ" ಎಂದು ಸುದೀಪ್ ಬರೆದುಕೊಂಡಿದ್ದಾರೆ.
ನಿಮ್ಮೆಲ್ಲರನ್ನು ರಂಜಿಸುತ್ತೇನೆ
ಮುಂದುವರೆದು "ಇದು ಬಿಗ್‌ಬಾಸ್ ಕನ್ನಡ ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್ ಆಗಿರುತ್ತದೆ. ನನ್ನ ನಿರ್ಧಾರವನ್ನು ನನ್ನ ಕಲರ್ಸ್ ಹಾಗೂ ಇಷ್ಟು ವರ್ಷಗಳಿಂದ ಬಿಗ್‌ಬಾಸ್ ಅನ್ನು ನೋಡಿದ ಎಲ್ಲರೂ ಗೌರವಿಸುತ್ತಾರೆ ಎಂದು ನಿಜವಾಗಿಯೂ ನಂಬುತ್ತೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ, ಮತ್ತು ನಾನು ಕೂಡ ಅತ್ಯುತ್ತಮವಾಗಿ ನಿಮ್ಮೆಲ್ಲರನ್ನು ರಂಜಿಸುತ್ತೇನೆ. ಪ್ರೀತಿಯ ಅಪ್ಪುಗೆ" ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
BBK 11ಕ್ಕೂ ಮುನ್ನವೂ ಹಬ್ಬಿತ್ತು ಗಾಸಿಪ್
ಬಿಗ್ ಬಾಸ್ ಸೀಸನ್ 11 ಶುರುವಾಗುವುದಕ್ಕೂ ಮುನ್ನವೇ ಕಿಚ್ಚ ಸುದೀಪ್ ಈ ಬಾರಿ ಬಿಗ್ ಬಾಸ್ ಹೋಸ್ಟ್ ಮಾಡಲ್ಲ, ಹೊಸ ಆಂಕರ್ ಬರ್ತಾರೆ ಎಂದೇ ಸುದ್ದಿಯಾಗಿತ್ತು. ಆದರೆ ಸುದೀಪ್ ಅವರನ್ನು ಕಲರ್ಸ್ ಕನ್ನಡ ಬಿಗ್ ಬಾಸ್ ಟೀಂ ಮನವಿ ಮಾಡಿತ್ತು. ಈಗ ಸುದೀಪ್ ಅವರ ಟ್ವೀಟ್ ನೋಡ್ತಾ ಇದ್ರೆ ಈ ಒಂದು ಸೀಸನ್ ಮುಗಿಸಿಕೊಡಿ, ಮುಂದೆ ನೋಡೋಣ ಎಂಬ ಮಾತನ್ನ ಟೀಂ ಹೇಳಿದ್ಯಾ ಎಂಬ ಅನುಮಾನ ಮೂಡಿದೆ.
ಕಿಚ್ಚನಿಲ್ಲದ ಬಿಗ್ ಬಾಸ್ ಜನ ನೋಡ್ತಾರಾ..?
ಕಿಚ್ಚ ಅಂದ್ರೆ ಬಿಗ್ ಬಾಸ್.. ಬಿಗ್ ಬಾಸ್ ಅಂದ್ರೆ ಬಾದ್ ಶಾ.. ಆದ್ರೆ ಮುಂದಿನ ಸೀಸನ್ ನಲ್ಲಿ ಕಿಚ್ಚ ಸುದೀಪ್ ಇರಲ್ಲ ಎಂಬ ಮಾತನ್ನು ಕೇಳುವುದಕ್ಕೆ ಅಭಿಮಾನಿಗಳಿಂದ ಸಾಧ್ಯವಾಗುತ್ತಿಲ್ಲ. ಸುದೀಪ್ ಅವರ ಟ್ವೀಟ್‌ಗೆ ಸಾವಿರಾರು ಕಮೆಂಟ್‌ಗಳ ಸುರಿಮಳೆಯೇ ಆಗುತ್ತಿದೆ. ನೀವಿಲ್ಲದ ಬಿಗ್ ಬಾಸ್ ನೋಡುವುದಕ್ಕೆ ಸಾಧ್ಯನಾ ಎನ್ನುತ್ತಿದ್ದಾರೆ.


Click it and Unblock the Notifications











