ಇಂಡಸ್ಟ್ರಿಗೆ ಬರ್ತಿದ್ದಾರೆ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್; ಮೊದಲ ಚಿತ್ರದಲ್ಲೇ ನಟನೆ ಜತೆ ನಿರ್ದೇಶನ!
ಸಿನಿಮಾ ಕ್ಷೇತ್ರದಲ್ಲಿ ಸ್ಟಾರ್ ನಟರ ಕುಟುಂಬದ ಇತರೆ ಸದಸ್ಯರು ಹಾಗೂ ಆಪ್ತ ಸಂಬಂಧಿಗಳೂ ಸಹ ಸಿನಿಮಾಗಳಲ್ಲಿ ನಟಿಸುವುದು ಹಾಗೂ ಸಿನಿಮಾದ ಇತರೆ ವಿಭಾಗಗಳಲ್ಲಿ ಕೆಲಸ ಮಾಡಲು ಮುಂದಾಗುವುದು ಕಾಮನ್. ಭಾರತದ ಎಲ್ಲಾ ಚಿತ್ರರಂಗಗಳಲ್ಲಿಯೂ ಈ ರೂಢಿ ಇದೆ. ಈ ಹಿಂದೆ ಸ್ಟಾರ್ ನಟರ ಮಕ್ಕಳು ಚಿತ್ರರಂಗಕ್ಕೆ ಬಂದರೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿತ್ತು. ಆದರೆ ಈಗ ನಟರ ಅಕ್ಕನ ಮಕ್ಕಳು, ಅಣ್ಣನ ಮಕ್ಕಳು ಚಿತ್ರರಂಗ ಪ್ರವೇಶಿಸುತ್ತಿದ್ದಾರೆ ಎಂಬ ಸುದ್ದಿಗಳು ಹೆಚ್ಚಾಗಿ ಕೇಳಿಬರುತ್ತಿವೆ.
ಮೊದಲಿಗೆ ಪುನೀತ್ ರಾಜ್‌ಕುಮಾರ್ ಅಣ್ಣನ ಮಗ ವಿನಯ್ ರಾಜ್‌ಕುಮಾರ್, ಅಕ್ಕನ ಮಕ್ಕಳಾದ ಧೀರೆನ್ ರಾಮ್‌ಕುಮಾರ್ ಹಾಗೂ ಧನ್ಯಾ ರಾಮ್‌ಕುಮಾರ್, ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಹೀಗೆ ಸ್ಟಾರ್‌ಗಳ ಹಲವು ಆಪ್ತ ಸಂಬಂಧಿ ಯುವ ಕಲಾವಿದರು ಈಗಾಗಲೇ ಚಿತ್ರರಂಗ ಪ್ರವೇಶ ಮಾಡಿದ್ದರು. ಈ ಸಾಲಿಗೆ ಇದೀಗ ಕನ್ನಡ ಚಿತ್ರರಂಗದ ಪ್ರಮುಖ ಸ್ಟಾರ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಸಹ ಸೇರಿಕೊಂಡಿದ್ದಾರೆ.

ಹೌದು, ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಚಿತ್ರರಂಗ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಹಲವು ದಿನಗಳ ಹಿಂದೆಯೇ ಕೇಳಿಬಂದಿತ್ತು. ಚಿತ್ರರಂಗ ಪ್ರವೇಶಿಸಲು ಸಂಚಿತ್ ಸಂಜೀವ್ ಸಿದ್ಧತೆ ನಡೆಸುತ್ತಿದ್ದು, ನಿರ್ದೇಶಕ ಜಯತೀರ್ಥ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂದೂ ಸಹ ಹೇಳಲಾಗಿತ್ತು. ಜಯತೀರ್ಥ ಝೈದ್ ಖಾನ್ ನಟನೆಯ ಬನಾರಸ್ ಚಿತ್ರದಲ್ಲಿ ಬ್ಯುಸಿ ಇದ್ದ ಕಾರಣ ಈ ಚಿತ್ರ ಆರಂಭವಾಗುವುದು ವಿಳಂಬವಾಗಲಿದೆ ಎನ್ನಲಾಗಿತ್ತು.
ಆದರೆ ಇದೀಗ ಈ ಸುದ್ದಿಯ ಕುರಿತಾಗಿ ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ಸಂಚಿತ್ ಸಂಜೀವ್ ಚಿತ್ರರಂಗಕ್ಕೆ ಕಾಲಿಡಲಿರುವ ಮೊದಲ ಚಿತ್ರಕ್ಕೆ ತಾವೇ ನಿರ್ದೇಶನವನ್ನೂ ಸಹ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಹೌದು, ಸಂಚಿತ್ ಸಂಜೀವ್ ಮೊದಲ ಚಿತ್ರದಲ್ಲಿಯೇ ಎರಡೆರಡು ಜವಾಬ್ದಾರಿ ಹೊರಲು ತೀರ್ಮಾನಿಸಿದ್ದು, ನಟನೆ ಜತೆಗೆ ನಿರ್ದೇಶನವನ್ನೂ ಸಹ ಮಾಡಲಿದ್ದಾರೆ ಹಾಗೂ ಜಯತೀರ್ಥ ಮಾರ್ಗದರ್ಶನದಲ್ಲಿ ಈ ಚಿತ್ರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಈ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ಸದ್ಯ ನಡೆಯುತ್ತಿದ್ದು, ಈ ಚಿತ್ರಕ್ಕೆ ಜಿಮ್ಮಿ ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ಕೆಲ ಕಿರುಚಿತ್ರ ಹಾಗೂ ಜಾಹೀರಾತುಗಳಲ್ಲಿ ಕ್ಯಾಮೆರಾ ಹಿಂದೆ ಕೆಲಸ ಮಾಡಿದ್ದ ಸಂಚಿತ್ ಸಂಜೀವ್ ಅಂಬಿ ನಿಂಗ್ ವಯಸ್ಸಾಯ್ತೋ ಎಂಬ ಚಿತ್ರದಲ್ಲಿಯೂ ಸಹ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಂಚಿತ್ ಸಂಜೀವ್ ನ್ಯೂಯಾರ್ಕ್‌ನಲ್ಲಿ ನಟನೆ, ನಿರ್ದೇಶನ ಹಾಗೂ ಛಾಯಾಗ್ರಹಣಕ್ಕೆ ಸಂಬಂಧಿಸಿದ ತರಬೇತಿಗಳನ್ನು ಪಡೆದುಕೊಂಡಿದ್ದು, ಎಂಎಂಎ ಫೈಟಿಂಗ್‌ನಲ್ಲಿ ಸಹ ಪಳಗಿದ್ದಾರೆ. ಒಟ್ಟಿನಲ್ಲಿ ಚಿತ್ರರಂಗಕ್ಕೆ ಬೇಕಾದ ತಯಾರಿಯನ್ನು ಅಚ್ಚುಕಟ್ಟಾಗಿ ಮಾಡಿಕೊಂಡಿರುವ ಸಂಚಿತ್ ಸಂಜೀವ್ ಯಾವ ರೀತಿ ಜನರಿಗೆ ಇಷ್ಟವಾಗ್ತಾರೋ ಕಾದು ನೋಡಬೇಕಿದೆ.

ಅಂದ್ಹಾಗೆ ಈಗ ಚಿತ್ರರಂಗಕ್ಕೆ ಕಾಲಿಡುವವರು ಎಲ್ಲಾ ಪೂರ್ವ ತಯಾರಿಗಳನ್ನು ಮಾಡಿಕೊಂಡೇ ಚಿತ್ರರಂಗ ಪ್ರವೇಶ ಮಾಡುತ್ತಿದ್ದು, ಈ ಹಿಂದಿನ ರೀತಿ ನೆಪೋಟಿಸಂ ಎಂದು ಕಾಲೆಳೆಯುವವರಿಗೆ ಹೆಚ್ಚಿನ ಅವಕಾಶವನ್ನು ಸ್ಟಾರ್ ನಟರ ಆಪ್ತ ಕಲಾವಿದರು ನೀಡುತ್ತಿಲ್ಲ. ಹೌದು, ಈ ಹಿಂದೆ ಈ ರೀತಿ ಸ್ಟಾರ್ ನಟರ ಮನೆಯವರು ಚಿತ್ರರಂಗಕ್ಕೆ ಕಾಲಿಟ್ಟರೆ ನೆಪೊ ಕಿಡ್ ಎಂದು ಟ್ರೋಲ್ ಮಾಡುತ್ತಿದ್ದರು. ಆದರೆ ಜಾಣ ಪ್ರೇಕ್ಷಕರಿರುವ ಈಗಿನ ಚಿತ್ರರಂಗದಲ್ಲಿ ಟ್ಯಾಲೆಂಟ್ ಇದ್ದವರು ಗೆಲ್ಲಲಿದ್ದು, ಇಲ್ಲದವರು ಸೋತು ಬದಿಗೆ ಸರಿಯಲಿದ್ದಾರೆ.


Click it and Unblock the Notifications











